
ಬೆಂಗಳೂರು[ಜ.29]: ಕೇಂದ್ರ ಸರ್ಕಾರ ‘ಒಂದು ದೇಶ, ಒಂದು ತೆರಿಗೆ’ (ಒನ್ ನೇಷನ್, ಒನ್ ಟ್ಯಾಕ್ಸ್) ಅಡಿಯಲ್ಲಿ ವಾಹನಗಳ ನೋಂದಣಿ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಿದ್ದು, ಈ ಯೋಜನೆಯಿಂದ ರಾಜ್ಯಕ್ಕೆ ಸುಮಾರು ಒಂದು ಸಾವಿರ ಕೋಟಿ ರು. ತೆರಿಗೆ ಕಡಿಮೆಯಾಗಲಿದೆ. ಈ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಚರ್ಚಿಸಿ ಕಾನೂನು ತರಲು ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದರದ ವಾಹನ ನೋಂದಣಿ ತೆರಿಗೆ ಇದೆ. ಕಡಿಮೆ ತೆರಿಗೆ ಇರುವ ರಾಜ್ಯಗಳಿಗೆ ತೆರಳಿ ಇತರ ರಾಜ್ಯಗಳ ವಾಹನಗಳು ನೋಂದಣಿ ಮಾಡಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಒಂದೇ ರೀತಿಯ ತೆರಿಗೆ ಪದ್ಧತಿ ಜಾರಿಗೆ ತರಲು ಕೇಂದ್ರ ಮುಂದಾಗಿದೆ. ರಾಜ್ಯದಲ್ಲಿ ಶೇ.16, 18 ಮತ್ತು ಶೇ.20 ಸ್ಲಾ್ಯಬ್‌ಗಳಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಕೇಂದ್ರ ಸರ್ಕಾರ ಶೇ.8, 10 ಮತ್ತು 12ರಂತೆ ತೆರಿಗೆ ವಿಧಿಸುತ್ತಿದೆ. ಕೇಂದ್ರದ ಮಾದರಿಯಲ್ಲಿ ತೆರಿಗೆ ಪದ್ಧತಿ ಜಾರಿಗೆ ತಂದರೆ ರಾಜ್ಯಕ್ಕೆ ಬರುವ ತೆರಿಗೆ ಪ್ರಮಾಣ ಕಡಿಮೆಯಾಗುತ್ತದೆ. ಈ ವ್ಯತ್ಯಾಸವಾಗುವ ಮೊತ್ತದ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ ಎಂದರು.
ಬಜೆಟ್ ಮೂಲಕ ಚೀನಾಗೆ ಗುದ್ದು: ಮೋದಿ ಪ್ಲ್ಯಾನ್ ಮಾಡ್ತಿದೆ ಸದ್ದು!
ಸಾರಿಗೆ ನೌಕರರ ಬೇಡಿಕೆ ಪರಿಶೀಲನೆ:
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರು ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಹಲವಾರು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ನಾಲ್ಕು ನಿಗಮಗಳಲ್ಲಿ ಸುಮಾರು 1.30 ಲಕ್ಷ ಜನರು ಚಾಲಕರು, ಕಂಡಕ್ಟರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿದರೆ, ಬೇರೆ ಬೇರೆ ನಿಗಮಗಳ ನೌಕರರು ಇದೇ ರೀತಿಯ ಬೇಡಿಕೆ ಇಡುವ ಸಾಧ್ಯತೆ ಇದ್ದೇ ಇರುತ್ತದೆ. ಹೀಗಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸವದಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಸರ್ಕಾರಕ್ಕೆ ‘ನೇರ ತೆರಿಗೆ’ ಶಾಕ್?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.