
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಆದಾಯ ತೆರಿಗೆ ಇಲಾಖೆ 15 ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ನೋಟೀಸ್ ಜಾರಿ ಮಾಡಿತ್ತು. ಈ ಘಟನೆ ಮಾಸುವ ಮೊದಲೇ ಈಗ ಆದಾಯ ತೆರಿಗೆ ಇಲಾಖೆ ಒಂದು ಕೋಟಿಗೂ ಅಧಿಕ ಆದಾಯ ಗಳಿಸಿದ ಯುಟ್ಯೂಬರ್ ಒಬ್ಬರ ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದೆ.
ಹೌದು ಇದು ಸಾಮಾಜಿಕ ಜಾಲತಾಣ (Social Media) ಯುಗವಾಗಿದ್ದು, ಇಂದು ಸಾಮಾಜಿಕ ಜಾಲತಾಣಗಳು ಕೇವಲ ಮನೋರಂಜನೆಗೆ ಮೀಸಲಾಗಿಲ್ಲ, ಇವುಗಳು ಇಂದು ಹಣ ಮಾಡುವ ತಾಣಗಳಾಗಿದ್ದು, ಬುದ್ಧಿವಂತಿಕೆ, ಪ್ರತಿಭೆಯ ಜನರನ್ನು ಸೆಳೆಯುವ ವಿಭಿನ್ನ ಕಂಟೆಂಟ್ ಸೃಷ್ಟಿಸುವ ತಾಕತ್ತು ನಿಮಗಿದ್ದರೆ ನೀವು ಕೂಡ ಇಂಟರ್‌ನೆಟ್‌ನಲ್ಲಿ ಇಂದು ಕಡಿಮೆ ಎಂದರೂ ಲಕ್ಷದಲ್ಲಿ ಸಂಪಾದನೆ ಮಾಡಬಹುದು. ಅದೇ ರೀತಿ ಇಲ್ಲೊಂದು ಕಡೆ ಯೂಟ್ಯೂಬರ್ ಒಬ್ಬರು ಯೂಟ್ಯೂಬ್ ಮೂಲಕ ಒಳ್ಳೆಯ ಸಂಪಾದನೆ ಮಾಡಿದ್ದು, ಆದಾಯಕ್ಕೆ ತಕ್ಕಂತೆ ತೆರಿಗೆ ಕಟ್ಟದ ಕಾರಣ ಅವರು ಈಗ ಆದಾಯ ತೆರಿಗೆ (Income Tax) ಇಲಾಖೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Social Media Influencers :ಭಾರತದ ಕಂಪನಿಗಳಿಗೆ ಮೂನ್ ಲೈಟ್ ಬಳಿಕ ಹೊಸ ಸವಾಲು?
ಉತ್ತರಪ್ರದೇಶದ ಯೂಟ್ಯೂಬರ್ ತಸ್ಲೀಮ್ (Taslim) ಎಂಬಾತ ಹಲವು ವರ್ಷಗಳಿಂದ ಯೂಟ್ಯೂಬ್ ಚಾನೆಲೊಂದನ್ನು ನಡೆಸುತ್ತಿದ್ದು, ಆತ ಈ ಚಾನೆಲ್‌ನಿಂದಲೇ ಒಂದು ಕೋಟಿಗೂ ಅಧಿಕ ಆದಾಯ ಗಳಿಸಿದ್ದ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಈತನ ವ್ಯವಹಾರಗಳ ಮೇಲೆ ಕಣ್ಣಿಟ್ಟಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಆತನ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಈತನ ಮನೆಯಲ್ಲಿ 24 ಲಕ್ಷ ರೂಪಾಯಿ ಹಣ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ವರದಿಯಾಗಿದೆ.
ಯೂಟ್ಯೂಬರ್ ಕಾನೂನುಬಾಹಿರ ವಿಧಾನಗಳ ಮೂಲಕ ಹಣ ಸಂಪಾದಿಸಿದ್ದಾನೆ ಎಂದು ಆರೋಪ ಕೇಳಿ ಬಂದಿದ್ದು, ಈ ಆರೋಪವನ್ನು ಆತನ ಕುಟುಂಬ ನಿರಾಕರಿಸಿದೆ. ಉತ್ತರಪ್ರದೇಶದ (Uttar Pradesh) ಬರೇಲಿಯಲ್ಲಿ ವಾಸ ಮಾಡುವ ಈ ಯುಟ್ಯೂಬರ್ ಷೇರು ಮಾರುಕಟ್ಟೆ ಬಗ್ಗೆ ವೀಡಿಯೋಗಳನ್ನು ಮಾಡುತ್ತಿದ್ದ, ಇವುಗಳು ಸಾಕಷ್ಟು ವೈರಲ್ ಆಗುತ್ತಿದ್ದವು. ಅಲ್ಲದೇ ಈತ ತನ್ನ ಆದಾಯಕ್ಕೆ ಸಂಬಂಧಿಸಿದಂತೆ ತೆರಿಗೆಯನ್ನು ಕಟ್ಟಿದ್ದಾನೆ ಎಂದು ಈತನ ಸಹೋದರ ಫಿರೋಜ್ ಹೇಳಿದ್ದಾರೆ. ತನ್ನ ಸಹೋದರ ಟ್ರೆಡಿಂಗ್ ಹಬ್ 3.0 ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.
15 ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌ಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್!
ಆತ ಈಗಾಗಲೇ ಯೂಟ್ಯೂಬ್‌ನಿಂದ ಬಂದ 1.2 ಕೋಟಿ ಆದಾಯಕ್ಕೆ ಸಂಬಂಧಿಸಿದಂತೆ 4 ಲಕ್ಷ ರೂಪಾಯಿ ತೆರಿಗೆ ಕಟ್ಟಿದ್ದಾನೆ. ನಾವು ಯಾವುದೇ ತಪ್ಪು ಕೆಲಸ ಮಾಡಿಲ್ಲ, ಯೂಟ್ಯೂಬ್‌ನಿಂದ ಬರುತ್ತಿರುವ ಆದಾಯದಿಂದಲೇ ಅದನ್ನು ನಡೆಸುತ್ತಿದ್ದೇವೆ. ಆದಾಯ ತೆರಿಗೆ ಇಲಾಖೆಯ ಈ ದಾಳಿ ಒಂದು ದೊಡ್ಡ ಪಿತೂರಿ ಎಂದು ಫಿರೋಜ್ ದೂರಿದ್ದಾರೆ. ತನ್ನ ಮಗನನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಆತ ಏನೂ ತಪ್ಪು ಮಾಡಿಲ್ಲ ಎಂದು ತಸ್ಲಿಮ್‌ನ ತಾಯಿ ಕೂಡ ಅಳಲು ತೋಡಿಕೊಂಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.