Union Budget:ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಖರ್ಚಿಗೆ ಹಣ ಕಳುಹಿಸಿದ್ರೂ ಜೇಬಿಗೆ ಬೀಳುತ್ತೆ ಕತ್ತರಿ

By Suvarna NewsFirst Published Feb 2, 2023, 5:46 PM IST
Highlights

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ತೆರಿಗೆಗೆ ಸಂಬಂಧಿಸಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಇದರಿಂದ ವಿದೇಶಕ್ಕೆ ಹಣ ವರ್ಗಾವಣೆ ಮಾಡುವುದು ಕೂಡ ಇನ್ನು ಮುಂದೆ ದುಬಾರಿಯಾಗಲಿದೆ. ಏಕೆಂದ್ರೆ ವಿದೇಶಕ್ಕೆ ಹಣ ರವಾನೆ ಮಾಡೋದಕ್ಕೂ ಶೇ.20ರಷ್ಟು ತೆರಿಗೆ ಪಾವತಿಸಬೇಕು. 

ನವದೆಹಲಿ (ಫೆ.2): ವಿದೇಶಕ್ಕೆ ಹಣ ಕಳುಹಿಸೋದು ಇನ್ನು ಮುಂದೆ ದುಬಾರಿಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ವಿದೇಶಕ್ಕೆ ಹಣ ಕಳುಹಿಸುವ ಪ್ರಕ್ರಿಯೆ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ತಿಳಿಸಿದ್ದಾರೆ. ನೀವು ವಿದೇಶದಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ನಿಮ್ಮ ಮಕ್ಕಳ ಖರ್ಚಿಗೆ ಹಣ ಕಳಿಸಿದ್ರೂ ಈ ತೆರಿಗೆ ಬೀಳುತ್ತದೆ. ಹಾಗೆಯೇ ದುಬೈ ಅಥವಾ ಇನ್ನಿತರ ದೇಶಗಳಲ್ಲಿ ಮನೆ ಖರೀದಿ ಅಥವಾ ಈಕ್ವಿಟಿ ಷೇರುಗಳ ಮೇಲೆ ಹೂಡಿಕೆ ಮಾಡಿದ್ರೆ ಕೂಡ ತೆರಿಗೆಯ ಭಾರ ಹೊರಬೇಕಾಗುತ್ತದೆ. ಈ ಹೊಸ ತಿದ್ದುಪಡಿ 2023ರ ಜುಲೈ 1ರಿಂದ ಜಾರಿಗೆ ಬರಲಿದೆ. ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಪ್ರಕಾರ ವಿದೇಶಗಳಿಗೆ ಹಣ ವರ್ಗಾಯಿಸುವ ಬ್ಯಾಂಕ್ ಗಳು ಮೂಲದಲ್ಲೇ ಸೇ. 20ರಷ್ಟು ತೆರಿಗೆ ಸಂಗ್ರಹಿಸಬೇಕು. ಈ ಹಿಂದೆ ಇಂಥ ಪ್ರಕರಣಗಳಲ್ಲಿ ಹಣ ರವಾನೆ ಮಾಡುತ್ತಿದ್ದ ಬ್ಯಾಂಕ್ ಒಂದು ಆರ್ಥಿಕ ಸಾಲಿನಲ್ಲಿ 7ಲಕ್ಷ ರೂ.ಗಿಂತ ಅಧಿಕ ಮೊತ್ತದ ಹಣವನ್ನು ವಿದೇಶಕ್ಕೆ ವರ್ಗಾಯಿಸಿದ್ರೆ ಮಾತ್ರ ಶೇ.5ರಷ್ಟು ತೆರಿಗೆ ಸಂಗ್ರಹಿಸಬೇಕಿತ್ತು. ಹಾಗೆಯೇ ಏಳು ಲಕ್ಷಕ್ಕಿಂತ ಎಷ್ಟು ಹೆಚ್ಚಿನ ಮೊತ್ತದ ಹಣವನ್ನು ಕಳುಹಿಸಲಾಗಿದೆಯೋ ಅದಕ್ಕೆ ಮಾತ್ರ ತೆರಿಗೆ ವಿಧಿಸಲಾಗುತ್ತಿತ್ತು. ಅಂದ್ರೆನೀವು 10 ಲಕ್ಷ ರೂ. ಕಳುಹಿಸಿದ್ರೆ 3ಲಕ್ಷ ರೂ.ಗೆ ಮಾತ್ರ ತೆರಿಗೆ ವಿಧಿಸಲಾಗುತ್ತಿತ್ತು. 

ಮೂಲದಲ್ಲಿ ತೆರಿಗೆ ಸಂಗ್ರಹ (TCS) ಮೊತ್ತವನ್ನು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ ನಮೂದಿಸುವ ಮೂಲಕ ತೆರಿಗೆ ರೀಫಂಡ್ ಪಡೆಯಬಹುದು. ಆದರೆ, ಶಿಕ್ಷಣ ವೆಚ್ಚಕ್ಕೆ ಸಂಬಂಧಿಸಿದ ನಿಯಮದಲ್ಲಿ ಅಂದ್ರೆ ಶುಲ್ಕಕ್ಕೆ ಸಂಬಂಧಿಸಿ ಬದಲಾವಣೆ ಆಗಿಲ್ಲ. ಒಂದು ವೇಳೆ ಸಾಲದ ಹಣವನ್ನು ವಿದೇಶಕ್ಕೆ ಶೈಕ್ಷಣಿಕ ಶುಲ್ಕ ಭರಿಸಲು ವರ್ಗಾವಣೆ ಮಾಡಿದ್ರೆ ಈ ಹಿಂದಿನಂತೆ ಒಂದು ಆರ್ಥಿಕ ಸಾಲಿನಲ್ಲಿ 7 ಲಕ್ಷ ರೂ. ಮೀರಿದ ಮೊತ್ತಕ್ಕೆ ಶೇ.0.5 ಟಿಸಿಎಸ್ ಕಡಿತ ಮಾಡಲಾಗುತ್ತದೆ. ಆದರೆ, ಶೈಕ್ಷಣಿಕ ವೆಚ್ಚವನ್ನು ಸಾಲದಿಂದ ಭರಿಸದ ಸಂದರ್ಭಗಳಲ್ಲಿ ಆರ್ಥಿಕ ಸಾಲಿನಲ್ಲಿ 7ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಎರಡೂ ನಿಯಮಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ವಿದೇಶದಲ್ಲಿ ವೈದ್ಯಕೀಯ ವೆಚ್ಚಕ್ಕಾಗಿ ವರ್ಗಾಯಿಸುವ ಹಣದ ಮೇಲೆ ಈ ಹಿಂದೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. 

ಸ್ಟಾರ್ಟಪ್‌ಗಳಿಗೆ ಮತ್ತೊಂದು ವರ್ಷ ತೆರಿಗೆ ವಿನಾಯಿತಿ: ಐಟಿ ರಿಟರ್ನ್ಸ್ 24 ತಾಸುಗಳಲ್ಲಿ ಕ್ಲಿಯರ್‌!

ವಿದೇಶಗಳ ಟೂರ್ ಪ್ಯಾಕೇಜ್ ಮೇಲೆ ಈ ಹಿಂದೆ ಯಾವುದೇ ಮಿತಿ ನಿಗದಿಪಡಿಸಿದೆ ಶೇ.5ರಷ್ಟು ಟಿಸಿಎಸ್ ಕಡಿತ ಮಾಡಲಾಗುತ್ತಿತ್ತು. ಈ ಬಾರಿಯ ಬಜೆಟ್ ನಲ್ಲಿ ಇದನ್ನು ಶೇ.20ಕ್ಕೆ ಹೆಚ್ಚಿಸಲಾಗಿದೆ. ಇನ್ನು ಇತರ ಪ್ರಕರಣಗಳಲ್ಲಿ ಉದಾಹರಣೆಗೆ ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಮಕ್ಕಳ ವೆಚ್ಚಕ್ಕಾಗಿ ಕಳುಹಿಸುವ ಹಣಕ್ಕೆ ಈ ಹಿಂದೆ ವಾರ್ಷಿಕ  7ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತಕ್ಕೆ ಶೇ.5ರಷ್ಟು ಟಿಸಿಎಸ್ ವಿಧಿಸಲಾಗುತ್ತಿತ್ತು. ಬಜೆಟ್ ನಲ್ಲಿ ಇದನ್ನು ಶೇ.20ಕ್ಕೆ ಏರಿಕೆ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ವಿದೇಶಗಳಿಗೆ ಟೂರ್ ಗೆ ಹೋಗುವವರಿಗೆ ತೆರಿಗೆಯ ಭಾರ ಹೆಚ್ಚಲಿದೆ. ಹಾಗೆಯೇ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ದಿನನಿತ್ಯದ ವೆಚ್ಚಕ್ಕಾಗಿ ಪೋಷಕರು ಕಳುಹಿಸುವ ಹಣಕ್ಕೂ ಹೆಚ್ಚಿನ ತೆರಿಗೆ ಬೀಳಲಿದೆ. 

ಹೊಸ ಹಾಗೂ ಹಳೆ ತೆರಿಗೆ ಪದ್ಧತಿ ನಡುವಿನ ವ್ಯತ್ಯಾಸವೇನು..?

2023-24ನೇ ಸಾಲಿನ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ವಿತ್ ಡ್ರಾ ಮೇಲಿನ ಟಿಡಿಎಸ್ ಅನ್ನು ಶೇ.30ರಿಂದ ಶೇ.20ಕ್ಕೆ ಇಳಿಕೆ ಮಾಡಲಾಗಿದೆ. ಇದು ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಹೊಂದಿರದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ.

click me!