ಭಾರತದಲ್ಲಿ ಅಮೆರಿಕ ದಿಗ್ಗಜ ಕಂಪನಿಗಳಿಂದ ಬಂಪರ್ ಬಂಡವಾಳ: ಮೋದಿ ಭೇಟಿ ಬೆನ್ನಲ್ಲೇ ಅಮೆಜಾನ್‌, ಗೂಗಲ್‌, ಬೋಯಿಂಗ್‌ ಹೂಡಿಕೆ

By Kannadaprabha News  |  First Published Jun 25, 2023, 8:54 AM IST

ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಗೂಗ​ಲ್‌ನ ಸುಂದರ್‌ ಪಿಚೈ, ಅಮೆ​ಜಾ​ನ್‌ನ ಟಿಮ್‌ ಕುಕ್‌ ಹಾಗೂ ಬೋಯಿಂಗ್‌ ಮುಖ್ಯ​ಸ್ಥರು ಸೇರಿ​ದಂತೆ ದೊಡ್ಡ ದೊಡ್ಡ ಕಂಪನಿಗಳ ಸಿಇಒಗಳ ಜೊತೆ ಶುಕ್ರ​ವಾರ ತಡ​ರಾತ್ರಿ ಮಾತುಕತೆ ನಡೆಸಿದರು. ಅದರ ಬೆನ್ನಲ್ಲೇ ಕೆಲ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಪ್ರಕಟಣೆ ಹೊರಡಿಸಿವೆ.


ವಾಷಿಂಗ್ಟನ್‌ (ಜೂನ್ 25, 2023): ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿ ಮುಗಿಯುತ್ತಿದ್ದಂತೆ ಆ ದೇಶದ ದೈತ್ಯ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಭಾರಿ ಬಂಡವಾಳ ಹೂಡಿಕೆಯ ಘೋಷಣೆ ಮಾಡಿವೆ. ಮುಖ್ಯವಾಗಿ ಅಮೆಜಾನ್‌, ಗೂಗಲ್‌ ಹಾಗೂ ಬೋಯಿಂಗ್‌ ಕಂಪನಿಗಳು ಭಾರತದಲ್ಲಿ ಲಕ್ಷಾಂತರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಪ್ರಕಟಿಸಿವೆ.
ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ಮೋದಿ ಗೂಗ​ಲ್‌ನ ಸುಂದರ್‌ ಪಿಚೈ, ಅಮೆ​ಜಾ​ನ್‌ನ ಟಿಮ್‌ ಕುಕ್‌ ಹಾಗೂ ಬೋಯಿಂಗ್‌ ಮುಖ್ಯ​ಸ್ಥರು ಸೇರಿ​ದಂತೆ ದೊಡ್ಡ ದೊಡ್ಡ ಕಂಪನಿಗಳ ಸಿಇಒಗಳ ಜೊತೆ ಶುಕ್ರ​ವಾರ ತಡ​ರಾತ್ರಿ ಮಾತುಕತೆ ನಡೆಸಿದರು. ಅದರ ಬೆನ್ನಲ್ಲೇ ಕೆಲ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಪ್ರಕಟಣೆ ಹೊರಡಿಸಿವೆ.

ಅಮೆಜಾನ್‌ನಿಂದ 1.2 ಲಕ್ಷ ಕೋಟಿ:
ಭಾರತದಲ್ಲಿ ಈಗಾಗಲೇ ವ್ಯಾಪಾರ ಹೊಂದಿರುವ ಅಮೆಜಾನ್‌ ಇ-ಕಾಮರ್ಸ್‌ ಕಂಪನಿ ಮುಂದಿನ ಏಳು ವರ್ಷಗಳಲ್ಲಿ ಭಾರತದಲ್ಲಿ ವ್ಯಾಪಾರ ವಿಸ್ತರಿಸಲು 15 ಬಿಲಿಯನ್‌ ಡಾಲರ್‌ (ಸುಮಾರು 1.2 ಲಕ್ಷ ಕೋಟಿ ರೂ.) ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ. ಅದರೊಂದಿಗೆ ಭಾರತದಲ್ಲಿ ತನ್ನ ವ್ಯಾಪಾರಿ ಬಂಡವಾಳದ ಪಾಲನ್ನು 26 ಬಿಲಿಯನ್‌ ಡಾಲರ್‌ಗೆ ವಿಸ್ತರಿಸುವುದಾಗಿ ಹೇಳಿದೆ.
ಈ ಕುರಿತು ಅಮೆಜಾನ್‌ ಸಿಇಒ ಆ್ಯಂಡಿ ಜೆಸ್ಸಿ ಪ್ರಕಟಣೆ ಹೊರಡಿಸಿದ್ದು, ಪ್ರಧಾನಿ ಮೋದಿ ಭಾರತದಲ್ಲಿ ಸ್ಟಾರ್ಟಪ್‌, ಉದ್ಯೋಗ ಸೃಷ್ಟಿ, ರಫ್ತು, ಡಿಜಿಟಲೀಕರಣ ಹಾಗೂ ಸಣ್ಣ ಉದ್ದಿಮೆಗಳ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುವುದಾಗಿ ವಾಗ್ದಾನ ನೀಡಿದ್ದಾರೆ. ಹೀಗಾಗಿ ಡಿಜಿಟಲೀಕರಣದ ಮೂಲಕ 1 ಕೋಟಿ ಸಣ್ಣ ಉದ್ದಿಮೆಗಳನ್ನು ಬೆಳೆಸಲು ನಾವು ಮುಂದಾಗಿದ್ದೇವೆ. ಅದರಿಂದಾಗಿ 2025ರ ವೇಳೆಗೆ ಭಾರತದಿಂದ 20 ಬಿಲಿಯನ್‌ ಡಾಲರ್‌ನಷ್ಟು ರಫ್ತಿನ ಗುರಿ ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

Tap to resize

Latest Videos

ಇದನ್ನು ಓದಿ: 2024ರ ಅಂತ್ಯ​ಕ್ಕೆ ಮೊದಲ ಸ್ವದೇಶಿ ನಿರ್ಮಿ​ತ ಸೆಮಿ​ ಕಂಡ​ಕ್ಟರ್‌ ಚಿಪ್‌: ಅಶ್ವಿನಿ ವೈಷ್ಣವ್‌

ಗೂಗಲ್‌ನಿಂದ 83000 ಕೋಟಿ ರೂ.:
ಇಂಟರ್ನೆಟ್‌ ಲೋಕದ ದೈತ್ಯ ಕಂಪನಿ ಗೂಗಲ್‌ ಭಾರತದಲ್ಲಿ ಡಿಜಿಟೈಸೇಶನ್‌ ಫಂಡ್‌ ಸ್ಥಾಪಿಸಲು 10 ಬಿಲಿಯನ್‌ ಡಾಲರ್‌ (ಸುಮಾರು 83000 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ. ಅಲ್ಲದೆ ಗಾಂಧಿನಗರದ ಗುಜರಾತ್‌ ಇಂಟರ್‌ನ್ಯಾಷನಲ್‌ ಫೈನಾನ್ಸ್‌ ಟೆಕ್‌ ಸಿಟಿ (ಗಿಫ್ಟ್‌) ಯಲ್ಲಿ ತನ್ನ ಜಾಗತಿಕ ಫಿನ್‌ಟೆಕ್‌ ವಹಿವಾಟು ಆರಂಭಿಸುವುದಾಗಿಯೂ ಘೋಷಿಸಿದೆ.
ಮೋದಿ ಭೇಟಿ ಬಳಿಕ ಈ ಕುರಿತು ಮಾಹಿತಿ ನೀಡಿರುವ ಗೂಗಲ್‌ ಸಿಇಒ ಸುಂದರ್‌ ಪಿಚೈ, ಡಿಜಿಟಲ್‌ ಇಂಡಿಯಾ ಕುರಿತು ಪ್ರಧಾನಿ ಮೋದಿ ಹೊಂದಿರುವ ದೃಷ್ಟಿಕೋನಗಳು ಈ ಕಾಲಕ್ಕಿಂತ ಬಹಳ ಮುಂದಿವೆ. ಭಾರತದಲ್ಲಿ ಗೂಗಲ್‌ನಿಂದ ಡಿಜಿಟೈಸೇಶನ್‌ ಫಂಡ್‌ ಹಾಗೂ ಫಿನ್‌ಟೆಕ್‌ ಕಂಪನಿ ಸ್ಥಾಪಿಸುವುದಾಗಿ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಬೋಯಿಂಗ್‌ನಿಂದ 830 ಕೋಟಿ ರೂ.:
ಜಗತ್ತಿನ ಅತಿದೊಡ್ಡ ವಿಮಾನ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬೋಯಿಂಗ್‌, ಭಾರತದಲ್ಲಿ ಪೈಲಟ್‌ಗಳ ತರಬೇತಿ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ 100 ಮಿಲಿಯನ್‌ ಡಾಲರ್‌ (ಸುಮಾರು 830 ಕೋಟಿ ರು.) ಹೂಡಿಕೆ ಮಾಡುವುದಾಗಿ ತಿಳಿಸಿದೆ ಎಂದು ಶ್ವೇತಭವನದ ಪ್ರಕಟಣೆ ಹೇಳಿದೆ.

ಇದನ್ನೂ ಓದಿ: ಅಮೆರಿಕ ಸಂಸದರ ಹೊಗಳಿ ರಾಹುಲ್‌ ಕಾಲೆಳೆದ ಮೋದಿ: ಎಐ ಎಂದರೆ ಅಮೆರಿಕ, ಇಂಡಿಯಾ: ಪ್ರಧಾನಿ ಬಣ್ಣನೆ

ಇತ್ತೀಚೆಗೆ ಏರ್‌ ಇಂಡಿಯಾ ಕಂಪನಿ ಬೋಯಿಂಗ್‌ನಿಂದ 200 ವಿಮಾನಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಈ ಪ್ರಕಟಣೆ ಹೊರಬಿದ್ದಿದೆ. ಭಾರತದಲ್ಲಿ ಪೈಲಟ್‌ಗಳಿಗೆ ವಿಶ್ವದರ್ಜೆಯ ತರಬೇತಿ ನೀಡಲು ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಈ ಹೂಡಿಕೆಯಲ್ಲಿ ಸೇರಿದೆ.

ಇದನ್ನೂ ಓದಿ: ಇಂದಿನಿಂದ ಪ್ರಧಾನಿ ಮೋದಿ 2 ದಿನ ಈಜಿಪ್ಟ್‌ ಪ್ರವಾಸ: 1000 ವರ್ಷ ಹಳೆಯ ಮಸೀದಿಗೆ ಭೇಟಿ

click me!