ನಟ ಅನಿರುದ್ಧ ಅವರು ಕುಟುಂಬ ಸಮೇತ ಸೋಲಾಪುರಕ್ಕೆ ಹೊರಟಿದ್ದಾರೆ. ಅದಕ್ಕೆ ಕಾರಣ ಫೆ.17 ಅವರ ವಿವಾಹದ ದಿನ. ಒಂದು ದಿನದ ಹಿಂದೆ ಜನ್ಮದಿನವನ್ನು ಕೂಡ ಆಚರಿಸಿಕೊಂಡ ಅವರ ಸಂಭ್ರಮದ ಮಾತುಗಳು ಇಲ್ಲಿವೆ.
ಶಶಿಕರ ಪಾತೂರು
ಅನಿರುದ್ಧ ಇಂದು ಕಿರುತೆರೆಗೆ ದೊಡ್ಡ ತಾರೆ. ಅದಕ್ಕೂ ಮೊದಲು ಪ್ರಥಮ ಚಿತ್ರದಲ್ಲೇ ಹಿಟ್ ನೀಡಿದ ದೊಡ್ಡ ಪರದೆಯ ತಾರೆ. ಚಿಟ್ಟೆಯಾಗಿ ಹಾರಿ ಬಂದ ಅವರು, ಕೈಯಾಡಿಸಿದ ಕ್ಷೇತ್ರವಿಲ್ಲ ಎನ್ನಬಹುದು. ಸಿನಿಮಾ ನಾಯಕರಷ್ಟೇ ಅಲ್ಲ; ಒಳ್ಳೆಯ ಗಾಯಕರೂ ಹೌದು. ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿ, ನಟಿಸಿ ದಾಖಲೆ ಸೃಷ್ಟಿಸಿ ಪ್ರಶಸ್ತಿಗಳನ್ನು ಪಡೆದವ ರು. ಸದ್ಯದ ಮಟ್ಟಿಗೆ ಅವರನ್ನು ಜತೆಜತೆಯಾಗಿ ಕೈ ಹಿಡಿದಿರುವುದು ಮಾತ್ರ 'ಜೊತೆ ಜೊತೆಯಲಿ' ಧಾರಾವಾಹಿ. ನಿನ್ನೆ ತಾನೆ 46ನೇ ವರ್ಷದ ಜನ್ಮದಿನಾಚರಣೆ ಆಚರಿಸಿರುವ ಅನಿರುದ್ಧ್ ಅವರಿಗೆ ಇಂದು ಕೂಡ ಒಂದು ವಿಶೇಷ ದಿನ. ಅವೆಲ್ಲದರ ಬಗ್ಗೆ ಸುವರ್ಣ ಆನ್ಲೈನ್ ನ್ಯೂಸ್ ಜೊತೆಗೆ ಅನಿರುದ್ಧ್ ಮಾತಾಡಿದ್ದಾರೆ.
undefined
ಲವ್ ಆಯ್ತು, ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಆರಂಭಿಸಿದ ಆರ್ಯವರ್ಧನ್!
ಜನ್ಮದಿನಾಚರಣೆ ಹೇಗಿತ್ತು ?
ನಿಜ ಹೇಳಬೇಕೆಂದರೆ ನಾನು ಜನ್ಮದಿನಾಚರಣೆಯನ್ನು ಅಷ್ಟೊಂದು ದೊಡ್ಡ ಸಂಭ್ರಮವಾಗಿ ಕಾಣುವುದಿಲ್ಲ. ಆದರೆ ಈ ಬಾರಿ ನಿಜಕ್ಕೂ ಸಂಭ್ರಮ ಹೆಚ್ಚಾಗಿರುವುದು ಸತ್ಯ. ಅದಕ್ಕೆ ಧಾರಾವಾಹಿ ತಂದಿರುವ ದೊಡ್ಡ ಮಟ್ಟದ ಯಶಸ್ಸು ಕೂಡ ಕಾರಣ. ಹಾಗಾಗಿ ಈ ಸಂಭ್ರಮದಲ್ಲಿ 'ಜೊತೆ ಜೊತೆಯಲಿ' ತಂಡದ ಪಾಲು ಇದೆ. ಆದರೆ ನಾನು ರಜಾದಲ್ಲಿ ಇರುವ ಕಾರಣ, ಸೀರಿಯಲ್ ಸೆಟ್ ನಲ್ಲಿ ಜನ್ಮದಿನಾಚರಣೆ ಮಾಡಿಕೊಂಡಿಲ್ಲ.
ಈಗ ನಿಮ್ಮ ಫ್ಯಾನ್ಸ್ ಕೂಡ ವಿಷ್ಣುವರ್ಧನ್ ಅವರ ಅಭಿಮಾನಿಗಳ ಜತೆಗೆ ಕೈ ಜೋಡಿಸಿದಂತಿದೆ ?
ನನಗ್ಯಾವ ಫ್ಯಾನ್ಸ್ ಹೇಳಿ ? ನಾನೇ ಅಪ್ಪಾವರ(ವಿಷ್ಣುವರ್ಧನ್ ಅವರ) ಫ್ಯಾನ್. ನಾನು ಇಂದು ಏನಾಗಿದ್ದೇನೆಯೋ ಅದರಲ್ಲಿ ಅವರ ಪಾತ್ರವಿದೆ. ಇಂದು ಈ ಧಾರಾವಾಹಿ ನೋಡಿ ನನಗೆ ಹೊಸ ಅಭಿಮಾನಿಗಳು ಸಿಕ್ಕಿರಬಹುದು. ಆದರೆ ಅವರು ಕೂಡ ಅಪ್ಪಾವರ ಮೇಲೆ ಅಭಿಮಾನ ಇರಿಸಿರುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ನಿನ್ನೆ 46ವರ್ಷದ ಬರ್ತ್ ಡೇ ಪ್ರಯುಕ್ತ ಅಪ್ಪಾವರ ಮನೆ ಮುಂದಿನ ಪಾರ್ಕ್ ನಲ್ಲಿ 46 ಗಿಡಗಳನ್ನು ನೆಡಲಾಯಿತು. ಹಾಗಾಗಿ ನಮ್ಮೆಲ್ಲರ ಅಭಿಮಾನ ಅವರ ಜೊತೆ ಜೊತೆಯಲ್ಲೇ ಇರುತ್ತದೆ.
ಅನು ಸಿರಿಮನೆ ಪ್ರೀತಿ ಒಪ್ಪಿಕೊಂಡ ಆರ್ಯವರ್ಧನ್!
ಜನ್ಮದಿನದ ಪ್ರಯುಕ್ತ ಬೇರೆ ಏನೆಲ್ಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ?
ಒಟ್ಟು 46 ಶಾಲೆಗಳಲ್ಲಿ 46ಗಿಡಗಳನ್ನು ನೆಡುವ ಕಾರ್ಯಕ್ರಮ ಅದು ವರ್ಷಪೂರ್ತಿ ನಡೆಯುತ್ತದೆ. ನಿನ್ನೆ ಬ್ಲಡ್ ಕ್ಯಾಂಪ್ ಆಯೋಜಿಸಿದ್ದರು. ಒಟ್ಟು ಸಮಾಜ ಸೇವೆಯ ಕಾರ್ಯಕ್ರಮಗಳು ನಡೆಯುತ್ತದೆ ಎನ್ನುವಾಗ ನಾನು ಕೂಡ ಅದರಲ್ಲಿ ಭಾಗಿಯಾಗುತ್ತೇನೆ. ಉಳಿದಂತೆ ನನಗೆ ನಿನ್ನೆಗಿಂತ ಇವತ್ತಿನ ದಿನ ಇನ್ನಷ್ಟು ಸಂಭ್ರಮದ ಸಂದರ್ಭವಾಗಿದೆ. ಯಾಕೆಂದರೆ ಇವತ್ತು ನನ್ನ ಮತ್ತು ಕೀರ್ತಿಯವರ ವಿವಾಹವಾಗಿ 18ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ.
ಹಾಗಾದರೆ ಮ್ಯಾರೇಜ್ ಆನಿವರ್ಸರಿ ವಿಶೇಷದ ಬಗ್ಗೆ ಹೇಳಿ
ನಡೀತಾ ಇದೆ. ನಾವಿಬ್ಬರೂ ಸೋಲಾಪುರಕ್ಕೆ ಹೊರಟಿದ್ದೇವೆ. ಅಲ್ಲಿ ನಮ್ಮ ಮನೆದೇವರು ಸೋಲಾಪುರದ ತುಳಜಾ ಭವಾನಿಯ ದರ್ಶನ ಮಾಡಿಕೊಂಡು ಬರುವುದು ಉದ್ದೇಶ. ಆದರೆ ಜನ್ಮದಿನ, ಮದುವೆ ದಿನಗಳಲ್ಲಿ ಹೋಗಲು ಶೂಟಿಂಗ್ ನಡುವೆ ರಜೆ ಸಿಕ್ಕಿರುವುದಿಲ್ಲ. ಆದರೆ ಈ ಬಾರಿ ಸರಿಯಾದ ಸಮಯದಲ್ಲೇ ಬ್ರೇಕ್ ತೆಗೆದುಕೊಳ್ಳುವ ಅವಕಾಶ ಲಭಿಸಿತು.
ಜೊತೆ ಜೊತೆಯಲಿ ಆರ್ಯವರ್ಧನ್ ಫಸ್ಟ್ ಕ್ರಶ್ ಯಾರು?
'ಜೊತೆ ಜೊತೆಯಲಿ' ಧಾರಾವಾಹಿಯ ಬಗ್ಗೆ ಏನು ಹೇಳುತ್ತೀರಿ ?
ಈಗ ನನ್ನನ್ನು ಅನಿರುದ್ಧ ಎನ್ನುವುದಕ್ಕಿಂತ ಆರ್ಯವರ್ಧನನಾಗಿ ಗುರುತಿಸುವವರು ಹೆಚ್ಚುತ್ತಿದ್ದಾರೆ. ಹಾಗಾಗಿ ಅದು ಧಾರಾವಾಹಿಯ ತಂಡಕ್ಕೆ ಸಿಕ್ಕಂಥ ಗೆಲುವು. ಇದರಲ್ಲಿ ನಿರ್ದೇಶಕರು, ನಿರ್ಮಾಪಕರು ಮತ್ತು ವಾಹಿನಿಯ ಮುಖ್ಯಸ್ಥರನ್ನು ಸ್ಮರಿಸಲು ಬಯಸುತ್ತೇನೆ. ನನ್ನ ವೃತ್ತಿ ಬದುಕಲ್ಲಿ ಒಂದು ಯಶಸ್ಸು ಕಾಣಬೇಕು ಎಂದು ನಮ್ಮ ಮನೆಯಲ್ಲಿ ಅಮ್ಮ ಮತ್ತು ಕುಟುಂಬದವರ ಆಸೆಯೂ ಇತ್ತು. ಈಗ ವೀಕ್ಷಕರ ಜತೆಗೆ ನನ್ನ ಮಕ್ಕಳು ಕೂಡ ಖುಷಿಯಲ್ಲಿರುವುದು ಕಂಡಾಗ ಇಷ್ಟು ವರ್ಷಗಳ ಪ್ರಯತ್ನಕ್ಕೆ ಒಂದು ಸಾರ್ಥಕತೆ ಸಿಕ್ಕ ಅನುಭವವಾಗಿದೆ.