ನಟ ಕಮ್ ನಿರ್ದೇಶಕ ರವಿತೇಜ ತಮ್ಮ ಜೀವನದ ಏಳು ಬೀಳಿನ ಬಗ್ಗೆ ಮಾತನಾಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಬದುಕಿಗಾಗಿ ಪರದಾಡುತ್ತಿರುವುದು, ವೈಯಕ್ತಿಕ ಜೀವನದಲ್ಲಿ ತಂಗಿಯ ಆತ್ಮಹತ್ಯೆಯಂಥ ಘಟನೆ ಅವರಿಗೆ ಸಾಕಷ್ಟು ನೋವು ತಂದಿದೆ. ಅವರು ಹೇಳಿದ್ದೇನು?
ಸ್ಯಾಂಡಲ್‌ವುಜ್ ಒಂಥರಾ ಮಾಯಾ ಬಜಾರು.ಇಲ್ಲಿ ಸ್ಟಾರ್ ಆಗಬೇಕು, ಡೈರೆಕ್ಟರ್ ಆಗಬೇಕು ಅಂತಾ ಬಣ್ಣ ಬಣ್ಣದ ಕನಸು ಕಟ್ಟಿಕೊಂಡು ನೂರಾರು ಮಂದಿ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಸುತ್ತುತ್ತಿರುತ್ತಾರೆ. ಆದರೆ ಇಲ್ಲಿ ನೆಲೆ ಕಂಡುಕೊಳ್ಳುವುದು ಮಾತ್ರ ಬೆರಳೆಣಿಕೆ ಜನರಷ್ಟು ಮಾತ್ರ. ಅದಕ್ಕೆ ಕಾರಣಗಳು ನೂರಾರು ಇವೆ ಬಿಡಿ. ಲಕ್, ಪ್ರತಿಭೆ ಎರಡೂ ಇದ್ದೋರು ಮಾತ್ರ ಜಯಶಾಲಿಯಾಗೋದು ಗ್ಯಾರಂಟಿ. ಇಲ್ಲದಿದ್ದರೆ ಅನುಭವಿಸುವ ಪಾಡು ಅಷ್ಟಿಷ್ಟಲ್ಲ.
ಇದೇ ರೀತಿ ಸಾಕಷ್ಟು ವರ್ಷ ಇಂಡಸ್ಟ್ರಿಯಲ್ಲಿದ್ದರೂ, ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವವರು ನಟ ಕಮ್ ನಿರ್ದೇಶಕ ರವಿತೇಜ. ಸ್ಯಾಂಡಲ್‌ವುಡ್ ಇವರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ಅವರು ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.
'ಇಂಡಸ್ಟ್ರಿ ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ ನನಗೆ....'
ರವಿತೇಜ ನಿರ್ದೇಶನದ 'ಸಾಗುತ ದೂರ ದೂರ' ಸಿನಿಮಾ ಕಳೆದ ವಾರ ರಾಜ್ಯದ್ಯಾಂತ ಬಿಡುಗಡೆಯಾಗಿದ್ದು, ಗೌರೀಶ್ ಅಕ್ಕಿ ಸ್ಟುಡಿಯೋಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಚಂದನವನದ ಕುರಿತು ತಮ್ಮ ಬೇಸರ ಹೊರಹಾಕಿದ್ದಾರೆ.
'ನಾನು ಸ್ಯಾಂಡಲ್‌ವುಡ್‌ಗೆ ನಟನಾಗಿ ಎಂಟ್ರಿಯಾಗಿದ್ದರು. ನನ್ನ ಪ್ಯಾಷನ್ ಮಾತ್ರ ಡೈರೆಕ್ಷನ್. ಒಳ್ಳೇ ಕಥೆಗಳನ್ನು ನಿರ್ದೇಶಿಸಬೇಕು. ಉತ್ತಮ ಚಿತ್ರಗಳನ್ನು ಇಂಡಸ್ಟ್ರೀಗೆ ಕೊಡುಗೆಯಾಗಿ ನೀಡಬೇಕು ಎಂಬ ಆಸೆಯೊಂದಿಗೆ ನಾನು ಚಿತ್ರರಂಗಕ್ಕೆ ಕಾಲಿಟ್ಟೆ. ಆದರೆ ಹೊಸಬರ ಚಿತ್ರಕ್ಕೆ ಬಂಡವಾಳ ಹೂಡಲು ನಿರ್ಮಾಪಕರು ಮುಂದೆ ಬರುವುದಿಲ್ಲ. ಕೆಲವೊಮ್ಮೆ ಚಿತ್ರರಂಗವನ್ನೇ ಬಿಟ್ಟು ಹೋಗೋಣ ಅನ್ಸುತ್ತೆ. ಆದರೆ ನನಗೆ ಸಿನೆಮಾ ಬಿಟ್ಟು ಬೇರೆ ಕೆಲ್ಸ ಗೊತ್ತಿಲ್ಲ. ಬೇರೆ ಕಡೆ ಹೋಗಿ ಬದುಕೋಕು ನನಗೆ ಕಷ್ಟ,' ಎಂದರು.
'ಅವತ್ತು ಶೂಟಿಂಗ್ ನಿಲ್ಸಿ ಮಾತಾಡಿದ್ರೆ, ನನ್ ತಂಗಿ ಸಾಯ್ತಿರಲಿಲ್ಲ...'
ಅವತ್ತು ನಾನು 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೆ. ನನ್ನ ತಂಗಿ, 'ಫೋನ್ ಮಾಡಿ ಅಣ್ಣಾ ನಿನ್ನ ಜೊತೆ ತುಂಬಾ ಮಾತಾಡಬೇಕು ಫ್ರೀ ಇದ್ದೀಯಾ?' ಎಂದು ಕೇಳಿದಳು. ನಾನು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ಡಿನಿ. ನಾಳೆ ಫೋನ್ ಮಾಡ್ತಿನಿ ಎಂದು ಹೇಳಿ ಕಾಲ್ ಕಟ್ ಮಾಡಿದೆ. ಆದರೆ ಆ ನನ್ನ ನಿರ್ಧಾರಕ್ಕೆ ನಾನು ದೊಡ್ಡ ಬೆಲೆ ತೆರಬೇಕಾಯ್ತು. ಮರುದಿನ ಬೆಳಿಗ್ಗೆ ಬಂದ ಫೋನ್‌ನಲ್ಲಿ ಆಘಾತಕಾರಿ ಸುದ್ದಿಯೊಂದು ಕಾದಿತ್ತು. ನನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಹುಶಃ ನಾನು ಅವತ್ತು ನನ್ನ ಶೂಟಿಂಗ್ ನಿಲ್ಲಿಸಿ, ಮನೆಗೆ ಹೋಗಿದ್ದರೆ, ನನ್ನ ತಂಗಿಯನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು ಸಾಗುತ ದೂರ ದೂರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ರವಿತೇಜ ತಮ್ಮ ಬದುಕಿನ ಕಹಿ ಘಟನೆಯನ್ನು ನೆನೆಪಿಸಿಕೊಂಡರು.
ಕನ್ನಡ ಸಿನಿಮಾ ಮಾಡುವುದು ಅಪ್ಪನ ಕನಸು
ಇನ್ನು 'ಸಾಗುತ ದೂರ ದೂರ' ಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು, ಸದ್ಯಕ್ಕೆ ಥಿಯೇಟರ್ ಸಮಸ್ಯೆ ಎದುರಿಸುತ್ತಿದೆ. ಕಳೆದ ವಾರ ಕನ್ನಡದಲ್ಲೇ ಹದಿಮೂರು ಸಿನಿಮಾಗಳು ಬಿಡುಗಡೆಯಾಗಿವೆ. ಪ್ರೇಕ್ಷಕರಿಗೆ ಯಾವ ಸಿಚಿತ್ರಗಳನ್ನು ವಿಕ್ಷಿಸಬೇಕು ಎನ್ನುವ ಗೊಂದಲ ಮೂಡುವ ಜೊತೆಗೆ ಥಿಯೇಟರ್ ಕೊರತೆಯೂ ಕಾಡುತ್ತಿದೆ. ಈ ರೀತಿಯ ಸಮಸ್ಯೆಗಳು ಕನ್ನಡ ಚಿತ್ರರಂಗದ ಬೆಳವಣಿಗೆಗೆ ದೊಡ್ಡ ಸವಾಲು.
ಇನ್ನು ಈ ಸಂದರ್ಶನ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಲಭ್ಯವಿದ್ದು, ಸಂದರ್ಶನವನ್ನು ವೀಕ್ಷಿಸಲು ಈ ಲಿಂಕ್ ಕ್ಲಿಕ್ಕಿಸಿ.
- ಪ್ರವೀಣ್ ಮೈನಾಳೆ, ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ