ಹಾರರ್‌ ಅಂದ್ರೆ ಭಯ, ಗಂಡನ ಪಕ್ಕ ಕೂತು 'ಹಗ್ಗ' ಸಿನಿಮಾ ನೋಡಿದೆ: ಅನು ಪ್ರಭಾಕರ್‌

By Kannadaprabha News  |  First Published Sep 20, 2024, 4:19 PM IST

ರಘು ಪಕ್ಕದಲ್ಲಿ ಕೂತು ಸಿನಿಮಾ ನೋಡಿದೆ. ಸಿಕ್ಕಾಪಟ್ಟೆ ಸೌಂಡ್‌, ಭಯದ ಸೀನ್‌ ಬಂದಾಗಲೆಲ್ಲ ಅವರ ಕೈ ಹಿಡ್ಕೊಂಡು ಕಣ್ಣು ಮುಚ್ಚಿಕೊಳ್ತಿದ್ದೆ. ಆದರೆ ಸಿನಿಮಾದುದ್ದಕ್ಕೂ ಬರೀ ಭಯ ಹುಟ್ಟಿಸೋ ಸೀನ್‌ಗಳೇ ಇಲ್ಲ ಎಂದು ನಟಿ ಅನು ಪ್ರಭಾಕರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.


ಪ್ರಿಯಾ ಕೆರ್ವಾಶೆ

- ಹಾರರ್‌ ಕಂಡ್ರೆ ಅಷ್ಟು ದೂರ ಓಡ್ತಿದ್ದವರು ಈಗ ಆ ಜಾನರದಲ್ಲೇ ನಟಿಸಿದ್ದೀರಿ?
ನಂಗೆ ಹಾರರ್‌ ಸಿನಿಮಾ ಇಷ್ಟ ಇಲ್ಲ. ಈವರೆಗೆ ಒಂದೇ ಒಂದು ಹಾರರ್‌ ಸಿನಿಮಾವನ್ನೂ ನೋಡಿಲ್ಲ. ಆ ಜಾನರದಲ್ಲಿ ನಟನೆಯನ್ನೂ ಮಾಡಿಲ್ಲ. ಈ ಹೀಗಾಗಿ ಈ ಸಿನಿಮಾದಲ್ಲಿ ನಟಿಸೋದು ಬಹಳ ಚಾಲೆಂಜಿಂಗ್‌ ಆಗಿತ್ತು. ಹೊಸಬರ ಉತ್ಸಾಹ, ಅವರ ಕಥೆ ಹೇಳುವ ತುಡಿತ ಇವೆಲ್ಲ ಕೆಲಸವನ್ನು ಸುಲಭವಾಗಿಸಿತು.

Tap to resize

Latest Videos

undefined

- ನಿಮ್ಮ ನಟನೆಯ ಈ ಸಿನಿಮಾವೇ ನೀವು ನೋಡಿದ ಮೊದಲ ಹಾರರ್‌ ಚಿತ್ರವಾ?
ಹೌದು. ರಘು ಪಕ್ಕದಲ್ಲಿ ಕೂತು ಸಿನಿಮಾ ನೋಡಿದೆ. ಸಿಕ್ಕಾಪಟ್ಟೆ ಸೌಂಡ್‌, ಭಯದ ಸೀನ್‌ ಬಂದಾಗಲೆಲ್ಲ ಅವರ ಕೈ ಹಿಡ್ಕೊಂಡು ಕಣ್ಣು ಮುಚ್ಚಿಕೊಳ್ತಿದ್ದೆ. ಆದರೆ ಸಿನಿಮಾದುದ್ದಕ್ಕೂ ಬರೀ ಭಯ ಹುಟ್ಟಿಸೋ ಸೀನ್‌ಗಳೇ ಇಲ್ಲ. ಭಾವನೆಗಳು, ಸಮಾಜಕ್ಕೆ ಸಂದೇಶವಾಗಬಲ್ಲಂಥಾ ವಿಚಾರಗಳೂ ಇವೆ. ಹೀಗಾಗಿ ಜಾಸ್ತಿ ಕಷ್ಟ ಆಗಲಿಲ್ಲ. ಎಲ್ಲ ಸಬ್ಜೆಕ್ಟ್‌ ಇಷ್ಟ ಪಡುವ ರಘು ಮುಖರ್ಜಿ ಈ ಸಿನಿಮಾವನ್ನ ಇಷ್ಟಪಟ್ಟರು. ನನ್ನ ನಟನೆಗೆ ಫುಲ್‌ ಮಾರ್ಕ್ಸ್‌ ಕೊಟ್ಟರು.

ರಂಗನಾಯಕ ಚಿತ್ರದಿಂದ ಪಾಠ ಕಲಿತೆ, ದುಡ್ಡಿಗಾಗಿ ಸಿನಿಮಾ ಮಾಡಲ್ಲ: ನಟ ಜಗ್ಗೇಶ್

- ಈ ಪಾತ್ರಕ್ಕಾಗಿ ಫೈಟ್‌ ಕಲಿತಿರಾ?
ಹೌದು. ಜೊತೆಗೆ ಹಗ್ಗ ಬಳಸಿ ಮಾಡುವ ಸಾಹಸಗಳನ್ನೂ ಕಲಿತೆ. ಸೆಟ್‌ನಲ್ಲಿ ಪಾತ್ರದ ಕಾಸ್ಟ್ಯೂಮ್‌ ಹಾಕ್ಕೊಂಡೇ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಜೊತೆಗೆ ರಾತ್ರಿಯೇ ಚಿತ್ರೀಕರಣ ನಡೆಯುತ್ತಿದ್ದದ್ದು. ಎರಡು ಗಂಟೆ ಮೇಕಪ್‌ಗೇ ಬೇಕಾಗ್ತಿತ್ತು. ಸಂಜೆ 5 ಗಂಟೆಗೆ ಮೇಕಪ್‌ಗೆ ಕೂತರೆ 7 ಗಂಟೆ ಹೊತ್ತಿಗೆ ಶೂಟಿಂಗ್‌ ಶುರು. ಬೆಳಗಿನ ಜಾವದವರೆಗೆ ಚಿತ್ರೀಕರಣ ನಡೆಯುತ್ತಿತ್ತು. ಮೇಕಪ್‌ ತೆಗೆಯೋದು ಮತ್ತೊಂದು ತಲೆನೋವು.

- ಈ ಸಿನಿಮಾದ ಹೈಲೈಟ್‌?
ಹೊಸಬರ ಸಿನಿಮಾ ಕಥೆ, ನಿರೂಪಣೆಯಲ್ಲಿ ಹೊಸತನವಿದೆ. ಕುರ್ಚಿ ತುದಿಯಲ್ಲಿ ಕೂತು ನೋಡುವಂಥಾ ದೃಶ್ಯಗಳಿವೆ. ಹಗ್ಗವೂ ಒಂದು ಪಾತ್ರವಾಗಿದೆ. ಎಲ್ಲರಿಗೂ ಸಂಬಂಧಿಸಿದ ಒಂದು ಗಂಭೀರ ಸಂಗತಿಯನ್ನಿಟ್ಟುಕೊಂಡು ಕಥೆ ಹಣೆದಿದ್ದಾರೆ. ಈವರೆಗೆ ನೀವ್ಯಾರೂ ನೋಡಿರದ ಅನುವನ್ನು ಈ ಸಿನಿಮಾದಲ್ಲಿ ನೋಡುತ್ತೀರಿ.

- ನಿಮ್ಮ ಸಿನಿಮಾ ಜರ್ನಿಗೆ 25 ವರ್ಷ ತುಂಬಿದೆ. ಕೆಲವು ವರ್ಷ ಅಜ್ಞಾತವಾಸದಲ್ಲೂ ಇದ್ದಂಗಿತ್ತು?
ಇಲ್ಲ. ಹೆಚ್ಚು ಕಡಿಮೆ ಈ ಜರ್ನಿಯುದ್ದಕ್ಕೂ ಸಿನಿಮಾರಂಗದಲ್ಲಿ ಆ್ಯಕ್ಟಿವ್‌ ಆಗಿಯೇ ಇದ್ದೆ. ಗರ್ಭಿಣಿಯಾಗಿದ್ದಾಗ 5 ತಿಂಗಳು ತುಂಬುವವರೆಗೂ ನಟಿಸುತ್ತಿದ್ದೆ. ಆಮೇಲೆ ಮಗಳಿಗೆ 1 ವರ್ಷವಾಗುವವರೆಗೆ ಬ್ರೇಕ್‌ ತಗೊಂಡೆ. ಅದು ಬಿಟ್ಟರೆ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದೆ.

- ಸೌಂದರ್ಯ, ಪ್ರತಿಭೆ, ಸಿನಿಮಾ ಫ್ಯಾಮಿಲಿ ಬ್ಯಾಗ್ರೌಂಡ್‌ ಎಲ್ಲ ನಿಮ್ಮಲ್ಲಿತ್ತು. ಆದರೆ ಪ್ರತಿಭೆಗೆ ತಕ್ಕ ಪಾತ್ರ ಸಿಕ್ಕಿದೆಯಾ?
ಕಲಾವಿದರು ಅಂದಮೇಲೆ ಒಳ್ಳೊಳ್ಳೆ ಪಾತ್ರಕ್ಕೆ ಹಸಿವಿದ್ದೇ ಇರುತ್ತದೆ. ಆ ದಾಹ ತಣಿಯಲೂ ಬಾರದು. ಉಳಿದಂತೆ ಒಂದು ಸಿನಿಮಾದಲ್ಲಿ ನಾವೊಂದು ಪಾತ್ರವನ್ನು ಒಪ್ಪಿಕೊಂಡಾಗ ಆ ಸಿನಿಮಾದ ಯಶಸ್ಸೇ ನಮ್ಮ ಯಶಸ್ಸೂ ಆಗುತ್ತದೆ. ನಾವು ಸಿನಿಮಾದ ಆಚೆ ನಿಂತು ನಮ್ಮ ಪಾತ್ರವನ್ನಷ್ಟೇ ವಿಶ್ಲೇಷಣೆ ಮಾಡಲಿಕ್ಕಾಗುವುದಿಲ್ಲ. ಇತ್ತೀಚೆಗೆ ‘ರತ್ನನ್‌ ಪ್ರಪಂಚ’ದಂಥಾ ಸಿನಿಮಾಗಳಲ್ಲಿನ ನಟನೆ ತೃಪ್ತಿ ತಂದಿದೆ.

ಸ್ಯಾಂಡಲ್‌ವುಡ್‌ನಲ್ಲಿ ಸಾಮಾಜಿಕ ಜವಾಬ್ದಾರಿ ಮೇಲೆ ನಿಂತಿರುವ ಚಿತ್ರ ವಿಕಾಸ ಪರ್ವ: ರೋಹಿತ್‌ ನಾಗೇಶ್‌

- ಮಗಳಿಗೂ ನಿಮ್ಮ ಹಾಗೆ ಹಾರರ್‌ ಅಂದರೆ ಭಯವಾ?
ಇಲ್ಲ. ಅವಳ ತಲೆಯಲ್ಲಿ ಇಂಥದ್ದನ್ನೆಲ್ಲ ತುಂಬಿಲ್ಲ. ಅವಳಿಗೂ, ಅವಳ ಅಪ್ಪನಿಗೂ ಕಾಡು ಅಂದರೆ ಬಹಳ ಇಷ್ಟ. ನಾವೆಲ್ಲ ಟ್ರೆಕ್ಕಿಂಗ್‌ ಹೋಗ್ತ ಇರ್ತೀವಿ. ಅಲ್ಲೂ ನಾನು ಕತ್ತಲೆ ಕಂಡರೆ ರಘು ಪಕ್ಕ ಹೋಗಿ ನಿಲ್ತೀನಿ. ಮಗಳು ಧೈರ್ಯದಲ್ಲೇ ಇರುತ್ತಾಳೆ.

click me!