ಝೊಮ್ಯಾಟೋಗೆ ಮತ್ತೆ ತೆರಿಗೆ ಸಂಕಷ್ಟ;11.82 ಕೋಟಿ ರೂ.GST ಬಾಕಿ ಪಾವತಿಗೆ ನೋಟಿಸ್

By Suvarna NewsFirst Published Apr 20, 2024, 7:17 PM IST
Highlights

ಫುಡ್ ಡೆಲಿವರಿ ಆ್ಯಪ್‌  ಝೊಮ್ಯಾಟೋಗೆ ತೆರಿಗೆ ಇಲಾಖೆ ಶಾಕ್ ನೀಡಿದೆ.11.82 ಕೋಟಿ ರೂ. ಜಿಎಸ್ ಟಿ ಬಾಕಿಯ ಜೊತೆಗೆ ದಂಡ ಸೇರಿಸಿ ಪಾವತಿಸುವಂತೆ ನೋಟಿಸ್ ನೀಡಿದೆ.
 

ನವದೆಹಲಿ (ಏ.20): ಆನ್ ಲೈನ್ ಫುಡ್ ಡೆಲಿವರಿ ಆ್ಯಪ್‌  ಝೊಮ್ಯಾಟೋಗೆ ತೆರಿಗೆ ಇಲಾಖೆ ಆಗಾಗ ಶಾಕ್ ನೀಡುತ್ತಲೇ ಇರುತ್ತದೆ. ಈ ಹಿಂದೆ ಕೂಡ ಜಿಎಸ್ ಟಿ ಬಾಕಿಗೆ ಸಂಬಂಧಿಸಿ ಝೊಮ್ಯಾಟೋ ಗೆ ಜಿಎಸ್‌ಟಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು. ಇದೀಗ ಮತ್ತೆ ಜಿಸ್ ಟಿಗೆ ಸಂಬಂಧಿಸಿ 11.82 ಕೋಟಿ ರೂ. ಬಾಕಿಯ ಜೊತೆಗೆ ದಂಡ ಸೇರಿಸಿ ನೋಟಿಸ್ ನೀಡಿದೆ. ಭಾರತದ ಹೊರಗಡೆ ಇರುವ ಝೊಮ್ಯಾಟೋ ಅಂಗಸಂಸ್ಥೆಗಳಿಗೆ ರಫ್ತು ಸೇವೆಗಳ ಮೇಲಿನ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. ಜಿಎಸ್ ಟಿ ಹಾಗೂ ದಂಡ ಸೇರಿದಂತೆ 11.82 ಕೋಟಿ ರೂ. ಪಾವತಿಸುವಂತೆ ತಿಳಿಸಿದೆ. ಇದು 2017ರ ಜುಲೈನಿಂದ 2021ರ ಮಾರ್ಚ್ ತನಕದ ಅವಧಿಯದ್ದಾಗಿದೆ. ಗುರ್ಗಾಂವ್  ಕೇಂದ್ರೀಯ ಸರಕು ಹಾಗೂ ಸೇವಾ ತೆರಿಗೆಯ ಹೆಚ್ಚುವರಿ ಆಯುಕ್ತರು ಈ ಆದೇಶ ನೀಡಿದ್ದಾರೆ. ಇದರಲ್ಲಿ 5,90,94,889 ರೂ. ಜಿಎಸ್ ಟಿ ಬೇಡಿಕೆಯ ಜೊತೆಗೆ 5,90,94,889 ಕೋಟಿ ರೂ. ದಂಡ ವಿಧಿಸಿದೆ. ಈ ನೋಟಿಸ್ ಗೆ ಮೇಲ್ಮನವಿ ಸಲ್ಲಿಕೆ ಮಾಡೋದಾಗಿ ಝೊಮ್ಯಾಟೋ ತಿಳಿಸಿದೆ. 

ಶುಕ್ರವಾರ ಸಂಜೆ ರೆಗ್ಯುಲೇಟರಿ ಫೈಲ್ಲಿಂಗ್ ನಲ್ಲಿ ಸೂಕ್ತ ಪ್ರಾಧಿಕಾರ ಮುಂದೆ ಮೇಲ್ಮನವಿ ಸಲ್ಲಿಕೆ ಮಾಡೋದಾಗಿ ಝೊಮ್ಯಾಟೋ ತಿಳಿಸಿದೆ. ಕಂಪನಿಯು ಭಾರತದ ಹೊರಗಡೆ ಇರುವ ಅಂಗಸಂಸ್ಥೆಗಳಿಗೆ 2017 ರ ಜುಲೈನಿಂದ 2021ರ ಮಾರ್ಚ್ ತನಕ ನೀಡಿದ ರಫ್ತು ಸೇವೆಗಳಿಗೆ ಜಿಎಸ್ ಟಿ ಬೇಡಿಕೆ ಇಡಲಾಗಿದೆ. ಆದರೆ, ಇಂಥ ಸೇವೆಗಳು ಜಿಎಸ್ ಟಿ ಅಡಿಯಲ್ಲಿ ಸೇವೆಗಳ ರಫ್ತು ಎಂದು ಪರಿಗಣಿಸಲು ಅರ್ಹತೆ ಹೊಂದಿಲ್ಲ ಎಂದು ಝಮ್ಯಾಟೋ ತಿಳಿಸಿದೆ. 

ಬರೋಬ್ಬರಿ 79 ಕೋಟಿಗೆ ದೆಹಲಿಯಲ್ಲಿ 5 ಎಕರೆ ಭೂಮಿ ಖರೀದಿಸಿದ ಝೊಮೆಟೋ ಹೆಡ್‌! ಶ್ರೀಮಂತರಿಗೆ ಫಾರ್ಮ್‌ಹೌಸ್‌ ಒಲವೇಕೆ?

ಕಳೆದ ವರ್ಷ ಕೂಡ ಜಿಎಸ್ ಟಿ ಬಾಕಿಗೆ ಸಂಬಂಧಿಸಿ ಝೊಮ್ಯಾಟೋಗೆ ಜಿಎಸ್‌ಟಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು.  ಬರೋಬ್ಬರಿ 402 ಕೋಟಿ ರೂಪಾಯಿ ಜಿಎಸ್‌ಟಿ ಬಾಕಿ ಉಳಿಸಿಕೊಂಡಿದ್ದು, ತಕ್ಷಣವೇ ಬಡ್ಡಿ, ಪೆನಾಲ್ಟಿ ಸಹಿತ ಪಾವತಿಸುವಂತೆ ನೋಟಿಸ್‌ನಲ್ಲಿ ತಿಳಿಸಿತ್ತು. ಆದರೆ, ಈ ನೋಟಿಸ್ ಗೆ ಉತ್ತರಿಸಿದ್ದ ಝೊಮ್ಯಾಟೋ, ನಾವು ಯಾವುದೇ ಜಿಎಸ್ ಟಿ ಬಾಕಿ ಉಳಿಸಿಕೊಂಡಿಲ್ಲ ಎಂಬ ಸ್ಪಷ್ಟನೆ ನೀಡಿತ್ತು. ಝೋಮ್ಯಾಟೋ ಸಂಸ್ಥೆ ಆಹಾರ ಡೆಲಿವರಿ ಮಾಡಲು ಗ್ರಾಹಕರಿಗೆ ಚಾರ್ಜಸ್ ವಿಧಿಸುತ್ತಿದೆ. ಇದರ ಜಿಎಸ್‌ಟಿ ಪಾವತಿಸಬೇಕಿದೆ. 402 ಕೋಟಿ ರೂಪಾಯಿ ಕಂಪನಿ ಬಾಕಿ ಉಳಿಸಿಕೊಂಡಿದೆ. ಅಕ್ಟೋಬರಿ 29, 2019ರಿಂದ ಮಾರ್ಚ್ 31, 2022ರ ವರೆಗೆ ಝೊಮ್ಯಾಟೋ ಕಂಪನಿ ಡೆಲಿವರಿ ಚಾರ್ಜಸ್ ಮೇಲಿನ 402 ಕೋಟಿ ರೂಪಾಯಿ ಜಿಎಸ್‌ಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಆ ಸಂದರ್ಭದಲ್ಲಿ ಕೂಡ ನೋಟಿಸ್ ಗೆ ಝೊಮ್ಯಾಟೋ ಜಾಣತನದ ಉತ್ತರ ನೀಡಿತ್ತು. ಝೊಮ್ಯಾಟೋ ಸಂಸ್ಥೆ ಆಹಾರ ಅಥವಾ ಉತ್ಪನ್ನವನ್ನು ಗ್ರಾಹಕರ ಬಳಿಗೆ ತಲುಪಿಸಲು ಡೆಲಿವರಿ ಚಾರ್ಜಸ್ ಮಾಡುತ್ತದೆ. ಝೊಮ್ಯಾಟೋ ಉತ್ಪನ್ನಗಳನ್ನು ಡೆಲಿವರಿ ಮಾಡಲು ಪಾಲುದಾರಿಕೆ ಪಡೆದಿರುವವರ ಪರವಾಗಿ ಕಂಪನಿ ಚಾರ್ಜಸ್ ಹಾಕುತ್ತದೆ. ಈ ಡೆಲಿವರಿ ಚಾರ್ಜಸ್, ಉತ್ಪನ್ನವನ್ನು ಡೆಲಿವರಿ ಪಾಲುದಾರರು ಗ್ರಾಹಕರ ಬಳಿ ತಲುಪಿಸಲು ಹಾಕಿರುವ ಚಾರ್ಜಸ್, ಇದು ಝೊಮ್ಯಾಟೋದ ಚಾರ್ಜಸ್ ಅಲ್ಲ ಎಂದು ಸ್ಪಷ್ಟನೆ ನೀಡಿತ್ತು. 

ಸಸ್ಯಹಾರಿಗಳಿಗಾಗಿ 'ಪ್ಯೂರ್‌ ವೆಜ್‌ ಮೋಡ್‌, ಫ್ಯೂರ್‌ ವೆಜ್‌ ಫ್ಲೀಟ್‌' ಪರಿಚಯಿಸಿದ ಜೊಮೋಟೋ!

ಕಳೆದ ವರ್ಷದ ಜಿಎಸ್ ಟಿ ನೋಟಿಸ್ ಗೆ ಕ್ಯಾರೇ ಎನ್ನದೇ ಖಡಕ್ ಉತ್ತರ ನೀಡಿದ ಝೊಮ್ಯಾಟೋ ಈಗ ಕೂಡ ಅದೇ ನಿಲುವು ಪ್ರದರ್ಶಿಸಿದೆ. ಈ ಬಾರಿ ಕೂಡ ತಾಉ ನೀಡಿರುವ ರಫ್ತು ಸೇವೆಗಳು ಜಿಎಸ್ ಟಿ ಅಡಿಯಲ್ಲಿ ಬರೋದಿಲ್ಲ ಎಂಬ ಉತ್ತರ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಪ್ರಸ್ತುತಪಡಿಸೋದಾಗಿ ತಿಳಿಸಿದೆ. 


 

 


 

click me!