ಐ ಆ್ಯಮ್ Back: ಅದಿತ್ಯ ಅಧ್ಯಾಯ ಮುಂದುವರೆದಿದೆ!

By Suvarna NewsFirst Published Jan 31, 2020, 3:03 PM IST
Highlights

ನಟ ಅದಿತ್ಯ ಅವರು ‘ನಾನು ಮರಳಿ ಬಂದಿದ್ದೇನೆ’ ಎನ್ನುತ್ತಿದ್ದಾರೆ. ಹೀಗೆ ಅವರನ್ನು ಮರಳುವಂತೆ ಮಾಡಿರುವುದು ‘ಮುಂದುವರೆದ ಅಧ್ಯಾಯ’ ಹೆಸರಿನ ಸಿನಿಮಾ. ಸಾಕಷ್ಟುಕುತೂಹಲ ಮೂಡಿಸಿರುವ, ಹೊಸ ನಿರ್ದೇಶಕನ ಕನಸಿನಲ್ಲಿ ಮೂಡಿರುವ ಈ ಚಿತ್ರದ ಟ್ರೇಲರ್‌ ಬಿಡುಗಡೆ ಸಂದರ್ಭದಲ್ಲಿ ಆದಿತ್ಯ, ತಮ್ಮ ಪಯಣವನ್ನು ನೆನಪಿಸಿಕೊಂಡಿದ್ದಾರೆ.

ಆರ್ ಕೇಶವಮೂರ್ತಿ

ನಿರ್ದೇಶಕರಿಗೆ ಅರ್ಪಣೆ

ಹದಿನಾರು ವರ್ಷ, 23 ಸಿನಿಮಾ. ನಾನು ಇವತ್ತು ಏನಾಗಿದ್ದೀನೋ ಅದಕ್ಕೆ ನಿರ್ದೇಶಕರೇ ಕಾರಣ. ಮೇಕಪ್‌ ಹಾಕಿರೋ ನಟರಿಗೆ ಬ್ಯಾಕಪ್‌ನಲ್ಲಿ ನಿರ್ದೇಶಕ ಇಲ್ಲದೆ ಹೋದರೆ, ಆ್ಯಕ್ಟರ್‌ ಪ್ಯಾಕಪ್‌ ಮಾಡಿಕೊಳ್ಳಬೇಕು. ನನ್ನ ಸಿನಿ ಜೀವನದಲ್ಲಿ ನಾನು ಅರ್ಥ ಮಾಡಿಕೊಂಡಿರುವುದು ಇದನ್ನೇ. ಹೀಗಾಗಿ ನನ್ನ ಈ ಪಯಣ ಕನ್ನಡ ಚಿತ್ರರಂಗದ ಎಲ್ಲ ನಿರ್ದೇಶಕರಿಗೆ ಅರ್ಪಿಸುತ್ತಿದ್ದೇನೆ. ನನ್ನ ತಂದೆ ಅವರ ನಿರ್ದೇಶನದ ‘ಲವ್‌’ ಚಿತ್ರದ ಮೂಲಕ 2004ರಲ್ಲಿ ಕನ್ನಡ ಸಿನಿಮಾ ಪರದೆ ಮೇಲೆ ಬಂದೆ. ಅಲ್ಲಿಂದ ಇಲ್ಲಿವರೆಗೂ ಸಾಕಷ್ಟುಸಿನಿಮಾಗಳನ್ನು ಮಾಡಿಕೊಂಡು ಬಂದಿರುವೆ. ಬೇರೆ ಬೇರೆ ಜಾನರ್‌ ನಿರ್ದೇಶಕರ ಚಿತ್ರಗಳಲ್ಲಿ ಕೆಲಸ ಮಾಡಿದ ಮತ್ತೊಬ್ಬ ನಟ ಇಲ್ಲವೆನೋ ಎನ್ನುವಷ್ಟರ ಮಟ್ಟಿಗೆ ಕಳೆದ ಹದಿನಾರು ವರ್ಷಗಳಲ್ಲಿ ಬಂದ ನನ್ನ ಸಿನಿಮಾಗಳ ನಿರ್ದೇಶಕರ ಪಟ್ಟಿಯೇ ಹೇಳುತ್ತದೆ.

ಪುತ್ರನ ಎದುರು ಕಣ್ಣೀರಿಟ್ಟ ತಂದೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು!

ಸ್ಟಾರ್‌ ಬಾರ್ನ್‌ ಅಲ್ಲ, ಸ್ಟಾರ್‌ ಮೇಡ್‌

ಚಿತ್ರರಂಗದಲ್ಲಿ ಯಾವ ಸ್ಟಾರ್‌ಗಳೂ ತಾವಾಗಿಯೇ ಹುಟ್ಟಲ್ಲ. ನನ್ನ ಪ್ರಕಾರ ಸ್ಟಾರ್‌ ನಾಟ್‌ ಬಾರ್ನ್‌, ಸ್ಟಾರ್‌ ಇಸ್‌ ಮೇಡ್‌. ಸಿನಿಮಾನೇ ಜೀವನ ಎಂದುಕೊಂಡು ಅದೊಂದು ತಪಸ್ಸಿನಂತೆ ಸಿನಿಮಾ ಮಾಡುವ ಪ್ರತಿಯೊಬ್ಬ ನಿರ್ದೇಶಕನ ಕತೆ ಮತ್ತು ಪಾತ್ರದ ಮೂಲಕ ಒಬ್ಬ ನಟ ಬಂದು ಆತ ಸ್ಟಾರ್‌ ಆಗುತ್ತಾನೆ. ಈ ಸ್ಟಾರ್‌ನನ್ನು ಹುಟ್ಟಿಸೋದು ನಿರ್ದೇಶಕನ ಕಲ್ಪನೆ ಮತ್ತು ಆತನ ಕನಸಿನ ಸಿನಿಮಾ ಎಂಬುದನ್ನು ನಾನು ಕೆಲಸದ ಮಾಡಿದ ನಿರ್ದೇಶಕರಲ್ಲಿ ಇಲ್ಲಿವರೆಗೂ ಕಂಡುಕೊಂಡಿರುವೆ. ರಾಜೇಂದ್ರಸಿಂಗ್‌ ಬಾಬು, ರವಿ ಶ್ರೀವತ್ಸ, ಎಂ ಎಸ್‌ ರಮೇಶ್‌, ಸುನೀಲ್‌ ಕುಮಾರ್‌ ದೇಸಾಯಿ, ವಿಜಯ್‌ ಲಕ್ಷ್ಮೇಸಿಂಗ್‌, ಜೈ ಜಗದೀಶ್‌, ವಿ ನಾಗೇಂದ್ರ ಪ್ರಸಾದ್‌, ಸುಮನ್‌ ಕಿತ್ತೂರು, ಪಿ ಎನ್‌ ಸತ್ಯ, ಓಂ ಪ್ರಕಾಶ್‌ ರಾವ್‌, ಚಿಂತನ್‌... ಹೀಗೆ ನಾನು ಕೆಲಸ ಮಾಡಿದ ಬಹುತೇಕ ನಿರ್ದೇಶಕರು ಘಟಾನುಘಟಿಗಳೇ. ಇವರೆಲ್ಲರೂ ಅದಿತ್ಯ ಎನ್ನುವ ಒಬ್ಬ ಸಾಮಾನ್ಯ ಹುಡುಗನನ್ನ ಹೀರೋ ಆಗಿ ರೂಪಿಸಿದ್ದಾರೆ.

ನಾನು ನಟ ಸೂಪರ್‌ ಸ್ಟಾರ್‌ ಅಲ್ಲ

ನಾನು ನಟಿಸಿರುವ ಸಿನಿಮಾಗಳೆಲ್ಲಾ ಸೂಪರ್‌ ಹಿಟ್‌ ಆಗಿವೆಯೇ, ಕಮರ್ಷಿಯಲ್ಲಾಗಿ ಎಷ್ಟುಗಳಿಕೆ ಮಾಡಿವೆ ಎಂದು ಕೇಳಿದರೆ ನಾನು ಏನು ಹೇಳಲಾರೆ. ಒಬ್ಬ ನಟನಾಗಿ ನಾನು ಇಲ್ಲಿವರೆಗೂ ಪ್ರಾಮಾಣಿಕವಾಗಿ ಎಲ್ಲ ಚಿತ್ರಗಳಲ್ಲೂ ನಿರ್ದೇಶಕನ ಕಲ್ಪನೆಗೆ ಜೀವ ತುಂಬಿರುವೆ. ನನ್ನ ಇಷ್ಟುಚಿತ್ರಗಳಲ್ಲೂ ಒಂದೊಂದಕ್ಕೂ ಒಂದೊಂದು ಮಹತ್ವದ ಜಾಗ ಇದೆ. ಪ್ರತಿಯೊಂದು ನನ್ನದೇ ಸಿನಿಮಾ. ಎಲ್ಲ ಚಿತ್ರಗಳಲ್ಲೂ ನಾನು ಕಲಾವಿದ ಅಂತ ಸಾಬೀತು ಮಾಡುವುದಕ್ಕೆ ಪ್ರಯತ್ನಿಸಿದ್ದೇನೆ. ಈಗಲೂ ನಾನು ಕಲಾವಿದ ಆಗಬೇಕು ಅನ್ನೋದೇ ಕನಸು. ಸ್ಟಾರ್‌, ಸೂಪರ್‌ ಸ್ಟಾರ್‌, ಕಮರ್ಷಿಯಲ್‌ ಹೀರೋ... ಇವೆಲ್ಲವೂ ಆ ನಂತರವೇ ಬರುತ್ತದೆ. ಮೊದಲು ನಾನು ನಟ. ನನ್ನ ಚಿತ್ರಗಳನ್ನೂ ನೀವು ಇದೇ ದೃಷ್ಟಿಕೋನದಲ್ಲಿ ನೋಡಿದರೆ ನಾನೇನು ಅಂತ ನಿಮಗೆ ಗೊತ್ತಾಗುತ್ತದೆ.

'ಮುಂದುವರಿದ ಅಧ್ಯಾಯ' ದರ್ಶನ್ ಬಂದಿದ್ದ ಕಾರ್ಯಕ್ರಮದಲ್ಲಿ ಕಿಚ್ಚನಿಗಾಯ್ತಾ ಅವಮಾನ?

ಸಂಖ್ಯೆಗಾಗಿ ಸಿನಿಮಾ ಮಾಡಲಾರೆ

ನಾನು ಇಲ್ಲಿವರೆಗೂ ನಟಿಸಿರುವ ಎಲ್ಲ ಚಿತ್ರಗಳು ನನ್ನ ಮನಸ್ಸಿಗೆ ಹತ್ತಿರವಾಗಿದ್ದ ಕತೆಗಳನ್ನೇ ಒಳಗೊಂಡಿದ್ದವು. ಒಂದು ವೇಳೆ ನಾನು ಕೂಡ ಬಂದ ಸಿನಿಮಾಗಳನ್ನು ಒಪ್ಪಿಕೊಂಡಿದ್ದರೆ ಇಷ್ಟೊತ್ತಿಗೆ 75 ರಿಂದ 80 ಸಿನಿಮಾಗಳು ನನ್ನ ಹೆಸರಿನ ಖಾತೆಯಲ್ಲಿ ಜಮೆ ಆಗುತ್ತಿದ್ದವು. ಆದರೆ, ಸಂಖ್ಯೆಗಾಗಿ, ನಾನೂ ಕೂಡ ಇಷ್ಟುಚಿತ್ರಗಳನ್ನು ಮಾಡಿದ್ದೇನೆಂದು ತೋರಿಸಿಕೊಳ್ಳುವುದಕ್ಕಾಗಿ ಸಿನಿಮಾಗಳನ್ನು ಮಾಡಲಾರೆ. ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ತೆಗೆದುಕೊಂಡೆ. ಹೀಗಾಗಿ ಆದಿತ್ಯ, ತೆರೆ ಮೇಲೆ ಅಪರೂಪ ಎನಿಸಿರಬೇಕು.

ಬೆನ್ನತ್ತಿದ ಭೂಗತ ಲೋಕ

ರವಿ ಶ್ರೀವತ್ಸ ಅವರ ನಿರ್ದೇಶನದ ‘ಡೆಡ್ಲಿ ಸೋಮ’ ಚಿತ್ರದ ಯಶಸ್ಸೋ ಅಥವಾ ನನ್ನ ಬಾಡಿ ಲಾಗ್ವೇಜೋ ಗೊತ್ತಿಲ್ಲ, ನನಗೆ ಬಂದ ಬಹುತೇಕ ಕತೆಗಳು ಅಂಡರ್‌ವಲ್ಡ್‌ರ್‍ ಕತ್ತಲಿಗೆ ಸಂಬಂಧಿಸಿದ್ದೇ ಆಗಿದ್ದವು. ಅದಿತ್ಯ ಸಿನಿಮಾ ಅಂದರೆ ಅದು ಬೆಂಗಳೂರು ಭೂಗತ ಲೋಕ ಎನ್ನುವ ಮಟ್ಟಿಗೆ ಮಚ್ಚು- ಲಾಂಗಿನ ಸಿನಿಮಾಗಳು ನನ್ನ ಬೆನ್ನತ್ತಿದ್ದು ನಿಜ. ನಾನೂ ಕೂಡ ಅಂಥ ಸಿನಿಮಾಗಳಿಗೆ ಹೆಚ್ಚು ಹೊಂದಿಕೆ ಆಗುತ್ತೇನೆಂಬುದು ಕೂಡ ಸತ್ಯ. ಹಾಗಂತ ಅದೇ ರೀತಿಯ ಸಿನಿಮಾಗಳನ್ನು ಮಾಡಿದರೆ ಹೇಗೆ ಎಂಬುದು ನನ್ನಲ್ಲಿ ಆಗಾಗ ಹುಟ್ಟಿಕೊಳ್ಳುತ್ತಿದ್ದ ಪ್ರಶ್ನೆ. ರೌಡಿಸಂ ಚಿತ್ರಗಳ ಆಚೆಗೂ ನಾನು ನಟಿಸಬಲ್ಲೆ. ಅಂಥ ಕತೆಗಳು ಬೇಕು ಎನ್ನುವ ನಟ ನಾನು. ಈ ಆಲೋಚನೆಯಲ್ಲಿದ್ದಾಗ ಸಿಕ್ಕಿದ್ದೇ ‘ಮುಂದುವರೆದ ಅಧ್ಯಾಯ’ ಸಿನಿಮಾ.

ಮುಂದಿನ ಅಧ್ಯಾಯ ಹೊಸದಾಗಿದೆ

ಬಾಲು ಚಂದ್ರಶೇಖರ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಮುಂದುವರೆದ ಅಧ್ಯಾಯ’ ಸಿನಿಮಾ, ನನ್ನ ಮುಂದುವರೆದ ಹೊಸ ಅಧ್ಯಾಯವೂ ಹೌದು. ಕಣಜ ಎಂಟರ್‌ಪ್ರೈಸಸ್‌ ನಿರ್ಮಾಣದ ಈ ಚಿತ್ರದ ಟೀಸರ್‌, ಟ್ರೇಲರ್‌ ಈಗಾಗಲೇ ಬಂದಿದೆ. ನೋಡಿರುವ ಪ್ರತಿಯೊಬ್ಬರೂ ಹೇಳುತ್ತಿರುವುದು ಒಂದೇ ‘ಇದು ಅದಿತ್ಯ ಅವರಿಗೆ ಹೊಸ ಅಧ್ಯಾಯದಂತಿದೆ’ ಎಂದು. ನನಗೂ ಅದೇ ಭರವಸೆ ಮೂಡಿಸಿರುವ ಸಿನಿಮಾ. ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ. ಕೆಲವೇ ಪಾತ್ರಗಳು, ಸಾಕಷ್ಟುತಿರುವುಗಳು, ಸಸ್ಪೆನ್ಸ್‌ ಇವು ಚಿತ್ರದ ಹೈಲೈಟ್ಸ್‌. ಇಲ್ಲಿ ನಾನು ಪೊಲೀಸ್‌ ಅಧಿಕಾರಿ ಪಾತ್ರ ಮಾಡುತ್ತಿರುವೆ. ಹೊಸ ನಿರ್ದೇಶಕ ಬಾಲು, ನನ್ನನ್ನು ಬೇರೊಂದು ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

click me!