- ಬಿಗ್ ಬಾಸ್, ನಮ್ಮ ಮೆಟ್ರೋ ಸಹಿತ ಹಲವೆಡೆ ಕೇಳಿ ಬರುವ ಸುಮಧುರ ಧ್ವನಿ.
- ತುಂಬಾ ಮಂದಿ ಕಂಡಿರದ, ತಿಳಿದಿರದ ಈ ಶಾರೀರದ ಒಡೆಯ ಬಡೆಕ್ಕಿಲ ಪ್ರದೀಪ್.
-ವಾಯ್ಸ್ ಓವರ್ ಆರ್ಟಿಸ್ಟ್ ಮಾತ್ರವಲ್ಲ, ತಮ್ಮದೇ ಬ್ರ್ಯಾಂಡ್ ನೇಮ್ ಹೊಂದಿರುವ ಸಾಧಕ
-ಬಹು ಬೇಡಿಕೆಯ ನಿರೂಪಕ, ಅನುವಾದಕ, ನಿರ್ಮಾಪಕ, ನಟ, ಪತ್ರಕರ್ತ
ಬಿಗ್ ಬಾಸ್, ನಮ್ಮ ಮೆಟ್ರೋ ಸಹಿತ ಸಾವಿರಾರು ಜಾಹೀರಾತು ಧ್ವನಿಗಳ ಒಡೆಯ ಬಹುಭಾಷಾ ಪ್ರವೀಣ ಬಡೆಕ್ಕಿಲ ಇವರೇ...!
-ಕೃಷ್ಣಮೋಹನ ತಲೆಂಗಳ, ಮಂಗಳೂರು
undefined
ಆ್ಯಂಡ್ ದ ನೆಕ್ಸ್ಟ್ ಸ್ಟೇಷನ್ ಈಸ್ ಇಂದಿರಾನಗರ್, ಆಂಡ್ ದ ಡೋರ್ಸ್ ವಿಲ್ ಓಪನ್ ಇನ್ ದ ಲೆಫ್ಟ್, ಪ್ಲೀಸ್ ಮೈಂಡ್ ದ ಗ್ಯಾಪ್.... ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಂಚರಿಸುವಾಗ ನಿಮಗೆ ಅಯಾಚಿತವಾಗಿ ಕೇಳಿಸುವ ಈ ಗಂಭೀರ ಧ್ವನಿಯನ್ನು ಗಮನಿಸಿದ್ದೀರಿ ಅಲ್ವಾ? ಬಿಗ್ ಬಾಸ್.. ಪ್ರತಿ ದಿನ ರಾತ್ರಿ 8 ಗಂಟೆಗೆ, ಈಗ ಬದಲಾದ ಸಮಯದಲ್ಲಿ... ಕಲರ್ಸ್ ಕನ್ನಡದಲ್ಲಿ ಆಗಾಗ ತೇಲಿ ಬರುವ ಪ್ರೋಮೋಗಳ ಹಿನ್ನೆಲೆಯಲ್ಲಿ ಕೇಳಿಸುವ ಸುಮಧುರ ಧ್ವನಿ ಯಾರಿಗೆ ಇಷ್ಟವಾಗೋಲ್ಲ ಹೇಳಿ?
ತುಂಬಾ ಮಂದಿ ಕಂಡಿರದ, ತಿಳಿದಿರದ ಈ ಶಾರೀರದ ಒಡೆಯ ಬಡೆಕ್ಕಿಲ ಪ್ರದೀಪ್. ಮಂಗಳೂರು ಸಮೀಪದ ಬಂಟ್ವಾಳ ಕೆದಿಲ ಬಡೆಕ್ಕಿಲದವರು. ಸುಮಾರು 15 ವರ್ಷಗಳಿಂದ ಬಹಭಾಷಾ ಧ್ವನಿ ಕಲಾವಿದನಾಗಿ ತಮ್ಮದೇ ಉದ್ಯಮ ನಡೆಸುತ್ತಿರುವ ಇವರು ಒಬ್ಬ ಯಶಸ್ವಿ ವಾಯ್ಸ್ ಓವರ್ ಆರ್ಟಿಸ್ಟ್ ಮಾತ್ರವಲ್ಲ, ಬಹು ಬೇಡಿಕೆಯ ನಿರೂಪಕ, ಅನುವಾದಕ, ನಿರ್ಮಾಪಕ, ನಟ, ಪತ್ರಕರ್ತನೂ ಹೌದು. ಹಾಗೆ ನೋಡುವುದಕ್ಕೆ ಹೋದರೆ ಪತ್ರಿಕೋದ್ಯಮ ಕಲಿತ ಪ್ರದೀಪ್ ಮಾಧ್ಯಮ ರಂಗದಲ್ಲಿ ಕೆಲಸ ಮಾಡದ ಕ್ಷೇತ್ರವೇ ಇಲ್ಲ. ರೇಡಿಯೋ, ಟಿ.ವಿ., ಪತ್ರಿಕೆ, ಜಾಹೀರಾತು, ಡಾಕ್ಯುಮೆಂಟರಿ, ಬರವಣಿಗೆ, ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟನೆ ಸಹಿತ ಹತ್ತಾರು ಕ್ಷೇತ್ರಗಳಲ್ಲಿ ಸುತ್ತಾಡಿದ್ದಾರೆ. ನೋಡುವುದಕ್ಕೆ ಮಹೇಂದ್ರ ಸಿಂಗ್ ಧೋನಿಯನ್ನು ಹೋಲುವ ಆಕರ್ಷಕ ವ್ಯಕ್ತಿತ್ವದ ಕುಡ್ಲದ ಹುಡುಗ ಪ್ರದೀಪ್ ಪ್ರಧಾನವಾಗಿ ಛಾಪು ಮೂಡಿಸಿದ್ದು ತಮ್ಮ ಧ್ವನಿ ಮೂಲಕ. ಶರೀರದಷ್ಟೇ ಶಾರೀರವೂ ಚೆಂದ ಮಾತ್ರವಲ್ಲ, ಅವರು ಅದನ್ನು ಮಾರುಕಟ್ಟೆ ಮಾಡಿದ ರೀತಿ, ತನಗಿಷ್ಟದ ಕ್ಷೇತ್ರಗಳಲ್ಲಿ ಬಳಸಿದ ವಿಧಾನದಿಂದ ಇಂದು ಸಣ್ಣ ವಯಸ್ಸಿಗೇ ಕರ್ನಾಟಕದ ಟಿ.ವಿ. ಮತ್ತು ಜಾಹೀರಾತು ರಂಗದ ಅನಿವಾರ್ಯ ಸ್ವರವಾಗಿ ಹೊರ ಹೊಮ್ಮಿದ್ದಾರೆ. ಮಾರುಕಟ್ಟೆಯಲ್ಲಿ ತಮಗೇನು ಬೇಕು ಎಂಬುದನ್ನು ಆರಿಸಿ ದುಡಿಯುವಷ್ಟು ಛಾಪನ್ನು ಅವರು ಮೂಡಿಸಿದ್ದಾರೆ.
ಕಮಲ್ ಹಾಸನ್ ಕಂಡ ಬಳಿಕ ಅಹಂ ತೊರೆದೆ: ಉಮೇಶ್ ಬಣಕಾರ್
ಪ್ರದೀಪ್ ದ.ಕ. ಜಿಲ್ಲೆ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಬಡೆಕ್ಕಿಲದವರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದ ಬಳಿಕ ಮುಂಬೈ ಕ್ಸೇವಿಯರ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‌ನಲ್ಲಿ ಪಿ.ಜಿ. ಡಿಪ್ಲೋಮಾ ಮಾಡಿದರು. 2005-06ರಲ್ಲಿ ಶಿಕ್ಷಣ ಪೂರೈಸಿದರು. ಇದಕ್ಕೂ ಮೊದಲು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದಾಗಲೇ ಹೊಸದಿಗಂತ ಹಾಗೂ ವಿಜಯಕರ್ನಾಟಕ, ಸಂಜೆವಾಣಿಗಳಲ್ಲಿ ಟ್ರೈನಿಯಾಗಿ ಕೆಲಸ ಮಾಡಿದ ಅನುಭವವೂ ಇತ್ತು. ಸ್ನಾತಕೋತ್ತರ ಶಿಕ್ಷಣ ಮುಗಿಸಿದ ತಕ್ಷಣ ಆಗಷ್ಟೇ ಸುದ್ದಿವಾಹಿನಿಯಾಗಿ ಶುರುವಾದ ಟಿವಿ 9ರಲ್ಲಿ ಕೆಲಸ ಸಿಕ್ಕಿತು. ವರದಿಗಾರಿಕೆ, ಆ್ಯಂಕರಿಂಗ್, ವಾಯ್ಸ್ ಓವರ್ ಎಲ್ಲ ವಿಭಾಗಗಳಲ್ಲೂ ದುಡಿಯುವ, ಗುರುತಿಸಿಕೊಳ್ಳುವ ಅವಕಾಶ ಸಿಕ್ಕಿತು. 2 ವರ್ಷ ಮೂರು ತಿಂಗಳು ಅಲ್ಲಿ ಕೆಲಸದ ಅನುಭವ ಪಡೆದುಕೊಂಡರು. ಇದೇ ಹೊತ್ತಿಗೆ, ವರ್ಲ್ಡ್ ಸ್ಪೇಸ್ ಸೆಟಲೈಟ್ ರೇಡಿಯೋದಲ್ಲಿ ಸುಮಾರು ಆರು ತಿಂಗಳು ವಾರಕ್ಕೊಂದು ಶೋ ಮಾಡ್ತಾ ಇದ್ದರು. ನಂತರ ಬೆಂಗಳೂರಿನ ಬಿಗ್ ಎಫ್‌ಎಂ ರೇಡಿಯೋದಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕೆಲಸ ಸಿಕ್ಕಿತು.
ಅದಾದ ಬಳಿಕ, ಆಜ್‌ತಕ್ ಹೆಡ್‌ಲೈನ್ಸ್ ಟುಡೇ ಸುದ್ದಿವಾಹಿನಿಯಲ್ಲಿ ವರದಿಗಾರರಾಗಿ, ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವರದಿ ಮಾಡುತ್ತಿದ್ದರು. ಬಳಿಕ 2008ರ ವೇಳೆಗೆ ಜನಪ್ರಿಯ ಸುವರ್ಣ ಎಂಟರ್‌ಟೈನ್‌ಮೆಂಟ್ ಚಾನೆಲ್‌ನಲ್ಲಿ ಪ್ರೋಮೋ ಚೀಫ್ ಆಗಿ ಸೇರಿಕೊಂಡರು. ಒಂದು ವರ್ಷ ಸಿಬ್ಬಂದಿಯಾಗಿ, ಬಳಿಕ ಹವ್ಯಾಸಿಯಾಗಿ ಅಲ್ಲಿ ಪ್ರೋಮೋಗಳಲ್ಲಿ ಧ್ವನಿ ನೀಡುವ ಕೆಲಸ ಮಾಡ್ತಾ ಇದ್ರು. ಆಗ ಜನಪ್ರಿಯವಾಗಿದ್ದ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫ್, ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೇ ಮಂದಿ ಕಾಡಿಗ್ ಬಂದ್ರು ಇತ್ಯಾದಿ ಶೋಗಳ ಪ್ರೋಮೋಗಳ ಹಿಂದಿನ ಕೈಚಳಕ ಹಾಗೂ ಕೇಳಿಸ್ತಾ ಇದ್ದ ಧ್ವನಿ ಪ್ರದೀಪ್ ಅವರದ್ದೇ. ನಂತರ ಸುವರ್ಣ ನ್ಯೂಸ್ ಸುದ್ದಿವಾಹಿನಿಯಲ್ಲಿ ರೈಟ್ ಕ್ಲಿಕ್, ಚಿದಂಬರ ರಹಸ್ಯ ಎಂಬ ಎರಡು ಸರಣಿಗಳನ್ನು ನಿಯಮಿತವಾಗಿ ನಡೆಸಿ ಕೊಡ್ತಾ ಇದ್ರು.
ಪ್ರಶಸ್ತಿ ಅವಕಾಶ ಸೃಷ್ಟಿಸುತ್ತೆ ಎನ್ನುವ ಭರವಸೆ ಇಲ್ಲ: ಅಕ್ಷತಾ ಪಾಂಡವಪುರ
ಈ ನಡುವೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶವೂ ಸಿಕ್ಕಿತು. ರವಿ ಗರಣಿ ಅವರು ಪ್ರದೀಪ್ ಪ್ರತಿಭೆ ಗುರುತಿಸಿ, 2009ರಲ್ಲಿ ಕೃಷ್ಣ ರುಕ್ಮಿಣಿಯಲ್ಲಿ ಸಣ್ಣ ಪಾತ್ರ ನೀಡಿದರು. ಲಕುಮಿ ಧಾರಾವಾಹಿಯ ಹೀರೋ ಬದಲಾವಣೆ ಆದಾಗ ಆ ಪಾತ್ರ ಪ್ರದೀಪ್‌ಗೆ ಸಿಕ್ಕಿತು. ಝೀ ಕನ್ನಡ ವಾಹಿನಿಯಲ್ಲಿ ಭಾರತಿ ಹಾಗೂ ರಾಜಕುಮಾರಿ ಧಾರಾವಾಹಿಗಳಲ್ಲಿ ಹೀರೋ ಪಾತ್ರ ಸಿಕ್ಕಿತು. ಈ ಥರ ಕನ್ನಡದಲ್ಲಿ 300ರಷ್ಟು ಧಾರಾವಾಹಿ ಸಂಚಿಕೆಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಝೀ ಕನ್ನಡ ವಾಹಿನಿಯಲ್ಲೂ ಒಂದು ವರ್ಷ ಕೆಲಸ ಮಾಡಿದ್ದಾರೆ. ಇದರ ನಡುವೆ ತಮಿಳು ಭಾಷೆಯಲ್ಲಿ ಸೊಂದ ಬಂದಂ ಧಾರಾವಾಹಿಯಲ್ಲಿ 800ರಷ್ಟು ಸಂಚಿಕೆಗಳಲ್ಲಿ ಯಶಸ್ವಿಯಾಗಿ ಪಾತ್ರ ನಿರ್ವಹಿಸಿ ಅಲ್ಲಿಯೂ ಛಾಪು ಮೂಡಿಸಿದರು.
ಸುವರ್ಣ ವಾಹಿನಿಯಲ್ಲಿ ಮ್ಯೂಸಿಕ್ ಸೂಪರ್ ಸ್ಟಾರ್ ಕಾರ್ಯಕ್ರಮ ಹೋಸ್ಟ್ ಮಾಡಲೂ ಅವಕಾಶ ಸಿಕ್ಕಿತು. ಇವೆಲ್ಲದಕ್ಕೂ ಮುಕುಟ ಇಟ್ಟಂತೆ ‘ಸರಸಮ್ಮನ ಸಮಾಧಿ’ ಸಿನಿಮಾದಲ್ಲಿ ಹಿರಣ್ಯ ಅನ್ನುವ ಪಾತ್ರ ನಿರ್ವಹಿಸಿದರು. ‘ಮಿರ್ಚಿ ಮಂಡಕ್ಕಿ, ಖಡಕ್ ಚಾಯ್’ ಸಿನಿಮಾದಲ್ಲೂ ಹೀರೋ ಕೂಡಾ ಆದ್ರು. ಈ ನಡುವೆ 2011-12ರ ಅವಧಿಯಲ್ಲಿ ವಾಹಿನಿಗಳಿಂದ ಸಿಬ್ಬಂದಿಯಾಗಿ ಕೆಲಸ ಮಾಡುವುದರಿಂದ ಹೊರ ಬಂದು, ‘ರಿಕ್ಷಾ ಮೀಡಿಯಾ’ ಅನ್ನುವ ಪ್ರೊಡಕ್ಷನ್ ಹೌಸ್ ಶುರು ಮಾಡಿ ವೃತ್ತಿ ಪರ ಧ್ವನಿ ಕಲಾವಿದರಾಗಿ ಸ್ವತಂತ್ರವಾಗಿ ಒಪ್ಪಂದದ ಮೇರೆಗೆ ಸುದ್ದಿವಾಹಿನಿಗಳು, ರೇಡಿಯೋ, ಜಾಹೀರಾತುಗಳಿಗೆ, ಪ್ರೋಮೋಗಳಿಗೆ ಧ್ವನಿ ಕಲಾವಿದನಾಗಿ ದುಡಿಯುತ್ತಿದ್ದಾರೆ. ಕಳೆದ 14 ವರ್ಷಗಳಲ್ಲಿ ಕನ್ನಡ ಟಿ.ವಿ.ಗಳಲ್ಲಿ ಟಾಪ್ ಶೋಗಳಾದ ಬಿಗ್ ಬಾಸ್, ಸೂಪರ್ ಮಿನಿಟ್, ಮನೆ ಮುಂದೆ ಮಹಾಲಕ್ಷ್ಮೀ, ಕನ್ನಡದ ಕೋಟ್ಯಾಧಿಪತಿ ಸಹಿತ ಬಹುತೇಕ ಎಲ್ಲ ಜನಪ್ರಿಯ ಟಿ.ವಿ.ಶೋಗಳ ಹಿಂದೆ ಪ್ರದೀಪ್ ಧ್ವನಿ ಇದೆ ಎಂಬುದು ಹೆಮ್ಮೆಯ ವಿಚಾರ. ಇವತ್ತು ಅವರು ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಹಿಂದಿ, ತುಳು ಭಾಷೆಗಳಲ್ಲಿ ಸಮರ್ಥವಾಗಿ ಧ್ವನಿ ನೀಡಬಲ್ಲರು. ಹೋಂಡಾ, ಕೋಲ್ಗೇಟ್, ರೆಡ್ ಬಸ್, ಮಣಿಪಾಲ್ ಹಾಸ್ಪಿಟಲ್, ನಾರಾಯಣ ಹೃದಯಾಲಯ ಮತ್ತಿತರ ದೈತ್ಯ ಸಂಸ್ಥೆಗಳ ಜಾಹೀರಾತುಗಳಿಗೆ ಧ್ವನಿಯಾಗಿ ಮಾತ್ರವಲ್ಲ ರೂಪದರ್ಶಿಯಾಗಿಯೂ ಕಾಣಿಸಿಕೊಂಡಿದ್ದಾರೆ.
ರಾಷ್ಟ್ರಮಟ್ಟದಲ್ಲೂ ಸಾವಿರಾರು ಜಾಹೀರಾತುಗಳಿಗೆ ವಾಯ್ಸ್ ಓವರ್ ಮಾಡಿದ್ದು. ಡಬ್ಬಿಂಗ್ ಸಿನಿಮಾ ಹಾಗೂ ಮನರಂಜನಾತ್ಮಕ ಕಾರ್ಯಕ್ರಮಗಳಿಗೆ ಧ್ವನಿ ನೀಡಿದ್ದಾರೆ. ಕಳೆದ ಐದು ವರ್ಷಗಳಿಂದ ರಿಕ್ಷಾ ಮೀಡಿಯಾ ಮೂಲಕ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಕಾರ್ಯಕ್ರಮಗಳಲ್ಲಿ ಸೇವಾ ರೂಪದಲ್ಲಿ ಭಾಗಿಯಾಗುತ್ತಿದ್ದಾಾರೆ. ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಪೀಠಾಧಿಪತಿಯಾಗಿರುವ ಮಠದ ಪರಿಚಯ ಹಾಗೂ ಗೋವಿನ ಬಗ್ಗೆ ಪರಿಚಯಾತ್ಮಕ ಕಾರ್ಯಕ್ರಮಗಳ ನಿರ್ಮಾಣ, ಆ್ಯಂಕರಿಂಗ್, ವಿಡಿಯೋ ಪ್ರಸ್ತುತಿ ಮತ್ತಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಕ್ಷಮ್ಯ ಎಂಬ ಹೆಸರಿನ ನಾಲ್ಕು ಕಂತುಗಳ ಶಾರ್ಟ್ ವೆಬ್ ಸೀರಿಸ್ ತುಂಬ ಜನಪ್ರಿಯವಾಗಿದ್ದು, ಗೋವಿನ ಸಾವಿನಿಂದ ಬಂದ ಪ್ರಾಡಕ್ಟ್‌ಗಳು ಯಾವುವು ಎಂದು ಜಾಗೃತಿ ಮೂಡಿಸಿದ್ದಾಾರೆ.
ರಾಘವೇಶ್ವರ ಶ್ರೀಗಳು ಗೋಕರ್ಣದಲ್ಲಿ ನಿರ್ಮಿಸುತ್ತಿರುವ ವಿಷ್ಣುಗುಪ್ತ ವಿ.ವಿ. ಬಗ್ಗೆ 15ಕ್ಕೂ ಹೆಚ್ಚು ವಿಡಿಯೋ ನಿರ್ಮಿಸಿದ್ದು, ಮಠಕ್ಕೆ ಸಂಬಂಧಿಸಿದ 500ಕ್ಕೂ ಹೆಚ್ಚು ವಿಡಿಯೋ ಮಾಹಿತಿಗಳ ಹಿಂದೆ ಪ್ರದೀಪ್ ಇದ್ದಾರೆ. ಇಷ್ಟು ಮಾತ್ರ ಅಲ್ಲ ಹಿಂದಿ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ, ಹಿಂದಿ, ಕನ್ನಡದಿಂದ ಇಂಗ್ಲಿಷ್‌ನಲ್ಲಿ ಬರೆಯುವ ಕೆಲಸ ಮಾಡ್ತಾರೆ, ಪತ್ರಿಕೆಗಳಿಗೆ ಅಂಕಣ ಬರೆದಿದ್ದಾರೆ. ಓರ್ವ ವ್ಯಕ್ತಿಯೇ ಸಂಸ್ಥೆಯಾಗಿ ದುಡಿಯುತ್ತಿರುವುದಕ್ಕೆ ಹಾಗೂ ತನ್ನದೇ ಬ್ರಾಂಡ್ ನೇಮ್ ಕಟ್ಟಿಕೊಂಡು ಬೇಡಿಕೆ ಹುಟ್ಟು ಹಾಕಿದ್ದಕ್ಕೆ ಪ್ರದೀಪ್ ಸಾಧನೆಯೇ ಸಾಕ್ಷಿ.
ನಾನು ಮಾಡಿದ ಎಲ್ಲ ಕೆಲಸಗಳಲ್ಲೂ ಖುಷಿ ಇದೆ. ನಿರೀಕ್ಷೆಗೂ ಮೀರಿ ವಾಯ್ಸ್ ಓವರ್ ಯಶಸ್ವಿಯಾಗಿದೆ. ಜನರ ಅಭಿಮಾನಕ್ಕೆ ಮೂಕನಾಗಿದ್ದೇನೆ. ಎಲ್ಲ ಅವಕಾಶಗಳು ಅಯಾಚಿತವಾಗಿ ಬಂದದ್ದು, ನಾನು ಅವುಗಳನ್ನು ಸದುಪಯೋಗ ಮಾಡಿದ್ದೇನೆ. ಇದು ಸ್ಕಿಲ್ ಬೇಸಡ್ ವರ್ಲ್ಡ್. ನಿಮ್ಮ ಯಶಸ್ಸು ನಿಮ್ಮನ್ನು ನೀವು ಹೇಗೆ ಬ್ರಾಂಡ್ ಮಾಡಿಕೊಳ್ತೀರಿ ಎಂಬುದರ ಮೇಲೆ ಹೋಗ್ತದೆ ಎನ್ನುತ್ತಾರೆ ಅವರು. ಪ್ರತಿ ಕೆಲಸಕ್ಕೆ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತೇನೆ, ಎಂಜಾಯ್ ಮಾಡುತ್ತೇನೆ. ನನ್ನ ಕೆಲಸದಲ್ಲಿ ಸ್ವಾತಂತ್ರ್ಯ ಇದೆ, ಬೇಕಾದಲ್ಲಿ ತಿರುಗಾಡಬಹುದು. ರಜೆ, ಪ್ರಮೋಶನ್ ಇತ್ಯಾದಿಗಳಿಗೆ ಕಾಯಬೇಕಾಗಿಲ್ಲ. ನಮಗೆ ವಯಸ್ಸಾದರೂ ಕೆಲಸ ಕಳೆದುಕೊಳ್ಳುವ ಆತಂಕ ಇಲ್ಲ, ಸ್ವರ ಮಾಗುತ್ತದೆ. ಕೆಲಸ ಕಡಿಮೆಯಾಗುವ ಆತಂಕ ಇಲ್ಲ. ನಾನು ಸದ್ಯ ಮನೆಯಿಂದಲೇ ಧ್ವನಿ ನಿರೂಪಿಸಿ ಮೊಬೈಲಿನಲ್ಲಿ ಸಂಬಂಧಿಸದವರಿಗೆ ಕಳುಹಿಸುತ್ತೇನೆ. ಓಡಾಟದಲ್ಲಿದ್ದರೆ ಕಾರಿನಲ್ಲೇ ಕುಳಿತು ರೆಕಾರ್ಡಿಂಗ್ ಮಾಡುತ್ತೇನೆ. ಒಂದು ಮೈಕ್ ಯಾವತ್ತೂ ನನ್ನ ಜೇಬಿನಲ್ಲೇ ಇರುತ್ತದೆ ಎನ್ನುವ ಪ್ರದೀಪ್ ಸದಾ ಬಿಝಿ. ಹೋದಲ್ಲಿ, ಬಂದಲ್ಲಿ ಧ್ವನಿ ಮುದ್ರಣ ಮಾಡಿ ತಮ್ಮ ಪಾಡಿಗೆ ವಿವಿಧ ಸಂಸ್ಥೆಗಳಿಗೆ ಕಳುಹಿಸುತ್ತಲೇ ಇರುತ್ತಾರೆ.
ನಾನು ವಾಯ್ಸ್ ಕಲ್ಚರಿಂಗ್, ಧ್ವನಿ ಪೋಷಣೆ ಇತ್ಯಾಾದಿಗಳ ಬಗ್ಗೆ ತಲೆ ಕೆಡಿಸುವುದಿಲ್ಲ. ಬದಲಿಗೆ ನಿರೂಪಣೆ, ಉಚ್ಛಾರಣೆ, ಸ್ಪಷ್ಟತೆ ಕಡೆಗೆ ಗಮನ ಹರಿಸ್ತೇನೆ. ಹೊಸ ಭಾಷೆಗಳನ್ನು ಕಲಿಯುತ್ತಾ ಹೋದ ಹಾಗೆ ಅದು ನನಗೆ ಹೊಸ ಸಂಸ್ಕೃತಿಯನ್ನು ಅರಿತುಕೊಳ್ಳುವ ದ್ವಾರವಾಗಿ ಕಂಡಿತು. ನನಗೆ ಧ್ವನಿ ನನ್ನ ತಂದೆಯಿಂದ ರಕ್ತಗತವಾಗಿ ಬಂದದ್ದು, ನಾನದನ್ನು ನನ್ನ ಬೆಳವಣಿಗೆಗೆ ಬಳಸಿಕೊಂಡೆ. ಅದ್ಭುತ ಕಾರಿದ್ದರೂ ಅದನ್ನು ಓಡಿಸಲು ತಿಳಿದಿರಬೇಕು. ಅಚ್ಚರಿಗಳೇ ಬದುಕು, ಮುಂದಿನ ಅಚ್ಚರಿಗೆ ಸಿದ್ಧರಾಗಿರಬೇಕು. ನಿರೀಕ್ಷೆ ಇರಬೇಕು.
-ಬಡೆಕ್ಕಿಲ ಪ್ರದೀಪ್, ಧ್ವನಿ ಕಲಾವಿದ, ನಟ, ಪತ್ರಕರ್ತ.