ಸೆನ್ಸೆಕ್ಸ್‌ ಮೈಲುಗಲ್ಲು 46000, ಸಾರ್ವಕಾಲಿಕ ದಾಖಲೆ!

By Suvarna NewsFirst Published Dec 10, 2020, 7:15 AM IST
Highlights

ಸೆನ್ಸೆಕ್ಸ್‌ ಮೈಲುಗಲ್ಲು 46000!| ಸಾರ್ವಕಾಲಿಕ ದಾಖಲೆ| ಲಸಿಕೆ, ವಿದೇಶಿ ಹೂಡಿಕೆ ಹೆಚ್ಚಳ ಹಿನ್ನೆಲೆ| ಭಾರತೀಯ ಷೇರುಪೇಟೆ ಭಾರೀ ಜಿಗಿತ

ಮುಂಬೈ(ಡಿ.10): ವಿದೇಶಿ ಬಂಡವಾಳದ ಹರಿವು ಹೆಚ್ಚಳವಾಗಿರುವುದರಿಂದ ಹಾಗೂ ಕೊರೋನಾ ವೈರಸ್‌ಗೆ ಲಸಿಕೆ ಹಂಚಿಕೆ ಆರಂಭವಾದ ಕಾರಣ ಜಾಗತಿಕ ಮಾರುಕಟ್ಟೆಧನಾತ್ಮಕವಾಗಿರುವುದರಿಂದ ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಇದೇ ಮೊದಲ ಬಾರಿಗೆ 46,000 ಅಂಕ ದಾಟಿ ಐತಿಹಾಸಿಕ ದಾಖಲೆ ಬರೆದಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿಕೂಡ 13,500ರ ಗಡಿ ದಾಟಿ ದಾಖಲೆ ನಿರ್ಮಿಸಿದೆ.

ಹೊಸದಾಗಿ ಕೆಲಸಕ್ಕೆ ಸೇರುವವರ ಪಿಎಫ್‌ ಭರಿಸುವ ಸ್ಕೀಂಗೆ ಒಪ್ಪಿಗೆ!

ಬುಧವಾರದ ಇಂಟ್ರಾ-ಡೇ ವ್ಯಾಪಾರದಲ್ಲಿ ಸೆನ್ಸೆಕ್ಸ್‌ 46,164.10ಕ್ಕೆ ತಲುಪಿ ನಂತರ ದಿನದಂತ್ಯಕ್ಕೆ 46,103.50ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಅದರೊಂದಿಗೆ ಷೇರು ಸೂಚ್ಯಂಕ 494.99 ಅಂಕ, ಅಂದರೆ ಶೇ.1.09ರಷ್ಟುಏರಿಕೆ ಕಂಡಿತು. ಹಾಗೆಯೇ ನಿಫ್ಟಿ136.15 ಅಂಕ, ಅಂದರೆ ಶೇ.1.02ರಷ್ಟುಏರಿಕೆ ಕಂಡು 13,529.10ರಲ್ಲಿ ಅಂತ್ಯಗೊಂಡಿತು. ದಿನದ ಮಧ್ಯಂತರದಲ್ಲಿ ನಿಫ್ಟಿಗರಿಷ್ಠ 13,548.90ಕ್ಕೆ ಏರಿಕೆಯಾಗಿತ್ತು.

ಬಿಎಸ್‌ಇಯಲ್ಲಿ ಏಷ್ಯನ್‌ ಪೇಂಟ್ಸ್‌ ಷೇರು ಅತಿಹೆಚ್ಚು ಏರಿಕೆ (ಶೇ.3) ಕಂಡಿತು. ಇನ್ನುಳಿದಂತೆ ಕೊಟಕ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಇಸ್ಫೋಸಿಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ಐಟಿಸಿ ಷೇರುಗಳ ಬೆಲೆ ಭಾರಿ ಏರಿಕೆ ಕಂಡಿತು. ‘ಆರ್ಥಿಕತೆ ಸುಧಾರಣೆಗಳನ್ನು ಜಾರಿಗೊಳಿಸಲು ಭಾರತ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿರುವುದರಿಂದ ವಿದೇಶಿ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿದೆ. ಅವರು ಭಾರತೀಯ ಕಂಪನಿಗಳ ಷೇರುಗಳನ್ನು ಮುಗಿಬಿದ್ದು ಖರೀದಿಸುತ್ತಿರುವುದರಿಂದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ’ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ಪ್ರಭಾವಿ ಸ್ತ್ರೀಯರ ಪಟ್ಟಿಯಲ್ಲಿ ನಿರ್ಮಲಾ, ಮಜುಂದಾರ್‌ಗೆ ಸ್ಥಾನ

ಏಷ್ಯಾದಲ್ಲಿ ಹಾಂಗ್‌ಕಾಂಗ್‌, ಸೋಲ್‌ ಹಾಗೂ ಟೋಕ್ಯೋ ಷೇರು ಮಾರುಕಟ್ಟೆಗಳು ಕೂಡ ಏರುಗತಿಯಲ್ಲಿವೆ. ಚೀನಾದ ಶಾಂಘೈ ಷೇರು ಮಾರುಕಟ್ಟೆಮಾತ್ರ ಇಳಿಮುಖವಾಗಿದೆ. ಅತ್ತ ಯುರೋಪ್‌ ಮಾರುಕಟ್ಟೆಕೂಡ ಧನಾತ್ಮಕವಾಗಿದೆ. ಈ ಮಧ್ಯೆ, ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾತೈಲದ ಬೆಲೆ ಶೇ.0.96ರಷ್ಟುಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ 49.31 ಡಾಲರ್‌ಗೆ ತಲುಪಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ಭಾರತೀಯ ರುಪಾಯಿಯ ಮೌಲ್ಯ 73.57 ಇದೆ.

click me!