ಕೇಂದ್ರ ಸರ್ಕಾರವು ಪೂನಂ ಗುಪ್ತಾ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪ ಗವರ್ನರ್ ಆಗಿ ನೇಮಿಸಿದೆ. ಅವರು ಪ್ರಸ್ತುತ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನವದೆಹಲಿ (ಏ.3): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉಪ ಗವರ್ನರ್ ಆಗಿ ಪೂನಂ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ನೇಮಿಸಿ ಏಪ್ರಿಲ್ 2ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ ಆರ್ಥಿಕ ನೀತಿ ಚಿಂತಕರ ಚಾವಡಿ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರಾಗಿ ಪೂನಂ ಗುಪ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಏಪ್ರಿಲ್ 7 ರಿಂದ 9ರವರೆಗೆ ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆ ನಡೆಯಲಿದ್ದು, ಇದರ ಕೆಲವು ದಿನಗಳ ಮೊದಲು ಗುಪ್ತಾ ಅವರ ನೇಮಕಾತಿ ಮಾಡಲಾಗಿದೆ. ಜಾಗತಿಕ ಖ್ಯಾತಿಯನ್ನು ಹೊಂದಿರುವ ವಿಶಿಷ್ಟ ಅರ್ಥಶಾಸ್ತ್ರಜ್ಞೆ ಗುಪ್ತಾ, ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಕೇಂದ್ರ ಬ್ಯಾಂಕ್ ಹಣಕಾಸು ನೀತಿ ಬದಲಾವಣೆಗಳನ್ನು ನಡೆಸುತ್ತಿರುವ ಸಮಯದಲ್ಲಿ ನಿರ್ಣಾಯಕ ಪಾತ್ರವ ವಹಿಸಲಿದ್ದಾರೆ.
ಆರ್‌ಬಿಐ ಮಹತ್ವದ ಸಭೆ, ಈ ಹಣಕಾಸು ವರ್ಷದಲ್ಲಿ ಬಡ್ಡಿ ದರಗಳ ಮೇಲೆ ಪರಿಣಾಮ ಬೀರುತ್ತಾ?
ಜನವರಿ 2020 ರಿಂದ ಜನವರಿ 2025 ರವರೆಗೆ ಮೈಕೆಲ್ ಡಿ ಪತ್ರಾ ಅವರು ಆರ್‌ಬಿಐ ಉಪ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಇದೀಗ ಈ ಸ್ಥಾನವನ್ನು ಪೂನಂ ಗುಪ್ತಾ ತುಂಬಲಿದ್ದಾರೆ. ಮೈಕೆಲ್ ಡಿ ಪತ್ರಾ ಅವರು ಈಗ ಕೇಂದ್ರ ಬ್ಯಾಂಕಿನಲ್ಲಿ ಹಣಕಾಸು ನೀತಿ, ಆರ್ಥಿಕ ಮತ್ತು ನೀತಿ ಸಂಶೋಧನೆ ಮತ್ತು ಹಣಕಾಸು ಮಾರುಕಟ್ಟೆ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಪೂನಂ ಗುಪ್ತಾ ಅವರು ಪಿಎಂ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ ಮತ್ತು 16 ನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಸಂಚಾಲಕರು ಕೂಡ ಆಗಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವಬ್ಯಾಂಕ್‌ನಲ್ಲಿ ಸುಮಾರು ಎರಡು ದಶಕಗಳ ಕಾಲ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವದ ನಂತರ ಅವರು 2021 ರಲ್ಲಿ NCAERಗೆ ಸೇರ್ಪಡೆಯಾದರು.
ಮಿನಿಮಮ್ ಬ್ಯಾಲೆನ್ಸ್ ಇರಿಸದ ಬ್ಯಾಂಕ್ ಗ್ರಾಹಕರಿಂದ 43,500 ಕೋಟಿ ಸಂಗ್ರಹ: ಮಲ್ಲಿಕಾರ್ಜುನ ಖರ್ಗೆ ಆರೋಪ!
ವೃತ್ತಿಪರತೆಯಲ್ಲಿ ಚತುರತೆ ಹೊಂದಿರುವ ಪೂನಂ ಅವರು ಶೈಕ್ಷಣಿಕ ಕ್ಷೇತ್ರದಲ್ಲೂ ಪ್ರಬಲ ಅರ್ಹತೆಗಳನ್ನು ಹೊಂದಿದ್ದಾರೆ. ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ 1998ರಲ್ಲಿ ಅಂತರರಾಷ್ಟ್ರೀಯ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. ಇದು ಜಾಗತಿಕ ಆರ್ಥಿಕತೆಯ ಬಗೆಗಿನ ಆಳವಾದ ಅಧ್ಯಯನ ಮತ್ತು ಜ್ಞಾನವನ್ನು ನೀಡುತ್ತದೆ. 1991 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದು ಭಾರತದ ಪ್ರಮುಖ ಆರ್ಥಿಕ ಅಧ್ಯಯನ ಸಂಸ್ಥೆಗಳಲ್ಲಿ ಒಂದಾಗಿದೆ.
ಇದಕ್ಕೂ ಮುನ್ನ 1989ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಕೂಡ ಮಾಡಿದ್ದಾರೆ. ಇದರ ಜೊತೆಗೆ ಪೂನಂ ಅವರು 1995 ರಲ್ಲಿ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ಅರ್ಥಶಾಸ್ತ್ರದಲ್ಲಿ ಇನ್ನಷ್ಟು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದಾರೆ. ಇದಲ್ಲದೆ ಅನೇಕ ಪ್ರಾಧ್ಯಾಪಕಿಯಾಗಿಯೂ ಕೆಲಸ ಮಾಡಿದ ಅನುಭವ ಇದೆ. ಮಾತ್ರವಲ್ಲ 50ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ.
ಗುಪ್ತಾ ಅವರ ನೇಮಕಾತಿಯೊಂದಿಗೆ, ಆರ್‌ಬಿಐ ಈಗ ಎಂ ರಾಜೇಶ್ವರ ರಾವ್, ಟಿ ರಬಿ ಶಂಕರ್ ಮತ್ತು ಸ್ವಾಮಿನಾಥನ್ ಜೆ ಸೇರಿದಂತೆ ನಾಲ್ಕು ಉಪ ಗವರ್ನರ್‌ಗಳನ್ನು ಹೊಂದಿದೆ.