ಪುತ್ರನ ಶುಭ ಲಗ್ನದಲ್ಲಿ ರಂಗಭೂಮಿ ಕಲಾವಿದರನ್ನು ಒಂದೆಡೆ ಸೇರಿಸಿದ 'ಚಿನ್ನ'!

By Suvarna News  |  First Published Jan 5, 2021, 1:27 PM IST

ಕಾಸರಗೋಡು ಚಿನ್ನ ಅವರು ರಂಗಭೂಮಿಯಲ್ಲಿ ಜೀವಮಾನ ಸಾಧನೆಗಾಗಿ `ಅಜಿತ ಶ್ರೀ' ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ಪ್ರಸ್ತುತ ಕೊರೊನಾ ಸಂದರ್ಭದಲ್ಲಿಯೂ ರಂಗಭೂಮಿಯ ಸೆಲೆಬ್ರಿಟಿಗಳೆಲ್ಲ ಸೇರಿದಂಥ ಒಂದು ವಿವಾಹ ನೆರವೇರಿದ್ದರೆ, ಅದು ಮಂಗಳೂರಲ್ಲಿ ನೆರವೇರಿದಂಥ ಚಿನ್ನ ಅವರ ಪುತ್ರನ ವಿವಾಹ. ಈ ಸಂದರ್ಭದಲ್ಲಿ ಭೇಟಿಯಾದ ಅವರು, ಅಲ್ಲಿಯೂ ಕೂಡ ಸಿನಿಮಾ, ರಂಗಭೂಮಿಯ ಬಗ್ಗೆಯೇ ಮಾತನಾಡಿದ್ದು ವಿಶೇಷವಾಗಿತ್ತು.


ಇವರು ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ನಾಟಕಗಳನ್ನು ತುಳು, ಕೊಂಕಣಿ ಭಾಷೆಗಳಿಗೆ ಅನುವಾದಿಸಿ, ಅಭಿನಯಿಸಿ ಹೆಸರಾದವರು. ಚಿನ್ನ ಎನ್ನುವ ತಮ್ಮ ಹೆಸರಿನಂತೆ ರಂಗಭೂಮಿಯ ಮೇಲಿನ ಪ್ರೀತಿಯ ವಿಚಾರದಲ್ಲಿಯೂ ಇವರು ಅಪ್ಪಟ ಚಿನ್ನ. ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿಗೆ ಭಾಜನರಾಗಿರುವ ಇವರು ಕರ್ನಾಟಕದ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. ಸುವರ್ಣ ನ್ಯೂಸ್.ಕಾಮ್ ಜೊತೆಗೆ  ಸದ್ಯದ  ಗಡಿನಾಡ ರಂಗಭೂಮಿಯ ಬಗ್ಗೆ ಕಾಸರಗೋಡು ಚಿನ್ನ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. 


 -ಶಶಿಕರ ಪಾತೂರು

Latest Videos

undefined

ಮದುವೆ ಮನೆಯಲ್ಲಿಯೂ ಕಲಾವಿದರೇ ತುಂಬಿದ್ದಾರಲ್ಲ?
ಬಹುಶಃ ಇದು ಕಲೆಯೊಂದಿಗೆ ಇರುವ ನನ್ನ ಸಂಬಂಧದ ಸಂಕೇತ ಎಂದೇ ಹೇಳಬಹುದು. ಕಲಾಸಕ್ತಿ ನನ್ನ ಜೊತೆಯಲ್ಲೇ ಇರುವ ಕಾರಣ ಅದನ್ನು ಮನೆಯಿಂದ, ಸಂಬಂಧಗಳಿಂದ ಯಾವತ್ತೂ ದೂರ ಮಾಡಬೇಕಾಗಿ ಬಂದಿಲ್ಲ. ಇಂದು ವಿವಾಹಿತನಾಗುತ್ತಿರುವ ನನ್ನ ಪುತ್ರ ಗಿರೀಶನೂ ಕಲೆಯಲ್ಲಿ ಹೆಸರು ಮಾಡುತ್ತಿದ್ದಾನೆ. ಆತ ತಬಲಾ ವಾದಕನಾಗಿ ಗುರುತಿಸಿಕೊಂಡಿದ್ದಾನೆ. ಇದೀಗ ಮನೆ ಸೇರಲಿರುವ ಸೊಸೆಯೂ ನೃತ್ಯಗಾತಿ. ನನಗೆ ಇಬ್ಬರು ಮಕ್ಕಳು. ಮಗಳು ಕವನಾ ಗಾಯಕಿ. ರಂಗ ಸಂಗೀತದ ಜೊತೆಗೆ ಇಷ್ಟೆಲ್ಲ ಸಂಬಂಧ ಇರುವಾಗ ಆಹ್ವಾನಿತರು ಕೂಡ ಕಲಾವಿದರೇ ಇರವುದು ಸಹಜವಲ್ಲವೇ? ಮುಖ್ಯವಾಗಿ ಎಲ್ಲರೂ ಈ ಕೊರೊನಾ ಸಮಯದಲ್ಲಿಯೂ ನನ್ನ ಕರೆಗೆ ಓಗೊಟ್ಟು ಬಂದು ಮಗನಿಗೆ ಆಶೀರ್ವಾದ ನೀಡಿರುವುದಕ್ಕೆ ಖುಷಿಯಿದೆ. 

ನಾನೇನೂ ಪ್ಲ್ಯಾನ್ ಮಾಡುವುದಿಲ್ಲ- ಭೂಮಿ ಶೆಟ್ಟಿ

ಸಿನಿಮಾ ಜೊತೆಗಿನ ನಿಮ್ಮ ಸಂಬಂಧ ಹೇಗಿದೆ?
ನನ್ನ ಪಾಲಿಗೆ ಸಿನಿಮಾ ಮತ್ತು ರಂಗಭೂಮಿ ಎರಡೂ ಸಾಕಷ್ಟು ವಿಭಿನ್ನವಾದವು. ರಂಗಭೂಮಿ ನನ್ನ ಉಸಿರಲ್ಲಿ ಒಂದಾಗಿದೆ. ಆದರೆ ಸಿನಿಮಾ ಎಂದರೆ ಅದೊಂದು ಕಮರ್ಷಿಯಲ್ ಲೋಕ. ಹಾಗಾಗಿ ಸಂತೃಪ್ತಿಗಾಗಿ ಮಾಡುವುದು ರಂಗಭೂಮಿಯ ಕೆಲಸ. ಆದರೆ ಸಂಪಾದನೆಗಾಗಿ ಮಾಡುವುದು ಸಿನಿಮಾದ ನಟನೆ ಎನ್ನಬಹುದು. ಹಾಗಂತ ನಾನು ಸಿನಿಮಾದಿಂದ ತುಂಬ ಸಂಪಾದಿಸಿದ್ದೇನೆ ಎಂದಲ್ಲ. ಆರಂಭ ಕಾಲದಲ್ಲಿ ನಟಿಸಿ ಹಣ ಪಡೆಯದೇ ಹೋಗಿದ್ದೂ ಇದೆ. ಕಲಾವಿದನಾಗಿ ತೃಪ್ತಿ ನೀಡುವ ಪಾತ್ರ ಸಿಗದು ಎಂದಾದರೆ ನಟಿಸಿದ ಪಾತ್ರಕ್ಕೆ ಒಳ್ಳೆಯ ಸಂಭಾವನೆಯಾದರೂ ನಿರೀಕ್ಷೆ ಮಾಡಲೇ ಬೇಕಲ್ಲವೇ? ಹಾಗಾಗಿ ನಾನು ಪರಿಚಿತರಿಂದ ಸಿನಿಮಾ ಅವಕಾಶ ಬಂದಾಗ ಮಾತ್ರ ಒಪ್ಪಿಕೊಳ್ಳುತ್ತಿದ್ದೇನೆ. ನಾನು ಇತ್ತೀಚೆಗೆ ನಟಿಸಿರುವುದು ದಿಗಂತ್ ಮತ್ತು ಐಂದ್ರಿತಾ ರೇ ಜೋಡಿಯಾಗಿರುವ `ಕ್ಷಮಿಸಿ ನಿಮ್ಮ ಖಾತೆಯಲ್ಲಿ ದುಡ್ಡಿಲ್ಲ' ಎನ್ನುವ ಚಿತ್ರದಲ್ಲಿ.

`ಕನ್ನಡತಿ'ಯ ವರಲಕ್ಷ್ಮಿ ಮಾಲಿನಿಯ ಮಾತುಗಳು

'ಕೊರೊನಾ'ವು ಕಾಸರಗೋಡಿನ ವೃತ್ತಿರಂಗಭೂಮಿಯ ಮೇಲೆ ಬೀರಿರುವ ಪರಿಣಾಮ ಏನು?
ವೃತ್ತಿ ರಂಗಭೂಮಿಯವರಿಗೆ ಖಂಡಿತವಾಗಿ ಅವರಿಗೆ ಕಷ್ಟವಾಗಿದೆ. ಹಾಗಂತ ಆಕಾಶ ಬೀಳಲಿದೆ ಭಯದಿಂದ ಯಾರೂ ಕೈ ಎತ್ತಿ ಕಾದು ನಿಲ್ಲುವುದಿಲ್ಲ. ಹಾಗೆಯೇ ವೃತ್ತಿರಂಗಭೂಮಿ ಕಲಾವಿದರು ಕೂಡ ನಟನೆಗೆ ಅವಕಾಶ ಇಲ್ಲ ಎಂದ ಮಾತ್ರಕ್ಕೆ ಉಪವಾಸ ಬಿದ್ದು ಸಾಯುವುದಿಲ್ಲ. ಪರ್ಯಾಯ ಕೆಲಸಗಳನ್ನು ಮಾಡಲೇಬೇಕಾಗುತ್ತದೆ. ನನ್ನ ಸ್ನೇಹಿತರು ಕೂಡ ಅಷ್ಟೇ, ಹೃದಯದಿಂದ ಕಲಾವಿದರೇ ಆದರೂ ಒಂದಲ್ಲ ಮತ್ತೊಂದು ಕೆಲಸಗಳ ಮೂಲಕ ಸಂಪಾದಿಸುವುದು ರಂಗಭೂಮಿ ಪರಿಣಿತರಿಗೆ ಕಷ್ಟವಲ್ಲ. ಇದರ ನಡುವೆ ಆನ್ಲೈನ್ ಕಾರ್ಯಕ್ರಮಗಳು ಕೂಡ ನಡೆಯಿತು. ಈಗಂತೂ ಕೊರೊನಾ ಭಯ ದೂರವಾಗಿದೆ. ಮರಳಿ ರಂಗಭೂಮಿ ಸಕ್ರಿಯವಾಗಿದೆ. ಕ್ರಮೇಣ ವೃತ್ತಿರಂಗಭೂಮಿಯವರು ಮುಖ್ಯ ವಾಹಿನಿಗೆ ಬಂದೇ ಬರುತ್ತಾರೆ ಎನ್ನುವ ನಂಬಿಕೆ ಇದೆ.

ಸ್ಪಾನರ್ ಶಿವ ಮಹೇಶ್ ಸಂದರ್ಶನ

ರಂಗಭೂಮಿಯ ಕುರಿತಾಗಿ ಉಳಿದಿರುವ ನಿಮ್ಮ ಕನಸುಗಳೇನು? 
ಕನಸುಗಳು ಎಂದಿಗೂ ಸಾಯುವುದಿಲ್ಲವಲ್ಲ? ನಮ್ಮ ಕನಸುಗಳು ಸದಾ ಜೀವಂತವಾಗಿರುವುದರಿಂದಲೇ ಏನಾದರೂ ಸಾಧನೆ ಮಾಡಲು ಸಾಧ್ಯ. ಕನಸುಗಳು ಮತ್ತು ಹುಚ್ಚುತನ ಎರಡೂ ಬೇಕು. ನನ್ನ ಮನದೊಳಗೆ ಹುಚ್ಚುತನ ಹಾಗೆಯೇ ಇದೆ. ಕಾಸರಗೋಡಿನಲ್ಲಿನ ರಂಗ ಚಟುವಟಿಕೆಗಳು ಅದಕ್ಕೊಂದು ಉದಾಹರಣೆ. ನಾವು ಸದಾ ಏನಾದರೊಂದು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿರುತ್ತೇವೆ. ಆದರೆ ಕರ್ನಾಟಕ ಸರ್ಕಾರ ಕಳೆದ ಎರಡು ವರ್ಷಗಳಿಂದ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ನಮ್ಮ ಆದಾಯದಿಂದಲೇ ಒಂದು ಭಾಗವನ್ನು ರಂಗಭೂಮಿಯ ಖುಷಿಗಾಗಿ ಖರ್ಚು ಮಾಡಿದ ಅನುಭವ ನಮಗಿದೆ. ಆದರೆ ಅನುದಾನ ಬಳಸಿ ಮಾಡುವಂಥ ದೊಡ್ಡ ಕೆಲಸಗಳು ಹಾಗೇ ಉಳಿದಿವೆ. ಉದಾಹರಣೆಗೆ ಗೋವಾದಿಂದ ಕೇರಳದ ರಾಜಧಾನಿ ತಿರುವನಂತಪುರದವರೆಗೆ ಕನ್ನಡ ರಂಗಭೂಮಿಗೆ ಸಂಬಂಧಿಸಿದ ಒಂದು ತೇರು ಎಳೆಯುವ ಯೋಜನೆ ಇದೆ. ಅದರಲ್ಲಿ ಸಾಹಿತಿಗಳ ದಂಡೇ ಇರಬೇಕು ಎನ್ನುವ ಕನಸು ಇದೆ. ಇಂಥ ತೇರು ನಮಗೆ ಹೊಸದೇನಲ್ಲ. ಸಂಗೀತರಥ, ಕಾಸರಗೋಡಿನಿಂದ ವಿಧಾನ ಸೌಧದದ ತನಕ ಸಂಚರಿಸಿದ ಲಾರಿ ನಾಟಕ, ಕಾಸರಗೋಡಿನಿಂದ ಬೆಂಗಳೂರಿನ ತನಕ ಸಾಗಿದ ಯಕ್ಷತೇರು,  ಗೀತ ಸಂಗೀತ ರಥದ ಮೂಲಕ ಕಾಸರಗೋಡಿನ 17 ಹಳ್ಳಿಗಳನ್ನು ಸೇರಿ ಸುಮಾರು ಮೂರುವರೆ ಲಕ್ಷ ಜನರನ್ನು ತಲುಪಿದೆ. ಹವ್ಯಾಸಿ ರಂಗಭೂಮಿಗೆ ಸಂಬಂಧಿಸಿದಂತೆ ಲಾರಿಯಲ್ಲಿ ಕವಿಗೋಷ್ಠಿ.. ಹೀಗೆ ವಿಭಿನ್ನವಾದ ಕಾರ್ಯಕ್ರಮಗಳ ಹಲವಾರು ಕಾನ್ಸೆಪ್ಟ್ ಶುರುವಾಗಿದ್ದೇ ಕಾಸರಗೋಡಿನಿಂದ ಎನ್ನಬಹುದು. ಶಾಲಾ ಮಕ್ಕಳಿಗಾಗಿ ಯಕ್ಷಗಾನ ಕಾರ್ಯಾಗಾರ ಹೀಗೆ ನಮ್ಮ ಹಲವಾರು ರಂಗಚಟುವಟಿಕೆಗಳನ್ನು ಇಂದಿಗೂ ನೆನಪಿಸುವವರಿದ್ದಾರೆ. ಸಾಧ್ಯವಾದರೆ ಈ ಗೋವಾದ ತೇರು ಕೂಡ ಅದೇ ಪಟ್ಟಿಯಲ್ಲಿ ಸೇರಲಿದೆ.

click me!