ಸಣ್ಣ ಉಳಿತಾಯ ಯೋಜನೆ ಹೂಡಿಕೆದಾರ ನಾಮಿನಿ ಹೆಸರಿಸದೆ ಮರಣ ಹೊಂದಿದ್ರೆ ಹಣ ಯಾರಿಗೆ ಸಿಗುತ್ತೆ?

By Suvarna NewsFirst Published Feb 7, 2023, 6:21 PM IST
Highlights

ಸಣ್ಣ ಉಳಿತಾಯ ಯೋಜನೆಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿವೆ. ಹೀಗಿರುವಾಗ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿರುವ ವ್ಯಕ್ತಿ ನಾಮಿನಿಯನ್ನು ಹೆಸರಿಸದೆ ಮರಣ ಹೊಂದಿದ್ರೆ ಆತ ಅಥವಾ ಆಕೆಯ ಹಣ ಯಾರಿಗೆ ಸೇರುತ್ತದೆ? ಇಲ್ಲಿದೆ ಮಾಹಿತಿ. 
 

Business Desk:ಇಂದು ಉಳಿತಾಯ ಅಥವಾ ಹೂಡಿಕೆಗೆ ಅನೇಕ ಮಾರ್ಗಗಳಿವೆ. ಆದರೆ, ಭಾರತದ ಮಧ್ಯಮ ವರ್ಗದ ಜನರಿಗೆ ಉಳಿತಾಯಕ್ಕೆ ಇಂದಿಗೂ ಸಣ್ಣ ಉಳಿತಾಯ ಯೋಜನೆಗಳು ಅಚ್ಚುಮೆಚ್ಚು. ಹೀಗಿರುವಾಗ ಸಣ್ಣ ಉಳಿತಾಯ ಯೋಜನೆಗಳಾದ ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದ ವ್ಯಕ್ತಿ ನಾಮಿನಿ ಅನ್ನು ನೇಮಕ ಮಾಡದೆ ಮರಣ ಹೊಂದಿದ್ರೆ ಆಗ ಹಣ ಯಾರಿಗೆ ಸೇರುತ್ತದೆ? ಇಂಥದೊಂದು ಪ್ರಶ್ನೆ ಬಹುತೇಕರನ್ನು ಕಾಡಬಹುದು. ಇಂಥ ಸಂದರ್ಭಗಳಲ್ಲಿ ಹೂಡಿಕೆ ಮಾಡಿದ ವ್ಯಕ್ತಿಯ ವಾರಸುದಾರರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿ ಹಣ ನೀಡುವಂತೆ ಕೋರಿಕೊಳ್ಳಲು ಆರು ತಿಂಗಳ ಕಾಲಾವಕಾಶ ಇರುತ್ತದೆ. ಸರ್ಕಾರ ಕೂಡ ವಿತ್ ಡ್ರಾ ಪ್ರಕ್ರಿಯೆ ಸರಳೀಕರಿಸಲು ಕ್ರಮ ಕೈಗೊಂಡಿದೆ. ಇನ್ನು ಠೇವಣಿಗಳನ್ನು ಸುಲಭವಾಗಿ ವಿತ್ ಡ್ರಾ ಮಾಡಲು ಸರ್ಕಾರಿ ಉಳಿತಾಯ ಪ್ರೋತ್ಸಾಹ ಕಾಯ್ದೆ 1873 ಅನ್ನು ಸರ್ಕಾರ ಮಾರ್ಪಾಡು ಮಾಡಿದೆ. ಹಣಕಾಸು ಕಾಯ್ದೆ 2023 ಪ್ರಸ್ತಾವಿತ ಬದಲಾವಣೆಗಳನ್ನು ಒಳಗೊಂಡಿದೆ. ಸಣ್ಣ ಉಳಿತಾಯ ಯೋಜನೆ ಖಾತೆದಾರರು ನಾಮಿನಿ ಹೆಸರನ್ನು ಮೊದಲೇ ಘೋಷಣೆ ಮಾಡಿದ್ದರೆ ಹಣ ಪಡೆಯುವಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಖಾತೆದಾರರು ನಾಮಿನಿ ಹೆಸರನ್ನು ಪ್ರಸ್ತಾಪಿಸದಿದ್ದರೆ ಸಮಸ್ಯೆ ಎದುರಾಗುತ್ತದೆ. 

ಸಣ್ಣ ಉಳಿತಾಯ ಖಾತೆದಾರನ ಹಣ ನ್ಯಾಯಬದ್ಧವಾದ ವಾರಸುದಾರರಿಗೆ ಸೇರುತ್ತದೆ. ಆದರೆ, ವಾರಸುದಾರರು ಅವರ ಅರ್ಹತೆಯನ್ನು ಸಾಬೀತುಪಡಿಸಲು ಮರಣ ಹೊಂದಿದ ಖಾತೆದಾರರ ವಿಲ್ ಅಥವಾ ಇತರ ದಾಖಲೆಗಳನ್ನು ಹಾಜರುಪಡಿಸಬೇಕು. ಈ ದಾಖಲೆಗಳನ್ನು ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ ಕೂಡ. ಇನ್ನು ಖಾತೆದಾರರು ಮರಣ ಹೊಂದಿದ ಮೂರು ತಿಂಗಳೊಳಗೆ ಈ ದಾಖಲೆಗಳನ್ನು ಪಡೆಯದಿದ್ದರೆ ಅನೇಕ ವಾರಸುದಾರರಿಗೆ ಹಣವನ್ನು ನೀಡಲು ನಿರಾಕರಿಸುವಂತಹ ಸಾಧ್ಯತೆಯೂ ಇದೆ.  

ಎಲ್ಐಸಿ ಪಾಲಿಸಿಗಳು ಲ್ಯಾಪ್ಸ್ ಆಗಿವೆಯಾ? ವಿಳಂಬ ಶುಲ್ಕ ಕಟ್ಟದೆ ಮತ್ತೆ ಪ್ರಾರಂಭಿಸಲು ಇಲ್ಲಿದೆ ಸುವರ್ಣಾವಕಾಶ

ಸರ್ಕಾರಿ ಉಳಿತಾಯ ಪ್ರೋತ್ಸಾಹ ಕಾಯ್ದೆ ಪ್ರಸ್ತುತ ಸೆಕ್ಷನ್ 4ಎ ಹೊಂದಿದೆ. ಇದರ ಅನ್ವಯ ಒಂದು ವೇಳೆ ಖಾತೆದಾರರು ನಾಮಿನಿಯನ್ನು ಹೆಸರಿಸದೆ ಮರಣ ಹೊಂದಿದ್ರೆ ಅವರ ವಿಲ್, ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರ, ಭಾರತೀಯ ವಾರಸುದಾರರ ಕಾಯ್ದೆ 1925ರ ಅಡಿಯಲ್ಲಿ ಪಡೆದ ವಾರಸುದಾರರ ಪ್ರಮಾಣಪತ್ರ ಅಥವಾ ಕಂದಾಯ ಇಲಾಖೆ ಅಧಿಕೃತ ಅಧಿಕಾರಿಗೆ ನೀಡಿರುವ ಕಾನೂನಾತ್ಮಕ ವಾರಸುದಾರರ ಪ್ರಮಾಣಪತ್ರ ಸಲ್ಲಿಕೆ ಮಾಡಬೇಕು. ಈ ದಾಖಲೆಗಳನ್ನುಖಾತೆದಾರ ಮರಣ ಹೊಂದಿದ  6 ತಿಂಗಳೊಳಗೆ ಸಲ್ಲಿಕೆ ಮಾಡಿದ್ರೆ ಮಾತ್ರ ಸಣ್ಣ ಉಳಿತಾಯ ಖಾತೆಯಲ್ಲಿರುವ ಹಣವನ್ನು ಕಾನೂನು ಪ್ರಕಾರ ವಾರಸುದಾರನಾದ ವ್ಯಕ್ತಿಗೆ ನೀಡಲಾಗುತ್ತದೆ. 

ಈ ಹೊಸ ಅವಕಾಶವು ಅಂಚೆ ಕಚೇರಿ ಉಳಿತಾಯ ಖಾತೆ, ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಯೋಜನೆ, ರಾಷ್ಟ್ರೀಯ ಉಳಿತಾಯ ರಿಕರಿಂಗ್ ಠೇವಣಿ, ಸುಕನ್ಯಾ ಸಮೃದ್ಧಿ ಖಾತೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ ಹಾಗೂ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಸೇರಿದಂತೆ ಅನೇಕ ಸಣ್ಣ ಉಳಿತಾಯ ಯೋಜನೆಗಳಿಗೆ ಅನ್ವಯಿಸುತ್ತದೆ. 

ನೀವು ಈಗ ಸ್ವಂತ ಮನೆ ಖರೀದಿಸಲು ಆರ್ಥಿಕವಾಗಿ ಸಶಕ್ತರಾ? ಪತ್ತೆ ಹಚ್ಚೋದು ಹೇಗೆ?

ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕೂಡ ಇತ್ತೀಚೆಗೆ ಹೆಚ್ಚಳವಾಗಿದೆ. ಬಹುತೇಕ ಯೋಜನೆಗಳ ಬಡ್ಡಿದರ ಶೇ.7ಕ್ಕಿಂತ ಹೆಚ್ಚಿದೆ. ಹೀಗಾಗಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ಸಿಗಲಿದೆ. ಇದು ಹೂಡಿಕೆದಾರರನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಸಣ್ಣ ಉಳಿತಾಯ ಯೋಜನೆಗಳತ್ತ ಆಕರ್ಷಿಸುತ್ತಿದೆ ಕೂಡ. ಇನ್ನು ಇತ್ತೀಚೆಗಷ್ಟೇ ಮಂಡನೆಯಾದ 2023ನೇ ಸಾಲಿನ ಬಜೆಟ್ ನಲ್ಲಿ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಈ ಯೋಜನೆಯಲ್ಲಿ ಒಂದೇ ಖಾತೆ ಹೊಂದಿರೋರಿಗೆ ಗರಿಷ್ಠ ಠೇವಣಿ ಮಿತಿಯನ್ನು 4.5ಲಕ್ಷ ರೂ.ನಿಂದ  9ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಜಂಟಿ ಖಾತೆಗೆ 9ಲಕ್ಷ ರೂನಿಂದ 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. 


 

click me!