ಡಿಮಾನಿಟೈಸೇಶನ್ ಬಳಿಕ 2,000 ರೂಪಾಯಿ ನೋಟು ಚಲಾವಣೆಗೆ ತರುವುದು ಪ್ರಧಾನಿ ಮೋದಿಗೆ ಇಷ್ಟವಿರಲಿಲ್ಲ. ಚಲಾವಣೆಗೆ ತರುವಾಗಲೇ ಇದು ತಾತ್ಕಾಲಿಕ ಎಂದಿದ್ದರು. ಇದೀಗ ನೋಟು ಹಿಂತೆಗೆತದಿಂದ ಕಪ್ಪು ಹಣದ ವಿರುದ್ಧ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಮಾಜಿ ಕಾರ್ಯದರ್ಶಿ ಹೇಳಿದ್ದಾರೆ. 2,000 ರೂಪಾಯಿ ನೋಟು ಹಿಂತೆಗೆದಿಂದ ಆಗುವ ಲಾಭ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ನವದೆಹಲಿ(ಮೇ.20): ಡಿಮಾನಿಟೈಸೇಶನ್ ಬಳಿಕ ಕೇಂದ್ರ ಸರ್ಕಾರ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. 2016ರಲ್ಲಿ ಹೊಸ ನೋಟುಗಳು ಚಲಾವಣೆ ಆರಂಭಿಸಿತ್ತು. ಇದೀಗ ಈ ನೋಟುಗಳನ್ನು ಆರ್‌ಬಿಐ ಹಿಂತೆಗೆದುಕೊಂಡಿದೆ. ಈ ನಿರ್ಧಾರದ ವಿರುದ್ಧ ಪರ ವಿರೋಧಗಳು ಕೇಳಿಬರುತ್ತಿದೆ. ನೋಟು ಅಪನಗದೀಕರಣದ ವೇಳೆ ಪ್ರಧಾನಿ ಮೋದಿ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ, ನೋಟು ಹಿಂತೆಗೆತ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇಷ್ಟೇ ಅಲ್ಲ,ಪ್ರಾಯೋಗಿಕವಾಗಿ ನೋಡಿದರೆ, 2,000 ರೂಪಾಯಿ ನೋಟು ಚಲಾವಣೆ ಕಷ್ಟ. ಕಡಿಮೆ ಮುಖಬೆಲೆಯ ನೋಟುಗಳೇ ಭಾರತದಲ್ಲಿ ಹೆಚ್ಚು ಚಲಾವಣೆಯಲ್ಲಿರಲಿದೆ ಎಂದು ಮೋದಿ ಹೇಳಿದ್ದರು. ಇದೀಗ ನೋಟು ಹಿಂತೆಗೆತದಿಂದ ಕಪ್ಪು ಹಣದ ವಿರುದ್ಧ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನೃಪೇಂದ್ರ ಮಿಶ್ರ ಹೇಳಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಈ 2,000 ರೂ. ಬೆಲೆಯ ಲೀಗಲ್ ಟೆಂಡರ್ ಮುಂದುವರಿಯಲಿದೆ ಎಂಬುದಾಗಿಯೂ ತಿಳಿಸಿದೆ. ಸೆಪ್ಟೆಂಬರ್ 30ರೊಳಗೆ 2,000 ರೂ. ನೋಟನ್ನು ಬ್ಯಾಂಕಲ್ಲಿ ಠೇವಣಿ (Deposit) ಮಾಡಿಕೊಳ್ಳಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1 ರಿಂದ 2,000 ರೂಪಾಯಿ ನೋಟಿನ ಚಲಾವಣೆ ಸ್ಥಗಿತಗೊಳ್ಳಲಿದೆ.
ಪಿಂಕ್ ನೋಟಿನ ಚಲಾವಣೆ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಆರ್ಬಿಐ
ಜನರು ತಮ್ಮ ಬಳಿ ಇರುವ 2,000 ರೂ. ನೋಟುಗಳನ್ನು ಬ್ಯಾಂಕ್ ಖಾತೆಯಲ್ಲಿ (Bank Account) ಜಮಾ ಮಾಡಬಹುದು. ಇನ್ನು 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲ್ಲೊಂದು ನಿರ್ಬಂಧವೂ ಇದೆ. ಬ್ಯಾಂಕ್ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಒಂದು ದಿನ ಒಬ್ಬ ವ್ಯಕ್ತಿಗೆ ಗರಿಷ್ಠ 20,000 ರೂಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಮೇ.23 ರಿಂದ ಬ್ಯಾಂಕ್‌ಗಳಲ್ಲಿ 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಜನರು ಮಾತ್ರವಲ್ಲ ಬ್ಯಾಂಕ್ ಕೂಡ ಸೆಪ್ಟೆಂಬರ್ 30ರೊಳಗೆ 2,000 ರೂಪಾಯಿ ನೋಟಿನ ಎಲ್ಲಾ ವಿನಿಮಯ, ಜಮಾವಣೆ (Deposit) ಮುಗಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
ನೋಟು ವಾಪಸ್:
2000 ರು. ನೋಟುಗಳನ್ನು ಹಿಂಪಡೆಯುವ ಕುರಿತು ಶುಕ್ರವಾರ ಪ್ರಕಟಣೆ ಹೊರಡಿಸಿರುವ ಆರ್‌ಬಿಐ, ‘ತಕ್ಷಣದಿಂದ ಜಾರಿಗೆ ಬರುವಂತೆ 2000 ರು. ಮುಖಬೆಲೆಯ ನೋಟುಗಳನ್ನು ವಿತರಿಸದಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗುತ್ತಿದೆ. ಆದರೆ ಸಾರ್ವಜನಿಕರು ತಮ್ಮ ಬಳಿ ಹೊಂದಿರುವ ನೋಟುಗಳನ್ನು ತಾವು ಖಾತೆ ಹೊಂದಿರುವ ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ಮತ್ತು ಯಾವುದೇ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು 2023ರ ಸೆ.30ರವರೆಗೂ ಅವಕಾಶ ಇರಲಿದೆ’ ಎಂದು ತಿಳಿಸಿದೆ.
2000 ರು. ಮುಖ ಬೆಲೆಯ ನೋಟುಗಳನ್ನು ಗ್ರಾಹಕರು ಬ್ಯಾಂಕ್ ಖಾತೆಗೆ ಸಾಮಾನ್ಯ ಸ್ವರೂಪದಲ್ಲಿ, ಹಾಲಿ ಜಾರಿಯಲ್ಲಿರುವ ಕೆವೈಸಿ ಮತ್ತು ಇತರೆ ಶಾಸನಾತ್ಮಕ ನಿಯಮಗಳಿಗೆ ಒಳಪಟ್ಟಂತೆ ಜಮೆ ಮಾಡಬಹುದು. ಸಾರ್ವಜನಿಕರಿಗೆ ಒಂದು ದಿನಕ್ಕೆ ಗರಿಷ್ಠ 10 ನೋಟುಗಳನ್ನು (20 ಸಾವಿರ ರೂ.) ಮಾತ್ರವೇ ಬೇರೆ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು.
7 ವರ್ಷಕ್ಕೇ ಇತಿಹಾಸದ ಪುಟ ಸೇರಿದ ಗುಲಾಬಿ ನೋಟಿನ ಕತೆ ಇದು!
ವಾಪಸ್ ಏಕೆ?:
‘ಚೇತರಿಕೆಯಲ್ಲಿದ್ದ ಆರ್ಥಿಕತೆಗೆ ಅಗತ್ಯ ನಗದು ಬಳಕೆಗೆ ಅವಕಾಶ ಮಾಡಿಕೊಡಲು, ಅಪನಗದೀಕರಣದ ಬಳಿಕ ತ್ವರಿತವಾಗಿ ಹಣ ಬದಲಾವಣೆಗೆ ಅವಕಾಶ ಮಾಡಿಕೊಡಲು ಹೊಸ ನೋಟು ಬಿಡುಗಡೆ ಮಾಡಲಾಗಿತ್ತು. ಈ ಅಗತ್ಯವನ್ನು ಹೊಸ ನೋಟು ಪೂರೈಸಿದೆ. ಮತ್ತೊಂದೆಡೆ ಇತ್ತೀಚಿಗೆ 2000 ರು. ಮುಖಬೆಲೆಯ ಹೊಸ ನೋಟು ಹೆಚ್ಚು ಚಲಾವಣೆಯಾಗುತ್ತಿಲ್ಲ. ಅಲ್ಲದೆ ಇತರೆ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದ್ದು, ಅಗತ್ಯ ಬೇಡಿಕೆ ಮುಟ್ಟುವಷ್ಟು ಸಾಮರ್ಥ್ಯವಿದೆ. ಜೊತೆಗೆ ಸಾರ್ವಜನರಿಗೆ ಗುಣಮಟ್ಟದ ಕರೆನ್ಸಿ (Currency) ನೀಡಬೇಕೆಂಬ ನೀತಿಯ ಭಾಗವಾಗಿ 2000 ರು. ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯಲಾಗುತ್ತಿದೆ,’ ಎಂದು ಆರ್‌ಬಿಐ ಕಾರಣ ನೀಡಿದೆ.