ಮತ್ತೊಬ್ಬ ಭಾರತೀಯನಿಗೆ ಎಂಎನ್‌ಸಿ ಚುಕ್ಕಾಣಿ; ಲಕ್ಷ್ಮಣ್ ನರಸಿಂಹನ್ ಸ್ಟಾರ್ ಬಕ್ಸ್ ನೂತನ ಸಾರಥಿ

By Suvarna NewsFirst Published Sep 2, 2022, 5:25 PM IST
Highlights

*ಅಕ್ಟೋಬರ್ 1ರಂದು ಅಧಿಕಾರ ಸ್ವೀಕರಿಸಲಿರುವ ಲಕ್ಷ್ಮಣ್ ನರಸಿಂಹನ್ 
*ಪೆಪ್ಸಿಕೋ ಸೇರಿದಂತೆ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದ ನರಸಿಂಹನ್
*ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸ್ಟಾರ್ ಬಕ್ಸ್ ಮುನ್ನಡೆಸುವ ಜವಾಬ್ದಾರಿ ಭಾರತೀಯನ ಹೆಗಲಿಗೆ
 

ವಾಷಿಂಗ್ಟನ್ (ಸೆ.2): ಜಗತ್ತಿನ ಅತೀದೊಡ್ಡ ಕಾಫಿ ಕೆಫೆ ಸರಪಳಿ ಹೊಂದಿರುವ ಸ್ಟಾರ್ ಬಕ್ಸ್  ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ (ಸಿಇಒ)  ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕಗೊಂಡಿದ್ದಾರೆ. ಅಕ್ಟೋಬರ್ 1ರಂದು ಲಕ್ಷ್ಮಣ್ ಸ್ಟಾರ್ ಬಕ್ಸ್ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಲಂಡನ್ ನಲ್ಲಿರುವ ಲಕ್ಷ್ಮಣ್  ಸ್ಟಾರ್ ಬಕ್ಸ್ ಕೇಂದ್ರ ಕಚೇರಿಯಿರುವ ಸೀಟ್ಟಲ್ ಗೆ ಸ್ಥಳಾಂತರಗೊಳ್ಳಲಿದ್ದಾರೆ. ಲಕ್ಷ್ಮಣ್ ಡುರೆಕ್ಸ್ ಕಾಂಡೋಮ್ಸ್ , ಎನ್ಫ್ಯಾಮಿಲ್ ಬೇಬಿ ಫಾರ್ಮುಲಾ ಹಾಗೂ ಮುಸಿನೆಕ್ಸ್ ಶೀತದ ಸಿರಫ್ ಉತ್ಪಾದಿಸುವ ರೆಕ್ಕಿಟ್ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು (ಸೆ.2) ಅವರು ಈ ಹುದ್ದೆಯಿಂದ ನಿರ್ಗಮಿಸಿದ್ದು, ರೆಕ್ಕಿಟ್ ಷೇರುಗಳು ಮಾರುಕಟ್ಟೆಯಲ್ಲಿ ಶೇ.4ರಷ್ಟು ಕುಸಿತ ದಾಖಲಿಸಿವೆ. ಸ್ಟಾರ್ ಬಕ್ಸ್ ಪ್ರಸ್ತುತ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ಅಮೆರಿಕದಲ್ಲಿ ಇದರ 200ಕ್ಕೂ ಹೆಚ್ಚಿನ ಸ್ಟೋರ್ ಗಳನ್ನು ಕಳೆದ ವರ್ಷ ಸಂಘಟಿಸಲಾಗಿದೆ. ಹಣದುಬ್ಬರ ಹೆಚ್ಚುತ್ತಿರುವ ಈ ಸಮಯದಲ್ಲಿ ಉದ್ಯೋಗಿಗಳು ವೇತನ ಹೆಚ್ಚಳ ಹಾಗೂ ಉತ್ತಮ ಸೌಲಭ್ಯಗಳಿಗಾಗಿ ಆಗ್ರಹಿಸುತ್ತಿರೋದು ಸ್ಟಾರ್ ಬಕ್ಸ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇನ್ನು ಕಂಪನಿ ಕೂಡ ತನ್ನ ಬ್ಯುಸಿನೆಸ್ ಮಾಡೆಲ್ ಅನ್ನು ಮರುರಚನೆ ಮಾಡುತ್ತಿದೆ. ಚೀನಾದಲ್ಲಿ ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಸ್ಟಾರ್ ಬಕ್ಸ್ ಉದ್ಯಮ ತಗ್ಗಿದೆ. ಸ್ಟಾರ್ ಬಕ್ಸ್ ಗೆ ಚೀನಾ ಅತ್ಯಂತ ದೊಡ್ಡ ವಿದೇಶಿ ಮಾರುಕಟ್ಟೆಯಾಗಿದೆ.

ಲಕ್ಷ್ಮಣ್ ನರಸಿಂಹನ್ ಅಕ್ಟೋಬರ್ ನಲ್ಲಿಸ್ಟಾರ್ ಬಕ್ಸ್ ಗೆ ಸೇರ್ಪಡೆಗೊಳ್ಳಲಿದ್ದಾರೆ. ಆದರೆ, ಅವರು 2023ರ ಏಪ್ರಿಲ್ ನಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೆಲವು ದಿನಗಳ ಕಾಲ ಕಂಪನಿಯ ಕಾರ್ಯನಿರ್ವಹಣೆ ಹಾಗೂ ಹೊಸ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಹಾಗೆಯೇ ಉದ್ಯೋಗಿಗಳ ಕಲ್ಯಾಣಕ್ಕೆ ಸಂಬಂಧಿಸಿ ಹಾಗೂ ಗ್ರಾಹಕರ ಅನುಭವಗಳನ್ನು ಪರಿಗಣಿಸಿ ಕಂಪನಿಯನ್ನು ಹೇಗೆ ಅಭಿವೃದ್ಧಿಗೊಳಿಸೋದು ಎಂಬ ಬಗ್ಗೆ ಯೋಜನೆಗಳನ್ನು ಪುನರ್ ರೂಪಿಸುವ ಕಾರ್ಯ ಮಾಡಲಿದ್ದಾರೆ. ಹೀಗಾಗಿ ಅಲ್ಲಿಯ ತನಕ ಕಂಪನಿಯ ವ್ಯವಹಾರಗಳನ್ನು ಹಂಗಾಮಿ ಸಿಇಒ ಹೊವಾರ್ಡ್ ಸ್ಕೂಲ್ಟಜ್  ನಿರ್ವಹಿಸಲಿದ್ದಾರೆ. ಕೆವಿನ್ ಜಾನ್ಸನ್ ನಿವೃತ್ತಿ ಬಳಿಕ ಏಪ್ರಿಲ್ ನಲ್ಲಿ ಸ್ಕೂಲ್ಟಜ್ ಕಂಪನಿಯ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 'ಶಕ್ತಿಯುತ ಗ್ರಾಹಕರ ಬ್ರ್ಯಾಂಡ್ ಗಳನ್ನು ನಿರ್ಮಿಸುವ ವಿಚಾರದಲ್ಲಿ ಲಕ್ಷ್ಮಣ್ ನರಸಿಂಹನ್ ಕಾರ್ಯತಂತ್ರ ಹೊಂದಿರುವ ಹಾಗೂ ಪರಿವರ್ತನೆ ಮಾಡಬಲ್ಲ ನಾಯಕರಾಗಿದ್ದಾರೆ' ಎಂದು ನರಸಿಂಹನ್ ಅವರನ್ನು ಕಂಪನಿಗೆ ಸ್ವಾಗತಿಸುತ್ತ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ಸ್ಕೂಲ್ಟಜ್ ಹೇಳಿದ್ದಾರೆ.

ಎರಡೇ ವರ್ಷದಲ್ಲಿ ಸಂಪತ್ತಿನಲ್ಲಿ ಆರು ಪಟ್ಟು ಹೆಚ್ಚಳ; ಅದಾನಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದು ಹೇಗೆ?

ಲಕ್ಷ್ಮಣ್ ನರಸಿಂಹನ್ 2019 ರ ಸೆಪ್ಟೆಂಬರ್ ನಲ್ಲಿ ರೆಕ್ಕಿಟ್ ಕಂಪನಿಗೆ ಸೇರ್ಪಡೆಗೊಂಡಿದ್ದರು. ಕೋವಿಡ್ ಸಂದರ್ಭದಲ್ಲಿ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಕೂಡ ಇವರಿಗಿದೆ. ಈ ಸಮಯದಲ್ಲಿ ರೆಕ್ಕಿಟ್ ಸಂಸ್ಥೆಯ ಆರೋಗ್ಯ ಹಾಗೂ ನೈರ್ಮಲ್ಯದ  ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿತ್ತು.55 ವರ್ಷದ ಲಕ್ಷ್ಮಣ್ ನರಸಿಂಹನ್ ರೆಕ್ಕಿಟ್ ಸಂಸ್ಥೆಗೆ ಸೇರುವ ಮುನ್ನ ಪೆಪ್ಸಿಕೋದಲ್ಲಿ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಕನ್ಸಲ್ಟಿಂಗ್ ಸಂಸ್ಥೆ ಮೆಕ್ ಕಿನ್ಸೆ ಹಾಗೂ ಕೋನಲ್ಲಿ ಕೂಡ ಹಿರಿಯ ಪಾಲುದಾರರಾಗಿ ನರಸಿಂಹನ್ ಕಾರ್ಯನಿರ್ವಹಿಸಿದ್ದರು. ಇಲ್ಲಿ ಅವರು ಅಮೆರಿಕ ಹಾಗೂ ಭಾರತದಲ್ಲಿ ಗ್ರಾಹಕ, ಚಿಲ್ಲರೆ ಹಾಗೂ ತಂತ್ರಜ್ಞಾನ ಅಭ್ಯಾಸಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದರು. 

Success Mantra: ವ್ಯಾಪಾರದ ಬಗ್ಗೆ ಉಚಿತ ಪ್ರಚಾರ ಹೇಗ್ಮಾಡ್ಬೇಕು ಗೊತ್ತಾ?

1987ರಲ್ಲಿ ಖರೀದಿಯ ಬಳಿಕ ಸ್ಟಾರ್ ಬಕ್ಸ್ ಗೆ ಹೊಸ ರೂಪ ಕೊಡುವಲ್ಲಿ ಸಹಾಯ ಮಾಡಿದ್ದ ಸುದೀರ್ಘ ಕಾಲ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ಸ್ಕೂಲ್ಟಜ್  ನಿವೃತ್ತಿ ಬಳಿಕ ಕಂಪನಿಯಿಂದ ಹೊರಬಂದಿದ್ದರು. ಆದರೆ, ಈ ಹಿಂದಿನ ಸಿಇಒ ಕೆವಿನ್ ಜಾನ್ಸನ್ ನಿವೃತ್ತಿ ಘೋಷಿಸಿದ ಬಳಿಕ ಮಾರ್ಚ್ ನಲ್ಲಿ ಹಂಗಾಮಿ ಸಿಇಒ ಆಗಿ  ಸ್ಕೂಲ್ಟಜ್  ಮತ್ತೆ ಸಂಸ್ಥೆಗೆ ಮರಳಿದ್ದರು. ಕಂಪನಿಯ ನಿರ್ದೇಶಕರ ಮಂಡಳಿಗೆ ಕೂಡ ಸ್ಕೂಲ್ಟಜ್ ಹಿಂತಿರುಗಿದ್ದು, ನರಸಿಂಹನ್ ಅಧಿಕಾರ ವಹಿಸಿಕೊಂಡ ಬಳಿಕ ಕೂಡ ಅವರು ಸಂಸ್ಥೆಯಲ್ಲಿ ಮುಂದುವರಿಯಲಿದ್ದಾರೆ. 
 

click me!