ನಕ್ಷತ್ರಗಳ ಹಾದಿಗೆ ಸಾಗಲು ಬಜೆಟ್ 2024-25 ನೆರವು: ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗೆ 1 ಸಾವಿರ ಕೋಟಿ ನಿಧಿ

By Suvarna News  |  First Published Jul 23, 2024, 5:38 PM IST

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೊಡುಗೆ ಅಪಾರ. ಇಲ್ಲಿ ಖಾಸಗಿ ವಲಯಕ್ಕೂ ಆದ್ಯತೆ ನೀಡುವ ಸಲುವಾಗಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹಲವು ಯೋಜನೆಗಳನ್ನು ಘೋಷಿಸಿದ್ದು, ಏನೇನಿವೆ ಇಲ್ಲಿ ನೋಡಿ. 


ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತದ ಬಾಹ್ಯಾಕಾಶ ಆರ್ಥಿಕತೆ (Indian Space Economy) ಪ್ರಸ್ತುತ 8.4 ಬಿಲಿಯನ್ ಡಾಲರ್ (68,000 ಕೋಟಿ ರೂಪಾಯಿ) ಮೌಲ್ಯ ಹೊಂದಿದ್ದು, ಇದು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯ 2-3% ಪಾಲಷ್ಟಿದೆ. ಭಾರತ 2033ರ ವೇಳೆಗೆ ತನ್ನ ಬಾಹ್ಯಾಕಾಶ ಮಾರುಕಟ್ಟೆ 44 ಬಿಲಿಯನ್ ಡಾಲರ್ (352,000 ಕೋಟಿ) ಮೌಲ್ಯ ಹೊಂದಲಿದೆ ಎಂದು ಅಂದಾಜಿಸಿದೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಜುಲೈ 23, ಮಂಗಳವಾರದಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಭಾರತದ ಬಾಹ್ಯಾಕಾಶ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸಲು 1,000 ಕೋಟಿ ರೂ. ವೆಂಚರ್ ಕ್ಯಾಪಿಟಲ್‌ಗೆ ನೆರವು ಘೋಷಿಸಿದ್ದಾರೆ.

Tap to resize

Latest Videos

undefined

ಭಾರತದ ಬಾಹ್ಯಾಕಾಶ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಈಗ ಭಾರತದ ಖಾಸಗಿ ವಲಯ ಮುಖ್ಯ ಸ್ಥಾನ ವಹಿಸಲಿದೆ. ಖಾಸಗಿ ಕಂಪನಿಗಳು ಮುಂದಿನ ದಿನಗಳಲ್ಲಿ ಉಪಗ್ರಹ ಉತ್ಪಾದನೆ, ಉಡಾವಣಾ ವಾಹನ ನಿರ್ಮಾಣ, ಉಪಗ್ರಹ ಸೇವೆ ಮತ್ತು ಭೂ ಆಧಾರಿತ ಸೇವೆಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಭಾರತ ಸರ್ಕಾರ ತನ್ನ ಬಾಹ್ಯಾಕಾಶ ಆರ್ಥಿಕತೆಯನ್ನು ಬಲಪಡಿಸಲು ಖಾಸಗಿ ಭಾಗವಹಿಸುವಿಕೆಗೆ ಉತ್ತೇಜಿಸಲಿದೆ. 

2023ರಲ್ಲಿ, ಭಾರತೀಯ ಬಾಹ್ಯಾಕಾಶ ಸ್ಟಾರ್ಟಪ್‌ಗಳ ಹೂಡಿಕೆಗಳು 124.7 ಮಿಲಿಯನ್ ಡಾಲರ್‌ಗೆ ಹೆಚ್ಚಳ ಕಂಡವು. ಇದು ಭಾರತೀಯ ಬಾಹ್ಯಾಕಾಶ ವಲಯದ ಕುರಿತು ಹೆಚ್ಚಾದ ಆಸಕ್ತಿ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿತ್ತು. ಇದಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿವಿಧ ಯೋಜನೆಗಳಲ್ಲಿ ಯಶಸ್ವಿಯಾಗಿದ್ದು ಮುಖ್ಯ ಕಾರಣವಾಗಿತ್ತು. 2047ರ ವೇಳೆಗೆ ಭಾರತ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ 15% ಪಾಲು ಹೊಂದುವ ಗುರಿ ಹಾಕಿಕೊಂಡಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವರಾದ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಇಸ್ರೋದ ಚಂದ್ರಯಾನ 3 ಮೈಲಿಗಲ್ಲಿಗೆ ಐಎಸ್ ಫೆಡರೇಶನ್‌ನಿಂದ ವಿಶ್ವ ಬಾಹ್ಯಾಕಾಶ ಪ್ರಶಸ್ತಿ ಗರಿ!

2023-24 ಆರ್ಥಿಕ ಸಮೀಕ್ಷೆಯ ಒಳನೋಟಗಳು
2023-24ರ ಆರ್ಥಿಕ ಸಮೀಕ್ಷೆ ಸೋಮವಾರ ಬಿಡುಗಡೆಯಾಗಿದ್ದು, ಭಾರತದ ಬಳಿ ಪ್ರಸ್ತುತ 55 ಸಕ್ರಿಯ ಬಾಹ್ಯಾಕಾಶ ಆಸ್ತಿಗಳಿವೆ ಎಂದು ವರದಿ ಮಾಡಿದೆ. ಇವುಗಳಲ್ಲಿ ಸಂವಹನ ಉಪಗ್ರಹಗಳು, ಸಂಚರಣ (ನ್ಯಾವಿಗೇಶನ್) ಉಪಗ್ರಹಗಳು, ವೈಜ್ಞಾನಿಕ ಉಪಗ್ರಹಗಳು, ಹವಾಮಾನ ಅಧ್ಯಯನ ಉಪಗ್ರಹಗಳು, ಮತ್ತು ಭೂವೀಕ್ಷಣಾ ಉಪಗ್ರಹಗಳಿವೆ. ಈ ಉಪಗ್ರಹಗಳು ಸಂವಹನ ನಡೆಸಲು, ಹವಾಮಾನ ಮುನ್ಸೂಚನೆ ನೀಡಲು, ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಲು, ಮತ್ತು ಇತರ ಹತ್ತು ಹಲವು ಉದ್ದೇಶಗಳಿಗೆ ಅವಶ್ಯಕವಾಗಿವೆ.

ಜನವರಿ 2024ರ ವೇಳೆಗೆ, 300ಕ್ಕೂ ಹೆಚ್ಚು ಭಾರತೀಯ ಸಂಸ್ಥೆಗಳು ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್‌ಗೆ (ಇನ್-ಸ್ಪೇಸ್ IN-SPACe) ಬಾಹ್ಯಾಕಾಶ ವಲಯದಲ್ಲಿ ವಿವಿಧ ಯೋಜನೆಗಳಿಗೆ ನೆರವು ನೀಡುವಂತೆ 440ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದವು. ಅದರೊಡನೆ, ಸರ್ಕಾರೇತರ ಸಂಸ್ಥೆಗಳು ಬಾಹ್ಯಾಕಾಶ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 51 ಮೆಮೊರಂಡಮ್ ಆಫ್ ಅಂಡರ್ಸ್ಟಾಂಡಿಂಗ್ (MoU) ಮತ್ತು 34 ಜಂಟಿ ಯೋಜನೆಗಳಿಗೆ ಸಹಿ ಹಾಕಿದ್ದವು.

ಬಾಹ್ಯಾಕಾಶ ಆರ್ಥಿಕತೆ: ಸ್ಟಾರ್ಟಪ್‌- ಖಾಸಗಿ ಪಾಲ್ಗೊಳ್ಳುವಿಕೆ
 ಬಾಹ್ಯಾಕಾಶ ವಲಯದಲ್ಲಿನ ಸುಧಾರಣೆಗಳ ಜಾರಿಯ ಕಾರಣದಿಂದ, ಭಾರತದ ಬಾಹ್ಯಾಕಾಶ ಸ್ಟಾರ್ಟಪ್‌ಗಳು ಭಾರೀ ಸಂಖ್ಯೆಯ ಹೆಚ್ಚಳ ಕಂಡಿವೆ. 2022ರಲ್ಲಿ ಭಾರತದಲ್ಲಿ ಕೇವಲ 1 ಬಾಹ್ಯಾಕಾಶ ಸ್ಟಾರ್ಟಪ್ ಸಂಸ್ಥೆ ಇದ್ದು, ಈ ವರ್ಷ 200ಕ್ಕೂ ಹೆಚ್ಚು ಸ್ಟಾರ್ಟಪ್ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಪಿಕ್ಸೆಲ್ ಸ್ಪೇಸ್, ದಿಗಂತಾರಾ, ಧ್ರುವ ಸ್ಪೇಸ್, ಅಜಿ಼ಸ್ತಾ ಬಿಎಸ್‌ಟಿ ಏರೋಸ್ಪೇಸ್, ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಗಳು ಈಗಾಗಲೇ ಉಪಗ್ರಹಗಳು ಮತ್ತು ಬಾಹ್ಯಾಕಾಶದಲ್ಲಿ ಕಾರ್ಯಾಚರಿಸುವ ಪೇಲೋಡ್‌ಗಳನ್ನು ನಿರ್ಮಿಸಿವೆ.

ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿಗಳು) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಲಾರ್ಸನ್ ಆ್ಯಂಡ್ ಟೂಬ್ರೊಗಳಿಗೆ ಐದು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ಗಳನ್ನು (ಪಿಎಸ್ಎಲ್‌ವಿ) ನಿರ್ಮಿಸುವ ಸಂಪೂರ್ಣ ಕಾರ್ಯ ವಹಿಸಲಾಗಿದೆ. ಈ ಸಹಭಾಗಿತ್ವ ಭಾರತದ ಉಪಗ್ರಹ ಉಡಾವಣಾ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದೆ. ಅದರೊಡನೆ, ಇಸ್ರೋ ತನ್ನ ಉಡಾವಣಾ ವಾಹನ ಬಳಗವನ್ನು ವಿಸ್ತರಿಸಿದ್ದು, ಈಗಾಗಲೇ ಬಳಕೆಯಲ್ಲಿದ್ದ ಪಿಎಸ್ಎಲ್‌ವಿ ಮತ್ತು ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ಗಳ ಜೊತೆಗೆ, ಲಾಂಚ್ ವೆಹಿಕಲ್ ಮಾರ್ಕ್-3 ಹಾಗೂ ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ಗಳನ್ನು ಸೇರ್ಪಡೆಗೊಳಿಸಿದೆ.

ಚಂದ್ರನಲ್ಲಿ ಬೃಹತ್ ಆಕಾರದ ಗುಹೆ ಪತ್ತೆ, ಮನುಷ್ಯರ ವಾಸಕ್ಕೆ ಈ ಜಾಗ ಬೆಸ್ಟ್ ಅಂತೆ!

ಬಜೆಟ್ 2024: ಸಾಹಸೋದ್ಯಮ ಬಂಡವಾಳದ ಪಾತ್ರ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಕೇಂದ್ರ ಬಜೆಟ್ ಭಾಷಣದ ಸಂದರ್ಭದಲ್ಲಿ 1,000 ಕೋಟಿ ರೂಪಾಯಿಗಳ ವೆಂಚರ್ ಕ್ಯಾಪಿಟಲ್ ನೆರವು ಘೋಷಿಸಿರುವುದು ಭಾರತದ ಬಾಹ್ಯಾಕಾಶ ಆರ್ಥಿಕತೆಗೆ ಮಹತ್ತರ ಹೆಜ್ಜೆಯಾಗಿದೆ.

ಈ ಕ್ರಮ ಭಾರತದ ಬಾಹ್ಯಾಕಾಶ ವಲಯಕ್ಕೆ ಅವಶ್ಯಕ ಉತ್ತೇಜನ ನೀಡುವ ಗುರಿ ಹೊಂದಿದ್ದು, ಮುಂದಿನ ಐದು ವರ್ಷಗಳಲ್ಲಿ ಬಾಹ್ಯಾಕಾಶ ಉದ್ಯಮವನ್ನು ಐದು ಪಟ್ಟು ಹೆಚ್ಚು ಅಭಿವೃದ್ಧಿ ಹೊಂದುವಂತೆ ಮಾಡುವ ಉದ್ದೇಶ ಹೊಂದಿದೆ.

ಇದರಿಂದ ಉಂಟಾಗುವ ಪ್ರಯೋಜನಗಳೇನು ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸೋಣ:

ರಾಮಸೇತುವಿನ ಮತ್ತಷ್ಟು ರಹಸ್ಯ ಬಿಚ್ಚಿಟ್ಟ ಇಸ್ರೋ!

1. ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಉತ್ತೇಜನ
ನಾವೀನ್ಯತೆಗೆ (Innovation) ಪ್ರೋತ್ಸಾಹ: ಸರ್ಕಾರ ಘೋಷಿಸಿರುವ ನಿಧಿ ಸಂಶೋಧನೆಗಳಿಗೆ, ಹೊಸ ಆಲೋಚನೆಗಳಿಗೆ ಉತ್ತೇಜಿಸುವ ಮತ್ತು ಖಾಸಗಿ ವಲಯದ ನೇತೃತ್ವದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಉದ್ಯಮ ಅಭಿವೃದ್ಧಿ ನಡೆಸುವ ಗುರಿ ಹೊಂದಿದೆ. ಸರ್ಕಾರ ಭಾರತವನ್ನು ಜಾಗತಿಕ ಬಾಹ್ಯಾಕಾಶ ಉದ್ಯಮದಲ್ಲಿ ಪ್ರಮುಖ ಶಕ್ತಿಯನ್ನಾಗಿಸುವ ದೂರಾಲೋಚನೆ ಹೊಂದಿದ್ದು, ಈ ಕ್ರಮ ಸರ್ಕಾರದ ಉದ್ದೇಶಕ್ಕೆ ಪೂರಕವಾಗಿದೆ.

ಸ್ಟಾರ್ಟಪ್‌ಗಳಿಗೆ ಬೆಂಬಲ: ಸರ್ಕಾರ ಒದಗಿಸುವ ನಿಧಿಯಿಂದ, ಈಗಾಗಲೇ ಸರ್ಕಾರ ಗುರುತಿಸಿರುವ 180ಕ್ಕೂ ಹೆಚ್ಚು ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್‌ಗಳಿಗೆ ಪ್ರಯೋಜನವಾಗಲಿದೆ. ಭಾರತೀಯ ಬಾಹ್ಯಾಕಾಶ ಸ್ಟಾರ್ಟಪ್‌ಗಳು ಅವಶ್ಯಕ ಹೂಡಿಕೆ ಪಡೆಯಲು ಕಷ್ಟಪಡುತ್ತಿದ್ದು, ಸರ್ಕಾರ ಒದಗಿಸಿರುವ ಈ ನಿಧಿ ಅವುಗಳ ಸಮಸ್ಯೆ ನಿವಾರಿಸಲು ಪೂರಕವಾಗಿದೆ.

2. ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ
ಉನ್ನತ ಕೌಶಲಗಳ ಉದ್ಯೋಗ: ಬಾಹ್ಯಾಕಾಶ ಆರ್ಥಿಕತೆಯ ಅಭಿವೃದ್ಧಿಯಿಂದಾಗಿ, ಸಾಕಷ್ಟು ಉನ್ನತ ಮಟ್ಟದ ಕೌಶಲಗಳ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಉದ್ಯೋಗಗಳು ಒಟ್ಟಾರೆ ಆರ್ಥಿಕತೆಗೆ ಉತ್ತೇಜನ ನೀಡಲಿವೆ.

ಇತರ ಕ್ಷೇತ್ರಗಳ ಮೇಲೆ ಪರಿಣಾಮ: ಬಾಹ್ಯಾಕಾಶ ತಂತ್ರಜ್ಞಾನದ ಮೇಲೆ ಹೂಡಿಕೆ ನಡೆಸುವುದರಿಂದ, ದೂರಸಂಪರ್ಕ, ಕೃಷಿ, ಮತ್ತು ವಿಕೋಪ ನಿರ್ವಹಣೆಯಂತಹ ಕ್ಷೇತ್ರಗಳಿಗೂ ಪ್ರಯೋಜನವಾಗಲಿದೆ. ಇದರಿಂದ ಜನರಿಗೆ ಹೆಚ್ಚು ಹೆಚ್ಚು ಅವಕಾಶಗಳು ಸೃಷ್ಟಿಯಾಗಲಿವೆ.

3. ತಾಂತ್ರಿಕ ಅಭಿವೃದ್ಧಿ
ಅತ್ಯಾಧುನಿಕ ತಂತ್ರಜ್ಞಾನಗಳು: ಸರ್ಕಾರ ಒದಗಿಸುವ ನಿಧಿ ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು, ಭಾರತದ ಉಪಗ್ರಹ ಸೇವಾ ಸಾಮರ್ಥ್ಯ ವೃದ್ಧಿಸಲು, ಸಂವಹನ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶ ಅನ್ವೇಷಣೆಯನ್ನು ಉತ್ತಮಪಡಿಸಲು ನೆರವಾಗಲಿದೆ.

ಜಾಗತಿಕ ಸ್ಪರ್ಧಾತ್ಮಕತೆ: ನಾವೀನ್ಯತೆ ಮತ್ತು ತಂತ್ರಜ್ಞಾನಗಳನ್ನು ಪ್ರಚಾರಪಡಿಸುವುದರಿಂದ, ಭಾರತ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಬಹುದು.

4. ಮೂಲಭೂತ ವ್ಯವಸ್ಥೆ ಮತ್ತು ಸುಸ್ಥಿರ ಅಭಿವೃದ್ಧಿ
ಮೂಲಭೂತ ವ್ಯವಸ್ಥೆಗಳ ವೃದ್ಧಿ: ಒಂದು ಸಾವಿರ ಕೋಟಿ ರೂ. ಭಾರೀ ಮೊತ್ತದ ನಿಧಿಯನ್ನು ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಗೆ ಅವಶ್ಯಕವಾದ ಮೂಲಭೂತ ವ್ಯವಸ್ಥೆಗಳ ನಿರ್ಮಾಣಕ್ಕೂ ಬಳಸಲಾಗುತ್ತದೆ.

ಸುಸ್ಥಿರ ಅಭಿವೃದ್ಧಿ: ಸರ್ಕಾರದ ಯೋಜನೆ ಸುಸ್ಥಿರ ಅಭಿವೃದ್ಧಿಯನ್ನೂ ಗಮನದಲ್ಲಿಟ್ಟುಕೊಂಡಿದ್ದು, ಬಾಹ್ಯಾಕಾಶ ವಲಯವನ್ನು ಪರಿಸರ ಸ್ನೇಹಿ ರೀತಿಯಲ್ಲೇ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದೆ.

5. ಸಹಯೋಗದ ಪ್ರಯತ್ನಗಳು
ಸರ್ಕಾರ ಮತ್ತು ಖಾಸಗಿ ವಲಯದ ಸಹಭಾಗಿತ್ವ: ಸರ್ಕಾರ ಒದಗಿಸುವ ನಿಧಿ ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಮತ್ತು ಖಾಸಗಿ ಸಂಸ್ಥೆಗಳು ಒಂದು ತಂಡವಾಗಿ ಕಾರ್ಯಾಚರಿಸಲು ಉತ್ತೇಜನ ನೀಡಲಿದೆ. ಸಂಕೀರ್ಣ ಬಾಹ್ಯಾಕಾಶ ಯೋಜನೆಗಳನ್ನು ಯಶಸ್ವಿಯಾಗಿ ನೆರವೇರಿಸಲು ಈ ಸಹಯೋಗ ಅತ್ಯವಶ್ಯಕವಾಗಿದೆ.

ಅಂತರಿಕ್ಷದಲ್ಲೇ ಉಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್: ಭೂಮಿಗಿಂತ ವಿಭಿನ್ನ ವಾತಾವರಣ..ಎದುರಾಗಲಿದೆ ಆರೋಗ್ಯ ಸಮಸ್ಯೆ!

ಇನ್-ಸ್ಪೇಸ್ (IN-SPACe) ಮತ್ತು ಒಪ್ಪಂದಗಳು: ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್ (ಇನ್-ಸ್ಪೇಸ್) ವಿವಿಧ ಬಾಹ್ಯಾಕಾಶ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 440ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಇನ್-ಸ್ಪೇಸ್ ಈಗಾಗಲೇ ಖಾಸಗಿ ಸಂಸ್ಥೆಗಳೊಡನೆ 51 ಒಪ್ಪಂದಗಳು 34 ಜಂಟಿ ಯೋಜನೆಗಳಿಗೆ ಸಹಿ ಹಾಕಿದೆ.

6. ಕಾರ್ಯತಂತ್ರದ ಪ್ರಾಮುಖ್ಯತೆ
ರಾಷ್ಟ್ರೀಯ ಭದ್ರತೆ: ಬಾಹ್ಯಾಕಾಶ ವಲಯವನ್ನು ಅಭಿವೃದ್ಧಿ ಪಡಿಸುವುದರಿಂದ, ಭಾರತದ ಬಾಹ್ಯಾಕಾಶ ಆಧಾರಿತ ಕಣ್ಗಾವಲು ಸಾಮರ್ಥ್ಯ ಮತ್ತು ಸಂವಹನ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದಾಗಿ ಬಾಹ್ಯಾಕಾಶ ವಲಯದ ಅಭಿವೃದ್ಧಿ ರಾಷ್ಟ್ರೀಯ ಭದ್ರತೆಯನ್ನೂ ಹೆಚ್ಚಿಸುತ್ತದೆ.

ಜಾಗತಿಕ ನಾಯಕತ್ವ: ಇತ್ತೀಚೆಗೆ ಭಾರತದ ಚಂದ್ರಯಾನ-3 ಚಂದ್ರ ಅನ್ವೇಷಣಾ ಯೋಜನೆಯಂತಹ ಮಹತ್ವದ ಯೋಜನೆಗಳು ಯಶಸ್ಸು ಕಂಡಿವೆ. ಇದರಿಂದಾಗಿ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಗೆ ನಾಯಕನಾಗುವ ಭಾರತದ ಉದ್ದೇಶಕ್ಕೆ ಸಹಾಯವಾಗಲಿದೆ.

ಒಟ್ಟಾರೆಯಾಗಿ, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿರುವ 1,000 ಕೋಟಿ ರೂಪಾಯಿ ಮೌಲ್ಯದ ವೆಂಚರ್ ಕ್ಯಾಪಿಟಲ್ ನಿಧಿ ಭಾರತದ ಬಾಹ್ಯಾಕಾಶ ಆರ್ಥಿಕತೆಯ ಅಭಿವೃದ್ಧಿಗೆ ಮಹತ್ವದ ಯೋಜನೆಯಾಗಿದೆ.

ನಾವೀನ್ಯತೆಗಳಿಗೆ ಉತ್ತೇಜನ, ಸ್ಟಾರ್ಟಪ್‌ಗಳಿಗೆ ಬೆಂಬಲ, ಮತ್ತು ತಾಂತ್ರಿಕ ಅಭಿವೃದ್ಧಿಗಳನ್ನು ಬೆಂಬಲಿಸುವ ಮೂಲಕ, ಸರ್ಕಾರದ ಈ ಕ್ರಮ ಬಾಹ್ಯಾಕಾಶ ವಲಯದಲ್ಲಿ ಭಾರತವನ್ನು ಪ್ರಮುಖ ಶಕ್ತಿಯನ್ನಾಗಿಸುವ ಗುರಿ ಹೊಂದಿದೆ.

ಸರ್ಕಾರ ಒದಗಿಸುವ ಈ ನಿಧಿಯ ಪ್ರಯೋಜನ ಕೇವಲ ಬಾಹ್ಯಾಕಾಶ ವಲಯಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಇದು ಭಾರತದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಿ, ಉದ್ಯೋಗಗಳನ್ನು ಸೃಷ್ಟಿಸಿ, ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸಲಿದೆ. ಇದರೊಡನೆ, ಜಾಗತಿಕ ಮಟ್ಟದಲ್ಲಿ ಭಾರತದ ಕಾರ್ಯತಂತ್ರದ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ.
 

click me!