*ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಯಲ್ಲಿ ಶೇ.10ರಷ್ಟು ಕುಸಿತ
*ಪ್ರತಿ ಟನ್ ಉಕ್ಕಿನ ಬೆಲೆ 63,800 ರೂ.ಗೆ ಇಳಿಕೆ
*ಮೇ 22ರಿಂದ ಜಾರಿಗೆ ಬರುವಂತೆ ಉಕ್ಕಿನ ರಫ್ತಿನ ಮೇಲೆ ಶೇ. 15ರಷ್ಟು ಸುಂಕ ವಿಧಿಸಿದ್ದ ಕೇಂದ್ರ ಸರ್ಕಾರ
ನವದೆಹಲಿ (ಜೂ.4): ಉಕ್ಕು (Steel) ರಫ್ತಿನ (export) ಮೇಲೆ ಕೇಂದ್ರ ಸರ್ಕಾರ (Central Government) ಸುಂಕ (Duty) ವಿಧಿಸಿದ ಬೆನ್ನಲ್ಲೇ ಕಳೆದೆರಡು ವಾರಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಯಲ್ಲಿ ಶೇ.10ರಷ್ಟು ಇಳಿಕೆಯಾಗಿದೆ. ಇದ್ರಿಂದ ಬೆಲೆಯೇರಿಕೆಯ ಬಿಸಿ ನಡುವೆ ಮನೆ ನಿರ್ಮಾಣಕ್ಕೆ ಕೈ ಹಾಕಿರೋರಿಗೆಸ್ವಲ್ಪ ಮಟ್ಟಿಗೆ ನಿರಾಳತೆ ಸಿಕ್ಕಿದೆ.
ಮಾರುಕಟ್ಟೆ ಗುಪ್ತಚರ ಸಂಸ್ಥೆ (market intelligence agency) ಸ್ಟೀಲ್‌ಮಿಂಟ್ (SteelMint) ಮಾಹಿತಿ ಪ್ರಕಾರ ಮೇ 18ರ ಬಳಿಕ ದೇಶೀಯ ಬೆಂಚ್ ಮಾರ್ಕ್(Benc mark) ಹಾಟ್ ರೋಲ್ಡ್ ಕಾಯಿಲ್ (HRC) ಉಕ್ಕಿನ ಬೆಲೆಯಲ್ಲಿ ಸರಿಸುಮಾರು ಶೇ.8 ಅಥವಾ 5,500ರೂ. ಇಳಿಕೆಯಾಗಿದೆ. ಇದ್ರಿಂದ ಪ್ರತಿ ಟನ್ ಉಕ್ಕಿನ ಬೆಲೆ 63,800 ರೂ.ಗೆ ಇಳಿಕೆಯಾಗಿದೆ. ಇನ್ನು ಉಕ್ಕು ಮಾರುಕಟ್ಟೆ ಬಗ್ಗೆ ಪರಿಣತಿ ಹೊಂದಿರುವ ತಜ್ಞರ ಪ್ರಕಾರ ಜೂನ್ ನಲ್ಲಿ ಉಕ್ಕಿನ ಬೆಲೆಯಲ್ಲಿ ಇನ್ನೂ ಇಳಿಕೆಯಾಗಲಿದೆ. ಉಕ್ಕು ಉತ್ಪಾದನಾ ಸಂಸ್ಥೆಗಳು ಈಗಾಗಲೇ ಪ್ರತಿ ಟನ್ ಮೇಲೆ 4,500ರೂ.–5,500ರೂ. ತನಕ ಕಡಿಮೆ ಬೆಲೆ ಕೋಟ್ ಮಾಡಿವೆ.
Steel Stocks Fall: ಷೇರು ಮಾರುಕಟ್ಟೆಯಲ್ಲಿ ನೆಲಕಚ್ಚಿದ ಸ್ಟೀಲ್ ಕಂಪನಿಗಳ ಷೇರುಗಳು; ಶೇ.13.2ರಷ್ಟು ಕುಸಿದ JSW
ಮೇ 22ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಉಕ್ಕಿನ ರಫ್ತಿನ ಮೇಲೆ ಶೇ. 15ರಷ್ಟು ಸುಂಕ ವಿಧಿಸಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ (Inflation) ಕಾರಣ ಉಕ್ಕಿನ ಬೆಲೆಯಲ್ಲಿ ಏರಿಕೆಯಾಗೋದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿತ್ತು. ಇನ್ನು ಉಕ್ಕಿನ ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಸರ್ಕಾರ ಕಬ್ಬಿಣದ ಅದರಿನ (Iron ore) ರಫ್ತಿನ ಮೇಲೆ ಕೂಡ ಸುಂಕ ವಿಧಿಸಿದ್ದು, ಕಲ್ಲಿದ್ದಲು (Coal) ಸೇರಿದಂತೆ ಪ್ರಮುಖ ಕಚ್ಚಾ ವಸ್ತುಗಳ (Raw materials) ಮೇಲಿನ ಆಮದು ಸುಂಕವನ್ನು (Import duty) ತಗ್ಗಿಸಿದೆ. ಸರ್ಕಾರದ ಈ ಎಲ್ಲ ಕ್ರಮಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಯಲ್ಲಿ ಇಳಿಕೆಯಾಗಲು ಪ್ರಾರಂಭಿಸಿದೆ.
'ಜಾಗತಿಕವಾಗಿ ಕೂಡ ಉಕ್ಕಿನ ಬೆಲೆಯಲ್ಲಿ ತಿದ್ದುಪಡಿಯಾಗಿದೆ' ಎಂದು ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ರಂಜನ್ ಧರ್ ತಿಳಿಸಿದ್ದಾರೆ. 'ಅಮೆರಿಕ, ಇಂಗ್ಲೆಂಡ್ ಹಾಗೂ ಚೀನಾದಲ್ಲಿ ಕೂಡ ಉಕ್ಕಿನ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಕೂಡ ಉಕ್ಕಿನ ಬೆಲೆಯಲ್ಲಿ ತಿದ್ದುಪಡಿ ಮಾಡಲಾಗಿದೆ' ಎಂದು ಧರ್ ತಿಳಿಸಿದ್ದಾರೆ. ಜಗತ್ತಿನಾದ್ಯಂತ ಕೋಕಿಂಗ್ ಕಲ್ಲಿದ್ದಲು ಬೆಲೆಯಲ್ಲಿ ಇಳಿಕೆ ಹಾಗೂ ಅಮೆರಿಕದ ಫೆಡರಲ್ ರಿಸರ್ವ್ ನೀತಿಗಳ ಕಾರಣದಿಂದ ಉಕ್ಕಿನ ಬೆಲೆಯಲ್ಲಿ ಇಳಿಕೆಯಾಗುತ್ತಿದೆ ಎಂದು ಕೂಡ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಏಪ್ರಿಲ್ ಮೊದಲ ವಾರದಲ್ಲಿ ಎಚ್ ಆರ್ ಸಿ ಉಕ್ಕು (HRC steel) ಬೆಲೆ ಪ್ರತಿ ಟನ್ ಗೆ 78,800ರೂ. ತಲುಪಿತ್ತು. ಆ ಬಳಿಕ ಪ್ರತಿ ವಾರ 2,000ರೂ.-3,000 ರೂ. ಇಳಿಕೆಯಾಗಿದೆ. ಇದಕ್ಕೆ ಕಾರಣ ಉಕ್ಕಿನ ರಫ್ತಿನ ಮೇಲಿನ ಸರ್ಕಾರ ಸುಂಕ ವಿಧಿಸಿರೋದೇ ಆಗಿದೆ ಎಂದು ಸ್ಟೀಲ್‌ಮಿಂಟ್‌ನ ಸಂಶೋಧನಾ ವಿಭಾಗದ ಅಧಿಕಾರಿ ಕಲ್ಪೇಶ್ ಪಡಿಯಾರ್ ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಕಿಂಗ್ ಕಲ್ಲಿದ್ದಲು (Coking Coal) ಬೆಲೆ ಪ್ರತಿ ಟನ್ ಗೆ 485 ಡಾಲರ್ ಗೆ ಇಳಿಕೆಯಾಗಿದೆ. 2021 ಸೆಪ್ಟೆಂಬರ್ ನಲ್ಲಿ ಕೋಕಿಂಗ್ ಕಲ್ಲಿದ್ದಲು ಬೆಲೆ ಸರ್ವಕಾಲಿಕ ಗರಿಷ್ಠ ಮಟ್ಟ ಪ್ರತಿ ಟನ್ ಗೆ 600 ಡಾಲರ್ ಮುಟ್ಟಿತ್ತು.
ಕಬ್ಬಿಣ, ಉಕ್ಕು, ಸಿಮೆಂಟ್ ಮತ್ತಷ್ಟುಅಗ್ಗ, ಪ್ಲಾಸ್ಟಿಕ್ ಆಮದು ಸುಂಕವೂ ಕಡಿತ!
2020-21ನೇ ಆರ್ಥಿಕ ವರ್ಷದಲ್ಲಿ ಭಾರತ 10.8 ಮಿಲಿಯನ್ ಟನ್ ಸಿದ್ಧಪಡಿಸಿದ ಉಕ್ಕನ್ನು ರಫ್ತು ಮಾಡಿತ್ತು. 2021-22ರಲ್ಲಿ ಭಾರತವು 13.5 ಮಿಲಿಯನ್ ಟನ್ (ಎಂಟಿ) ಸಿದ್ಧಪಡಿಸಿದ ಉಕ್ಕನ್ನು ರಫ್ತು ಮಾಡಿದೆ. ಇದೇ ವೇಳೆ ದೇಶೀಯ ಉಕ್ಕಿನ ಬಳಕೆಯು 94 ಎಂಟಿನಿಂದ 106 ಎಂಟಿಗೆ ಏರಿಕೆಯಾಗಿತ್ತು. 2021-22ರಲ್ಲಿ ಭಾರತದ ಕಬ್ಬಿಣದ ಅದಿರು ರಫ್ತು 15.3 ಎಂಟಿ ಆಗಿದ್ದರೆ, ಕಬ್ಬಿಣದ ಅದಿರು ಉಂಡೆಗಳ ರಫ್ತು 11 ಎಂಟಿ ಇತ್ತು.