
ನವದೆಹಲಿ (ಸೆ.2): ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದ ಸಾಕಷ್ಟು ಹೊಡೆತ ಅನುಭವಿಸಿದ್ದ ಜಗತ್ತಿನ ಆರ್ಥಿಕತೆ ಸದ್ಯ ಚೇತರಿಕೆ ಕಾಣುತ್ತಿದೆ. ಈ ನಡುವೆ ಕೆಲವು ಉದ್ಯಮಿಗಳ ಸಂಪತ್ತಿನಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಭಾರತದ ಶ್ರೀಮಂತ ಉದ್ಯಮಿ ಎಂಬ ಪಟ್ಟ ಮುಖೇಶ್ ಅಂಬಾನಿ ಕೈಜಾರಿ ಗೌತಮ್ ಅದಾನಿ ತೆಕ್ಕೆ ಸೇರಿತ್ತು. ಅಷ್ಟೇ ಅಲ್ಲ, ಗೌತಮ್ ಅದಾನಿ ಭಾರತ ಮಾತ್ರವಲ್ಲ, ಏಷ್ಯಾದ ನಂ.1 ಶ್ರೀಮಂತ ಉದ್ಯಮಿ ಪಟ್ಟ ಕೂಡ ಅಲಂಕರಿಸಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಗೌತಮ್ ಅದಾನಿ ವಿಶ್ವದ ಮೂರನೇ ಶ್ರೀಮಂತ ಉದ್ಯಮಿ ಎನ್ನಿಸಿಕೊಂಡಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ವಿಶ್ವದ ಅಗ್ರ ಮೂರು ಶ್ರೀಮಂತ ವ್ಯಕ್ತಿಗಳ ಪಟ್ಟಿ ಪ್ರವೇಶಿಸಿದ ಏಷ್ಯಾದ ಮೊದಲ ವ್ಯಕ್ತಿ ಎನ್ನುವ ಗೌರವಕ್ಕೆ ಅದಾನಿ ಪಾತ್ರರಾಗಿದ್ದಾರೆ. ಒಟ್ಟು 137.4 ಬಿಲಿಯನ್ ಡಾಲರ್ (ಸುಮಾರು 11 ಲಕ್ಷ ಕೋಟಿ) ಒಟ್ಟು ಸಂಪತ್ತು ಹೊಂದಿರುವ ಅದಾನಿ, ಲೂಯಿಸ್ ವಿಟಾನ್ ಬ್ರ್ಯಾಂಡ್‌ನ ಸಂಸ್ಥಾಪಕ ಫ್ರಾನ್ಸ್‌ನ ಬರ್ನಾಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಶ್ರೀಮಂತ ಉದ್ಯಮಿ ಎಂದು ಗುರುತಿಸಿಕೊಂಡಿದ್ದಾರೆ. ಇನ್ನು ನಂ.1 ಪಟ್ಟ ಅಲಂಕರಿಸಿಲು ಕೇವಲ ಇಬ್ಬರು ವ್ಯಕ್ತಿಗಳಿಂದ ಹಿಂದೆ ಉಳಿದಿದ್ದಾರೆ. ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ 251 ಶತಕೋಟಿ ಅಮೆರಿಕನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ನಂ.1 ಸ್ಥಾನದಲ್ಲಿದ್ದರೆ, 153 ಶತಕೋಟಿ ಅಮೆರಿಕನ್ ಡಾಲರ್‌ನೊಂದಿಗೆ ಬೆಜೋಸ್ ಎರಡನೇ ಸ್ಥಾನದಲ್ಲಿದ್ದಾರೆ. ಅದು ಹೇಗೆ ಅದಾನಿ ವಿಶ್ವದ ಮೂರನೇ ಶ್ರೀಮಂತ ಉದ್ಯಮಿಯಾದ್ರೂ? ಅವರ ಸಂಪತ್ತಿನಲ್ಲಿ ಏರಿಕೆಯಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ.
ಎರಡೇ ವರ್ಷದಲ್ಲಿ ಸಂಪತ್ತಿನಲ್ಲಿ ಭಾರೀ ಏರಿಕೆ
ಬರೀ 2022ರಲ್ಲೇ ಅದಾನಿ ಸಂಪತ್ತಿಗೆ 60.9 ಬಿಲಿಯನ್ ಅಮೆರಿಕನ್ ಡಾಲರ್ ಸೇರ್ಪಡೆಗೊಂಡಿದೆ. ಇದು ಇತರ ಉದ್ಯಮಿಗಳಿಗಿಂತ ಐದು ಪಟ್ಟು ಹೆಚ್ಚಿನ ಏರಿಕೆಯಾಗಿದೆ. ವಿಶೇಷವೆಂದ್ರೆ ಅದಾನಿ ಏಷ್ಯಾದ ಶ್ರೀಮಂತ ಉದ್ಯಮಿಯಾಗಿ ಮೂಡಿಬಂದಿದ್ದು ಕೂಡ ಈ ವರ್ಷದ ಫೆಬ್ರವರಿಯಲ್ಲೇ. ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಎಂದು ಗುರುತಿಸಿಕೊಂಡಿದ್ದರು. ಕೋವಿಡ್ ಪ್ರಾರಂಭಕ್ಕೂ ಮುನ್ನ ಅಂದ್ರೆ 2020ರ ಜನವರಿ 1ರಂದು ಗೌತಮ್ ಅದಾನಿ ಸಂಪತ್ತು 10 ಬಿಲಿಯನ್ ಡಾಲರ್ ಆಗಿತ್ತು. ಅದೇ ಸಮಯದಲ್ಲಿ ಮುಖೇಶ್ ಅಂಬಾನಿ ಸಂಪತ್ತು 59 ಬಿಲಿಯನ್ ಅಮೆರಿಕನ್ ಡಾಲರ್. ಆದ್ರೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅದಾನಿ ಸಂಪತ್ತು ಆರು ಪಟ್ಟು ಹೆಚ್ಚಳವಾಗಿದೆ. ಇಂದು ಅದಾನಿ ಬಳಿಯಿರುವ ಸಂಪತ್ತು 137 ಬಿಲಿಯನ್ ಡಾಲರ್. ಅದೇ ಮುಖೇಶ್ ಅಂಬಾನಿ ಅವರ ಸಂಪತ್ತು 91.9 ಬಿಲಿಯನ್ ಡಾಲರ್. ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ರೆ, ಅಂಬಾನಿ 11ನೇ ಸ್ಥಾನದಲ್ಲಿದ್ದಾರೆ.
ಆಗಸ್ಟ್ ನಲ್ಲಿ ದಾಖಲೆ ಬರೆದ ಯುಪಿಐ; ಸುಮಾರು 11ಲಕ್ಷ ಕೋಟಿ ರೂ. ವಹಿವಾಟು
2021ರಲ್ಲಿ 5 ಕಂಪನಿಗಳ ಸ್ಥಾಪನೆ
ಸೆಪ್ಟೆಂಬರ್ 2021ರಲ್ಲಿ ಗೌತಮ್ ಅದಾನಿ 1ಲಕ್ಷ ಕೋಟಿ ರೂ.( 13 ಬಿಲಿಯನ್ ಡಾಲರ್) ಮಾರುಕಟ್ಟೆ ಮೌಲ್ಯ ಹೊಂದಿರುವ 5 ಕಂಪನಿಗಳನ್ನು ಸ್ಥಾಪಿಸಿದ್ದರು. ಹುರುನ್ ಇಂಡಿಯಾ (Hurun India) ಶ್ರೀಮಂತರ ಪಟ್ಟಿ ಪ್ರಕಾರ ಇತರರಿಗೆ ಹೋಲಿಸಿದ್ರೆ 2021ರಲ್ಲಿ ಅದಾನಿ ಅವರ ಸಂಪತ್ತು ಭಾರೀ ಹೆಚ್ಚಳ ಕಂಡಿತ್ತು. ಅವರ ಸಂಪತ್ತಿಗೆ 49 ಬಿಲಿಯನ್ ಡಾಲರ್ ಸೇರ್ಪಡೆಯಾಗಿತ್ತು. ಅಂದ್ರೆ ಆ ಅವಧಿಯಲ್ಲಿ ವಾರಕ್ಕೆ 6,000 ಕೋಟಿ ರೂ.ನಂತೆ ಅವರ ಸಂಪತ್ತು ಹೆಚ್ಚಳಗೊಳ್ಳುತ್ತ ಸಾಗಿತ್ತು. 2022ರ ಏಪ್ರಿಲ್ ನಲ್ಲಿ ಅದಾನಿ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.
Succession Plan: ಮಕ್ಕಳಿಗೆ ಉತ್ತರಾಧಿಕಾರ ಹಂಚುತ್ತಿರುವ Mukesh Ambani, ಯಾರಿಗೆ ಏನೆಲ್ಲಾ ಹಂಚಿಕೆ?
ಐದು ವರ್ಷಗಳಲ್ಲಿ ಎಲ್ಲ ಕ್ಷೇತ್ರಕ್ಕೂ ಎಂಟ್ರಿ
ಕಳೆದ ಐದು ವರ್ಷಗಳಲ್ಲಿ ಗೌತಮ್ ಅದಾನಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆಯಿಂದ ಹಿಡಿದು ಬಂದರು ತನಕ, ಸಿಮೆಂಟ್, ಮಾಧ್ಯಮ, ಸಿಟಿ ಗ್ಯಾಸ್ ವಿತರಣೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅದಾನಿ ಗ್ರೂಪ್ ಪ್ರಸ್ತುತ ಭಾರತದ ಅತೀದೊಡ್ಡ ಖಾಸಗಿ ವಲಯದ ಬಂದರು ಹಾಗೂ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.