ತಾರಾ ಎಂದರೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮಾತ್ರವಲ್ಲ, ಆಡಳಿತ ಪಕ್ಷದಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿಯೂ ಹೌದು. ಆದರೆ ಕೊರೊನಾ ಸೋಂಕಿತೆಯಾದಾಗ ತಮ್ಮ ಸ್ಥಾನಮಾನಗಳೇನೂ ಪರಿಗಣನೆಗೆ ಬರಲಿಲ್ಲ. 'ಸಾಕಷ್ಟು ಕಷ್ಟ ಅನುಭವಿಸಿದೆ' ಎನ್ನುವ ತಾರಾ ಅವರ ಮನದಾಳದ ಮಾತುಗಳು ಸುವರ್ಣ ನ್ಯೂಸ್.ಕಾಮ್ ನಿಮ್ಮ ಮುಂದಿಡುತ್ತಿದೆ.
ಅನಾರೋಗ್ಯ ಕಾಡಿದಾಗ ಅದು ಬಡವ ಬಲ್ಲಿದ ಎಂದು ನೋಡದೆ ಪ್ರತಿಯೊಬ್ಬರಿಗೂ ನೋವು ಕೊಟ್ಟೇ ಕೊಡುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಸಮಾಜದಲ್ಲಿ ಗಣ್ಯ ಸ್ಥಾನದಲ್ಲಿರುವವರಿಗೆ ಚಿಕಿತ್ಸೆಯ ಸಂದರ್ಭದಲ್ಲಿ ಗುಣಮಟ್ಟದ ಸೌಲಭ್ಯಗಳು ಸಹಜವಾಗಿ ದೊರಕುತ್ತವೆ. ಆದರೆ ಅಂಥ ಸೌಲಭ್ಯವನ್ನು ಕಾಳಜಿಯನ್ನು ನೀಡುವಲ್ಲಿ ಕೂಡ ಸರ್ಕಾರ ವೈಫಲ್ಯಗೊಂಡಿದೆ. ಅಂದಹಾಗೆ ಈ ಮಾತುಗಳನ್ನು ಹೇಳಿರುವುದು ಬೇರೆ ಯಾರೂ ಅಲ್ಲ, ಖ್ಯಾತ ನಟಿ, ರಾಜಕಾರಣಿ ತಾರಾ ಅವರು. ಹಾಗಂತ ಅವರು ಸರ್ಕಾರದ ವಿರುದ್ಧ ದೋಷಾರೋಪಣೆ ಪಟ್ಟಿಯನ್ನೇನೂ ಮಾಡಿಲ್ಲ. ಆದರೆ ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ಆ ಘಟನೆಯನ್ನು ಕೂಡ ಹೇಳದಿದ್ದರೆ ಅಪಚಾರವಾದೀತು ಎನ್ನುವ ಕಾರಣಕ್ಕೆ ಹೇಳಿಕೊಂಡಿದ್ದಾರೆ.
- ಶಶಿಕರ ಪಾತೂರು
undefined
ತುಂಬ ಜಾಗರೂಕರಾಗಿದ್ದ ನಿಮಗೆ ಕೊರೊನಾ ಬರಲು ಕಾರಣ ಏನಿರಬಹುದು?
ಕಳೆದ ಬಾರಿ ನಾನು ಲಾಕ್ಡೌನ್ ಬಾಧಿತರಿಗೆ ಸಹಾಯಹಸ್ತ ನೀಡಿ ಸಾಕಷ್ಟು ಕಡೆ ಸುತ್ತಾಡಿದ್ದೆ. ಆದರೆ ಆಗಲೂ ತುಂಬಾನೇ ಎಚ್ಚರಿಕೆ ವಹಿಸಿದ್ದೆ. ಕೋವಿಡ್ ನಿಯಮಗಳನ್ನು ಪಾಲಿಸಿದ್ದೆ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಎಚ್ಚರಿಕೆಯಲ್ಲೇ ಇದ್ದೆ. ಆದರೆ ಬಹುಶಃ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದೇ ನನ್ನ ಆರೋಗ್ಯಕ್ಕೆ ಮುಳುವಾಯಿತು ಅನ್ಸುತ್ತೆ. ಯಾಕೆಂದರೆ ಅಲ್ಲಿ ಪಾಲ್ಗೊಂಡ ಬಳಿಕ ಮನೆಗೆ ಬಂದ ಎರಡೇ ದಿನದಲ್ಲಿ ನನಗೆ ಜ್ವರ ಶುರುವಾಗಿತ್ತು. ಕಲಾವಿದರಾದ ಕಾರಣ, ನಮಗೆ ಕ್ಯಾಮೆರಾ ಮುಂದೆ ಮುಖ ತೋರಿಸಲೇಬೇಕಾದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಅಲ್ಲಿ ಮಾಸ್ಕ್ ಧರಿಸಿರಲಿಲ್ಲ. ಮಾತ್ರವಲ್ಲ ಅಲ್ಲಿಂದ ಬಂದು ನಾನು ಕೊರೊನಾ ಸೋಂಕಿತೆಯಾದ ಬಳಿಕ ಸಿಕ್ಕ ಮಾಹಿತಿ ಏನೆಂದರೆ ಆ ರಿಯಾಲಿಟಿ ಶೋನಲ್ಲಿದ್ದ ಪ್ರಮುಖ ಕಲಾವಿದರೆಲ್ಲರೂ ಕೋವಿಡ್19 ಸೋಂಕಿತರಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಹಾಗಾಗಿ ಅಲ್ಲಿಂದಲೇ ಹರಡಿರಬಹುದು ಎನ್ನುವ ಸಂದೇಹವಂತೂ ಇದೆ.
ನಿರ್ದೇಶಕನಾಗುತ್ತಿದ್ದಾರೆ ಪಾಪ ಪಾಂಡು ಚಿದಾನಂದ್
ನಿಮಗೆ ಬಂದಿರುವುದು ಕೊರೊನಾ ಸೋಂಕು ಎಂದು ಅರಿವಾಗಿದ್ದು ಹೇಗೆ?
ಶೋ ಮುಗಿಸಿ ಮನೆಗೆ ಬಂದಿದ್ದೆ. ಯುಗಾದಿಯ ಸಂದರ್ಭದಲ್ಲಿ ನಮ್ಮನೆಯ ರೂಢಿಯಂತೆ ಕೋಣೆಗಳಿಗೆ ವೈಟ್‌ವಾಶ್ ಅಥವಾ ಪೆಯಿಂಟಿಂಗ್ ಮಾಡಿಸಿದ್ದೆವು. ಅಲ್ಲಿ ಕೆಲಸ ಶುರುವಾದ ಹಾಗೆ ನನಗೆ ಸೀನು ಬರೋಕೆ ಶುರುವಾಯ್ತು. ನಾನು ಬಹುಶಃ ಇದು ಪೆಯಿಂಟ್ ವಾಸನೆಗೆ ಅಲರ್ಜಿಯಾಗಿರಬೇಕು ಅಂತ ಅಂದುಕೊಂಡಿದ್ದೆ. ಆಮೇಲೆ ಜ್ವರ ಬಂದ ಹಾಗೆ ಆಯ್ತು. ಡಾಕ್ಟರ್ ಹತ್ತಿರ ಹೋದೆ. ಅವರು ಸಾಮಾನ್ಯ ಜ್ವರಕ್ಕೆ ಇಂಜೆಕ್ಷನ್ ಕೊಟ್ಟರು. ಅವರು ಕೂಡ ಪೆಯಿಂಟ್ ಅಲರ್ಜಿ ಆಗಿದ್ದರೆ ಆ ಕೋಣೆಯಿಂದ ದೂರದಲ್ಲೇ ಮಲಗಿ ಎಂದರು. ನಾನು ಅಮ್ಮನ ಕೋಣೆಯಲ್ಲಿ ಮಲಗತೊಡಗಿದೆ. ಆದರೆ ನನಗೆ ಆಮೇಲೆ ಕೂಡ ಜ್ವರ ಕಡಿಮೆಯಾಗದೇ ಹೋದಾಗ ಡಾಕ್ಟರ್ ಯಾವುದಕ್ಕೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ್ರು. ಆರ್‌ಟಿಸಿಪಿಆರ್ ಮೂಲಕ ನೋಡಿದಾಗ ಕೋವಿಡ್ ಪಾಸಿಟಿವ್ ಬಂತು. ಬಳಿಕ ರಕ್ತ ಪರೀಕ್ಷೆ ಮಾಡಿದಾಗಲೂ ಪಾಸಿಟಿವ್ ಎಂದೇ ಬಂತು. ಅನಾರೋಗ್ಯ `ಸೇಫ್ ಬಾರ್ಡರ್ ಲೈನ್'ನಲ್ಲೇ ಇದೆ. ಹಾಗಾಗಿ ಮನೆಯಲ್ಲೇ ಕ್ವಾರಂಟೈನ್ ಆಗಬಹುದು ಎಂದರು.
ಸದ್ಯದ ಸ್ಥಿತಿಗತಿ ಬಗ್ಗೆ `ತಿಥಿ' ಪೂಜಾ ಅವಲೋಕನ
ಕೋವಿಡ್ 19 ಎಂದು ಗೊತ್ತಾದ ಮೇಲೆ ಎದುರಿಸಲು ಏನು ಸಿದ್ಧತೆ ಮಾಡಿಕೊಂಡಿರಿ?
ನನಗೆ ಕೊರೊನಾ ಬಗ್ಗೆ ಭಯವಿತ್ತು. ಮಾತ್ರವಲ್ಲ, ನನ್ನಿಂದಾಗಿ ಮನೆಯವರಿಗೂ ಹರಡಿರಬಹುದೇನೋ ಎನ್ನುವ ಆತಂಕವೂ ಇತ್ತು. ಎರಡೂ ನಿಜವಾಗುವ ಸಂದರ್ಭ ಬಂತು. ನನ್ನ ಮಗನಿಗೆ ಈಗ ಎಂಟು ವರ್ಷ. ಇದುವರೆಗೆ ಅವನನ್ನು ಬಿಟ್ಟು ಒಂದು ರಾತ್ರಿಯೂ ನಾನು ಇದ್ದದ್ದಿಲ್ಲ. ಎಚ್ಚರಿಕೆಯ ಕ್ರಮವಾಗಿ ಮೊದಲ ಬಾರಿಗೆ ಅವನನ್ನು ನನ್ನಣ್ಣ ಅನಿಲ್ ಮನೆಯಲ್ಲೇ ಮಕ್ಕಳೊಂದಿಗೆ ಇರು ಎಂದು ವಾರಗಟ್ಟಲೆ ಕಳಿಸಿದ್ದೆ. ಬೆಳಗ್ಗಿನಿಂದ ಸಂಜೆ ತನಕ ಅತ್ತಿಗೆ ಹೇಗೋ ಅವನನ್ನು ಸಂಭಾಳಿಸುತ್ತಿದ್ದರು. ಆದರೆ ಪ್ರತಿದಿನ ರಾತ್ರಿಯಾಗುತ್ತಿದ್ದ ಹಾಗೆ ನಾನು ವಿಡಿಯೋ ಕಾಲ್ ಮಾಡಿ ಮಾತನಾಡಲೇಬೇಕಿತ್ತು. ನನಗಿಲ್ಲಿ ಕೊರೊನಾದ ಎಲ್ಲ ಲಕ್ಷಣಗಳು ಕಾಣಿಸತೊಡಗಿದವು. ನಾನು ತುಂಬ ಸುಸ್ತು ಅನುಭವಿಸತೊಡಗಿದೆ. ಇದೇ ಸಂದರ್ಭದಲ್ಲಿ ಪತಿ ವೇಣುವಿಗೂ ಪಾಸಿಟಿವ್ ಆಯ್ತು. ನನ್ನ ಅಮ್ಮಂಗೂ ಪಾಸಿಟಿವ್ ಆಯ್ತು. ಅಮ್ಮನ ಬಗ್ಗೆ ತುಂಬ ಆತಂಕ ಇತ್ತು. ಅವರಿಗೆ ಲೋ ಬಿಪಿ ಆಗಿ ಕುಸಿದು ಬಿದ್ದಿದ್ದರು. ಇದ್ದಿದ್ದೇ ಮೂರು ಜನ. ಡಾಕ್ಟ್ರಿಗೆ ಫೋನ್ ಮಾಡಿದ್ರೂ ಯಾರೂ ಮನೆಗೆ ಬರಲಿಲ್ಲ!
ಕೊನೆಗೂ ಕೊರೊನಾದಿಂದ ಪಾರಾಗಲು ಸಾಧ್ಯವಾಗಿದ್ದು ಹೇಗೆ?
ಕೊರೊನಾ ಬಗ್ಗೆ ನಮಗಷ್ಟೇ ಅಲ್ಲ ವೈದ್ಯರಿಗೂ ಭಯ!! ಅವರು ಫೋನಲ್ಲೇ ಬಿ.ಪಿ ಚೆಕ್ ಮಾಡಲು ಹೇಳುತ್ತಿದ್ದುದು ಬಿಟ್ಟರೆ ಯಾರೂ ಹತ್ತಿರ ಬರಲಿಲ್ಲ. ಅಮ್ಮನಿಗೆ ಬಿಪಿ ಲೋ ಆಗಿದ್ದಾಗ ಉಪ್ಪು ಸಕ್ಕರೆ ಹೇಗೆ ಕೊಡಬೇಕೆಂದು ಫೋನಲ್ಲೇ ಮಾನಿಟರ್ ಮಾಡಿದ್ದರು! ಅವರಿಗೆ ತುಂಬ ವಯಸ್ಸಾಗಿದ್ದ ಕಾರಣ ಅವರನ್ನೊಬ್ಬರನ್ನೇ ಆಸ್ಪತ್ರೆಗೆ ಕಳುಹಿಸಿ ಬಿಡುವಂತಿರಲಿಲ್ಲ. ಜೊತೆಗೆ ನಾವು ಕೂಡ ಹೋಗುವಂತಿರಲಿಲ್ಲ. ನನ್ನ ಮೂಲಕ ಏನಾದರೂ ವಿಶೇಷ ಎಚ್ಚರಿಕೆಯಿಂದ ಚಿಕಿತ್ಸೆ ಪಡೆಯುವ ಅವಕಾಶವಾದರೂ ತಾಯಿಗೆ ಸಿಗಬಹುದೇನೋ ಎಂದು ಪ್ರಯತ್ನಿಸಿದೆ. ನೇರವಾಗಿ ಸಚಿವ ಸುಧಾಕರ್ ಅವರ ಪಿ.ಎ ಅವರಿಗೇನೇ ಫೋನ್ ಮಾಡಿದ್ದೆ. ಅವರು ಗಿರೀಶ್ ಅಂತ ಮತ್ತೊಬ್ಬರ ನಂಬರ್ ಕೊಟ್ಟು "ಆಸ್ಪತ್ರೆ ವಿಚಾರದಲ್ಲಿ ಇವರೇ ಎಲ್ಲರಿಗೂ ಸಹಾಯ ಮಾಡ್ತಾರೆ" ಅಂದರು. ಆ ವ್ಯಕ್ತಿ ಫೋನ್ ತೆಗೆಯಲೇ ಇಲ್ಲ! ನಾನು ತಾರಾ ಅಂತ ಹೇಳಿ ನನ್ನ ಬಯೊಡಾಟ ಎಲ್ಲ ವಾಟ್ಸ್ಯಾಪ್ ಮಾಡಿ ಅರ್ಜೆಂಟ್ ಪ್ಲೀಸ್ ಎಂದು ಮೆಸೇಜ್ ಮಾಡಿದ ಮೇಲೆ `ಪ್ಲೀಸ್ ಕಾಲ್ ಟು 108' ಎಂದು ರಿಪ್ಲೈ ಬಂತು! ಆದರೆ ಲ್ಯಾಬ್ ಪೀಪಲ್ ಗಳನ್ನು ಮಾತ್ರ ಮೆಚ್ಚಲೇಬೇಕು. ಕರೆದಾಗೆಲ್ಲ ಬಂದು ಸಹಕರಿಸಿದ್ದರು. ನಮ್ಮ ಇಮ್ಯುನಿಟಿ ಪವರ್ ಚೆನ್ನಾಗಿದ್ದ ಕಾರಣ ಹೇಗೋ ಬದುಕುಳಿದೆವು.
`ದಿಗ್ವಿಜಯ್' ಪಾತ್ರಕ್ಕೆ ಗುಡ್ ಬೈ ಹೇಳಿದ ಮೋಹನ್!
ಒಟ್ಟಿನಲ್ಲಿ ಕೊರೊನಾ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಅಂತ ಒಪ್ಕೋತೀರಾ?
ನನ್ನ ಅನುಭವ ಅದನ್ನೇ ತಾನೇ ಹೇಳ್ತಿರೋದು? ಚೈನಾದಂಥ ಕೊರೊನಾ ಶುರುವಾದ ಜಾಗದಲ್ಲೇ ಎರಡನೇ ಅಲೆ ಶುರುವಾಗುವ ಹೊತ್ತಿಗೆ ಏರ್ಪೋರ್ಟ್ ಹತ್ತಿರವೇ ಆಸ್ಪತ್ರೆಗಳ ನಿರ್ಮಾಣವಾಗಿತ್ತು. ಆದರೆ ನಮ್ಮ ಸರ್ಕಾರ ಸಿದ್ಧತೆ ಮಾಡುವಲ್ಲಿ ಸೋತಿರುವುದು ನಿಜ. ಉಳಿದಂತೆ ನಾನು ಚುನಾವಣಾ ಪ್ರಚಾರದಲ್ಲಿ ಕೂಡ ವಿರೋಧ ಪಕ್ಷವನ್ನು ದೂರುವುದಕ್ಕಿಂತ ನಮ್ಮ ಪಕ್ಷದ ಸಾಧನೆಯ ಬಗ್ಗೆ ವಿವರಿಸುವಂಥವಳು. ಯಾರನ್ನೂ ದೋಷಾರೋಪಣೆ ಮಾಡುವ ಮನೋಭಾವ ನನಗಿಲ್ಲ. ಹಾಗಾಗಿ ಸರ್ಕಾರವನ್ನು ದೂಷಿಸುವ ಕೆಲಸ ಮಾಡಲಾರೆ. ಆದರೆ ತಯಾರಿ ಮಾಡಬೇಕಿದ್ದಿದ್ದಂತೂ ನಿಜ.