
ಬೆಂಗಳೂರು: ರಾಜ್ಯದ ಮಾರುಕಟ್ಟೆಗಳಲ್ಲಿ ಟೊಮೆಟೊ (ಗೂದೆ ಹಣ್ಣು) ಬೆಲೆ ಕಳೆದ ಎರಡು ವಾರಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರು ಸೇರಿದಂತೆ ವ್ಯಾಪಾರಿಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಕೇವಲ 15 ದಿನಗಳ ಹಿಂದೆ ಕೆಜಿಗೆ ₹20ಕ್ಕೆ ದೊರಕುತ್ತಿದ್ದ ಟೊಮೆಟೊ, ಈಗ ಕೆಜಿಗೆ ₹60ವರೆಗೆ ಏರಿಕೆಯಾಗಿದೆ. ಸ್ಥಳೀಯ ಚಿಲ್ಲರೆ ಮಾರುಕಟ್ಟೆಯಲ್ಲೂ ಕೆ.ಜಿ ಟೊಮೆಟೊ 60 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ.
ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ವರ್ಷ ಟೊಮೆಟೊ ಬೆಳೆ ಕಡಿಮೆ ಆಗಿರುವುದರಿಂದ, ಮಾರುಕಟ್ಟೆಗೆ ಪೂರೈಕೆ ಪ್ರಮಾಣ ಕುಸಿದಿದೆ. ಹೀಗಾಗಿ ಕೋಲಾರದ ಟೊಮೆಟೊಗೆ ದೇಶದಾದ್ಯಂತ ಹೆಚ್ಚಿದ ಡಿಮ್ಯಾಂಡ್ ಕಂಡುಬಂದಿದೆ.
ಬೆಂಗಳೂರಿನ ಟೊಮೆಟೊ ಮಾರುಕಟ್ಟೆಯಲ್ಲಿ 22 ಕೆಜಿ ಟೊಮೆಟೊ ಬಾಕ್ಸ್‌ಗಳು ಹಿಂದೆ ₹1000ಕ್ಕೆ ಮಾರಾಟವಾಗುತ್ತಿದ್ದರೆ, ಈಗ ಅದು ₹1250ಕ್ಕೆ ಏರಿದೆ. ಕೋಲಾರದಲ್ಲಿ 15 ಕೆಜಿಯ ಬಾಕ್ಸ್ ಕೇವಲ 15 ದಿನಗಳ ಹಿಂದೆ ₹150–₹250ಕ್ಕೆ ಲಭ್ಯವಿದ್ದರೆ, ಈಗ ಅದೇ ಬಾಕ್ಸ್ ₹650–₹850ರ ನಡುವೆ ಮಾರಾಟವಾಗುತ್ತಿದೆ.
ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ತೀವ್ರ ಮಳೆಯಾಗಿದ್ದು, ಇದರಿಂದ ಟೊಮಾಟೊ ಬೆಳೆ ಹಲವು ಜಿಲ್ಲೆಗಳಲ್ಲಿ ಹಾನಿಗೊಳಗಾಯಿತು. ಮಹಾರಾಷ್ಟ್ರದಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದಿರುವುದರಿಂದ ಮಾರುಕಟ್ಟೆಗೆ ಒಟ್ಟಾರೆ ಪೂರೈಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಪೂರೈಕೆ ಕುಸಿತ ಮತ್ತು ಬೇಡಿಕೆ ಹೆಚ್ಚಳ ಎರಡೂ ಸೇರಿ ಟೊಮೆಟೊ ಬೆಲೆಯಲ್ಲಿ ಗ್ರಾಫ್ ನಿರಂತರವಾಗಿ ಮೇಲೇರಿ ಹೋಗುತ್ತಿರುವುದು ವ್ಯಾಪಾರಿಗಳು ಹೇಳಿದರು. ಕಳೆದ 10 ದಿನಗಳಿಂದ ಟೊಮೆಟೊ ಧಾರಣೆ ಏರಿಕೆ ಕ್ರಮೇಣ ತೀವ್ರವಾಗುತ್ತಿದೆ.
ಹಿಂದಿನ ಕೆಲವು ತಿಂಗಳುಗಳ ಕಾಲ ಟೊಮೆಟೊ ಬೆಲೆಯಲ್ಲಿ ಕುಸಿತದಿಂದ ನಷ್ಟಕ್ಕೆ ಒಳಗಾಗಿದ್ದ ರೈತರಿಗೆ ಈಗ ಮತ್ತೆ ಲಾಭದ ಲಕ್ಷಣಗಳು ಕಾಣಿಸುತ್ತಿವೆ. ಪ್ರಸ್ತುತ ಮಾರುಕಟ್ಟೆ ಸ್ಥಿತಿಯನ್ನು ಗಮನಿಸಿದರೆ ಮುಂದಿನ ಒಂದೂವರೆ ತಿಂಗಳು ಟೊಮೆಟೊ ಬೆಲೆ ಇದೇ ಮಟ್ಟದಲ್ಲಿ ಇರಬಹುದು ಅಥವಾ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಲಯಗಳು ಅಭಿಪ್ರಾಯ ವ್ಯಕ್ತಪಡಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.