
ಬೆಂಗಳೂರು[ಜ.29]: ಹೋಟೆಲ್‌ಗೆ ಹೋಗಿ ಮಟನ್ ಸ್ಯಾಂಡ್‌ವಿಚ್, ಮಟನ್ ಬಿರಿಯಾನಿ, ಮಟನ್ ಕರಿ, ಫ್ರೈಡ್‌ರೈಸ್ ಸೇರಿದಂತೆ ವಿವಿಧ ಮಟನ್ ಖಾದ್ಯಗಳನ್ನು ಆರ್ಡರ್ ಮಾಡುವಾಗ ಸ್ವಲ್ಪ ಯೋಚಿಸಿ! ಯಾಕಂದ್ರೆ, ಮಟನ್ ಬೆಲೆ ದಿಢೀರನೆ ಕೆ.ಜಿ.ಗೆ 700ರವರೆಗೆ ತಲುಪಿದ್ದು, ಮಾಂಸಾಹಾರಿ ಹೋಟೆಲ್‌ಗಳ ಖಾದ್ಯಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಕುರಿ ಸಾಕಾಣಿಕೆ ಇಳಿಕೆಯಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ 2-3 ತಿಂಗಳ ಹಿಂದೆ ಮಟನ್ ಬೆಲೆ ಕೆ.ಜಿ.ಗೆ 450ರಿಂದ 550 ರು. ಇದ್ದದ್ದು ಏಕಾಏಕಿ 650ರು.ನಿಂದ 700 ರು.ಗೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಈರುಳ್ಳಿ ಉತ್ಪಾದನೆ ಕುಸಿತ ಕಂಡು ಗ್ರಾಹಕರ ಕಣ್ಣಲ್ಲೂ ನೀರೂರಿಸಿತ್ತು. ಇದೀಗ ಎಲ್‌ಪಿಜಿ ಗ್ಯಾಸ್, ತರಕಾರಿ ಬೆಲೆಗಳೂ ಹೆಚ್ಚಾಗಿರುವುದರೊಂದಿಗೆ ಮಟನ್ ದರ ಏರಿಕೆಯಾಗಿರುವುದು ಗ್ರಾಹಕರಿಗೆ ಬೇಸರ ಮೂಡಿಸಿದೆ.
ತರಕಾರಿ ಹಣ್ಣು ತಿನ್ನಿ, ವಾಕ್ ಮಾಡಿ ಅನ್ನೋದೆಲ್ಲ ಹಳೇದಾಯ್ತು, ಹೊಸದೇನಿದೆ?
ರಾಜ್ಯದಲ್ಲಿ ಬರದಿಂದ ಮೇವು, ನೀರಿನ ತೊಂದರೆಯೂ ಸಾಕಷ್ಟಿದೆ. ಪ್ರತಿ ವರ್ಷ ಫೆಬ್ರವರಿಯಿಂದ ಜೂನ್‌ನಲ್ಲಿ ಮೇವಿಗೆ ಕಷ್ಟವಿರುತ್ತದೆ. ಆದರೆ, ಈ ಹಿಂದಿನಂತೆ ರೈತರಿಂದ ಕುರಿ ಸಾಕಾಣಿಕೆಯಾಗುತ್ತಿಲ್ಲ. ಸಂಚಾರಿ ಕುರಿ ಸಾಕಾಣಿಕೆದಾರರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಕುರಿ ಸಾಕಾಣಿಕೆದಾರರಿಗೆ ಕುರಿ, ಮೇಕೆಗಳನ್ನು ಮೇಯಿಸಲು ಗೋಮಾಳಗಳು ಸಿಗುತ್ತಿಲ್ಲ. ಮೊದಲಿನ ಹಾಗೆ ರೈತರು ಕೂಡ ಭೂಮಿಯಲ್ಲಿ ಕುರಿಗಳನ್ನು ಮೇಯಿಸಲು ಬಿಡುತ್ತಿಲ್ಲ. ಹೀಗಾಗಿ ಸಂಚಾರಿ ಕುರಿ ಸಾಕಾಣಿಕೆ ಸಂಖ್ಯೆ ಕಡಿಮೆಯಾಗಿದೆ. ಮಾರಾಟಕ್ಕೆ ಕುರಿಗಳು ಸಿಗುತ್ತಿಲ್ಲವಾದ್ದರಿಂದ ಮಾಂಸದ ಬೆಲೆಯೂ ಏರಿಕೆಯಾಗಿದೆ. ಇನ್ನೊಂದೆಡೆ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬಾಯ್ಲರ್ ಕೋಳಿ ಲಗ್ಗೆ ಇಟ್ಟಿರುವುದು ಸಹ ಮಟನ್ ಮಾರಾಟಗಾರರಿಗೆ ಹೊಡೆತ ನೀಡಿದೆ. ಈ ಪರಿಸ್ಥಿತಿ ಹೀಗೇ ಮುಂದುವರೆದರೆ ಮುಂದಿನ ಯುಗಾದಿ ವೇಳೆಗೆ ಮಾಂಸದ ಬೆಲೆ 800 ರು. ತಲುಪಬಹುದು ಎನ್ನುತ್ತಿದ್ದಾರೆ ಮಾರಾಟಗಾರರು.
ಕುಗ್ಗಿದ ಕುರಿ ಸಾಕಾಣಿಕೆ:
ಇತ್ತೀಚಿನ ದಿನಗಳಲ್ಲಿ ಕುರಿ ಸಾಕಾಣಿಕೆ ಸಾಕಷ್ಟುಕುಗ್ಗಿದೆ. ರಾಜ್ಯದಲ್ಲಿ ಕುರಿಗಳ ಸಂಖ್ಯೆ 20 ಕೋಟಿ ಇರಬೇಕಿತ್ತು. ಆದರೆ, ಇಂದು 1 ಕೋಟಿ 20 ಲಕ್ಷ ಕುರಿ, 70 ಲಕ್ಷ ಮೇಕೆಗಳಿವೆ. 2012ರ ಜನಗಣತಿ ಪ್ರಕಾರ ರಾಜ್ಯದಲ್ಲಿ 90 ಲಕ್ಷ ಕುರಿ ಇತ್ತು. ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅರ್ಹ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ವಿವಿಧ ನಿಗಮಗಳು ಆರ್ಥಿಕವಾಗಿ ಹಿಂದುಳಿದವರ ಹೆಸರಿನಲ್ಲಿ ನೀಡುವ ಕುರಿ, ಮೇಕೆಗಳೆಲ್ಲ ಉಳ್ಳವರ ಪಾಲಾಗುತ್ತಿವೆ. ಕರ್ನಾಟಕದಲ್ಲಿ ಹಿಂದಿಗಿಂತ ಶೇ.21.5ರಷ್ಟುಕುರಿ ಸಾಕಾಣಿಕೆಯಲ್ಲಿ ಹೆಚ್ಚಳವಾಗಿದ್ದರೂ ಬೇಡಿಕೆಗೆ ತಕ್ಕಷ್ಟುದೊರೆಯುತ್ತಿಲ್ಲ. ಮಾಂಸ ಸೇವಿಸುವವರ ಸಂಖ್ಯೆ ಏರುತ್ತಿದ್ದರೆ ಕುರಿ, ಮೇಕೆ ಸಾಕಾಣಿಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್‌ಗೌಡ ತಿಳಿಸಿದರು.
ಇದನ್ನ ತಿಂದ್ರೆ ಹ್ಯಾಂಗ್ ಓವರ್‌ನಿಂದ ಪಾರಾಗ್ತೀರ!
ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ಬೆಂಗಳೂರು ನಗರ-ಗ್ರಾಮಾಂತರ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಕುರಿ, ಮೇಕೆ ಮಾಂಸದ ಬೆಲೆಯಲ್ಲಿ ವ್ಯತ್ಯಾಸವಿದೆ. ಸದ್ಯ ಬೆಂಗಳೂರು ನಗರದಲ್ಲಿ ಬೆಲೆ ಏರಿಕೆಯಾಗಿದೆ. ರಾಜ್ಯದಲ್ಲಿ 1800ಕ್ಕೂ ಹೆಚ್ಚು ಸಂಘದ ಸದಸ್ಯರಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯ ಅಡಿಯಲ್ಲಿ 650 ಮಾಂಸ ಮಾರಾಟ ಅಂಗಡಿಗಳಿವೆ. ರೈತರಿಂದಲೂ ನೇರ ಖರೀದಿ ಮಾಡುತ್ತೇವೆ. ಸಂಘದಿಂದ ಮಟನ್ ಬ್ರಾಂಡ್ ಮಾಡಲು ನಿರ್ಧರಿಸಿದ್ದು, ನೂತನ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಈ ಮೂಲಕ ಒಂದು ನಿರ್ದಿಷ್ಟಬೆಲೆ ನಿಗದಿ ಮಾಡಿ ರೈತರಿಗೂ ನ್ಯಾಯ ದೊರಕಿಸಿಕೊಡಲು ಚಿಂತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.