
ನಿಮ್ಮ ಹಿನ್ನೆಲೆ ಏನು?
ಮೂಲ ಕೊಡಗು. ಆದರೆ, ನಾನು ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ. ಕಂಪ್ಯೂಟರ್ ಸೈನ್ಸ್ ಓದು ಮುಗಿಸಿ ಡೆಲ್ ಕಂಪನಿಯಲ್ಲಿ ಎರಡು ವರ್ಷ ಕೆಲಸ ಮಾಡಿದ್ದೇನೆ. ಇಲ್ಲಿ ಕೆಲಸ ಮಾಡುವಾಗಲೇ ನನಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದ್ದು. ಮೊದಲಿನಿಂದಲೂ ಇದ್ದ ಆಸೆ ಮುಂದೆ ಬಂದಾಗ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದೆ.
ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದವರು ಸಿನಿಮಾ ನಂಟು ಬೆಳೆಸಿಕೊಂಡಿದ್ದು ಹೇಗೆ?
ನನ್ನ ಸ್ನೇಹಿತರೊಬ್ಬರು ನಿರ್ದೇಶಕರಾಗಲು ಕಿರು ಚಿತ್ರ ಮಾಡುವಾಗ ಅದರಲ್ಲಿ ನನ್ನ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು. ಈ ಚಿತ್ರಕ್ಕಾಗಿ ಶೂಟ್ ಮಾಡಿದ್ದ ಪ್ರಮೋ ಯೂಟ್ಯೂಬ್‌ನಲ್ಲಿ ಹಾಕಿದ್ದರು. ಅದನ್ನು ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರತಂಡ ನೋಡಿ ಆಡಿಷನ್‌ಗೆ ಕರೆಯಿತು. ಹಾಗೆ ನಾನು ಸಿನಿಮಾ ನಂಟಿಗೆ ಬಂದಿದೆ.
ಯಾವ ಅನುಭವದ ಮೇಲೆ ಚಿತ್ರರಂಗಕ್ಕೆ ಬರಬೇಕು ಅನಿಸಿತು?
ಮೊದಲೇ ಹೇಳಿದಂತೆ ನನಗೆ ಯಾವುದೇ ರೀತಿಯ ಅನುಭವ ಇರಲಿಲ್ಲ. ಆದರೂ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಎಲ್ಲರಿಗೂ ಇರುವಂತೆ ನನಗೂ ಇದ್ದ ಕನಸು. ಆ ಕನಸಿನ ವಿಶ್ವಾಸವೇ ನನ್ನ ಕ್ಯಾಮೆರಾ ಮುಂದೆ ನಿಲ್ಲಿಸಿದೆ ಅಂದುಕೊಳ್ಳುತ್ತೇನೆ.
ಮೊದಲ ಚಿತ್ರದ ನಟನೆಯ ಅನುಭವ ಹೇಗಿತ್ತು?
ಆಸೆಪಟ್ಟು ಬಂದ ಕ್ಷೇತ್ರ. ಹೀಗಾಗಿ ಸಂಭ್ರಮದಿಂದಲೇ ಚಿತ್ರದಲ್ಲಿ ನಟಿಸಿಈದ್ದೇನೆ. ಶೂಟಿಂಗ್ ಸಮಯದಲ್ಲಿ ಯಾವುದೇ ರೀತಿಯ ಕಷ್ಟಅನಿಸಲಿಲ್ಲ. ಯಾಕೆಂದರೆ ಚಿತ್ರೀಕರಣಕ್ಕೆ ಹೋಗುವ ಮೊದಲೇ ಒಂದಿಷ್ಟುದಿನ ಪೂರ್ವ ತರಬೇತಿ ಶಿಬಿರ ಮಾಡಿದ್ದರು. ಚಿತ್ರದಲ್ಲಿ ಬರುವ ಮೇಜರ್ ದೃಶ್ಯಗಳು, ಡೈಲಾಗ್ ಡೆಲಿವರಿ ಮಾಡುವ ವಿಧಾನ ಹೀಗೆ ಎಲ್ಲದರ ಬಗ್ಗೆಯೂ ಹೇಳಿಕೊಟ್ಟರು. ಈ ಕಾರಣಕ್ಕೆ ಸಲೀಸಾಗಿ ನಟಿಸಿದೆ. ಮೊದಲ ಚಿತ್ರವಾಗಿದ್ದರಿಂದ ಸಹಜವಾಗಿ ಖುಷಿ ಕೊಟ್ಟಿದೆ.
ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ನಾನು ಇಲ್ಲಿ ಚಂದನ್ ಆಚಾರ್ಯ ಅವರಿಗೆ ಜೋಡಿಯಾಗಿ ನಟಿಸಿದ್ದೇನೆ. ನನ್ನ ಪಾತ್ರದ ಹೆಸರು ಚೈತ್ರಾ ಎಂಬುದು. ಮದುವೆ ಆಗಿರುವ ಹಳ್ಳಿ ಹುಡುಗಿ ಪಾತ್ರ. ಸಣ್ಣ ಪುಟ್ಟವಿಚಾರಗಳಿಗೆ ಜಗಳ ಮಾಡಿಕೊಂಡು ಸಂಸಾರವನ್ನು ಕಷ್ಟಕ್ಕೆ ಸಿಲುಕಿಸುವ ಹೆಣ್ಣು ಮಕ್ಕಳನ್ನು ನನ್ನ ಪಾತ್ರ ಪ್ರತಿನಿಧಿಸುತ್ತದೆ.
ಕರಿಯಪ್ಪನ ಕತೆ ಹೇಗಿರುತ್ತದೆ?
ಚಿತ್ರದಲ್ಲಿ ತಂದೆ-ಮಗನ ಬಾಂಧವ್ಯದ ಕುರಿತು ಹೇಳಲಾಗಿದೆ. ಮಕ್ಕಳ ಏಳಿಗೆಗಾಗಿ ತಂದೆ-ತಾಯಿ ಯಾವ ರೀತಿ ಬೆಂಬಲವಾಗಿ ನಿಲ್ಲುತ್ತಾರೆ ಎಂಬುದು ಚಿತ್ರದ ಮುಖ್ಯ ತಳಹದಿ. ಸಿನಿಮಾ ನೋಡುತ್ತಿದ್ದರೆ ಪ್ರತಿಯೊಂದು ಮನೆಯಲ್ಲೂ ನಡೆಯುವ ಘಟನೆಯಂತೆಯೇ ಭಾಸವಾಗುತ್ತದೆ. ಹಾಸ್ಯ ರೂಪದಲ್ಲಿ ಸಿನಿಮಾ ಸಾಗುತ್ತಲೇ ಅಲ್ಲಲ್ಲಿ ಮನ ಕಲಕುವ ದೃಶ್ಯಗಳಿವೆ.
ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ನಿಮ್ಮಲ್ಲಿ ಮೂಡಿಸಿದ ವಿಶ್ವಾಸ ಏನು?
ಈಗಾಗಲೇ ಟ್ರೇಲರ್ ನೋಡಿ ತುಂಬಾ ಜನ ಮೆಚ್ಚಿಕೊಂಡಿದ್ದಾರೆ. ಹಾಡುಗಳು ಕೂಡ ಚೆನ್ನಾಗಿ ಬಂದಿವೆ. ಹೊಸ ಪ್ರತಿಭೆಗಳು ಸೇರಿ ಮಾಡಿರುವ ಸಿನಿಮಾ. ಜನ ನೋಡುತ್ತಾರೆಂಬ ನಂಬಿಕೆ ಇದೆ. ಅಲ್ಲದೆ ನಮ್ಮ ತಂಡದ ಜತೆ ಸೇರಿ ಈಗಾಗಲೇ ಸಿನಿಮಾ ನೋಡಿದ್ದೇನೆ. ಪ್ರೇಕ್ಷಕರಿಗೂ ಸಿನಿಮಾ ಮೆಚ್ಚುಗೆ ಆಗುತ್ತದೆಂಬ ನಂಬಿಕೆ ಮತ್ತು ವಿಶ್ವಾಸ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.