ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ! ಜನಸಾಮಾನ್ಯನ ಜೇಬಿಗೂ ಬೀಳಲಿದೆ ಕತ್ತರಿ! ಜನಸಮಾನ್ಯ ಜಾಗತಿಕ ವಾಣಿಜ್ಯ ಯುದ್ಧದ ಬಲಿಪಶು! ಬೆಲೆ ಏರಿಕೆ ಕಡಿಮೆ ಆಗತ್ತಾ? ಜೇಬಿನ ದುಡ್ಡು ಉಳಿಯುತ್ತಾ?
ಬೆಂಗಳೂರು(ಆ.15): ಟರ್ಕಿ ಆರ್ಥಿಕ ಬಿಕ್ಕಟ್ಟಿನ ಪರಿಣಾಮದಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ ಕಂಡಿದೆ. ಅಮೆರಿಕದ ಒಂದು ಡಾಲರ್ ಇದೀಗ ಭಾರತದ 70.08 ರೂ.ಗೆ ಸಮ. ಈ ಹಿಂದೆ ಕನಿಷ್ಠ ರೂ. 69.20 ರೂ ಇದ್ದ ರೂಪಾಯಿ ಮೌಲ್ಯ, ಕಳೆದ ಸೋಮವಾರ ಡಾಲರ್ ಎದುರು ಶೇ.1.57 ರಷ್ಟು ಕುಸಿತ ಕಂಡು 70 ರ ಗಡಿ ದಾಟಿದೆ. ಇದು ದೇಶದ ಆರ್ಥಿಕ ವಲಯದ ಮೇಲೆ ದುಷ್ಪರಿಣಾಮ ಬೀರುವುದಂತೂ ಖಚಿತ.
72ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿರುವ ಭಾರತ, ಆರ್ಥಿಕವಾಗಿ ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳೇನು ಎಂಬುದನ್ನು ಗಮನಿಸಿದಾಗ..
1. ಚೀನಾ ಅಮೆರಿಕಾ ಆರ್ಥಿಕ ಸಮರ: ಚೀನಾ ಮತ್ತು ಅಮೆರಿಕ ನಡುವಿನ ಆರ್ಥಿಕ ಸಮರದ ಹಿನ್ನೆಲೆ ಯುಎಸ್ ಡಾಲರ್ ಮೌಲ್ಯ ವೃದ್ಧಿಗೆ ಮುಂದಾಗಿದೆ. ಕೃತಕ ಬೇಡಿಕೆಯನ್ನು ಸೃಷ್ಟಿಸುವ ಮೂಲಕ ಇತರೆ ಕರೆನ್ಸಿಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಇದೆ. ಇದು ಭಾರತದ ಮೇಲೂ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು.
2. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ರೂಪಾಯಿ ಮೌಲ್ಯ ಕುಸಿತದಿಂದ ಪೆಟ್ರೋಲ್, ಡೀಸೆಲ್ ಮೇಲಾಗುತ್ತಿರುವ ಪರಿಣಾಮ ನೋಡುತ್ತಿದ್ದೇವೆ. ತೈಲ ದರಗಳು ಗರಿಷ್ಠ ಮಟ್ಟಕ್ಕೆ ಏರುತ್ತಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ. ೮೩.೫೮ರಷ್ಟಾಗಿದೆ.
3. ಬಡ್ಡಿದರ ಹೆಚ್ಚಳ: ರೂಪಾಯಿ ಕುಸಿತದ ಪರಿಣಾಮ ಬಡ್ಡಿದರ ಕೂಡ ಏರಿಕೆಯಾಗಲಿದೆ. ಹಣದುಬ್ಬರ ನಿಯಂತ್ರಿಸುವುದು ಆರ್‌ಬಿಐಗೆ ಅನಿವಾರ್ಯವಾಗಲಿದೆ. ಅಂದರೆ ಹಣದುಬ್ಬರವನ್ನು ತಗ್ಗಿಸಲು ಆರ್‌ಬಿಐ ಬಡ್ಡಿ ದರಗಳನ್ನು ಹೆಚ್ಚಿಸಬಹುದು.
4. ಚಾಲ್ತಿ ಖಾತೆ ಕೊರತೆ: ಕಚ್ಚಾ ತೈಲ ದರಗಳು ಏರಿಕೆಯಾಗುತ್ತಿರುವುದು ಆರ್ಥಿಕ ಬೆಳವಣಿಗೆಗೆ ತೀವ್ರ ಹಾನಿ ಉಂಟುಮಾಡಬಹುದು. 2018 ರಲ್ಲಿನ ಆರ್ಥಿಕ ಸಮೀಕ್ಷೆಯು ಕಚ್ಚಾತೈಲಗಳ ಬೆಲೆ ಪ್ರತಿ ಬ್ಯಾರೆಲ್ ಗೆ 10 ಡಾಲರ್ ಏರಿಕೆಯಾಗುವುದು ಆರ್ಥಿಕ ಬೆಳವಣಿಗೆಯನ್ನು ಕಡಿಮೆಗೊಳಿಸುತ್ತದೆ. ಚಾಲ್ತಿ ಖಾತೆ ಕೊರತೆ ಕೂಡ ತೀವ್ರವಾಗಿ ಎದುರಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
5. ಆರ್‌ಬಿಐ ಮಧ್ಯಪ್ರವೇಶ: ಸತತವಾಗಿ ಡಾಲರ್ ಎದುರು ಕುಸಿತ ಕಾಣುತ್ತಿರುವ ರೂಪಾಯಿ ಮೌಲ್ಯವನ್ನು ಸರಿದೂಗಿಸಲು ಆರ್‌ಬಿಐ ಮಧ್ಯಪ್ರವೇಶಿಸುವ ಸಾಧ್ಯತೆ ಇದೆ. ಆರ್ಥಿಕ ನೀತಿಗಳಲ್ಲಿ ಬದಲಾವಣೆ ತಂದು ರೂಪಾಯಿ ಮೌಲ್ಯ ಕಾಯ್ದುಕೊಳ್ಳುವುದು ಆರ್‌ಬಿಐ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಕಠಿಣ ಕ್ರಮಗಳನ್ನು ಆರ್‌ಬಿಐನಿಂದ ನಿರೀಕ್ಷಿಸಬೇಕಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.