ರಾಜ್ಯವನ್ನು ಪ್ರವಾಸಿಗರ ಸ್ವರ್ಗ ಮಾಡಲು 500 ಕೋಟಿ ರೂ. ನಿಗದಿ!

By Kannadaprabha NewsFirst Published Mar 9, 2021, 8:26 AM IST
Highlights

ರಾಜ್ಯವನ್ನು ಪ್ರವಾಸಿಗರ ಸ್ವರ್ಗ ಮಾಡಲು 500 ಕೋಟಿ ರೂ| ಪ್ರವಾಸಿ ತಾಣಗಳ ಮೂಲಸೌಕರ‍್ಯ ಅಭಿವೃದ್ಧಿ - ಸ್ಥಳೀಯರಿಗೆ ಉದ್ಯೋಗ ಒದಗಿಸಲು ಆದ್ಯತೆ| ಉಡುಪಿ ಜಿಲ್ಲೆಯ ತ್ರಾಸಿ, ಮರವಂತೆ, ಒತ್ತಿನೆಣೆ ಸೇರಿ ಕಡಲ ತೀರ ಅಭಿವೃದ್ಧಿಗೆ 10 ಕೋಟಿ ರು.

ಬೆಂಗಳೂರು(ಮಾ.09): ಕರಾವಳಿ, ಗಿರಿಧಾಮ, ಅರಣ್ಯ ಪ್ರದೇಶ ಸಮೀಪದ ಪ್ರವಾಸಿ ತಾಣಗಳನ್ನು ಬಳಸಿಕೊಂಡು ರಾಜ್ಯವನ್ನು ಪ್ರವಾಸಿಗರ ಸ್ವರ್ಗ ಮಾಡುವ ಗುರಿಯಿಟ್ಟುಕೊಂಡು ಹಲವು ಮಹತ್ವದ ಯೋಜನೆಗಳನ್ನು ಮುಂಗಡಪತ್ರದಲ್ಲಿ ಘೋಷಿಸಲಾಗಿದೆ.

ಪ್ರವಾಸಿ ತಾಣಗಳ ಮೂಲ ಸೌಕರ್ಯ ಅಭಿವೃದ್ಧಿ ಜತೆಗೆ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಲು 500 ಕೋಟಿ ರು.ಗಳನ್ನು ಪ್ರವಾಸೋದ್ಯಮ ಇಲಾಖೆಗೆ ರಾಜ್ಯ ಸರ್ಕಾರ ನೀಡುವುದಾಗಿ ಘೋಷಿಸಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಜಲಮಾರ್ಗಗಳ ಪ್ರಾಧಿಕಾರ ಸಹಯೋಗದಲ್ಲಿ ರಾಜ್ಯದ ಕಾಳಿ ನದಿ, ನೇತ್ರಾವತಿ ನದಿ, ಗುರುಪುರ, ಉಡುಪಿ ಜಿಲ್ಲೆಯ ಹಂಗಾರಕಟ್ಟಾದಿಂದ ಮಣಿಪಾಲದವರೆಗೆ ಮತ್ತು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿಜಲಾಶಯದಿಂದ ಬಾಗಲಕೋಟೆಗೆ 60 ಕೋಟಿ ರು. ವೆಚ್ಚದಲ್ಲಿ ಜಲಮಾರ್ಗ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುÜವುದಾಗಿ ಘೋಷಿಸಿದೆ.

ರಾಜ್ಯದ ಕಡಲ ತೀರಗಳನ್ನು ಅಭಿವೃದ್ಧಿಗೊಳಿಸಿ ಅಂತಾರಾಷ್ಟ್ರೀಯ ದರ್ಜೆಗೇರಿಸುವ ಉದ್ದೇಶ ಮುಂಗಡಪತ್ರದಲ್ಲಿ ಕಾಣಿಸಿದ್ದು, ಇದಕ್ಕಾಗಿ ಉಡುಪಿ ಜಿಲ್ಲೆಯ ತ್ರಾಸಿ, ಮರವಂತೆ, ಒತ್ತಿನೆಣೆ ಸೇರಿದಂತೆ ಇತರೆ ಕಡಲ ತೀರಗಳನ್ನು 10 ಕೋಟಿ ರು.ಗಳ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಮಾಡುವುದು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 10 ಕೋಟಿ ರು. ಒದಗಿಸುವುದಾಗಿ ತಿಳಿಸಲಾಗಿದೆ.

ಇದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನ ನೀಡಲು ಅಂಕೋಲಾದ ನೌಕಾ ವಾಯುನೆಲೆ ಸಮೀಪದಲ್ಲಿ ಸಿವಿಲ್‌ ಎನ್‌ಕ್ಲೇವ್‌ನ್ನು ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುತ್ತಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಜೊತೆಗೆ ಕಡಿಮೆ ವೆಚ್ಚದಲ್ಲಿ ಪ್ರಮಾಣ ಮತ್ತು ಸರಕು ಸಾಗಾಟ ಸಾಧ್ಯವಾಗುವಂತೆ ಮಾಡಲು ಮಂಗಳೂರು ಮತ್ತು ಪಣಜಿ ನಡುವೆ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಜಲಮಾರ್ಗ ಅಭಿವೃದ್ಧಿ ಯೋಜನೆ ರೂಪಿಸಿರುವುದಾಗಿ ತಿಳಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿಯ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಜೆಎಲ್‌ಆರ್‌(ಜಂಗಲ್‌ ಲಾಡ್ಜ್‌ ಆ್ಯಂಡ್‌ ರೆಸಾರ್ಟ್‌ ಲಿ.) ಗೆ ಹಸ್ತಾಂತರಿಸಲಾಗಿದೆ. ಈ ಎರಡೂ ಗಿರಿಧಾಮಗಳನ್ನು ಅಂತಾರಾಷ್ಟ್ರೀಯ ತಾಣವನ್ನಾಗಿ ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದೆ. ಬೆಂಗಳೂರು ಸುತ್ತಲಿನ ಪ್ರವಾಸಿ ತಾಣಗಳನ್ನು ಗುರುತಿಸಿ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಿ ವಾರಾಂತ್ಯ ಪ್ರವಾಸ ವೃತ್ತವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಘೋಷಿಸಿದೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ತದಡಿಯಲ್ಲಿ (ಉತ್ತರ ಕನ್ನಡ) ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಪ್ರದೇಶದಲ್ಲಿ 5 ಕೋಟಿ ರು. ವೆಚ್ಚದಲ್ಲಿ ವನ್ಯಜೀವಿ ಸಫಾರಿಯನ್ನು ಒಳಗೊಂಡಂತೆ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು. ಆನೆ ಕಾರಿಡಾರ್‌ನ ಭಾಗವಾಗಿರುವ ಚಾಮರಾಜನಗರ ಜಿಲ್ಲೆಯ ಬೂದಿಪಡಗದಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಆನೆ ಶಿಬಿರ ಆರಂಭಿಸುವುದಾಗಿ ಘೋಷಿಸಿದೆ.

ಆಶಾದಾಯಕ ಬೆಳವಣಿಗೆ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ಸ್ಥಳೀಯ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಹೊಸದಾಗಿ ಜಲಮಾರ್ಗ ಯೋಜನೆಗಳನ್ನು ಪ್ರಸ್ತಾಪಿಸಿರುವುದು ಮತ್ತು ಗಿರಿಧಾಮಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡುವುದಾಗಿ ಘೋಷಿಸಿರುವುದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದೆ.

- ಟಿ.ಎನ್‌. ನಾರಾಯಣ, ಪ್ರವಾಸೋದ್ಯಮ ತಜ್ಞ

click me!