ಹೌದಾ? 1 ಎಟಿಎಂ ಇಷ್ಟೆಲ್ಲಾ ಕೆಲ್ಸ ಮಾಡತ್ತಾ?: ಒಮ್ಮೆ ಚೆಕ್ ಮಾಡಿ!

By Web DeskFirst Published Aug 15, 2018, 1:15 PM IST
Highlights

ಒಂದು ಎಟಿಎಂ ಮಶೀನ್ ಎಷ್ಟೆಲ್ಲಾ ಕೆಲಸ ಮಾಡುತ್ತೆ ಗೊತ್ತಾ?! ಎಟಿಎಂ ಸೇವೆಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ! ಅಚ್ಚರಿಗೊಳಿಸುವ ಎಟಿಎಂ ಮಶೀನ್ ಸೇವಾ ಪಟ್ಟಿ! ಎಟಿಎಂ ಇರುವುದು ಕೇವಲ ವಿತ್ ಡ್ರಾ ಮಾಡಲು ಅಲ್ಲ

ಬೆಂಗಳೂರು(ಆ.15): ಸಾಮಾನ್ಯವಾಗಿ ನಾವು ಎಟಿಎಂ ಕೇಂದ್ರಗಳನ್ನು ಹಣ ವಿತ್ ಡ್ರಾ ಮಾಡುವುದಕ್ಕಾಗಿ ಮಾತ್ರ ಬಳಸುತಿದ್ದರು. ಆದರೆ ಇದೀಗ ಇನ್ನೂ ಅನೇಕ ವ್ಯವಹಾರಗಳನ್ನು ಎಟಿಎಂ ಯಂತ್ರಗಳ ಮೂಲಕ ಮಾಡಬಹುದಾಗಿದೆ. ಹೆಚ್ಚಿನ ವ್ಯವಹಾರಗಳಿಗಾಗಿ ಬ್ಯಾಂಕುಗಳಿಗೆ ಹೋಗಬೇಕಾದ ಅಗತ್ಯವಿಲ್ಲ. ಹೀಗಾಗಿ ಎಟಿಎಂ ಕೇಂದ್ರಗಳಲ್ಲಿ ಇಷ್ಟೊಂದು ಕೆಲಸಗಳನ್ನು ಮಾಡಬಹುದಾ ಅಂತಾ ಅಶ್ಚರ್ಯ ಕೂಡ ಆಗಬಹುದು.

ಹಾಗಾದರೆ ಒಂದು ಎಟಿಎಂ ಮಶೀನ್ ನಿಂದ ಏನೆಲ್ಲಾ ಸೇವೆಗಳನ್ನು ಪಡೆಯಬಹುದು ಎಂದು ನೋಡುವುದಾದರೆ..

1. ವಿತ್ ಡ್ರಾ: ಎಲ್ಲರಿಗೂ ಗೊತ್ತಿರುವಂತೆ ಎಟಿಎಂ ಮಶೀನ್ ನಿಂದ ನಗದು ವಿತ್ ಡ್ರಾ ಮಾಡಬಹುದಾಗಿದೆ. ಮುಖ್ಯವಾಗಿ ಪ್ರತಿಯೊಬ್ಬರೂ ನಗದು ವಿತ್ ಡ್ರಾ ವ್ಯವಹಾರ ಮಾಡಿರುತ್ತಾರೆ. ನೋಟು ನಿಷೇಧದ ನಂತರ ಒಂದು ದಿನಕ್ಕೆ ಅಥವಾ ಒಂದು ವಾರಕ್ಕೆ 50 ಸಾವಿರ ನಗದು ವಿತ್ ಡ್ರಾ ಮಾಡಬಹುದಾಗಿದೆ.

2. ಬ್ಯಾಲೆನ್ಸ್ ಚೆಕ್: ಇದೂ ಕೂಡ ಸಾಮಾನ್ಯ ಸಂಗತಿ. ಗ್ರಾಹಕರು ತಮ್ಮ ಖಾತೆಯಲ್ಲಿನ ಮೊತ್ತವನ್ನು, ಪ್ರಸ್ತುತ ಲಭ್ಯವಿರುವ ಒಟ್ಟು ಮೊತ್ತವನ್ನು ಪರಿಶೀಲನೆ ಮಾಡಬಹುದು.

3. ಹಣ ವರ್ಗಾವಣೆ: ಈ ಸೇವೆ ಇತ್ತೀಚೆಗೆ ಜನಜನಿತವಾಗುತ್ತಿದ್ದು, ಎಟಿಎಂ ಮಶೀನ್ ನಿಂದಲೇ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಆದರೆ ಇದರಲ್ಲಿ 5000 ರೂ. ದಿಂದ ರೂ. 49 ಸಾವಿರ ರೂ. ವರೆಗೆ ಮಾತ್ರ ಮೊತ್ತವನ್ನು ವರ್ಗಾವಣೆ ಮಾಡಬಹುದು.

4. ಪಿನ್ ಬದಲಾವಣೆ: ನಿಮ್ಮ ಡೆಬಿಟ್ ಕಾರ್ಡ್ ಪಿನ್ ನಂಬರ್ ನ್ನು ಎಟಿಎಂ ಮಶೀನ್ ಮೂಲಕ ಬದಲಾವಣೆ ಮಾಡಬಹುದಾಗಿದೆ. ಇದು ಎಲ್ಲ ಎಟಿಎಂ ಕೇಂದ್ರಗಳಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ನಿಯಮಿತವಾಗಿ ಪಿನ್ ನಂಬರ್ ಬದಲಾವಣೆ ಮಾಡುತ್ತಿರಬಹುದು.

5. ಮಿನಿ ಸ್ಟೇಟ್‌ಮೆಂಟ್: ನಿಮ್ಮ ಖಾತೆ ಬಗೆಗಿನ ವ್ಯವಹಾರಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಈ ಮಿನಿ ಸ್ಟೇಟ್ಮೆಂಟ್ ಪಡೆದುಕೊಳ್ಳಬಹುದು. ಈ ಮಿನಿ ಹೇಳಿಕೆಯಲ್ಲಿ ಹಿಂದಿನ ಹತ್ತು ವ್ಯವಹಾರಗಳ ಮಾಹಿತಿ ಇರುತ್ತದೆ.

6. ಆದಾಯ ತೆರಿಗೆ: ಇದು ಅಚ್ಚರಿಯಾದರೂ ನಿಜ. ಎಟಿಎಂ ಮೂಲಕವೇ ನೀವು ನಿಮ್ಮ ಆದಾಯ ತೆರಿಗೆಯನ್ನು ಪಾವತಿಸಬಹುದಾಗಿದೆ. ನೇರವಾಗಿ ಆದಾಯ ತೆರಿಗೆ ಪಾವತಿಸುವುದಕ್ಕಾಗಿ ನೋಂದಣಿ ಮಾಡಿಸಬೇಕಾಗುತ್ತದೆ. ತೆರಿಗೆ ಪಾವತಿಯ ಮೊತ್ತ ನಿಮ್ಮ ಖಾತೆಯಿಂದ ಕಡಿತವಾಗುತ್ತದೆ.

7. ಸ್ಥಿರ ಠೇವಣಿ: ಗ್ರಾಹಕರು ಎಟಿಎಂ ಬಳಸಿ ಸ್ಥಿರ ಠೇವಣಿ ಖಾತೆಯನ್ನು ತೆರೆಯಬಹುದು. ಖಾತೆಯ ಅವಧಿಯನ್ನು ಆಯ್ಕೆ ಮಾಡುವ ಅವಕಾಶ ಇದ್ದು, ಕನಿಷ್ಟ ರೂ. 5000 ರಿಂದ ಗರಿಷ್ಠ ರೂ. 49000 ವ್ಯಾಪ್ತಿಯಲ್ಲಿ ಮೊತ್ತ ಡಿಪಾಸಿಟ್ ಮಾಡಬಹುದು.

8. ಪ್ರಿಮಿಯಂ ಪೇಮೆಂಟ್: ಎಟಿಎಂ ಮೂಲಕವೇ ನೀವು ನಿಮ್ಮ ವಿಮೆಯ ಪ್ರಿಮಿಯಂ ಮೊತ್ತವನ್ನು ತುಂಬಬಹುದಾಗಿದೆ. ಪ್ರಮುಖವಾಗಿ ಐಸಿಐಸಿಐ, ಹೆಚ್‌ಡಿಎಫ್ ಸಿ, ಎಲ್‌ಐಸಿ ಸಂಸ್ಥೆಗಳು ಎಟಿಎಂ ಮೂಲಕ ಪ್ರಿಮಿಯಂ ಪಾವತಿಯ ಸೌಲಬ್ಯ ಕಲ್ಪಿಸಿವೆ.

9. ಯುಟಿಲಿಟಿ ಬಿಲ್: ವಿದ್ಯುತ್ ಬಿಲ್, ಗ್ಯಾಸ್ ಬಿಲ್ ಮುಂತಾದ ಸೇವೆಗಳನ್ನು ಕೂಡ ನಿಮ್ಮ ಎಟಿಎಂ ಕೇಂದ್ರ ನೀಡುತ್ತಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು.

10. ದೇಣಿಗೆ: ಭಾರತೀಯರು ಮೊದಲೇ ದೈವಭಕ್ತರು. ಅದರಲ್ಲೂ ದೇವರ ದರ್ಶನ ಮತ್ತು ದೇವಸ್ಥಾನಗಳಿಗೆ ದೇಣಿಗೆ ನೀಡುವುದರಲ್ಲಿ ಭಾರತೀಯರು ಎತ್ತಿದ ಕೈ. ಆದರೆ ದೇವಸ್ಥಾನಗಳಿಗೆ ದೇಣಿಗೆ ನಿಡಲು ನೀವು ಪ್ರತಿ ಬಾರಿಯೂ ದೇವಸ್ಥಾನಕ್ಕೆ ಹೋಗಬೇಕೆಂದಿಲ್ಲ. ನಿಮ್ಮ ಮನೆಯ ಸಮೀಪದ ಎಟಿಎಂನಿಂದಲೇ ನಿವು ದೇಣಿಗೆ ಪಾವತಿಸಬಹುದು. ನಿಮಗೆ ಇಷ್ಟವಾದ NGO ಅಥವಾ ದೇವಸ್ಥಾನದ ಟ್ರಸ್ಟ್ ಗಳಿಗೆ ದೇಣಿಗೆ ನೀಡಲು ಎಟಿಎಂ ಯಂತ್ರದಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ.

11. ಖಾತೆ ವರ್ಗಾವಣೆ: ದೇಶದೊಳಗೆ ಖಾತೆ ವರ್ಗಾವಣೆಯನ್ನು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಅದೇ ಗ್ರಾಹಕನಿಗೆ ಅಥವಾ ಬೇರೆ ಗ್ರಾಹಕನಿಗೆ ವರ್ಗಾವಣೆ ಮಾಡಬಹುದು. ICICI ಮತ್ತು SBI ಬ್ಯಾಂಕುಗಳು ಸೇರಿದಂತೆ ಹಲವು ಬ್ಯಾಂಕುಗಳು ಈ ಸೌಲಭ್ಯ ಒದಗಿಸುತ್ತಿವೆ. ಇದಕ್ಕೆ ನಿಮ್ಮ ಡೆಬಿಟ್ ಕಾರ್ಡ್, ಪಿನ್ ನಂಬರ್ ಮತ್ತು ಫಲಾನುಭವಿಯ ಡೆಬಿಟ್ ಕಾರ್ಡ್ ನಂಬರ್ ಬೇಕಾಗುತ್ತದೆ.

ಇಷ್ಟೇ ಅಲ್ಲದೇ ಇನ್ನೂ ಹಲವಾರು ಸೇವೆಗಳನ್ನು ಎಟಿಎಂ ಮಶೀನ್ ನೀಡುತ್ತಿದ್ದು, ಪ್ರಮುಖವಾಗಿ ಚೆಕ್ ಬುಕ್‌ಗಾಗಿ ಮನವಿ, ಮೊಬೈಲ್ ಬ್ಯಾಂಕಿಂಗ್ ನೋಂದಣಿ, ರೆಲ್ವೆ ಬುಕ್ಕಿಂಗ್, ಕ್ರೆಡಿಟ್ ಕಾರ್ಡ್ ಬಿಲ್ ಹಾಗೂ ಮೊಬೈಲ್ ರಿಚಾರ್ಜ್ ಗಳನ್ನೂ ಕೂಡ ನೀವು ಎಟಿಎಂ ಮೂಲಕ ಮಾಡಬಹುದು.

click me!