ಫ್ಯೂಚರ್ ಆಂಡ್ ಆಪ್ಷನ್ ಜೂಜಿಗೆ ಲಗಾಮು ಹಾಕಿದ ಸೀತಾರಾಮನ್

By Kannadaprabha News  |  First Published Jul 24, 2024, 7:44 AM IST

2019ರ ಮಾರ್ಚ್‌ನಲ್ಲಿ 271 ಲಕ್ಷ ಕೋಟಿ ರು.ನಷ್ಟಿದ್ದ ಮಾಸಿಕ ಫ್ಯೂಚರ್‌ ಅಂಡ್‌ ಆಪ್ಷನ್‌ ವಹಿವಾಟು, 2024ರ ಮಾರ್ಚ್‌ನಲ್ಲಿ 8740 ಲಕ್ಷ ಕೋಟಿ ರು.ಗೆ ಏರಿಕೆಯಾಗಿತ್ತು. ಈ ವಹಿವಾಟಿನಲ್ಲಿ ಹಣ ತೊಡಗಿಸಿದ ಶೇ.89ರಷ್ಟು ಚಿಲ್ಲರೆ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ.


ನವದೆಹಲಿ (ಜು.24): ಷೇರುಪೇಟೆಯಲ್ಲಿ ದಿಢೀರ್‌ ಲಾಭ ಗಳಿಸುವ ವ್ಯಾಮೋಹಕ್ಕೆ ಒಳಗಾಗಿ ಫ್ಯೂಚರ್ ಅಂಡ್ ಆಪ್ಷನ್ಸ್‌ ವಹಿವಾಟಿನಲ್ಲಿ ಉಳಿತಾಯದ ಹಣ, ಸಾಲದಿಂದ ಹೊಂದಿಸಿದ ಹಣವನ್ನು ತೊಡಗಿಸಿ ನಷ್ಟ ಅನುಭವಿಸಿ ಜನರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳ ಬೆನ್ನಲ್ಲೇ ಇಂತಹ ವಹಿವಾಟಿಗೆ ಕೇಂದ್ರ ಸರ್ಕಾರ ಲಗಾಮು ಹಾಕಿದೆ.

ಫ್ಯೂಚರ್‌ ಅಂಡ್‌ ಆಪ್ಷನ್ಸ್ ವಹಿವಾಟಿನ ಮೇಲೆ ವಿಧಿಸಲಾಗುವ ಸೆಕ್ಯುರಿಟಿ ಟ್ರಾನ್ಸಾಕ್ಷನ್‌ ಟ್ಯಾಕ್ಸ್ (ಎಸ್‌ಟಿಟಿ) ಅನ್ನು ಏರಿಕೆ ಮಾಡುವ ಮೂಲಕ ಸಣ್ಣ ಹೂಡಿಕದಾರರು ಅತ್ಯಂತ ಅಪಾಯಕಾರಿಯಾದ ಈ ಹೂಡಿಕೆಯಲ್ಲಿ ತೊಡಗದಂತೆ ವಿಮುಖಗೊಳಿಸುವ ಕಸರತ್ತನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಮಾಡಿದ್ದಾರೆ.

Latest Videos

undefined

ಷೇರುಪೇಟೆಯ ಆಪ್ಷನ್‌ ಮಾರಾಟದ ಮೇಲೆ ಇರುವ 0.0625% ತೆರಿಗೆಯನ್ನು 0.1%ಕ್ಕೆ ಹಾಗೂ ಫ್ಯೂಚರ್‌ ಮಾರಾಟದ ಮೇಲೆ ಇರುವ ತೆರಿಗೆಯನ್ನು 0.0125%ರಿಂದ 0.02%ಕ್ಕೆ ಏರಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವೆ ಹೇಳಿದ್ದಾರೆ. ಇದು ಅ.1ರಿಂದ ಜಾರಿಗೆ ಬರಲಿದೆ.

ಷೇರು ಮಾರುಕಟ್ಟೆ ಗೂಳಿ ಭರ್ಜರಿ ಓಟ; ಕೈಕೊಟ್ಟ Groww, Zerodha, ಲಾಭ ತಪ್ಪಿಸಿಕೊಂಡ ಹೂಡಿಕೆದಾರ!

ಚಿಲ್ಲರೆ ಹೂಡಿಕೆದಾರರು ಫ್ಯೂಚರ್‌ ಅಂಡ್‌ ಆಪ್ಷನ್‌ ವಹಿವಾಟಿನತ್ತ ಆಕರ್ಷಿತರಾಗುತ್ತಿರುವ ಬಗ್ಗೆ ಸೋಮವಾರ ಮಂಡನೆಯಾದ ಹಣಕಾಸು ಸಮೀಕ್ಷಾ ವರದಿಯಲ್ಲಿ ಅತೀವ ಕಳವಳ ವ್ಯಕ್ತಪಡಿಸಲಾಗಿತ್ತು. ಮಾನವ ಜೂಜಿನ ಪ್ರವೃತ್ತಿಯಿಂದಾಗಿ ಇಂತಹ ವಹಿವಾಟು ಹೆಚ್ಚಾಗುತ್ತಿರಬಹುದು ಎಂದೂ ಹೇಳಿತ್ತು. ಹಲವು ತಜ್ಞರು ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದರು.

8740 ಲಕ್ಷ ಕೋಟಿ ರು. ವ್ಯವಹಾರ

ಗಮನಾರ್ಹ ಎಂದರೆ, 2019ರ ಮಾರ್ಚ್‌ನಲ್ಲಿ 271 ಲಕ್ಷ ಕೋಟಿ ರು.ನಷ್ಟಿದ್ದ ಮಾಸಿಕ ಫ್ಯೂಚರ್‌ ಅಂಡ್‌ ಆಪ್ಷನ್‌ ವಹಿವಾಟು, 2024ರ ಮಾರ್ಚ್‌ನಲ್ಲಿ 8740 ಲಕ್ಷ ಕೋಟಿ ರು.ಗೆ ಏರಿಕೆಯಾಗಿತ್ತು. ಈ ವಹಿವಾಟಿನಲ್ಲಿ ಹಣ ತೊಡಗಿಸಿದ ಶೇ.89ರಷ್ಟು ಚಿಲ್ಲರೆ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ. 2022ರಲ್ಲಿ ಈ ನಷ್ಟ ಸರಾಸರಿ 1.1 ಲಕ್ಷ ರು.ನಷ್ಟಿದೆ ಎಂದು ಸೆಬಿಯ ಅಧ್ಯಯನ ವರದಿ ತಿಳಿಸಿತ್ತು.

News Hour: 4 ವರ್ಗಗಳಿಗೆ ಬಜೆಟ್​ ಜಾಕ್​ಪಾಟ್, ತೆರಿಗೆದಾರರಿಗೆ ಸ್ವಲ್ಪ ರಿಲೀಫ್​..!

ತೆರಿಗೆ ಹೆಚ್ಚಳ

ಷೇರು ಮಾರುಕಟ್ಟೆಯಲ್ಲಿ ದಿಢೀರ್‌ ಹಣ ಮಾಡುವ ಆಸೆಯೊಂದಿಗೆ ಹಲವಾರು ಸಣ್ಣ ಹೂಡಿಕೆದಾರರು ತಮ್ಮ ಉಳಿತಾಯ ಹಣವನ್ನು ತೆಗೆದು, ಹೊರಗಡೆಯಿಂದ ಸಾಲ ಮಾಡಿದ ಹಣ ತೊಡಗಿಸಿದ, ಬಳಿಕ ನಷ್ಟ ಅನುಭವಿಸಿ ಊರು ತೊರೆದ ಅಥವಾ ಆತ್ಮಹತ್ಯೆಗೆ ಶರಣಾದ ಬಗ್ಗೆಯೂ ಸಾಲು ಸಾಲು ವರದಿಗಳು ಬಂದಿದ್ದವು. ಇದರ ಬೆನ್ನಲ್ಲೇ ಸರ್ಕಾರ ಇಂತಹ ವಹಿವಾಟಿಗೆ ಕಡಿವಾಣ ಹಾಕಲು ತೆರಿಗೆ ಹೆಚ್ಚಳ ಮಾಡಿದೆ.

click me!