ಐಟಿಆರ್ ಸಲ್ಲಿಕೆ ಮಾಡುತ್ತಿದ್ದೀರಾ? ಯಾವ ತೆರಿಗೆ ವ್ಯವಸ್ಥೆ ಆಯ್ಕೆ ಮಾಡೋದು ಉತ್ತಮ? ಇಲ್ಲಿದೆ ಮಾಹಿತಿ

By Suvarna News  |  First Published Jun 24, 2023, 5:42 PM IST

2023ನೇ ಸಾಲಿನ ಬಜೆಟ್ ನಲ್ಲಿ ಹೊಸ ಹಾಗೂ ಹಳೆಯ ಆದಾಯ ತೆರಿಗೆಗೆ ಸಂಬಂಧಿಸಿ ಒಂದಿಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಐಟಿಆರ್ ಸಲ್ಲಿಕೆ ಮಾಡುತ್ತಿರುವ ತೆರಿಗೆದಾರರು ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹಾಗಾದ್ರೆ ತೆರಿಗೆ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆಗಳಾಗಿವೆ? ಹೊಸ, ಹಳೆಯ ತೆರಿಗೆ ವ್ಯವಸ್ಥೆಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಮಾಹಿತಿ. 
 


Business Desk: ತೆರಿಗೆ ವಿನಾಯಿತಿ ಮಿತಿಗಿಂತ ಹೆಚ್ಚಿನ ಆದಾಯ ಹೊಂದಿರೋರು ತೆರಿಗೆ ಪಾವತಿಸೋದು ಕಡ್ಡಾಯ. ಹೀಗಾಗಿ ತೆರಿಗೆದಾರರು ಆದಾಯ ತೆರಿಗೆ ಸ್ಲ್ಯಾಬ್ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. 2023ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವೈಯಕ್ತಿಕ ಆದಾಯ ತೆರಿಗೆಗೆ ಸಂಬಂಧಿಸಿ ಅನೇಕ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಸರ್ಕಾರ ಘೋಷಣೆ ಮಾಡಿರುವ ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸ್ಲ್ಯಾಬ್ ಗಳಲ್ಲಿ ಬದಲಾವಣೆ ಮಾಡಲಾಗಿದೆ. ಹಾಗೆಯೇ ವಿನಾಯ್ತಿ ಮಿತಿಯಲ್ಲಿ ಕೂಡ ಹೆಚ್ಚಳ ಮಾಡಲಾಗಿದೆ. ಹೊಸ ತೆರಿಗೆ ಸ್ಲ್ಯಾಬ್ 2023ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇನ್ನು ಇವು 2023ರ ಏ.1ರಿಂದ ಪ್ರಾರಂಭವಾಗುವ 2023-24ನೇ ಆರ್ಥಿಕ ಸಾಲಿನಲ್ಲಿ ಗಳಿಸಿದ ಆದಾಯಕ್ಕೆ ಅನ್ವಯಿಸಲಿವೆ.  ತೆರಿಗೆದಾರರು ಹಳೆಯ ತೆರಿಗೆ ವ್ಯವಸ್ಥೆ ಅಥವಾ ಹೊಸ ತೆರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು. ಹಾಗಾದ್ರೆ ಹಳೆಯ ಹಾಗೂ ಹೊಸ ತೆರಿಗೆವ್ಯವಸ್ಥೆಗೆ ಸಂಬಂಧಿಸಿ ಯಾವೆಲ್ಲ ಬದಲಾವಣೆಗಳಾಗಿವೆ? ಯಾವ ತೆರಿಗೆ ವ್ಯವಸ್ಥೆ ಯಾರಿಗೆ ಉತ್ತಮ? ಇಲ್ಲಿದೆ ಮಾಹಿತಿ.

ಹೊಸ ತೆರಿಗೆ ವ್ಯವಸ್ಥೆ
*ಹೊಸ ತೆರಿಗೆ ವ್ಯವಸ್ಥೆಯನ್ನು 2020ನೇ ಸಾಲಿನ ಬಜೆಟ್ ನಲ್ಲಿ ಪರಿಚಯಿಸಲಾಗಿತ್ತು. ಇದರಲ್ಲಿ ಈ ಹಿಂದೆ 6 ತೆರಿಗೆ ಸ್ಲ್ಯಾಬ್ ಗಳಿದ್ದವು. ಆದರೆ, 2023ನೇ ಸಾಲಿನ ಬಜೆಟ್ ನಲ್ಲಿ ಒಂದು ಸ್ಲ್ಯಾಬ್ ಕಡಿಮೆ ಮಾಡಲಾಗಿದ್ದು, 5 ತೆರಿಗೆ ಸ್ಲ್ಯಾಬ್ ಗಳಷ್ಟನ್ನೇ ಪರಿಚಯಿಸಲಾಗಿದೆ. 

Tap to resize

Latest Videos

*ಇನ್ನು ಹಳೆಯ ತೆರಿಗೆ ವ್ಯವಸ್ಥೆಯಂತೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಎಚ್ ಆರ್ ಎ, ಎಲ್ ಟಿಎ, 80ಸಿ, 80ಡಿ ಹಾಗೂ ಇತ್ಯಾದಿ ಯಾವುದೇ ತೆರಿಗೆ ಕಡಿತ ಅಥವಾ ವಿನಾಯ್ತಿ ಸೌಲಭ್ಯಗಳನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಬಹುತೇಕರು ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೊಸ ತೆರಿಗೆ ವ್ಯವಸ್ಥೆಯ ಅಳವಡಿಕೆಯನ್ನು ಪ್ರೋತ್ಸಾಹಿಸಲು ಅದರಲ್ಲಿ 5 ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. 
1.ತೆರಿಗೆ ವಿನಾಯ್ತಿ ಮಿತಿಯನ್ನು ಈ ಹಿಂದಿನ  2.5ಲಕ್ಷ ರೂ.ನಿಂದ 3ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. 
2.ಇನ್ನು 7ಲಕ್ಷ ರೂ. ತನಕದ ಆದಾಯಕ್ಕೆ ಪೂರ್ಣ ತೆರಿಗೆ ರಿಯಾಯಿತಿ ಮಿತಿ (Tax Rebate Limit) ಪರಿಚಯಿಸಲಾಗಿದೆ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಈ ಮಿತಿ 5ಲಕ್ಷ ರೂ. 
3.ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಲಭ್ಯವಿದ್ದ ₹50,000 ಸ್ಟ್ಯಾಂಡರ್ಡ್ ಕಡಿತವನ್ನು ಹೊಸ ತೆರಿಗೆ ವ್ಯವಸ್ಥೆಗೆ ಕೂಡ ಪರಿಚಯಿಸಲಾಗಿದೆ. 
4.ಕುಟುಂಬ ಪಿಂಚಣಿ ಹೊಂದಿರೋರು ₹15,000 ಅಥವಾ ಪಿಂಚಣಿಯ 1/3 ಕಡಿತ ಕ್ಲೇಮ್ ಮಾಡಬಹುದು.
5.5ಕೋಟಿ ರೂ. ಮೇಲಿನ ಆದಾಯಕ್ಕೆ ಸರ್ಚಾರ್ಜ್ ದರವನ್ನು ಶೇ.37ರಿಂದ ಶೇ.25ಕ್ಕೆ ಇಳಿಕೆ ಮಾಡಲಾಗಿದೆ. 

ITR ಫೈಲ್ ಮಾಡಿದ ಬಳಿಕ ತೆರಿಗೆ ರೀಫಂಡ್ ಪಡೆಯಲು ಎಷ್ಟು ಸಮಯ ಬೇಕು? ಇಲ್ಲಿದೆ ಮಾಹಿತಿ

ಹಳೆಯ ತೆರಿಗೆ ವ್ಯವಸ್ಥೆ
ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಕೂಡ ತೆರಿಗೆ ವಿನಾಯ್ತಿ ಮಿತಿಯನ್ನು ಈ ಹಿಂದಿನ  2.5ಲಕ್ಷ ರೂ.ನಿಂದ 3ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಈ ವ್ಯವಸ್ಥೆಯಡಿಯಲ್ಲಿ ಎಚ್ ಆರ್ ಎ, ಎಲ್ ಟಿಎ ಸೇರಿದಂತೆ ಒಟ್ಟು 70 ವಿನಾಯಿತಿಗಳಿವೆ. ಇವು ನಿಮ್ಮ ತೆರಿಗೆಗೊಳಪಡುವ ಆದಾಯವನ್ನು ತಗ್ಗಿಸುವ ಮೂಲಕ ತೆರಿಗೆ ಪಾವತಿಯನ್ನು ಕೂಡ ಕಡಿಮೆ ಮಾಡುತ್ತವೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ 1.5ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆಯಬಹುದು.

ITR ಫೈಲ್ ಮಾಡುವಾಗ ತಪ್ಪಾದ್ರೆ ಚಿಂತೆ ಬೇಡ, ಸರಿಪಡಿಸಲು ಅವಕಾಶವಿದೆ; ಅದು ಹೇಗೆ? ಇಲ್ಲಿದೆ ಮಾಹಿತಿ

ಯಾವುದು ಉತ್ತಮ?
ಹೊಸ ತೆರಿಗೆ ವ್ಯವಸ್ಥೆ ಹಾಗೂ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದು ಉತ್ತಮ ಎಂಬುದನ್ನು ನಿಮ್ಮ ಹೂಡಿಕೆ ಹಾಗೂ ತೆರಿಗೆ ಉಳಿತಾಯದ ಪ್ರಯೋಜನಗಳನ್ನು ಆಧರಿಸಿದೆ. ನಿಮ್ಮ ಆದಾಯಕ್ಕೆ ಅನುಗುಣವಾಗಿ ನೀವು ಹೂಡಿಕೆ ಮಾಡಿದ್ದು, ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಉಳಿತಾಯದ ಪ್ರಯೋಜನಗಳು ಸಿಗುವಂತಿದರೆ ನೀವು ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವುದು ಉತ್ತಮ. ಹಾಗೆಯೇ ನಿಮಗೆ ಹೆಚ್ಚಿನ ತೆರಿಗೆ ಕಡಿತ ಅಥವಾ ವಿನಾಯ್ತಿ ಪ್ರಯೋಜನಗಳು ಸಿಗುವುದಿಲ್ಲ ಎಂದಾದರೆ ಹೊಸ ತೆರಿಗೆ ವ್ಯವಸ್ಥೆಆಯ್ಕೆ ಮಾಡಬಹುದು. ಹಳೆಯ ತೆರಿಗೆ ವ್ಯವಸ್ಥೆಯನ್ನು ನೀವು ಆಯ್ಕೆ ಮಾಡೋದಾದ್ರೆ ಐಟಿಆರ್ ಸಲ್ಲಿಕೆ ಸಂದರ್ಭದಲ್ಲೇ ಈ ಬಗ್ಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಹೊಸ ತೆರಿಗೆ ವ್ಯವಸ್ಥೆಯನ್ನೇ ಅನ್ವಯಿಸಲಾಗುತ್ತದೆ. ಏಕೆಂದರೆ 2023-24ನೇ ಸಾಲಿನಿಂದ ಹೊಸ ತೆರಿಗೆ ವ್ಯವಸ್ಥೆಯನ್ನು ಡಿಫಾಲ್ಟ್ ಆಯ್ಕೆ ಮಾಡಲಾಗಿದೆ. 
 

click me!