ಒಂದು ಕೋಟಿ ಮೌಲ್ಯದ ಫ್ಲ್ಯಾಟ್ ಖರೀದಿಸಿ, ತಿಂಗಳಿಗೆ 80ಸಾವಿರ ಇಎಂಐ ಕಟ್ಟೋದ್ರಿಂದ ಏನಾದ್ರೂ ಲಾಭವಿದೆಯಾ?

By Suvarna NewsFirst Published Sep 13, 2022, 5:43 PM IST
Highlights

ಸ್ವಂತ ಮನೆ ಬೇಕು ಎಂಬ ಕನಸು ಯಾರಿಗಿಲ್ಲ ಹೇಳಿ? ಇದು ಬಹುತೇಕರ ಬದುಕಿನ ಬಹುದೊಡ್ಡ ಗುರಿ ಕೂಡ ಹೌದು.ಆದರೆ, ಮನೆ ಖರೀದಿಸಲು ಗೃಹಸಾಲ ಪಡೆಯೋದು ಅಗತ್ಯ. ಆದ್ರೆ ಈ ಸಾಲ ಪಡೆಯೋ ಮುನ್ನ ಕೆಲವೊಂದು ವಿಚಾರಗಳ ಬಗ್ಗೆ ಯೋಚಿಸೋದು ಅಗತ್ಯ.ಇಲ್ಲವಾದ್ರೆ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗೋದು ಗ್ಯಾರಂಟಿ.
 

Business Desk:ಸ್ವಂತ ಸೂರು ಹೊಂದಬೇಕು ಎಂಬುದು ಬಹುತೇಕ ಭಾರತೀಯರ ಬದುಕಿನ ಮಹತ್ತರವಾದ ಆಸೆ. ಇದು ನನ್ನದೇ ಮನೆ ಎನ್ನುವುದು ಪ್ರತಿಯೊಬ್ಬರಿಗೂ ಖುಷಿ, ನೆಮ್ಮದಿ ನೀಡುವ ವಿಚಾರ. ಹೀಗಾಗಿ ಮನೆ ಅಥವಾ ಫ್ಲ್ಯಾಟ್ ಖರೀದಿಯಲ್ಲಿ ಎಷ್ಟೋ ಬಾರಿ ಹಣಕಾಸಿನ ಲೆಕ್ಕಾಚಾರಕ್ಕಿಂತ ಭಾವನೆಗಳೇ ಮೇಲುಗೈ ಸಾಧಿಸುತ್ತವೆ. ಇದೇ ಕಾರಣಕ್ಕೆ ಕೈಯಲ್ಲಿ ಕಾಸಿಲ್ಲದಿದ್ದರೂ ಸಾಲ ಮಾಡಿಯಾದ್ರೂ ಮನೆ ಮಾಡಲು ಬಹುತೇಕರು ಮುಂದಾಗುತ್ತಾರೆ. ಈಗಂತೂ ಗೃಹಸಾಲ ನೀಡಲು ಬ್ಯಾಂಕುಗಳು ತುದಿಗಾಲಲ್ಲಿ ನಿಂತಿರುತ್ತವೆ. ಹೀಗಾಗಿ ತಿಂಗಳಿಗೆ ಸಾಧಾರಣ ವೇತನ ಪಡೆಯೋ ವ್ಯಕ್ತಿ ಕೂಡ ಇಂದು ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ಫ್ಲ್ಯಾಟ್ ಖರೀದಿಸಲು ಯಾವುದೇ ಸಮಸ್ಯೆಯಿಲ್ಲ. ಆದರೆ, ಸ್ವಂತ ಮನೆ ಬೇಕು ಎಂಬ ಹಂಬಲದಿಂದ ಕೆಲವರು ಹಿಂದೆಮುಂದೆ ಯೋಚಿಸದೆ ಫ್ಲ್ಯಾಟ್ ಅಥವಾ ಮನೆ ಮೇಲೆ ಕೋಟಿಗಟ್ಟಲೆ ಹಣ ಸುರಿದು ತಿಂಗಳಿಗೆ 80-90 ಸಾವಿರ ಇಎಂಐ ಕಟ್ಟುತ್ತಾರೆ. ಆದ್ರೆ ಇಷ್ಟೆಲ್ಲ ದೊಡ್ಡ ಮೊತ್ತವನ್ನು ಮನೆ ಮೇಲೆ ಸುರಿದು ಅಷ್ಟೊಂದು ದೊಡ್ಡ ಮೊತ್ತದ ಇಎಂಐ ಕಟ್ಟೋದ್ರಿಂದ ನಿಜಕ್ಕೂ ಮುಂದೆ ಏನಾದ್ರೂ ಲಾಭವಿದೆಯಾ? ಬಾಡಿಗೆ ಉಳಿಸಲು ಹೋಗಿ ಆ ಹಣಕ್ಕಿಂತ ಐದಾರು ಪಟ್ಟು ಹೆಚ್ಚಿನ ಇಎಂಐ ಪಾವತಿಸೋದು ಹೊರೆಯಾಗೋದಿಲ್ವಾ? ಹಾಗಾದ್ರೆ ಮನೆ ಖರೀದಿಸುವಾಗ ಯಾವೆಲ್ಲ ವಿಷಯಗಳನ್ನು ಗಮನಿಸಬೇಕು? ಇಲ್ಲಿದೆ ಮಾಹಿತಿ.

Savings Tips: ಈ ಯೋಜನೆಗೆ ಸೇರ್ಪಡೆಯಾದ್ರೆ ರೈತರಿಗೆ ಸಿಗುತ್ತೆ ತಿಂಗಳಿಗೆ 3000ರೂ. ಪಿಂಚಣಿ

1.ಬಾಡಿಗೆ ಉಳಿಸಲು ಮನೆ ಖರೀದಿಸೋರು ಇಎಂಐ ಮೊತ್ತ ಗಮನಿಸಿ
ನೀವು ಬೆಂಗಳೂರಿನಂತಹ ಮಹಾನಗರದಲ್ಲಿ ಮನೆ ಬಾಡಿಗೆ ಉಳಿಯುತ್ತೆ ಎಂಬ ಕಾರಣಕ್ಕೆ ಮನೆ ಅಥವಾ ಫ್ಲ್ಯಾಟ್ ಖರೀದಿಸುತ್ತಿದ್ರೆ ತಿಂಗಳ ಇಎಂಐ ಎಷ್ಟು ಬರುತ್ತದೆ ಎಂಬುದನ್ನು ಮೊದಲು ಲೆಕ್ಕ ಹಾಕಿ. ಒಂದು ವೇಳೆ ನಿಮ್ಮ ಇಎಂಐ ಮೊತ್ತ ನೀವು ನೀಡುತ್ತಿರುವ ಬಾಡಿಗೆಯಷ್ಟೇ ಅಥವಾ ಅದಕ್ಕಿಂತ ಕಡಿಮೆಯಿದ್ರೆ ಯಾವುದೇ ಯೋಚನೆಯಿಲ್ಲದೆ ಮುಂದೆ ಸಾಗಿ. ಒಂದು ವೇಳೆ ನಿಮ್ಮ ಇಎಂಐ ಮೊತ್ತ ಬಾಡಿಗೆಯ 3-4 ಪಟ್ಟು ಹೆಚ್ಚಿದ್ರೆ, ನೀವು ಯೋಚಿಸಲೇಬೇಕಾಗುತ್ತದೆ. ಉದಾಹರಣೆಗೆ ಒಂದು ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಖರೀದಿಸಿದ್ರೆ  ತಿಂಗಳಿಗೆ ಅಂದಾಜು 80 ಸಾವಿರ ರೂ. ಇಎಂಐ ಬರುತ್ತೆ ಎಂದು ಭಾವಿಸೋಣ. ನೀವೀಗ ನೀಡುತ್ತಿರುವ ಬಾಡಿಗೆ 20 ಸಾವಿರ ರೂ. ಅಂದ್ರೆ ಫ್ಲ್ಯಾಟ್ ಖರೀದಿಸಿದ ಬಳಿಕ ನೀವು ಬಾಡಿಗೆಯ ನಾಲ್ಕು ಪಟ್ಟು ಹೆಚ್ಚು ಹಣವನ್ನು ಇಎಂಐಗೆ ನೀಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಈ ಹೆಚ್ಚುವರಿ ಹಣವನ್ನು ಪ್ರತಿ ತಿಂಗಳು ನಿಮಗೆ ತೂಗಿಸಲು ಸಾಧ್ಯವಾ ಎಂದು ಯೋಚಿಸಿ.

2.ಡೌನ್ ಪೇಮೆಂಟ್ ಗೆ ಹಣವಿದೆಯಾ?
ನೀವು 60ಲಕ್ಷದ ಫ್ಲ್ಯಾಟ್ ಖರೀದಿಸುತ್ತಿದ್ರೆ ಬ್ಯಾಂಕ್ ಅಷ್ಟೂ ಮೊತ್ತದ ಸಾಲ ನೀಡೋದಿಲ್ಲ. ಬ್ಯಾಂಕ್ ನೀವು ಖರೀದಿಸುವ ಆಸ್ತಿಯ ಮೌಲ್ಯದ ಗರಿಷ್ಠ ಶೇ.80ರಷ್ಟು ಸಾಲವನ್ನು ಮಾತ್ರ ನೀಡುತ್ತವೆ. ಅಂದ್ರೆ ಬಹುತೇಕ ಬ್ಯಾಂಕುಗಳು ಶೇ.20ರಷ್ಟು ಡೌನ್ ಪೇಮೆಂಟ್ ಮಾಡಲು ತಿಳಿಸುತ್ತವೆ. ಸಾಧ್ಯವಾದ್ರೆ ನೀವು ಇದಕ್ಕಿಂತ ಹೆಚ್ಚಿನ ಮೊತ್ತದ ಡೌನ್ ಪೇಮೆಂಟ್ ಕೂಡ ಮಾಡಬಹುದು. ಜಾಸ್ತಿ ಡೌನ್ ಪೇಮೆಂಟ್ ಮಾಡಿದಷ್ಟೂ ನಿಮ್ಮ ಮೇಲಿನ ಇಎಂಐ ಹೊರೆ ತಗ್ಗುತ್ತದೆ. ಉದಾಹರಣೆಗೆ ನೀವು 90ಲಕ್ಷ ರೂ. ಮೌಲ್ಯದ ಮನೆ ಖರೀದಿಸುತ್ತಿದ್ರೆ, ಗರಿಷ್ಠ  72 ಲಕ್ಷ ರೂ. ಸಾಲವನ್ನು ನಿಮಗೆ ಮಂಜೂರು ಮಾಡಲಾಗುತ್ತದೆ. ಅಂದ್ರೆ ನೀವು 18 ಲಕ್ಷ ರೂ. ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ. ಶೇ.40ರಷ್ಟು ಡೌನ್ ಪೇಮೆಂಟ್ ಮಾಡಲು ಸಾಧ್ಯವಾದ್ರೆ ಇಎಂಐ ಹೊರೆ ಅಷ್ಟು ಬಾಧಿಸೋದಿಲ್ಲ. ಹಾಗೆಯೇ ಸ್ಟ್ಯಾಂಪ್ ಡ್ಯೂಟಿ, ಜಿಎಸ್ಟಿ ಎಂದು ಹೆಚ್ಚುವರಿ ಹಣ ಕೂಡ ಖರ್ಚಾಗುತ್ತದೆ. ಇನ್ನು ಮನೆ ರಿಜಿಸ್ಟ್ರೇಷನ್ ಗೆ ಕೂಡ ಕೆಲವು ಲಕ್ಷ ಖರ್ಚಾಗುತ್ತದೆ.

3.ತೆರಿಗೆ ಉಳಿಸೋ ಲೆಕ್ಕಾಚಾರ ಹಾಕಿ ಮನೆ ಖರೀದಿಸುತ್ತಿದ್ದೀರಾ?
ಕೆಲವರು ಗೃಹಸಾಲದ ಮೇಲೆ ಸಿಗುವ ತೆರಿಗೆ ಕಡಿತದ ಲೆಕ್ಕಾಚಾರ ಹಾಕಿ ಮನೆ ಖರೀದಿಸುತ್ತಾರೆ. ಆದರೆ, ನೀವು ಎಂದಾದರೂ ಯೋಚಿಸಿದ್ದೀರಾ, ಗೃಹಸಾಲದ ಬಡ್ಡಿ ಪಾವತಿ ಮೇಲೆ ಒಬ್ಬ ವ್ಯಕ್ತಿ ವರ್ಷಕ್ಕೆ 2ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಆದರೆ, ನೀವು ದೀರ್ಘಾವಧಿಗೆ ಸಾಲದ ಮೇಲೆ ಕಟ್ಟುವ ಬಡ್ಡಿ ಆ ಮೊತ್ತಕ್ಕಿಂತ ಹೆಚ್ಚಾಗುತ್ತದೆ. ಉದಾಹರಣೆಗೆ ನೀವು ಶೇ.7 ಬಡ್ಡಿದರದಲ್ಲಿ 20 ವರ್ಷಗಳ ಅವಧಿಗೆ 75ಲಕ್ಷ ರೂ. ಗೃಹಸಾಲ ಪಡೆದಿರುತ್ತೀರಿ. ಈ ಅವಧಿಯಲ್ಲಿ ನೀವು ಕಟ್ಟುವ ಬಡ್ಡಿ ಎರಡು ಲಕ್ಷ ರೂ.ಗಿಂತ ಹೆಚ್ಚಾಗಿರುತ್ತದೆ. ಹೀಗಾಗಿ ತೆರಿಗೆ ಉಳಿಯುತ್ತದೆ ಎಂಬ ಕಾರಣಕ್ಕೆ ಸಾಲದ ಅವಧಿಯನ್ನು ವಿಸ್ತರಿಸಬೇಡಿ.

Landeed: ಬೆಂಗಳೂರು ಮೂಲದ ಈ ಸ್ಟಾರ್ಟಪ್‌ ಮೂಲಕ ನಿಮ್ಮ ಆಸ್ತಿಯ ದಾಖಲೆಗಳನ್ನು ಸೆಕೆಂಡ್‌ಗಳಲ್ಲಿ ಪರಿಶೀಲಿಸಿ..!

4. ಭವಿಷ್ಯದ ಇತರ ವೆಚ್ಚಗಳ ಬಗ್ಗೆ ಯೋಚಿಸಿದ್ದೀರಾ?
ಮನೆ ಖರೀದಿ ನಿಮ್ಮ ಜೀವನದ ಅತೀದೊಡ್ಡ ಗುರಿಯಾಗಿದ್ದರೂ ಭವಿಷ್ಯದ ಇತರ ಕೆಲವು ವೆಚ್ಚಗಳ ಬಗ್ಗೆ ನೀವು ಯೋಚಿಸಲೇಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ, ವೃದ್ಧಾಪ್ಯದ ಉಳಿತಾಯದ ಬಗ್ಗೆ ಯೋಚಿಸಿ ಅದಕ್ಕೊಂದಿಷ್ಟು ಹಣ ಕೂಡಿಡೋದು ಅಗತ್ಯ. ಹೀಗಾಗಿ ನಿಮ್ಮ ಗೃಹಸಾಲ ಇಂಥ ದೀರ್ಘಾವಧಿ ಯೋಜನೆಗಳಿಗೆ ಅಡಚಣೆಯಾಗದಂತೆ ನೋಡಿಕೊಳ್ಳಿ. 

click me!