ಇದು ಶುದ್ಧವಾದ ಪ್ರೀತಿಯ ಮಾಕ್‌ಟೇಲ್‌: ಮದರಂಗಿ ಕೃಷ್ಣ

Suvarna News   | Asianet News
Published : Jan 31, 2020, 03:23 PM IST
ಇದು ಶುದ್ಧವಾದ ಪ್ರೀತಿಯ ಮಾಕ್‌ಟೇಲ್‌: ಮದರಂಗಿ ಕೃಷ್ಣ

ಸಾರಾಂಶ

ಹಲವು ನಟರ ಹಾಗೆಯೇ ಚಂದನವನದಲ್ಲೀಗ ನಟ ಮದರಂಗಿ ಕೃಷ್ಣ ಬಹುಅವತಾರ ತಾಳಿದ್ದಾರೆ. ನಟನೆಯ ಜತೆಗೀಗ ನಿರ್ದೇಶನ, ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು ‘ಲವ್‌ ಮಾಕ್ಟೇಲ್‌’ ಹೆಸರಲ್ಲೊಂದು ಸಿನಿಮಾ ಮಾಡಿದ್ದಾರೆ.ಒಂದೇ ಚಿತ್ರ ತ್ರಿಬಲ್‌ ಪಾರ್ಟ್‌. ಒಬ್ಬ ನಟನ ಪಾಲಿಗೆ ಇದು ಸವಾಲು, ಹಾಗೆಯೇ ಒಂದು ವಿಭಿನ್ನ ಪ್ರಯತ್ನ. ಆ ಮೂಲಕ ಕೃಷ್ಣ ಅವರ ‘ಲವ್‌ ಮಾಕ್ಟೇಲ್‌’ ಇಂದೇ ತೆರೆಗೆ ಬರುತ್ತಿದೆ.

ಕೇಶವ

ಹಲವು ಕಾರಣಕ್ಕೆ ಕುತೂಹಲ ಮೂಡಿಸಿದ ಸಿನಿಮಾ ಇದು. ಟೀಸರ್‌,ಟ್ರೇಲರ್‌ ಜತೆಗೆ ಹಾಡುಗಳಿಗೂ ಜನ ಮೆಚ್ಚುಗೆ ಸಿಕ್ಕಿದೆ. ಸುದೀಪ್‌ ಅವರಂತಹ ಸ್ಟಾರ್‌ ನಟರೇ ಟ್ರೇಲರ್‌ ಮೆಚ್ಚಿ, ಚಿತ್ರತಂಡದ ಬೆನ್ನಿಗೆ ನಿಂತಿದ್ದಾರೆ. ಚಿತ್ರತೆರೆ ಕಾಣುತ್ತಿರುವ ಮೊದಲ ದಿನದ ಮೊದಲ ಶೋನಲ್ಲೇ ಚಿತ್ರ ನೋಡಲು ಸುದೀಪ್‌ ಟಿಕೆಟ್‌ ಖರೀದಿಸಿರುವುದು ಚಿತ್ರತಂಡಕ್ಕೆ ಆನೆ ಬಲ ಸಿಕ್ಕಂತಾಗಿದೆ. ಆ ಮೂಲಕ ದೊಡ್ಡದೊಂದು ಭರವಸೆ ಚಿತ್ರತಂಡಕ್ಕಿದೆ. ಆದರೂ ಒಂದೆಡೆ ಖುಷಿ, ಮತ್ತೊಂದೆಡೆ ಆತಂಕ ತುಂಬಿಕೊಂಡೇ ಚಿತ್ರದ ವಿಶೇಷತೆಗಳ ಕುರಿತು ಮಾತನಾಡುತ್ತಾರೆ ನಟ ಮದರಂಗಿ ಕೃಷ್ಣ.

ನಿರ್ಮಾಪಕಿಯಾದ ದರ್ಶನ್ 'ಬೃಂದಾವನ' ನಟಿಗೆ; ಕಿಚ್ಚ ಸುದೀಪ್‌ ಬೆಂಬಲ!

ಕತೆ ಹೊರಿಸಿದ ಜವಾಬ್ದಾರಿ ಇದು....

‘ನಟನೆಯ ಆಚೆ ನಿರ್ದೇಶಕ, ನಿರ್ಮಾಪಕ ಅಂತ ಜವಾಬ್ದಾರಿ ಹೊತ್ತಿದ್ದಕ್ಕೆ ಮೂಲ ಕಾರಣ ಈ ಚಿತ್ರದ ಕತೆ. ಈ ಕತೆ ಕುರಿತು ಮಿಲನಾ ನಾಗರಾಜ್‌ ಜತೆಗೆ ಚರ್ಚೆ ಮಾಡುತ್ತಿದ್ದಾಗ ಮೊದಲು ನಿರ್ಮಾಣಕ್ಕೆ ಆಸಕ್ತಿ ತೋರಿದ್ದು ಅವರೇ. ಇಷ್ಟುಒಳ್ಳೆಯ ಕತೆ, ಯಾರಾದರೂ ಬಂಡವಾಳ ಹಾಕಿ ಸಿನಿಮಾ ಮಾಡೋಣ ಅಂದ್ರೆ ನಾವಂದುಕೊಂಡ ಹಾಗೆ ಇದನ್ನು ತೆರೆಗೆ ತರಲು ಕಷ್ಟ. ಬದಲಿಗೆ ನಾವೇ ಬಂಡವಾಳ ಹಾಕಿದರೆ ಒಂದೊಳ್ಳೆಯ ಸಿನಿಮಾ ಮಾಡೋದಕ್ಕೂ ಸಾಧ್ಯ ಎನ್ನುವ ಅವರ ಸಲಹೆ ಈ ಸಿನಿಮಾ ನಿರ್ದೇಶನ ಮತ್ತು ನಿರ್ಮಾಣಕ್ಕೆ ಕಾರಣವಾಯಿತು’ ಎನ್ನುತ್ತಾ ಸಿನಿ ಜರ್ನಿಯ ಇನ್ನೊಂದು ಘಟ್ಟದ ಹಿಂದಿನ ಇನ್ನೊಂದು ಕತೆ ವಿವರಿಸುತ್ತಾರೆ ಮಂದರಂಗಿ ಕೃಷ್ಣ.

ಈಗಷ್ಟೇ ನಿರ್ದೇಶಕಿಯಾದ ದರ್ಶನ್‌ ನಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ?

ಎಲ್ಲರದರ ಮಿಶ್ರಣದ ಮಾಕ್ಟೇಲ್‌...

ಕೃಷ್ಣ ಈ ಚಿತ್ರದ ನಾಯಕ ನಟ. ಹೆಸರಿಗೆ ತಕ್ಕಂತೆ ಇಬ್ಬರು ನಾಯಕಿಯರ ಮುದ್ದಿನ ಲವರ್‌ ಬಾಯ್‌. ಆ ಮೂಲಕ ಚಿತ್ರದ ಕತೆಯ ವಿಶೇಷತೆಯ ಬಗ್ಗೆಯೂ ಮಾತುಗಳನ್ನು ವಿಸ್ತರಿಸುತ್ತಾರೆ ಕೃಷ್ಣ. ‘ನವೀರು ಪ್ರೇಮದ ಕತೆಯಿದು. ಒಬ್ಬ ಹುಡುಗನ ಸ್ಕೂಲ್‌ ಜೀವನದಿಂದ ಹಿಡಿದು ಮದುವೆವರೆಗಿನ ಕತೆ. ಆತನ ಬದುಕಿನಲ್ಲಿ ಪ್ರೀತಿ ಏನೆಲ್ಲ ತವಕ, ತಲ್ಲಣ ಹುಟ್ಟಿಸುತ್ತದೆ ಎನ್ನುವುದು ಚಿತ್ರದ ಒನ್‌ ಲೈನ್‌ ಕತೆ. ಇಲ್ಲಿ ಭಾವುಕತೆ ಇದೆ. ಪ್ರೀತಿಯಿದೆ. ರೊಮಾನ್ಸ್‌ ಇದೆ. ಆ ಮೂಲಕ ಶುದ್ಧವಾದ ಪ್ರೀತಿ ಕುರಿತು ಹೇಳಲು ಹೊರಟಿದ್ದೇನೆ. ಹಲವು ಹಣ್ಣುಗಳ ಮಿಶ್ರಣದ ಜ್ಯೂಸ್‌ಗೆ ಹೇಗೆ ಮಾಕ್ಟೇಲ್‌ ಎನ್ನುತ್ತಾರೆ ಹಾಗೆಯೇ ಇದಕ್ಕೆ ನಾವು ಲವ್‌ ಮಾಕ್ಟೇಲ್‌ ಎಂದಿದ್ದೇವೆ. ಅದು ಹೇಗೆ ಎನ್ನುವುದು ಚಿತ್ರ ನೋಡಿದಾಗ ಗೊತ್ತಾಗಲಿದೆ’ಎನ್ನುವುದು ಕೃಷ್ಣ ಅವರ ವಿಸ್ತರಿತ ಮಾತು.

150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌

ಕೃಷ್ಣ ಜತೆಗೆ ಮಿಲನಾ ನಾಗರಾಜ್‌, ಅಮೃತ ರಾವ್‌, ರಚನಾ ಪ್ರಮುಖ ಪಾತ್ರದಾರಿಗಳು. ಮಿಲನಾ ನಾಗರಾಜ್‌ ಚಿತ್ರದ ನಿರ್ಮಾಪಕಿಯೂ ಹೌದು.‘ ಕತೆ ಬಗ್ಗೆ ಚರ್ಚೆ ನಡೆಯುತ್ತಿದ್ದಾಗಲೇ ನಾಯಕಿ ಯಾರೆಂಬುದು ಫಿಕ್ಸ್‌ ಆಗಿತ್ತು. ಮಿಲನಾ ಆ ಪಾತ್ರಕ್ಕೆ ಸೂಕ್ತ ಅಂತೆನಿಸಿತು. ಅಲ್ಲಿಂದ ಇನ್ನೊಂದು ಪಾತ್ರಕ್ಕೆ ಯಾರು ಅಂತಂದುಕೊಳ್ಳುವಾಗ ಅಮೃತಾ ಸಿಕ್ಕರು. ನಮ್ಮ ಬಜೆಟ್‌ ಜತೆಗೆ ಪಾತ್ರಕ್ಕೆ ಅವರು ಹೊಂದಿಕೆ ಆದರು. ಇನ್ನು ರಚನಾ ಕೂಡ ಹಾಗೆಯೇ ಬಂದರು. ಎಲ್ಲರೂ ಚಿತ್ರಕ್ಕೆ ಸೇರಿಕೊಂಡರು. ತಾಂತ್ರಿಕವಾಗಿಯೂ ಈ ಸಿನಿಮಾ ಚೆನ್ನಾಗಿ ಬಂದಿದೆ. ಕ್ರೇಜಿ ಮೈಂಡ್‌ ಛಾಯಾಗ್ರಹಣವಿದೆ.ರಘು ದೀಕ್ಷಿತ್‌ ಸಂಗೀತಕ್ಕೆ ದೊಡ್ಡ ಪ್ರಶಂಸೆ ಸಿಕ್ಕಿದೆ. ಇದೆಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ’ ಎನ್ನುವುದು ಕೃಷ್ಣ ವಿಶ್ವಾಸ. ಜಾಕ್‌ ಮಂಜು ಸಿನಿಮಾಸ್‌ ಮೂಲಕ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಲವ್‌ ಮಾಕ್ಟೇಲ್‌ ತೆರೆ ಕಾಣುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು