ಒಕ್ಕೂಟಕ್ಕೆ ತರುಣರು ಬರಬೇಕು ಅನ್ನುವ ಕಾರಣಕ್ಕೆ ರಾಜೀನಾಮೆ ಕೊಟ್ಟೆ: ಅಶೋಕ್ ಸಂದರ್ಶನ

By Kannadaprabha NewsFirst Published Jan 8, 2021, 5:02 PM IST
Highlights

ಕರ್ನಾಟಕ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಮಾತು-ಕತೆ.

ಇದ್ದಕ್ಕಿದ್ದಂತೆ ರಾಜಿನಾಮೆ?

ನನಗೂ ವಯಸ್ಸಾಯಿತು. ಇನ್ನೂ ಅಲ್ಲೇ ಇದ್ದರೆ ಹೊಸಬರು, ಯುವ ಉತ್ಸಾಹಿಗಳು ಬರಲ್ಲ. ಯುವಕರು ಬರಬೇಕು ಎಂಬುದು ನನ್ನ ಆಸೆ.

1987ರಿಂದ ನೀವೇ ಅಧ್ಯಕ್ಷರಾಗಿದ್ರಿ ಅಲ್ವಾ?

ಅದು ಅನಿವಾರ್ಯ ಆಗಿತ್ತು. ಸಿನಿಮಾ ಕಾರ್ಮಿಕರ ಪರವಾಗಿ ಮಾತನಾಡಿದರೆ ನಿರ್ಮಾಪಕರ ವಿರೋಧಿ ಎನ್ನುವ ಪಟ್ಟಬರುತ್ತದೆ. ಈ ಸ್ಥಾನದಲ್ಲಿ ಕೂತರೆ ಅನ್ನದಾತರು ಎನಿಸಿಕೊಂಡ ನಿರ್ಮಾಪಕರ ನಿಷ್ಠುರ ಕಟ್ಟಿಕೊಳ್ಳಬೇಕು. ಈ ಕಾರಣಕ್ಕೆ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಯಾರೂ ಬರುತ್ತಿರಲಿಲ್ಲ.

ನಿಮಗೆ ತೊಂದರೆ ಆಗಲಿಲ್ಲವೇ?

ಖಂಡಿತ ಆಗಿದೆ. ನಟಿಸುವ ಅವಕಾಶಗಳು ಕಡಿಮೆ ಆದವು. ಸಿನಿಮಾ ಕಾರ್ಮಿಕರಿಗೆ ಕೊಡಬೇಕಾದ ಸೌಲಭ್ಯ ಕೊಡಿ ಅಂದಾಗ ನಾನು ವಿಲನ್‌ ಆಗುತ್ತಿದ್ದೆ. ಡಬ್ಬಿಂಗ್‌ ವಿಚಾರದಲ್ಲಿ ಕೆಟ್ಟವನಾದೆ. ಕೂಲಿಗಳು ಎನಿಸಿಕೊಂಡಿದ್ದವರನ್ನು ಕಾರ್ಮಿಕರನ್ನಾಗಿಸಿದ್ದೇ ನಾನು ಮಾಡಿದ ದೊಡ್ಡ ತಪ್ಪು ಅನಿಸಿರಬೇಕು!

ಅಧ್ಯಕ್ಷ ಸ್ಥಾನದಲ್ಲಿ ಕೂರುವುದಕ್ಕೆ ಸ್ಫೂರ್ತಿ ಅಥವಾ ಕಾರಣ ಏನು?

ಬಸವಣ್ಣನ ಪಾತ್ರ. ‘ಕ್ರಾಂತಿ ಯೋಗಿ ಬಸವಣ್ಣ’ ಚಿತ್ರದಲ್ಲಿ ನಾನು ಬಸವಣ್ಣನ ಪಾತ್ರ ಮಾಡಿದ ಮೇಲೆ ನಟನೆಯ ಆಚೆಗೂ ನನ್ನ ಜೀವನ ಮತ್ತು ಆಲೋಚನೆಯನ್ನು ಬದಲಾಯಿತು. ವಿಭೂತಿ ಹಚ್ಚಿಕೊಳ್ಳುವುದು ಎಂದರೆ ನಮ್ಮೊಳಗಿನ ಬದಲಾವಣೆ, ನಮ್ಮಸುತ್ತಲಿನ ಬದಲಾವಣೆ.

ಕಲಾವಿದ, ಕಾರ್ಮಿಕರ ಒಕ್ಕೂಟದ ಇವೆರಡನ್ನೂ ನೀವು ಹೇಗೆ ನೋಡುತ್ತೀರಿ?

ಕಲಾವಿದನಾಗಿ ನನಗೆ ನಾನು ದುಡಿಯುತ್ತಿದ್ದೆ. ಒಕ್ಕೂಟಕ್ಕೆ ಬಂದ ಮೇಲೆ ನಾನು ಎನ್ನುವುದು ಮರೆತು ನಾವು ಎನ್ನುವ ಸಮೂಹ ಪ್ರಜ್ಞೆ ಬೆಳೆಸಿಕೊಂಡೆ. ಹೀಗಾಗಿ ನನ್ನ ಬದುಕಿನಲ್ಲಿ ಎರಡು ದೊಡ್ಡ ಚಾಪ್ಟರ್‌ಗಳಿವೆ. ಕಲಾವಿದ ಮತ್ತು ಕಾರ್ಮಿಕ.

ನೀವು ನಟರೆಂಬುದನ್ನು ಚಿತ್ರರಂಗ ಮರೆತಿದೆ.

ನಾನೂ ಹತ್ತಾರು ಚಿತ್ರಗಳಲ್ಲಿ ನಟಿಸಿದ್ದೇನೆ. ನಾನ್ಯಾಕೆ ಇವರಿಗೆ ನೆನಪಾಗುತ್ತಿಲ್ಲ ಎನ್ನುವ ಬೇಸರ. ನಾನು ವ್ಯವಸ್ಥೆಯನ್ನು ಪ್ರಶ್ನಿಸಿದೆ. ಹೀಗಾಗಿ ಮೂಲೆ ಸೇರಿದೆ. ಆದರೆ, ನನ್ನ ಎಲ್ಲೇ ಹೋದರೂ ಕಾರ್ಮಿಕ ನಾಯಕ ಅಂತ ಗುರುತಿಸುತ್ತಾರೆ.

ನೀವು ಅರ್ಥ ಮಾಡಿಕೊಂಡಿರುವ ಜೀವನ ತತ್ವ ಏನು?

ಮನುಷ್ಯನಿಗೆ ಎರಡು ಅಕ್ಷರ ಮುಖ್ಯ. ಅ-ಅನ್ನ, ಆ-ಆರೋಗ್ಯ. ಇವೆರಡು ಎಲ್ಲರಿಗೂ ಸಮನಾಗಿ ಸಿಗಬೇಕು. ಇವೆರಡೂ ಎಲ್ಲರಿಗೂ ತಲುಪುವಂತಹ ವ್ಯವಸ್ಥೆ ಬರಬೇಕು. ನಾನು ಇತ್ತೀಚೆಗೆ ರಜನಿಕಾಂತ್‌ಗೆ ಹೇಳಿದ್ದು ಇದನ್ನೇ. ನಿನಗೆ ಅನ್ನ ಇದೆ, ಆರೋಗ್ಯ ನೋಡಿಕೋ, ಈ ರಾಜಕೀಯ ಬೇಕಾ ಅಂತ.

ಮುಂದೆ ಏನು ಮಾಡಬೇಕು ಅಂದುಕೊಂಡಿದ್ದೀರಿ?

ನಾನು ಮೊದಲಿನಿಂದಲೂ ಪ್ರೊ.ನಂಜುಂಡಸ್ವಾಮಿ ಅವರ ಹಾದಿಯಲ್ಲಿ ಬಂದವನು. ರೈತರ ಪರವಾಗಿ ಏನಾದರು ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ಚಾಮರಾಜ ನಗರದಲ್ಲಿರುವ ಅಮೃತಭೂಮಿ ಹೋಗಿ ನೆಲೆಸುವ ಯೋಚನೆ ಇದೆ. ಒಳ್ಳೆಯ ಪಾತ್ರ ಸಿಕ್ಕರೆ ಬಂದು ನಟಿಸುತ್ತೇನೆ.

click me!