
ನವದೆಹಲಿ : ಜಿಎಸ್ಟಿ-ಸ್ತರ ಹಾಗೂ ದರಗಳ ಕಡಿತ ಮಾಡಿದ್ದರೂ ದೀಪಾವಳಿ-ದಸರಾ ಹಬ್ಬಗಳ ಭರಾಟೆ ಕಾರಣ ಕಳೆದ ತಿಂಗಳು ಭರ್ಜರಿ 1.96 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿತ್ತು. ಆದರೆ ನವೆಂಬರ್‌ನಲ್ಲಿ 1.7 ಲಕ್ಷ ಕೋಟಿ ರು. ಸರಕು-ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದ್ದು, ಒಂದು ವರ್ಷದಲ್ಲೇ ಕನಿಷ್ಠವಾಗಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ 1.69 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಶೇ.0.7ರಷ್ಟು ಹೆಚ್ಚಳವಾಗಿದೆ. ಆದಾಗ್ಯೂ ಶೇ.0.7ರಷ್ಟು ಹೆಚ್ಚಳವು ಕೊರೋನಾ ಕಾಲದ ನಂತರದ ಅತಿ ಕನಿಷ್ಠ ಬೆಳವಣಿಗೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
‘ಅಕ್ಟೋಬರ್‌ನಲ್ಲಿ 1.96 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದ್ದರೂ ಅದು ಹಬ್ಬದ ಆಫರ್‌ಗಳ ಕಾರಣ ಆಗಿತ್ತು. ಆದರೆ ಈಗ ಅಂಥ ಯಾವುದೇ ಆಫರ್‌ಗಳು ಇಲ್ಲ. ಹೀಗಾಗಿ ಇದು ನಿಜವಾದ ಪರೀಕ್ಷಾ ಕಾಲ. ಎಷ್ಟು ನೈಜವಾಗಿ ಇನ್ನು ಮುಂದೆ ಜಿಎಸ್ಟಿ ಸಂಗ್ರಹ ಆಗಬಹುದು ಎಂಬ ಸಂದೇಶ ರವಾನೆಯಾಗಿದೆ’ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
‘ಜಿಎಸ್ಟಿ ಸ್ತರ ಪರಿಷ್ಕರಣೆಯಿಂದಾಗಿ ಸುಮಾರು 375 ವಸ್ತುಗಳ ಮೇಲಿನ ಬೆಲೆಯು ಇಳಿಕೆಯಾಗಿದ್ದರಿಂದ ಈ ಬೆಳವಣಿಗೆ ಕಂಡಿದೆ. ಜೊತೆಗೆ ದೇಶೀಯ ಸರಕುಗಳ ಮೇಲಿನ ಆದಾಯ ಕಡಿತದಿಂದಾಗಿ ಕುಸಿತ ಕಂಡಿದೆ’ ಎಂದೂ ಹೇಳಲಾಗಿದೆ.
ಇದನ್ನು ಹೊರತುಪಡಿಸಿ, ವಿದೇಶಿ ಆಮದುಗಳಿಂದ 45,976 ಕೋಟಿ ರು. ಜಿಎಸ್ಟಿ ಸಂಗ್ರಹವಾಗಿದ್ದು, ಇದು ಶೇ.10.2ರಷ್ಟು ಏರಿಕೆಯಾಗಿದೆ.
ನವದೆಹಲಿ : ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲು ಲೋಕಸಭೆಯಲ್ಲಿ 2 ಮಸೂದೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿದರು.ಆದರೆ ಇದರಿಂದ ಬೆಲೆ ಏರಿಕೆ ಆಗುವ ಸಾಧ್ಯತೆ ಇಲ್ಲ. ಏಕೆಂದರೆ ‘ಪಾಪ ಸರಕುಗಳು’ (ಸಿನ್ ಗೂಡ್ಸ್) ಎಂದು ಕರೆಸಿಕೊಳ್ಳುವ ಇವುಗಳ ಮೇಲಿನ ಜಿಎಸ್ಟಿ ಪರಿಹಾರ ಸೆಸ್ ವಿಧಿಸುವಿಕೆ ಈಗ ಅಂತ್ಯಗೊಳ್ಳುತ್ತಿದೆ. ಇದರಿಂದ ಇವುಗಳ ಬೆಲೆ ತನ್ನಿಂತಾನೇ ಇಳಿಯುವ ಸಾಧ್ಯತೆ ಇರುವ ಕಾರಣ, ಇದನ್ನು ತಪ್ಪಿಸಿ ಸರಿದೂಗಿಸಲು ಹೊಸ ಸುಂಕ ಹಾಗೂ ಸೆಸ್ ವಿಧಿಸಲಾಗುತ್ತದೆ,
ತಂಬಾಕು ಮತ್ತು ಪಾನ್ ಮಸಾಲಾದಂತಹ ‘ಪಾಪ ಸರಕುಗಳು’ (ಸಿನ್ ಗೂಡ್ಸ್) ಮೇಲೆ ಪ್ರಸ್ತುತ ಶೇ.28ರಷ್ಟು ಜಿಎಸ್ಟಿ ಹಾಕಲಾಗುತ್ತದೆ, ಜೊತೆಗೆ ವಿವಿಧ ದರಗಳಲ್ಲಿ ಪರಿಹಾರ ಸೆಸ್ ವಿಧಿಸಲಾಗುತ್ತದೆ.ಪ್ರಸ್ತುತ, ಸಿಗರೇಟುಗಳ ಮೇಲೆ ಅವುಗಳ ಉದ್ದವನ್ನು ಅವಲಂಬಿಸಿ 1,000 ಸ್ಟಿಕ್‌ಗಳಿಗೆ (1000 ಸ್ಟಿಕ್‌ನ ಬಂಡಲ್‌ಗೆ) 2,076 ರು.ನಿಂದ 3,668 ರು.ವರೆಗೆ ಸುಂಕ ವಿಧಿಸಲಾಗುತ್ತಿದೆ. ಈಗ ಮಂಡಿಸಲಾದ ಕೇಂದ್ರ ಅಬಕಾರಿ ತಿದ್ದುಪಡಿ ಮಸೂದೆಯು ಸಿಗಾರ್/ಚಿರೂಟ್‌ಗಳು/ಸಿಗರೇಟುಗಳ ಮೇಲೆ (1,000 ಸ್ಟಿಕ್ಸ್ ಬಂಡಲ್‌ಗೆ) 5,000 ರು.ಗಳಿಂದ 11,000 ರು.ಗಳವರೆಗೆ ಅಬಕಾರಿ ಸುಂಕ ವಿಧಿಸಲು ಉದ್ದೇಶಿಸಿದೆ. ಅಲ್ಲದೆ, ಸಂಸ್ಕರಿಸದ ತಂಬಾಕಿನ ಮೇಲೆ ಶೇ. 60-70 ಮತ್ತು ನಿಕೋಟಿನ್ ಮತ್ತು ಇನ್ಹಲೇಷನ್ ಉತ್ಪನ್ನಗಳ ಮೇಲೆ ಶೇ. 100ರಷ್ಟು ಸೆಸ್ ವಿಧಿಸಲು ಪ್ರಸ್ತಾಪಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.