ನೂರು ಸಿನಿಮಾಗಳ ಸಂಗೀತ ಸರದಾರ ಅರ್ಜುನ್‌ ಜನ್ಯಾ !

By Web DeskFirst Published Mar 8, 2019, 9:23 AM IST
Highlights

ಅರ್ಜುನ್‌ ಜನ್ಯ ಶತಕ ಬಾರಿಸಿದ್ದಾರೆ. ಗಣೇಶ್‌ ಹಾಗೂ ಭಾವನಾ ಅಭಿನಯದ ‘99’ ಚಿತ್ರದೊಂದಿಗೆ ಅವರು ಸಂಗೀತ ನೀಡಿದ ಚಿತ್ರಗಳ ಸಂಖ್ಯೆ ನೂರಾಗಿದೆ. ಅದರಲ್ಲಿ ಬಹುತೇಕ ಚಿತ್ರಗಳ ಸಂಗೀತ ಸೂಪರ್‌ಹಿಟ್‌. ಈ ಸಂಭ್ರಮದ ಜತೆಗೆ ಹಂಗಾಮ ಡಿಜಿಟಲ್‌ ಮೀಡಿಯಾ ಆಯ್ಕೆ ಮಾಡಿರುವ 2018ರ ಅತ್ಯುತ್ತಮ ಹತ್ತು ಗೀತೆಗಳಲ್ಲಿ 9 ಗೀತೆಗಳು ಅರ್ಜುನ್‌ ಜನ್ಯ ಅವರದ್ದೇ. ಈ ಯಶಸ್ಸಿನ ಖುಷಿಯಲ್ಲಿರುವ ಅರ್ಜುನ್‌ ಜನ್ಯ ಜತೆಗೆ ಮಾತುಕತೆ.

ದೇಶಾದ್ರಿ ಹೊಸ್ಮನೆ

ಸಿನಿಮಾ ಸಂಗೀತ ನಿರ್ದೇಶಕರಾಗಿ ಸೆಂಚುರಿ ಬಾರಿಸಿದ್ದೀರಿ, ಹೇಗಿದೆ ಆ ಸಂಭ್ರಮ?

ಸಂಭ್ರಮ, ಸಡಗರ ಅಂತೇನಿಲ್ಲ. ಅಷ್ಟೊಂದು ಸಿನಿಮಾಗಳು ಹೇಗಾದವು ಅನ್ನೋದು ನನಗೂ ಅಚ್ಚರಿ. ಎಲ್ಲದೂ ದೇವರ ಆಶೀರ್ವಾದ. ನನ್ನಿಂದ ಸಾಧ್ಯವಾಯಿತು ಎನ್ನುವುದಕ್ಕಿಂತ ಅದಾಗಿಯೇ ಆಗಿದೆ. ಅವಕಾಶಗಳು ಬಂದವು, ನಮ್ಮ ಸಿನಿಮಾಕ್ಕೆ ನೀವೇ ಸಂಗೀತ ಸಂಯೋಜನೆ ಮಾಡಿದ್ರೆ ಚೆಂದ ಅಂತ ನಿರ್ದೇಶಕರು, ನಿರ್ಮಾಪಕರು ಬರುತ್ತಿದ್ರು. ಅವರಾರ‍ಯರಿಗೂ ಇಲ್ಲ ಅಂತ ಹೇಳಲಿಲ್ಲ. ಆಯ್ತು ಮಾಡೋಣ ಅಂತ ಶ್ರದ್ಧೆಯಿಂದ ಕೆಲಸ ಮಾಡುತ್ತಾ ಬಂದೆ. ಆ ಜರ್ನಿಯಲ್ಲೀಗ ನೂರು ಸಿನಿಮಾಗಳಾಗಿವೆ. ಇದು ಖುಷಿ ವಿಚಾರ ಎನ್ನುವುದಕ್ಕಿಂತ ನನ್ನ ಜವಾಬ್ದಾರಿ ಹೆಚ್ಚಿಸಿದೆ.

ಇಷ್ಟುಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಬಹುದು ಎನ್ನುವ ನಿರೀಕ್ಷೆ ಇತ್ತಾ?

ಖಂಡಿತಾ ಇಲ್ಲ. ಹಾಗೆಲ್ಲ ನಿರೀಕ್ಷೆ ಇಟ್ಕೊಂಡು ಕೆಲಸ ಮಾಡುವುದಕ್ಕೂ ಆಗೋದಿಲ್ಲ. ಒಂದು ಸಿನಿಮಾ ಮಾಡೋಣ ಅಂತ ಇಲ್ಲಿಗೆ ಬಂದೆ, ಅಲ್ಲಿಂದ ಮತ್ತೊಂದು ಸಿನಿಮಾದ ಆಫರ್‌ ಬಂತು. ಕ್ರಮೇಣ ಆ ಸಂಖ್ಯೆ ಹತ್ತಾಯ್ತು. ಅದು ಮುಗಿದು 25 ಆಯ್ತು. ಈಗ ನೂರಾಗಿದೆ. ಇನ್ನು ಆಫರ್‌ ಇವೆ. ನಾನ್ಯಾವತ್ತೂ ಕೌಂಟ್‌ ಮಾಡುತ್ತಾ ಕುಳಿತವನಲ್ಲ. ಅದು ಮುಖ್ಯ ಅಂತಲೂ ಭಾವಿಸಿಲ್ಲ. ಸಿನಿಮಾ ಮಂದಿ ನನ್ನ ನಂಬಿ ಬರ್ತಾರೆ, ಅವರಿಗೆ ಇಲ್ಲ ಅಂತ ಕಳುಹಿಸಬಾರದು, ನನ್ನಿಂದಾದಷ್ಟುಅವರಿಗೆ ಸ್ಪಂದಿಸಬೇಕು ಎನ್ನುವುದನ್ನೇ ಕಾಯಕ ಮಾಡಿಕೊಂಡೆ. ಈಗಲೂ ನನ್ನದು ಅದೇ ಸೂತ್ರ.

ಒಂದು ಸಿನಿಮಾ ಒಪ್ಪಿಕೊಳ್ಳುವಾಗ ನೀವು ಹಾಕಿಕೊಳ್ಳುವ ಮಾನದಂಡ ಏನು?

ಪ್ರಾಮಾಣಿಕವಾಗಿ ಹೇಳುತ್ತೇನೆ, ಅಂತಹ ಯಾವುದೇ ಮಾನದಂಡ ನನ್ನಲ್ಲಿ ಇಲ್ಲ. ಕತೆ -ಗೀತೆ ಅಂತ ಕೇಳೋಲ್ಲ. ಹೊಸಬರು-ಹಳಬರು ಅಂತ ಯೋಚಿಸುವುದಿಲ್ಲ. ಯಾರ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ರೆ ಗೆಲ್ಲಬಹುದು ಅಂತಲೂ ಲೆಕ್ಕ ಹಾಕಲ್ಲ. ಅವರ ಸಿನಿಮಾಕ್ಕೆ ನಾನೇ ಬೇಕು ಅಂತ ನಂಬಿ ಬಂದವರ ಸಿನಿಮಾಕ್ಕೆಲ್ಲ ಸಂಗೀತ ಸಂಯೋಜನೆ ಮಾಡಿದ್ದೇನೆ. ಹಾಗೆ ಬಂದವರ ಪೈಕಿ ಬಹುತೇಕ ಮಂದಿಗೆ ನನ್ನ ಕೆಲಸ ಇಷ್ಟವಾಗಿದೆ. ಕೆಲವರಿಗೆ ಬೇಸರವೂ ಆಗಿದೆ. ಅದು ಸಹಜ. ಮಾಡಿದ್ದೆಲ್ಲವೂ ಚಿನ್ನ ಆಗೋದಿಲ್ಲ. ಹಾಗೆ ಕ್ರಿಯೇಟ್‌ ಮಾಡೋದು ದೇವರು ಮಾತ್ರ.

ಗಣೇಶ್‌ ಅಭಿನಯದ ‘99’ ಚಿತ್ರ ನಿಮ್ಗೆ ನೂರರ ಮೈಲುಗಲ್ಲು, ಇದರ ಬಗ್ಗೆ ಹೇಳಿ?

ಈ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ವೈಯಕ್ತಿಕವಾಗಿ ನನಗೆ ತುಂಬಾ ಖುಷಿಯಿದೆ. ಗಣೇಶ್‌ ಸರ್‌ ಅಭಿನಯದ ಚಿತ್ರ ಎನ್ನುವುದು ಒಂದು ಕಡೆಯಾದರೆ, ನನ್ನ ವೃತ್ತಿಯಲ್ಲಿ ಇದು ನೂರರ ಮೈಲುಗಲ್ಲು. ಆದರೂ ಪ್ರತಿ ಸಿನಿಮಾಕ್ಕೆ ನಾನು ವಹಿಸುವ ಕಾಳಜಿ, ಪ್ರೀತಿಯನ್ನೇ ಈ ಸಿನಿಮಾಕ್ಕೂ ಧಾರೆ ಎರೆಯುತ್ತಿದ್ದೇನೆ. ತುಂಬಾ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದೇನೆ. ಸಾಹಿತ್ಯ ಅದ್ಭುತವಾಗಿದೆ. ಒಂದು ಹಾಡಿಗೆ ಇದೇ ಮೊದಲು ಬುಡಾಪೆಸ್ಟ್‌ ಇಂಗ್ಲಿಷ್‌ ಆರ್ಕೆಸ್ಟ್ರಾ ಲೈವ್‌ ಮ್ಯೂಜಿಕ್‌ ಬಳಸುತ್ತಿದ್ದೇವೆ. ಅದಕ್ಕಾಗಿಯೇ ಹಂಗೇರಿಗೆ ಹೋಗುತ್ತಿದ್ದೇವೆ. ಚಿತ್ರದ ಪ್ರತಿ ಹಾಡು ಬೆಂಚ್‌ ಮಾರ್ಕ್ ಆಗುವುದು ಖಚಿತ.

ಹೆಸರಾಂತ ಸಂಗೀತ ನಿರ್ದೇಶಕ ರೆಹಮಾನ್‌ ಸ್ಫೂರ್ತಿಯಿಂದಲೇ ನೀವು ಸಂಗೀತ ಕ್ಷೇತ್ರಕ್ಕೆ ಬಂದಿದ್ದು ಎನ್ನುವ ಮಾತು ನಿಜವಾ?

ನೂರರಕ್ಕೆ ನೂರಷ್ಟುಸತ್ಯವಾದ ಮಾತಿದು. ಯಾಕಂದ್ರೆ, ಅವರು ಸಂಗೀತ ಕ್ಷೇತ್ರದಲ್ಲಿ ಇರದಿದ್ದರೆ ನಾನು ಸಂಗೀತ ನಿರ್ದೇಶಕನಾಗಿರುತ್ತಿರಲಿಲ್ಲ. ಅವರ ‘ರೋಜ’ಸಿನಿಮಾ ನೋಡಿಯೇ ನಾನು ಸಂಗೀತದ ಕನಸು ಕಂಡೆ. ಅವರ ಸಾಧನೆ ನೋಡಿಯೇ ಆ ಕನಸು ನನಸಾಗಿಸಿಕೊಂಡೆ. ನಾನಿನ್ನು ಹತ್ತಿರದಿಂದ ಅವರನ್ನು ನೋಡುವುದಕ್ಕೆ ಆಗಿಲ್ಲ. ಒಂದೆರೆಡು ಬಾರಿ ಹಾಯ್‌, ಬಾಯ್‌ ಎನ್ನುವ ಮಟ್ಟಕ್ಕಷ್ಟೇ ಪರಿಚಯವಾಗಿದ್ದೇನೆ. ಆದರೆ, ಅವರನ್ನು ದೂರದಿಂದ ನೋಡಿಯೇ ಖುಷಿ ಪಡುತ್ತೇನೆ. ಅವರ ಕೆಲಸ ನನ್ನನ್ನು ಗಾಢವಾಗಿ ಪ್ರಭಾವಿಸಿದೆ. ಅವರ ಅಪ್ಪಟ ಅಭಿಮಾನಿ ಅಂತ ಹೇಳಿಕೊಳ್ಳುವುದಕ್ಕೆ ಖುಷಿ ಆಗುತ್ತದೆ.

ಸಂಗೀತ ನಿರ್ದೇಶಕನ ನಿಮ್ಮ ಜರ್ನಿ ಎಷ್ಟರ ಮಟ್ಟಿಗೆ ಖುಷಿ ಕೊಟ್ಟಿದೆ?

ಆರ್ಕೆಸ್ಟ್ರಾಗಳಲ್ಲಿ ದಿನಕ್ಕೆ 20 ರೂಪಾಯಿ ಸಿಗುತ್ತಿದ್ದ ಸಂದರ್ಭ. ಅಲ್ಲಿಂದ ಇಂತಹ ದಿನಗಳು ಬರುತ್ತವೆ ಅಂತ ಕನಸಲ್ಲೂ ಎಣಿಸಿರಲಿಲ್ಲ. ನಾನೇನು ಕನಸು ಕಂಡಿದ್ದೆನೋ ಅದು ನನಸಾಯಿತು. ಅಲ್ಲಿಂದ ಸಂಗೀತ ನಿರ್ದೇಶಕನಾದೆ. ಕೈ ತುಂಬಾ ಕೆಲಸ. ಕೆಲಸ ಇದ್ದ ಮೇಲೆ, ಬೇಸರ ಇರೋದಕ್ಕೆ ಸಾಧ್ಯವೇ ಇಲ್ಲ. ಇವತ್ತು ಐ ಆ್ಯಮ್‌ ಫೈನ್‌. ದೇವರು ಯಾವುದಕ್ಕೂ ಕೊರತೆ ಮಾಡಿಲ್ಲ. ಚಿತ್ರೋದ್ಯಮ ಎಲ್ಲದನ್ನು ಕೊಟ್ಟಿದೆ. ಅಕೌಂಟ್‌ನಲ್ಲಿ ಇವತ್ತು ಹಣ ಇಲ್ಲ ಅಂತ ಬೇಜಾರಾಗಲ್ಲ. ಒಂದು ಹಾಡು ಚೆನ್ನಾಗಿ ಬರಲಿಲ್ಲ ಅಂದ್ರೆ ಬೇಸರ ವಾಗುತ್ತೆ. ನಿದ್ದೆ ಬರಲ್ಲ, ಊಟ ಸೇರಲ್ಲ. ಅದು ಸಂಗೀತದ ಮೇಲಿನ ಪ್ರೀತಿ. ಅದೇ ಪ್ರೀತಿ, ಕಾಳಜಿ ಸಂಸಾರದಲ್ಲೂ ಸಿಕ್ಕಿದೆ. ಬಹುಶಃ ಅದರಿಂದಲೇ ನಾನು ಇಷ್ಟುಸಿನಿಮಾ, ಮತ್ತು ಇಷ್ಟುಸಕ್ಸಸ್‌ ಕಾಣಲು ಸಾಧ್ಯವಾಗಿದೆ.

ನಿರ್ದೇಶಕರು, ನಟರ ಪೈಕಿ ಯಾರ ಕಾಂಬಿನೇಷನ್‌ ನಿಮ್ಗೆ ಇಷ್ಟ? ಯಾಕಾಗಿ ಇಷ್ಟ?

ನಿರ್ದೇಶಕ ತರುಣ್‌ ಸುಧೀರ್‌ ಜತೆಗೆ ಸಾಕಷ್ಟುಸಿನಿಮಾ ಮಾಡಿದ್ದೇನೆ. ಅವರ ಜತೆಗೆ ಕೆಲಸ ಮಾಡುವಾಗ ಒಂಥರ ಕಂಫರ್ಟ್‌ನೆಸ್‌ ಇರುತ್ತೆ. ಅವರು ಹೀಗಲ್ಲ, ಹಾಗೆ ಅಂತ ಹೇಳುತ್ತಾರಷ್ಟೇ. ಅದು ಹೀಗೆ ಬರಬೇಕೆಂದು ಯಾವತ್ತಿಗೂ ಒತ್ತಾಯಿಸುವುದಿಲ್ಲ. ಆ ಪ್ರೀತಿಯಲ್ಲಿ, ಕಾಳಜಿಯಲ್ಲಿ ಹೊಸತರಹದ ಸಂಗೀತ ಹುಟ್ಟುತ್ತೆ. ಅದನ್ನವರು ಅಷ್ಟೇ ಪ್ರೀತಿಯಲ್ಲಿ ಕೇಳುಗರಿಗೆ ಮುಟ್ಟಿಸುತ್ತಾರೆ. ಅದು ಹಿಟ್‌ ಆಗುತ್ತೆ. ನಮಗೂ ಖುಷಿ ಆಗುತ್ತೆ. ಹಾಗೆಯೇ ಸುದೀಪ್‌ ಸರ್‌ ಸಿನಿಮಾಕ್ಕೆ ಕೆಲಸ ಮಾಡುವಾಗಲೂ ಅದೇ ಪ್ರೀತಿ ಇರುತ್ತೆ. ಅದು ಇನ್ನೊಂದು ಹಂತ. ನಿರ್ದೇಶಕ ಪ್ರೇಮ್‌ ಜತೆಗೆ ಕೆಲಸ ಮಾಡುವಾಗಲೂ ಅಷ್ಟೇ ಖುಷಿ ಇರುತ್ತೆ. ದರ್ಶನ್‌ ಸರ್‌ ಸಿನಿಮಾಗಳಿಗೆ ಕೆಲಸ ಮಾಡುವಾಗ ಟೆನ್ಸನ್‌ ಇದ್ದರೂ ಒಂಥರ ಮಜಾ. ಅವರೇ ಓಕೆ ಅಂತ ಹೇಳಿದ್ರೂ, ಇನ್ನಷ್ಟುಕೆಲಸ ಮಾಡ್ಬೇಕು ಎನ್ನುವ ಹುಮ್ಮಸ್ಸು ಇರುತ್ತೆ. ಯಾಕಂದ್ರೆ ಅವರ ಫ್ಯಾನ್ಸ್‌ಗೆ ತಕ್ಕಂತೆ ಸಾಂಗ್ಸ್‌ ಕೊಡ್ಬೇಕು ಅನ್ನೋದು ತಲೆಯಲ್ಲಿರುತ್ತೆ.

ಕೆಲವು ಸ್ಟಾರ್‌ ಸಿನಿಮಾಗಳಿಗೆ ನೀವಿನ್ನು ಸಂಗೀತ ನಿರ್ದೇಶನ ಮಾಡಿಲ್ಲ, ಅದು ಯಾಕೆ?

ಹೌದು, ಪುನೀತ್‌ ರಾಜ್‌ ಕುಮಾರ್‌ ಅವರಂತಹ ಸ್ಟಾರ್‌ಗೆ ನಾನಿನ್ನು ಕೆಲಸ ಮಾಡಲು ಆಗಿಲ್ಲ. ಅದ್ಯಾಕೋ ನನಗಿನ್ನು ಗೊತ್ತಾಗಿಲ್ಲ. ಇದೆಲ್ಲ ನಮ್ಮ ಕೈಯಲ್ಲಿರೋದಿಲ್ಲ. ಅವರ ಸಿನಿಮಾಗಳ ನಿರ್ದೇಶಕ ಕೈಯಲ್ಲಿರುತ್ತೆ. ಪುನೀತ್‌ ಸರ್‌ ಸಿಕ್ಕಾಗೆಲ್ಲ, ಒಂದು ಸಿನಿಮಾ ಮಾಡೋಣ ಅಂತಾರೆ. ಅದ್ರೆ, ಅದಕ್ಕಿನ್ನು ಸಮಯ ಕೂಡಿ ಬಂದಿಲ್ಲ. ಕೆಲವರ ಸಿನಿಮಾಕ್ಕೆ ನಾನಿನ್ನು ಕೆಲಸ ಮಾಡಿಲ್ಲ ಎನ್ನುವ ಕೊರಗಿದೆ. ಅದೃಷ್ಟಎನ್ನುವ ಹಾಗೆ ಅಂಬರೀಷ್‌ ಸರ್‌ ಜತೆಗೆ ಒಂದು ಸಿನಿಮಾ ಮಾಡಿದೆ. ಕೊನೆಯಲ್ಲಿ ‘ಅಂಬಿ ನಿಂಗ್‌ ವಯಸ್ಸಾಯ್ತೋ’ ಚಿತ್ರದಲ್ಲಿ ಅವಕಾಶ ಸಿಕ್ತು. ಇದೆಲ್ಲ ಒಬ್ಬ ಸಂಗೀತ ನಿರ್ದೇಶಕನಿಗೆ ಸಿಗುವ ಅಪರೂಪದ ಕ್ಷಣ.

ಒಂದೆಡೆ ಸಿನಿಮಾ ಕೆಲಸ ಮತ್ತೊಂದೆಡೆ ಕಿರುತೆರೆ ರಿಯಾಲಿಟಿ ಶೋ.. ಇದೆಲ್ಲ ಹೇಗೆ ಸಾಧ್ಯ?

ಕಿರುತೆರೆ ರಿಯಾಲಿಟಿ ಶೋಗಳು ಈ ಕಾಲದ ಹೊಸ ವೇದಿಕೆಗಳು. ಎಲೆಮರೆ ಕಾಯಿಯ ಹಾಗಿರುವ ಅದೆಷ್ಟೋ ಪ್ರತಿಭೆಗಳಿಗೆ ಇದು ವೇದಿಕೆ. ಅಲ್ಲಿ ನನಗೆ ಹೆಚ್ಚೇನು ಕೆಲಸ ಇಲ್ಲ. ವಾರಕ್ಕೆ ಒಂದೆರಡು ದಿನ ಮಾತ್ರ ಶೂಟಿಂಗ್‌. ಅಷ್ಟುಮುಗಿಸಿ ಬಂದರೆ, ಉಳಿದ ದಿನಗಳಲ್ಲಿ ಸಿನಿಮಾ ಕೆಲಸ. ಇದೇ ನನ್ನ ಆದ್ಯತೆಯ ಕ್ಷೇತ್ರ. ಅದರ ಜತೆಗೆ ಲೈವ್‌ ಶೋಗಳು. ಅಲ್ಲಿ-ಇಲ್ಲಿ ಅಂತ ತುಂಬಾ ಬ್ಯುಸಿಯಿದ್ದೇನೆ. ಮನೆಯವರ ಜತೆಗೆ ಹೆಚ್ಚು ಸಮಯ ಕಳೆಯಲು ಆಗುತ್ತಿಲ್ಲ. ಇದೆಲ್ಲ ದುಡಿಮೆ ಎನ್ನುವುದಕ್ಕಿಂತ ನಮ್ಮನ್ನು ನಾವು ಗುರುತಿಸಿಕೊಳ್ಳುವುದಕ್ಕೆ ಸಿಕ್ಕ ಅವಕಾಶ.

ಇಷ್ಟೆಲ್ಲ ಜನಪ್ರಿಯತೆಯ ನಡುವೆಯೂ ಕೆಲವು ಆರೋಪಗಳಿಗೂ ನೀವು ಸಿಲುಕಿದ್ದೀರಿ, ಅದೆನ್ನೆಲ್ಲ ಹೇಗೆ ನಿಭಾಯಿಸುತ್ತೀರಿ?

ಅದೇನೋ ಗೊತ್ತಿಲ್ಲ. ಕೆಲವರು ಯಾಕಾಗಿ ಇದೆಲ್ಲ ಮಾಡುತ್ತಾರೋ ಗೊತ್ತಿಲ್ಲ. ಆ ಬಗ್ಗೆ ನಾನೆಂದಿಗೂ ತಲೆ ಕೆಡಿಸಿಕೊಂಡಿಲ್ಲ.ಆರೋಪಗಳುಬಂದಾಗ ತಕ್ಷಣಕ್ಕೆ ನಾನೆಂದಿಗೂ ಪ್ರತಿಕ್ರಿಯೆ ನೀಡುವುದಿಲ್ಲ. ಹಾಗೆ ಮಾಡಿದರೆ, ಅದು ಮತ್ತಷ್ಟುವಿವಾದಕ್ಕೆ ಸಿಲುಕುತ್ತೆ. ಇನ್ನೇನೋ ಆಗುತ್ತೆ. ತಕ್ಷಣಕ್ಕೆ ಮೌನವೇ ನನ್ನ ಉತ್ತರವಾಗುತ್ತೆ. ಆ ನಂತರ ಸತ್ಯ ಗೊತ್ತಾಗುತ್ತೆ.

ನೂರು ಸಿನಿಮಾ, ನೂರಾರು ಹಾಡು, ಇಷ್ಟರಲ್ಲಿ ನಿಮಗೆ ಖುಷಿ ಕೊಟ್ಟು ಹಾಡು ಯಾವುದು? ಯಾಕಾಗಿ?

ಚೌಕ ಚಿತ್ರದ ‘ಅಪ್ಪ ಐ ಲವ್‌ ಯು’ ನನಗೆ ತುಂಬಾ ಇಷ್ಟವಾದ ಹಾಡು. ನಾನು ಮಾಡಿದ ಕೆಲಸ ಅಂತಲ್ಲ, ಅದನ್ನು ಕೇಳಿದ ಪ್ರತಿಯೊಬ್ಬರು ಒಂದು ಕ್ಷಣ ಮೌನವಾಗಿ ಬಿಡುತ್ತಾರೆ. ಅಪ್ಪ-ಮಗಳ ಆ ಸಂಬಂಧ ಧ್ವನಿ ಎಂತಹವರನ್ನು ಭಾವುಕ ಗೊಳಿಸುತ್ತದೆ. ಆ ಹಾಡು ಬಂದ ನಂತರ ಲೆಕ್ಕವಿಲ್ಲದಷ್ಟುಜನ ಮೆಚ್ಚಿ ನನಗೆ ಫೋನ್‌ ಮಾಡಿದರು. ತುಂಬಾ ಒಳ್ಳೆಯ ಹಾಡು ಅಂದರು. ಬೇರೆಯಾದ ಅಪ್ಪ-ಮಕ್ಕಳು ಒಂದಾದ ಘಟನೆಗಳನ್ನು ಕೇಳಿದೆ. ಆ ಕಾರಣಕ್ಕೆ ನನಗೆ ಅನುಗಾಲ ಕಾಡುವ ಹಾಡು ಅದು.

click me!