ನಿವೃತ್ತಿ ಬದುಕಿನಲ್ಲಿರುವ ಜನರಿಗಾಗಿಯೇ ಹಿರಿಯ ನಾಗರಿಕರ ಉಳಿತಾಯ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿ ಜೊತೆಗೆ ತೆರಿಗೆ ಕಡಿತದ ಪ್ರಯೋಜನವೂ ಸಿಗುತ್ತದೆ. ಈ ಯೋಜನೆಯಲ್ಲಿನ ಹೂಡಿಕೆ ಸುರಕ್ಷಿತವೂ ಹೌದು. ಹಾಗಾದ್ರೆ ಈ ಯೋಜನೆಯಲ್ಲಿನ ಹೂಡಿಕೆಗೆ ಬಡ್ಡಿ ಎಷ್ಟು? ಎಷ್ಟು ತೆರಿಗೆ ಉಳಿಸಬಹುದು? ಇಲ್ಲಿದೆ ಮಾಹಿತಿ.
Business Desk: ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ನಿವೃತ್ತಿ (Retired) ಬದುಕಿನಲ್ಲಿರುವ ಜನರಿಗಾಗಿಯೇ ರೂಪಿಸಲಾಗಿದೆ. ಅಂಚೆ ಕಚೇರಿ (Post office) ಹಾಗೂ ಕೆಲವು ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಲಭ್ಯವಿವೆ. ಈ ಯೋಜನೆಗಳಲ್ಲಿ ಹೂಡಿಕೆ (Invest) ಮಾಡಿದ್ರೆ ಎಷ್ಟು ಬಡ್ಡಿ (Interest) ಸಿಗುತ್ತೆ? ತೆರಿಗೆ ವಿನಾಯ್ತಿ ಸಿಗುತ್ತಾ? ಏನೆಲ್ಲ ಲಾಭಗಳಿವೆ?
ಹಿರಿಯ ನಾಗರಿಕರ ಉಳಿತಾಯ ಯೋಜನೆ
ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಥವಾ ಎಸ್ ಸಿಎಸ್ ಎಸ್ (SCSS) ವೃದ್ಧಾಪ್ಯದಲ್ಲಿರುವ ಜನರಿಗಾಗಿಯೇ ರೂಪಿಸಿರುವ ವಿಶೇಷ ಉಳಿತಾಯ ಯೋಜನೆಯಾಗಿದೆ. 60 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರು (Indian Citizen) ಈ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.
LIC Policy: ಈ ಪಾಲಿಸಿಯಲ್ಲಿ ನೀವು ಕೇವಲ 4 ವರ್ಷ ಹೂಡಿಕೆ ಮಾಡಿದ್ರೆ ಕೋಟ್ಯಧಿಪತಿ ಆಗೋದು ಗ್ಯಾರಂಟಿ!
ಬಡ್ಡಿದರ ಎಷ್ಟಿದೆ?
ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು (Interest rate) ಕೇಂದ್ರ ಸರ್ಕಾರ (Central Government) ಹೆಚ್ಚಳ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದ್ರೆ ಇತ್ತೀಚೆಗಷ್ಟೇ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF),ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಸರ್ಕಾರ ಘೋಷಿಸಿದ್ದು, ಯಾವುದೇ ಏರಿಕೆ ಮಾಡಿಲ್ಲ. ಆದರೂ ಕೂಡ ಈ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವು ಬ್ಯಾಂಕುಗಳ ಸ್ಥಿರ ಠೇವಣಿಗಳಿಗಿಂತ ಹೆಚ್ಚಿದೆ. ಎಸ್ ಸಿಎಸ್ ಎಸ್ ಗೆ (SCSS) ವಾರ್ಷಿಕ ಶೇ.7.4 ಬಡ್ಡಿದರ ನೀಡಲಾಗುತ್ತಿದೆ. ಈ ಯೋಜನೆಯ ಬಡ್ಡಿಯನ್ನು ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) ಪಾವತಿಸಲಾಗುತ್ತದೆ. ಮಾರ್ಚ್ 31, ಜೂನ್ 30, ಸೆಪ್ಟೆಂಬರ್ 30 ಹಾಗೂ ಡಿಸೆಂಬರ್ 31ರಂದು ಪಾವತಿಸಲಾಗುತ್ತದೆ.
ಈ ಯೋಜನೆ ವಿಶೇಷತೆಗಳೇನು?
-ಒಬ್ಬ ವ್ಯಕ್ತಿ ಕನಿಷ್ಠ 1,000ರೂ.ನೊಂದಿಗೆ ಎಸ್ ಸಿಎಸ್ಎಸ್ (SCSS) ಖಾತೆ ತೆರೆಯಬಹುದು. ಗರಿಷ್ಠ 15ಲಕ್ಷ ರೂ.ತನಕ ಈ ಖಾತೆಯಲ್ಲಿ ಹೂಡಿಕೆ ಮಾಡಬಹುದು.
-ಯಾವುದೇ ಸಂದರ್ಭದಲ್ಲಿ ಎಸ್ ಸಿಎಸ್ಎಸ್ (SCSS) ಖಾತೆಯಲ್ಲಿ ಅಧಿಕ ಠೇವಣಿ ಇರಿಸಿದ್ರೆ, ಹೆಚ್ಚುವರಿ ಮೊತ್ತವನ್ನು ತಕ್ಷಣ ಠೇವಣಿದಾರರಿಗೆ ಹಿಂತಿರುಗಿಸಲಾಗುತ್ತದೆ.
-ಈ ಯೋಜನೆಯ ಮೆಚ್ಯುರಿಟಿ ಅವಧಿ 5 ವರ್ಷಗಳು. ಆದ್ರೆ ಆ ಬಳಿಕವೂ 3 ವರ್ಷಗಳ ತನಕ ವಿಸ್ತರಿಸಬಹುದು.
-ಎಸ್ ಸಿಎಸ್ಎಸ್ ಖಾತೆಯನ್ನು ತೆರೆದ ಒಂದು ವರ್ಷದೊಳಗೆ ಮುಚ್ಚಿದ್ರೆ ಯಾವುದೇ ತೆರಿಗೆಯನ್ನು ಪಾವತಿಸಲಾಗೋದಿಲ್ಲ. ಒಂದು ವೇಳೆ ಖಾತೆಗೆ ಬಡ್ಡಿದರ ಪಾವತಿಸಿದ್ರೆ ಅದನ್ನು ಮೂಲ ಹಣದಿಂದ ಕಡಿತಗೊಳಿಸಲಾಗುತ್ತದೆ.
-ಒಂದು ಖಾತೆದಾರರ ಮರಣ ಹೊಂದಿದ್ರೆ, ಆತ ಮರಣ ಹೊಂದಿದ ದಿನದಿಂದ ಎಸ್ ಸಿಎಸ್ ಎಸ್ ಖಾತೆಯಲ್ಲಿರುವ ಹಣಕ್ಕೆ ಇತರ ಉಳಿತಾಯ ಖಾತೆಗಳಿಗೆ ನೀಡುವಷ್ಟೇ ಬಡ್ಡಿದರವನ್ನು ನೀಡಲಾಗೋದು.
ಆದಾಯ ತೆರಿಗೆ ಕಡಿತ
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ. ಆದರೆ ಎಲ್ಲ ಎಸ್ ಸಿಎಸ್ಎಸ್ ಖಾತೆಗಳ ಒಟ್ಟು ಬಡ್ಡಿದರ ಒಂದು ಅರ್ಥಿಕ ಸಾಲಿನಲ್ಲಿ 50,000ರೂ. ಮೀರಿದ್ರೆ ಆಗ ಆ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ1.5ಲಕ್ಷ ರೂ. ತನಕದ ಹೂಡಿಕೆಗೆ ತೆರಿಗೆ ಕಡಿತಗಳನ್ನು ಪಡೆಯಲು ಅವಕಾಶವಿದೆ.
ಖಾದ್ಯತೈಲ ಬೆಲೆ 10 ರು. ಇಳಿಸಿ: ಕಂಪನಿಗಳಿಗೆ ಸರ್ಕಾರ ಸೂಚನೆ
ಯಾರು ಹೂಡಿಕೆ ಮಾಡಬಹುದು?
- 60 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
-55 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನ ನಿವೃತ್ತ ನಾಗರಿಕ ಉದ್ಯೋಗಿ. ನಿವೃತ್ತಿ ಪ್ರಯೋಜನಗಳನ್ನು ಪಡೆದ ಒಂದು ತಿಂಗಳೊಳಗೆ ಮಾತ್ರ ಇದರಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.
-50 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನ ನಿವೃತ್ತ ಸೇನಾ ಉದ್ಯೋಗಿ.ನಿವೃತ್ತಿ ಪ್ರಯೋಜನಗಳನ್ನು ಪಡೆದ ಒಂದು ತಿಂಗಳೊಳಗೆ ಮಾತ್ರ ಇದರಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.
-ಅನಿವಾಸಿ ಭಾರತೀಯರಿಗೆ (NRIs) ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವಿಲ್ಲ.
ಎಲ್ಲಿ ಲಭ್ಯ?
ಅಂಚೆ ಕಚೇರಿಗಳಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆ ತೆರೆಯಬಹುದು. ಅಂಚೆ ಕಚೇರಿಯನ್ನು ಹೊರತುಪಡಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಇತರ ಕೆಲವು ಬ್ಯಾಂಕುಗಳಲ್ಲಿ ಕೂಡ ಹಿರಿಯ ನಾಗರಿಕರ ಉಳಿತಾಯ ಯೋಜನೆ ಲಭ್ಯವಿದೆ.