
ನವದೆಹಲಿ (ಜು.17): ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಗಡುವನ್ನು ಜುಲೈ 31ರ ನಂತರ ವಿಸ್ತರಿಸುವ ಯಾವುದೇ ಯೋಚನೆಯನ್ನು ಹಣಕಾಸು ಸಚಿವಾಲಯ ಮಾಡಿಲ್ಲ. ಹೀಗಾಗಿ ಆದಷ್ಟು ಬೇಗ ಐಟಿಆರ್ ಸಲ್ಲಿಕೆ ಮಾಡುವಂತೆ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರ ತೆರಿಗೆದಾರರಲ್ಲಿ ಮನವಿ ಮಾಡಿದ್ದಾರೆ. ಇನ್ನು ಐಟಿಆರ್ ಸಲ್ಲಿಕೆ ಈ ವರ್ಷ ಕಳೆದ ಬಾರಿಗಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. 2022-23ನೇ ಮೌಲ್ಯಮಾಪನ ವರ್ಷಕ್ಕೆ ಕಳೆದ ವರ್ಷ ಜುಲೈ 31ರಂದು ಸುಮಾರು 5.83 ಕೋಟಿ ಐಟಿಆರ್ ಗಳು ಸಲ್ಲಿಕೆಯಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಐಟಿಆರ್ ಸಲ್ಲಿಕೆ ಇನ್ನಷ್ಟು ವೇಗ ಪಡೆದುಕೊಂಡಿದೆ. ಐಟಿಆರ್ ಸಲ್ಲಿಕೆ ಅಂತಿಮ ಗಡುವು ವಿಸ್ತರಣೆಯಾಗುವ ಸಾಧ್ಯತೆ ಕಡಿಮೆಯಿರುವುದರಿಂದ ಈ ಬಗ್ಗೆ ಯಾವುದೇ ಭರವಸೆ ಬೇಡ. ಹಾಗೆಯೇ ಈ ತನಕ ಐಟಿಆರ್ ಸಲ್ಲಿಕೆ ಮಾಡದವರು ಕೊನೆಯ ಕ್ಷಣದ ತನಕ ಕಾಯದೆ ಆದಷ್ಟು ಬೇಗ ಸಲ್ಲಿಕೆ ಮಾಡುವಂತೆ ಅವರು ಸಲಹೆ ನೀಡಿದ್ದಾರೆ. ತೆರಿಗೆ ಸಂಗ್ರಹಣೆ ಗುರಿಯನ್ನು ಪರಿಗಣಿಸಿದರೆ ಉತ್ತಮವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹ ಪ್ರಗತಿ ದರ ಈ ತನಕ ಶೇ.12ರಷ್ಟಿದೆ. ಆದರೆ, ಅಬಕಾರಿ ಸುಂಕ ಸಂಗ್ರಹದಲ್ಲಿ ನಿಗದಿತ ಪ್ರಗತಿ ದರ ಶೇ.12ಕ್ಕಿಂತ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಅಬಕಾರಿ ಸುಂಕ ಸಂಗ್ರಹದಲ್ಲಿ ಕೂಡ ಸ್ವಲ್ಪ ಮಟ್ಟಿನ ಏರಿಕೆಯಾಗುವ ನಿರೀಕ್ಷೆಯಿದೆ. ಒಟ್ಟಾರೆ ತೆರಿಗೆ ಸಂಗ್ರಹದ ಬಗ್ಗೆ ಈಗ ಮಾತನಾಡೋದು ಬೇಗ ಅನಿಸಿದರೂ ನಾವು ಗುರಿಯನ್ನು ತಲುಪಬಲ್ಲೆವು ಎಂಬ ನಂಬಿಕೆಯಿದೆ ಎಂದು ಸಂಜಯ್ ಮಲ್ಹೋತ್ರ ತಿಳಿಸಿದ್ದಾರೆ.
Income Tax Return: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ವೇಳೆ ಈ ವಿಷ್ಯ ಗಮನದಲ್ಲಿರಲಿ!
2023-24ನೇ ಸಾಲಿನ ಬಜೆಟ್ ಅನ್ವಯ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸರ್ಕಾರ ಒಟ್ಟು 33.61 ಲಕ್ಷ ಕೋಟಿ ರೂ. ನಿವ್ವಳ ತೆರಿಗೆ ಸಂಗ್ರಹಿಸುವ ನಿರೀಕ್ಷೆಯಿದೆ. ಇನ್ನು ಸರ್ಕಾರ 18.23 ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಇದು ಕಾರ್ಪೋರೇಟ್ ಹಾಗೂ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹಕ್ಕಿಂತ ಶೇ.10.5ರಷ್ಟು ಅಧಿಕ. 2023ನೇ ಆರ್ಥಿಕ ಸಾಲಿನ ಪರಿಷ್ಕೃತ ಅಂದಾಜಿನ ಪ್ರಕಾರ ಅಬಕಾರಿ ಸುಂಕದ ಸಂಗ್ರಹ ಶೇ.11ರಷ್ಟು ಏರಿಕೆ ಕಂಡು 2.10ಲಕ್ಷ ಕೋಟಿ ರೂ.ನಿಂದ 2.33 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಇನ್ನು ಜಿಎಸ್ ಟಿ ಸಂಗ್ರಹ ಶೇ.12ರಷ್ಟು ಏರಿಕೆ ಕಂಡು ಮುಂದಿನ ಹಣಕಾಸು ಸಾಲಿನಲ್ಲಿ 9.56ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗುವ ನಿರೀಕ್ಷೆಯಿದೆ.
ನೇರ ಹಾಗೂ ಪರೋಕ್ಷ ತೆರಿಗೆಗಳನ್ನು ಪರಿಗಣಿಸಿದರೆ ಒಟ್ಟು ತೆರಿಗೆ ಸಂಗ್ರಹ ಶೇ.10.45ರಷ್ಟು ಬೆಳವಣಿಗೆ ದಾಖಲಿಸುವ ನಿರೀಕ್ಷೆಯಿದೆ. ಕಳೆದ ಹಣಕಾಸು ಸಾಲಿಗೆ ಹೋಲಿಸಿದರೆ 2023-24ನೇ ಸಾಲಿನಲ್ಲಿ 33.61ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗುವ ನಿರೀಕ್ಷೆಯಿದೆ.
ITR Filing: ಅಧಿಕ ತೆರಿಗೆ ರೀಫಂಡ್ ಪಡೆಯಲು ಈ 5 ಟಿಪ್ಸ್ ಅನುಸರಿಸಿ
ತೆರಿಗೆ ರೀಫಂಡ್ ಗೆ ಎಷ್ಟು ಸಮಯ ಬೇಕು?
ಸಾಮಾನ್ಯವಾಗಿ ಐಟಿಆರ್ ಸಲ್ಲಿಕೆ ಮಾಡಿ ಸಮಯಕ್ಕೆ ಸರಿಯಾಗಿ ಅದರ ಪರಿಶೀಲನೆ ನಡೆದ ಬಳಿಕ ತೆರಿಗೆ ರೀಫಂಡ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ 20-45 ದಿನಗಳು ಬೇಕಾಗುತ್ತವೆ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಮುಖ್ಯಸ್ಥ ನಿತಿನ್ ಗುಪ್ತ ಅವರ ಹೇಳಿಕೆ ಪ್ರಕಾರ ಆದಾಯ ತೆರಿಗೆ ಇಲಾಖೆ ರೀಫಂಡ್ ಮಾಡಲು ತೆಗೆದುಕೊಳ್ಳುವ ಸಮಯದ ಅವಧಿಯಲ್ಲಿ ಈಗ ಗಮನಾರ್ಹ ಇಳಿಕೆಯಾಗಿದೆ. 2022-23ನೇ ಸಾಲಿನಲ್ಲಿ ಐಟಿಆರ್ ಫೈಲ್ ಮಾಡಿದ ಮೊದಲ 30 ದಿನಗಳಲ್ಲಿ ಶೇ.80ರಷ್ಟು ರೀಫಂಡ್ ನೀಡಲಾಗಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.