ಎಲ್ಐಸಿ ಪಾಲಿಸಿಗಳು ಲ್ಯಾಪ್ಸ್ ಆಗಿವೆಯಾ? ವಿಳಂಬ ಶುಲ್ಕ ಕಟ್ಟದೆ ಮತ್ತೆ ಪ್ರಾರಂಭಿಸಲು ಇಲ್ಲಿದೆ ಸುವರ್ಣಾವಕಾಶ

By Suvarna News  |  First Published Feb 7, 2023, 3:40 PM IST

ಅವಧಿಗೂ ಮುನ್ನ ಕ್ಲೋಸ್ ಆಗಿರುವ ಪಾಲಿಸಿಗಳ ಪುನಶ್ಚೇತನಕ್ಕೆ ಎಲ್ಐಸಿ ವಿಶೇಷ ಮೇಳ ಪ್ರಾರಂಭಿಸಿದೆ .ಫೆಬ್ರವರಿ 1ರಿಂದ ಮಾರ್ಚ್ 24ರ ತನಕ ಈ ವಿಶೇಷ ಮೇಳ ನಡೆಯಲಿದ್ದು, ಎಲ್ಐಸಿ ಪಾಲಿಸಿದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. 
 


ನವದೆಹಲಿ (ಫೆ.7): ಮೆಚ್ಯುರಿಟಿಗೂ ಮುನ್ನ ಕ್ಲೋಸ್ ಅಥವಾ ಲ್ಯಾಪ್ಸ್  ಆಗಿರುವ ಹಳೆಯ ವಿಮಾ ಪಾಲಿಸಿಗಳನ್ನು ಪುನಶ್ಚೇತನಗೊಳಿಸಲು  ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)  ವಿಶೇಷ ಮೇಳ  ಪ್ರಾರಂಭಿಸಿದೆ. ಈ ಮೇಳ ಫೆಬ್ರವರಿ 1ರಿಂದ ಮಾರ್ಚ್ 24ರ ತನಕ ನಡೆಯಲಿದೆ. ಯಾವುದೋ ಕಾರಣದಿಂದ ಅವಧಿಗೂ ಮುನ್ನ ಪಾಲಿಸಿಗಳನ್ನು ಕ್ಲೋಸ್ ಮಾಡಿರುವ ಎಲ್ಐಸಿ ಪಾಲಿಸಿದಾರರು ಅವುಗಳನ್ನು ಮತ್ತೆ ಪ್ರಾರಂಭಿಸಲು ಇದು ಉತ್ತಮ ಅವಕಾಶವಾಗಿದೆ. ಈ ಮೇಳದ ಸಂದರ್ಭದಲ್ಲಿ ಪ್ರೀಮಿಯಂ ಮೇಲಿನ ವಿಳಂಬ ಶುಲ್ಕವನ್ನು ರದ್ದುಗೊಳಿಸಲಾಗಿದೆ. ಹಾಗೆಯೇ ವಿಳಂಬ ಶುಲ್ಕ ಹಾಗೂ ಪ್ರೀಮಿಯಂಗಳ ಮೇಲೆ ಡಿಸ್ಕೌಂಟ್ ಕೂಡ ಇದೆ. 1ಲಕ್ಷ ರೂ. ತನಕದ ವಿಳಂಬ ಶುಲ್ಕಗಳಿಗೆ ಹಾಗೂ 3ಲಕ್ಷ ರೂ. ತನಕದ ಪ್ರೀಮಿಯಂಗಳಿಗೆ ಪಾಲಿಸಿದಾರರಿಗೆ ಶೇ. 25ರಷ್ಟು ರಿಯಾಯಿತಿ ಸಿಗಲಿದೆ. ಇನ್ನು  3ಲಕ್ಷ ರೂ. ಮೇಲಿನ ಪ್ರೀಮಿಯಂಗಳಿಗೆ ಶೇ.30ರಷ್ಟು ಡಿಸ್ಕೌಂಟ್ ಸಿಗಲಿದೆ. ಪ್ರೀಮಿಯಂ ಪಾವತಿಸದ ದಿನಾಂಕದಿಂದ ಐದು ವರ್ಷಗಳ ತನಕ ಪಾಲಿಸಿಯನ್ನು  ಪುನಶ್ಚೇತನಗೊಳಿಸಲು ಅವಕಾಶವಿದೆ. ಇನ್ನು ಅರ್ಹ ನ್ಯಾಚ್ ಹಾಗೂ ಬಿಲ್ ಪಾವತಿ ನೋಂದಾಯಿತ ಪಾಲಿಸಿಗಳ ಮೇಲೆ ವಿಶೇಷ ಆಫರ್ ನೀಡಲಾಗಿದ್ದು, 5 ರೂ. ವಿಳಂಬ ಶುಲ್ಕ ವಿಧಿಸಲಾಗುತ್ತದ. ಪಾಲಿಸಿಯ ಪ್ರೀಮಿಯಂ ಅನ್ನು ಆನ್ ಲೈನ್, ಎಲ್ ಐಸಿ ಕಚೇರಿ ಅಥವಾ ಏಜೆಂಟ್ ಮೂಲಕ ಪಾವತಿಸಬಹುದು.  

ಟರ್ಮ್ ವಿಮೆ, ಆರೋಗ್ಯ ವಿಮೆ ಹಾಗೂ ಬಹು ಅಪಾಯಗಳನ್ನು (multiple risks) ಹೊಂದಿರುವ ಪಾಲಿಸಿಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಇನ್ನು ಪ್ರೀಮಿಯಂ ಪಾವತಿ ಅವಧಿಯಲ್ಲಿ ಲ್ಯಾಪ್ಸ್ (lapse) ಆದ ಹಾಗೂ ಪುನಶ್ಚೇತನ ದಿನಾಂಕದ ತನಕ ಇನ್ನೂ ಪೂರ್ಣಗೊಳ್ಳದ ಪಾಲಿಸಿಗಳು ಕೂಡ ಪುನಶ್ಚೇತನಕ್ಕೆ ಅರ್ಹವಾಗಿವೆ. ಎಲ್ಐಸಿ ಪ್ರಾರಂಭಿಸಿರುವ ಈ ಮೇಳದಿಂದ ಮೆಚ್ಯುರಿಟಿಗೂ ಮುನ್ನ ಪಾಲಿಸಿಗಳನ್ನು ಕ್ಲೋಸ್ ಮಾಡಿರೋರಿಗೆ ಸಾಕಷ್ಟು ಪ್ರಯೋಜನವಾಗಿದೆ. ಅವುಗಳನ್ನು ಪುನಶ್ಚೇತನಗೊಳಿಸಲು ವಿಳಂಬ ಶುಲ್ಕ ಹಾಗೂ ಪ್ರೀಮಿಯಂಗಳನ್ನು ಪಾವತಿಗಳ ಮೇಲೆ ಈಗ ಡಿಸ್ಕೌಂಟ್ ಸಿಗಲಿದೆ. ಹೀಗಾಗಿ ಪಾಲಿಸಿದಾರರು ಈ ವಿಶೇಷ ಕೊಡುಗೆಯ ಲಾಭ ಪಡೆದುಕೊಳ್ಳುವ ಮೂಲಕ ತಮ್ಮ ಪಾಲಿಸಿಗಳನ್ನು ಮತ್ತೆ ಪ್ರಾರಂಭಿಸಬಹುದಾಗಿದೆ. 

Tap to resize

Latest Videos

ನೀವು ಈಗ ಸ್ವಂತ ಮನೆ ಖರೀದಿಸಲು ಆರ್ಥಿಕವಾಗಿ ಸಶಕ್ತರಾ? ಪತ್ತೆ ಹಚ್ಚೋದು ಹೇಗೆ?

ಎಷ್ಟೋ ಬಾರಿ ಎಲ್ ಐಸಿ ಪಾಲಿಸಿಯ ಪ್ರೀಮಿಯಂಗಳನ್ನು ಪಾವತಿಸಲು ಮರೆತು ಹೋಗುತ್ತದೆ. ಇನ್ನು ಪ್ರೀಮಿಯಂಗಳನ್ನು ಪಾವತಿಸದಿದ್ದರೆ ವಿಳಂಬ ಶುಲ್ಕ ವಿಧಿಸಲಾಗುತ್ತದೆ. ಇದೇ ಕಾರಣಕ್ಕೆ ಎಷ್ಟೋ ಬಾರಿ ಎಲ್ ಐಸಿ ಪಾಲಿಸಿಗಳು ಅರ್ಧಕ್ಕೆ ನಿಂತು ಹೋಗುತ್ತವೆ. ಹೀಗಾಗಿ ಈ ರೀತಿ ಮೆಚ್ಯುರಿಟಿಗೂ ಮುನ್ನ ಅರ್ಧಕ್ಕೆ ನಿಲ್ಲಿಸಿರುವ ಎಲ್ಐಸಿ ಪಾಲಿಸಿಗಳ ಪುನಶ್ಚೇತನಕ್ಕೆ ಇದು ಉತ್ತಮ ಅವಕಾಶ. ಎಲ್ಐಸಿ ಆಯಾ ವರ್ಗದ ಜನರಿಗೆ ಹೊಂದಿಕೆಯಾಗುವ ಪಾಲಿಸಿಗಳನ್ನು ರೂಪಿಸುತ್ತ ಬಂದಿದೆ. ಹೀಗಾಗಿ ಆದಾಯ, ವಯಸ್ಸನ್ನು ಆಧರಿಸಿ ಎಲ್ಲ ವರ್ಗದ ಜನರು ಎಲ್ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಪಾಲಿಸಿಗಳು ಬರೀ ಸುರಕ್ಷತೆಯನ್ನು ಮಾತ್ರ ಒದಗಿಸೋದಿಲ್ಲ. ಬದಲಿಗೆ ಉಳಿತಾಯಕ್ಕೆ ಕೂಡ ಅವಕಾಶ ಕಲ್ಪಿಸುತ್ತದೆ. 

ಸುಕನ್ಯಾ ಸಮೃದ್ಧಿ vs ಎಲ್ ಐಸಿ ಕನ್ಯಾದಾನ: ಹೆಣ್ಣುಮಕ್ಕಳ ಭವಿಷ್ಯಕ್ಕೆ ಯಾವ ಯೋಜನೆ ಬೆಸ್ಟ್?

ವಾಟ್ಸ್ಆ್ಯಪ್ ಸೇವೆ
ಎಲ್ಐಸಿ ಪೋರ್ಟಲ್ ನಲ್ಲಿ ತಮ್ಮ ಪಾಲಿಸಿಗಳನ್ನು ನೋಂದಣಿ ಮಾಡಿಸಿರೋರು ವಾಟ್ಸ್ಆ್ಯಪ್ ನಲ್ಲಿ ನಿಗದಿತ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯಬಹುದು. ಪಾಲಿಸಿದಾರರು ವಾಟ್ಸ್ಆ್ಯಪ್ ನಲ್ಲಿ 'ಹಾಯ್' ಎಂದು  8976862090 ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡುವ ಮೂಲಕ ಈ ಸೇವೆ ಪಡೆಯಬಹುದು. ಪ್ರೀಮಿಯಂ ಬಾಕಿ, ಬೋನಸ್  ಮಾಹಿತಿ, ಪಾಲಿಸಿ ವಿವರ, ಸಾಲದ ಮರುಪಾವತಿ, ಸಾಲದ ಬಡ್ಡಿ ಸೇರಿದಂತೆ ಅನೆಕ ಮಾಹಿತಿಗಳನ್ನು ಪಾಲಿಸಿದಾರ ವಾಟ್ಸ್ಆ್ಯಪ್ ಮೂಲಕ ಪಡೆದುಕೊಳ್ಳಬಹುದು. ಹೀಗಾಗಿ ನೀವು ಇನ್ನು ಮುಂದೆ ಇಂಥ ಸಣ್ಣ ಹಾಗೂ ದೊಡ್ಡ ಕೆಲಸಗಳಿಗೆ ಎಲ್ಐಸಿ ಕಚೇರಿಗೆ ಭೇಟಿ ನೀಡೋದು ಅಥವಾ ಎಲ್ಐಸಿ ಏಜೆಂಟ್ ರನ್ನು ಸಂಪರ್ಕಿಸಬೇಕಾದ ಅಗತ್ಯವಿಲ್ಲ. ವಾಟ್ಸ್ಆ್ಯಪ್  ಮೂಲಕವೇ ಸೇವೆಗಳನ್ನು ಪಡೆದುಕೊಳ್ಳಬಹುದು. 


 

click me!