ತೋಟಗಾರಿಕೆಯಿಂದ ರೈತರಿಗೆ ವರ್ಷವಿಡೀ ಭರ್ಜರಿ ಆದಾಯ

By Kannadaprabha News  |  First Published Mar 9, 2021, 8:37 AM IST

ನೂತನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ತೋಟಗಾರಿಕಾ ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡಲು ರಾಜ್ಯ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. 


ಬೆಂಗಳೂರು (ಮಾ.09):   ಅತ್ಯುತ್ತಮ ತರಬೇತಿ, ನೂತನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ತೋಟಗಾರಿಕಾ ಬೆಳೆಗಾರರ ಆರ್ಥಿಕ ಅಭಿವೃದ್ಧಿಗೆ ನೆರವು ನೀಡಲು ಕೊಪ್ಪಳ ಜಿಲ್ಲೆಯ ಸಿರಿವಾಳ ಗ್ರಾಮದಲ್ಲಿ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಹೊಸ ಬೆಳೆ ತಳಿ, ವಿನೂತನ ತಂತ್ರಜ್ಞಾನ, ನಿರ್ವಹಣಾ ಪದ್ಧತಿ ಪರಿಚಯಿಸಲು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಮತ್ತು ರಾಜ್ಯದ ಕೃಷಿ ಮತ್ತು ತೋಟಗಾರಿಕಾ ವಿವಿಗಳ ಸಹಯೋಗದಲ್ಲಿ ಪ್ರಾತ್ಯಾಕ್ಷಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ಕೊಡುವುದಾಗಿ ಭರವಸೆ ನೀಡಿದೆ.

Tap to resize

Latest Videos

Live| Karnataka Budget 2021: ಬಿಎಸ್‌ವೈ ಟಾನಿಕ್ ಬಜೆಟ್: ಇಲ್ಲಿದೆ ಹೈಲೈಟ್ಸ್! ..

ಹಾಗೆಯೇ ತೋಟಗಾರಿಕೆ ಉತ್ಪನ್ನಗಳಿಗೆ ಏಕರೂಪದ ಬ್ರಾಂಡಿಂಗ್‌ ಮತ್ತು ಮಾರುಕಟ್ಟೆಸೌಲಭ್ಯ ಒದಗಿಸಿ ಬ್ರಾಂಡ್‌ ಮೌಲ್ಯ ಹೆಚ್ಚಿಸಲಾಗುವುದು. ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಸಂಪರ್ಕ ಮತ್ತು ಪ್ರಚಾರಕ್ಕಾಗಿ ಏಕೀಕೃತ ಮಾರುಕಟ್ಟೆವೇದಿಕೆ ಕಲ್ಪಿಸಿ ತಂತ್ರಜ್ಞಾನ ಅಳವಡಿಕೆಯನ್ನು ಉತ್ತೇಜಿಸಲಾಗುವುದು. ಜತೆಗೆ ಕಡಿಮೆ ಜಮೀನಿನಲ್ಲಿ ಕೃಷಿ, ತೋಟಗಾರಿಕೆ ಮತ್ತಿತರ ಉಪಕಸುಬುಗಳನ್ನು ಕೈಗೊಳ್ಳುವ ಮೂಲಕ ಸುಸ್ಥಿರವಾಗಿ ವರ್ಷವಿಡೀ ವರಮಾನ ಪಡೆಯಲು ಸಮಗ್ರ ಕೃಷಿ ಪದ್ಧತಿ ಅನುಷ್ಠಾನಗೊಳಿಸುವ ಭರವಸೆ ನೀಡಲಾಗಿದೆ.

ರಾಜ್ಯ ಬಜೆಟ್ 2021: ವಿಶ್ವ ಮಹಿಳಾ ದಿನಾಚರಣೆಯಂದೇ ಮಹಿಳೆಯರಿಗೆ ಭರ್ಜರಿ ಗಿಫ್ಟ್ ...

ಉತ್ತಮ ಗುಣಮಟ್ಟದ ಹೈಬ್ರಿಡ್‌ ಬೀಜ ಮತ್ತು ಬೀಜ ತಂತ್ರಜ್ಞಾನವನ್ನು ಸುಲಭವಾಗಿ ಒದಗಿಸಲು ಹೊಸ ಹೈಬ್ರಿಡ್‌ ಬೀಜ ನೀತಿ ರೂಪಿಸಲಾಗುವುದು. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಯ ಅಡಿಕೆ ಬೆಳೆಗಾರರನ್ನು ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ತೀವ್ರಗೊಳಿಸಲು ಹಾಗೂ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು 25 ಕೋಟಿ ರು.ಗಳಲ್ಲಿ ಕಾರ್ಯಕ್ರಮ ಯೋಜಿಸುವುದಾಗಿ ಸರ್ಕಾರ ತಿಳಿಸಿದೆ.

ರಾಜ್ಯಾದ್ಯಂತ ಸುವಾಸನೆಯುಕ್ತ ಮತ್ತು ವೈದ್ಯಕೀಯ ಗಿಡಗಳು, ಹಣ್ಣು, ತರಕಾರಿಗಳು ಮತ್ತು ಸಂಬಾರ ಪದಾರ್ಥಗಳಿಗಾಗಿ ಹೊಸ ಕೃಷಿ ರಫ್ತು ವಲಯ ಸ್ಥಾಪಿಸಲಾಗುವುದು. ಈ ಉತ್ಪನ್ನಗಳ ರಫ್ತಿಗೆ ಸಹಕಾರಿಯಾಗುವಂತೆ ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗುವುದು. ದ್ರಾಕ್ಷಿ ಬೆಳೆಯ ಮೌಲ್ಯವರ್ಧನೆ, ಬ್ರಾಂಡಿಂಗ್‌ ಮತ್ತು ಮಾರ್ಕೆಟಿಂಗ್‌ ಕ್ಷೇತ್ರಗಳ ಉನ್ನತೀಕರಣಕ್ಕೆ ಆದ್ಯತೆ ನೀಡಲಾಗುವುದು. ದ್ರಾಕ್ಷಿ ಕೃಷಿಯನ್ನು ಪ್ರೋತ್ಸಾಹಿಸಲು ಕರ್ನಾಟಕ ದ್ರಾಕ್ಷಾರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ಪುನರ್‌ ರಚಿಸುವುದಾಗಿ ಭರವಸೆ ನೀಡಲಾಗಿದೆ.

ಬೆಂಗಳೂರಲ್ಲಿ ಹೂವು, ತರಕಾರಿ ಮಾರುಕಟ್ಟೆ:

ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯ ವತಿಯಿಂದ ಬೈಯಪ್ಪನಹಳ್ಳಿಯ ಎಂಟು ಎಕರೆ ಜಮೀನಿನಲ್ಲಿ 50 ಕೋಟಿ ರು.ಗಳ ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆನಿರ್ಮಿಸಲಾಗುವುದು. ಸಿಂಗೇನ ಅಗ್ರಹಾರದ ಹಣ್ಣು ಮಾರುಕಟ್ಟೆಗೆ ಹೊಂದಿಕೊಂಡಿರುವ ಗುಳಿಮಂಗಳ ಗ್ರಾಮದ 42 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆನಿರ್ಮಿಸಲಾಗುವುದು. ಮೆಣಸಿನಕಾಯಿ ಬೆಳೆಯುವ ರೈತರಿಗೆ ಸ್ಪರ್ಧಾತ್ಮಕ ದರ ಒದಗಿಸಲು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆಧುನಿಕ ಗುಣವಿಶ್ಲೇಷಣಾ ಘಟಕವನ್ನು ನಾಲ್ಕು ಕೋಟಿ ರು.ಗಳ ವೆಚ್ಚದಲ್ಲಿ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ನಗರ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕೃಷಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಜಾತಿ ಸಮುದಾಯಗಳ ಓಲೈಕೆಗೆ ಹೆಚ್ಚಿನ ಆದ್ಯತೆ ನೀಡಿ ಹಣ ಮೀಸಲು ಇಡಲಾಗಿದೆ. ಕೃಷಿ ಉತ್ಪನ್ನಗಳ ಅಡಮಾನ ಸಾಲಕ್ಕೆ ಕೇವಲ ಐದು ಕೋಟಿ ಮೀಸಲಾಗಿರಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗಿದೆ. ರಸಗೊಬ್ಬರ ಬೆಲೆ ಏರಿಕೆ, ಡಿಸೇಲ್‌ ಬೆಲೆ ಏರಿಕೆಯಿಂದ ಕೃಷಿ ಯಂತ್ರೋಪಕರಣಗಳ ಬಳಕೆ ಸಂಕಷ್ಟಅನುಭವಿಸಬೇಕಾಗಿದೆ. ಇದಕ್ಕೆ ಯಾವುದೇ ಸ್ಪಂದನೆ ನೀಡದೆ ಇರುವುದು ಮುಂದಿನ ದಿನಗಳಲ್ಲಿ ಕೃಷಿ ಹಿನ್ನಡೆಗೆ ಕಾರಣವಾಲಿದೆ. ಮಂಡ್ಯದ ಮೈಶುಗರ್‌ ಸಕ್ಕರೆ ಕಾರ್ಖಾನೆ, ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.

- ಕುರುಬೂರು ಶಾಂತಕುಮಾರ್‌, ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ

click me!