ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಇಪಿಎಫ್ ವಿತ್ ಡ್ರಾಗೆ ಸಂಬಂಧಿಸಿ ಮಹತ್ವದ ಘೋಷಣೆ ಮಾಡಿದ್ದಾರೆ. ಇಪಿಎಫ್ ವಿತ್ ಡ್ರಾ ಮೇಲಿನ ಟಿಡಿಎಸ್ ಅನ್ನು ಶೇ.30ರಿಂದ ಶೇ.20ಕ್ಕೆ ಇಳಿಕೆ ಮಾಡಿದ್ದಾರೆ.
ನವದೆಹಲಿ (ಫೆ.2): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ (ಫೆ.1) ಮಂಡಿಸಿದ್ದ 2023-24ನೇ ಸಾಲಿನ ಬಜೆಟ್ ನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ವಿತ್ ಡ್ರಾ ಮೇಲಿನ ಟಿಡಿಎಸ್ ಅನ್ನು ಶೇ.30ರಿಂದ ಶೇ.20ಕ್ಕೆ ಇಳಿಕೆ ಮಾಡಿದ್ದಾರೆ. ಇದು ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ಹೊಂದಿರದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ.' ಪ್ಯಾನ್ ಹೊಂದಿರದ ಪ್ರಕರಣಗಳಲ್ಲಿ ಇಪಿಎಫ್ ವಿತ್ ಡ್ರಾದ ತೆರಿಗೆ ವ್ಯಾಪ್ತಿಗೊಳಪಡುವ ಮೊತ್ತದ ಮೇಲಿನ ಟಿಡಿಎಸ್ ಕಡಿತವನ್ನು ಶೇ.30ರಿಂದ ಶೇ.20ಕ್ಕೆ ಇಳಿಕೆ ಮಾಡಲಾಗಿದೆ' ಎಂದು ನಿರ್ಮಲಾ ಸೀತಾರಾಮನ ತಿಳಿಸಿದ್ದಾರೆ. ಈ ಹೊಸ ತಿದ್ದುಪಡಿ 2023ರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.ಈ ಘೋಷಣೆಯಿಂದ ಇಪಿಎಫ್ಒ ದಾಖಲೆಗಳಲ್ಲಿ ಪ್ಯಾನ್ ಮಾಹಿತಿ ನವೀಕರಿಸದ ವ್ಯಕ್ತಿಗಳಿಗೆ ಪ್ರಯೋಜನವಾಗಲಿದೆ. ಪ್ರಸ್ತುತವಿರುವ ಆದಾಯ ತೆರಿಗೆ ಕಾನೂನಿನ ಅನ್ವಯ ಇಪಿಎಫ್ ಖಾತೆ ತೆರೆದು ಐದು ವರ್ಷದೊಳಗೆ ಹಣವನ್ನು ವಿತ್ ಡ್ರಾ ಮಾಡಿದ್ರೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ವಿತ್ ಡ್ರಾ ಮೊತ್ತ 50 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿದ್ರೆ ಮಾತ್ರ ಟಿಡಿಎಸ್ ಕಡಿತ ಮಾಡಲಾಗುತ್ತದೆ.
ಇಪಿಎಫ್ ಖಾತೆ ತೆರೆದು ಐದು ವರ್ಷಗಳೊಳಗೆ ಹಣ ವಿತ್ ಡ್ರಾ ಮಾಡುವ ಉದ್ಯೋಗಿ ಪ್ಯಾನ್ ಕಾರ್ಡ್ ಮಾಹಿತಿ ಇಪಿಎಫ್ ಒ ಬಳಿಯಿದ್ರೆ 50 ಸಾವಿರ ರೂ. ಮೇಲ್ಪಟ್ಟ ವಿತ್ ಡ್ರಾ ಮೇಲೆ ಶೇ.10ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ. ಒಂದು ವೇಳೆ ಪ್ಯಾನ್ ಇರದಿದ್ರೆ ಶೇ.30ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ. ಐದು ವರ್ಷದ ಬಳಿಕ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಿದ್ರೆ ಟಿಡಿಎಸ್ ಕಡಿತ ಮಾಡಲಾಗುವುದಿಲ್ಲ. ಕಡಿಮೆ ವೇತನ ಪಡೆಯುವ ಅನೇಕ ಉದ್ಯೋಗಿಗಳ ಬಳಿ ಪ್ಯಾನ್ ಕಾರ್ಡ್ ಇಲ್ಲ. ಹೀಗಾಗಿ ಪ್ರಸಕ್ತ ನಿಯಮದಿಂದ ಪ್ಯಾನ್ ಕಾರ್ಡ್ ಹೊಂದಿರದ ಕಡಿಮೆ ವೇತನ ಪಡೆಯುವ ಉದ್ಯೋಗಿಗಳ ಮೇಲೆ ಹೆಚ್ಚಿನ ತೆರಿಗೆ ಹೊರೆ ಬೀಳುತ್ತಿತ್ತು.
undefined
ಏನಿದು ಭದ್ರಾ ಮೇಲ್ದಂಡೆ ಯೋಜನೆ : ಯಾವೆಲ್ಲಾ ಜಿಲ್ಲೆಗಳಿಗೆ ನೀರೊದಗಿಸಲಿದೆ ಭದ್ರೆ.
ತಿಂಗಳ ವೇತನ ಪಡೆಯುವ ಎಲ್ಲ ಉದ್ಯೋಗಿಗಳೂ ಇಪಿಎಫ್ ಖಾತೆ ಹೊಂದಿರುತ್ತಾರೆ. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಈ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಉದ್ಯೋಗಿ ಹಾಗೂ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ತಮ್ಮ ಮೂಲ ವೇತನದಿಂದ ಇಪಿಎಫ್ ಖಾತೆಗೆ ಶೇ.12ರಷ್ಟು ಮೊತ್ತವನ್ನು ಕೊಡುಗೆ ನೀಡುತ್ತಾರೆ. ಇಪಿಎಫ್ ಖಾತೆಗೆ ಸರ್ಕಾರ ಪ್ರತಿ ವರ್ಷ ಬಡ್ಡಿ ಜಮೆ ಮಾಡುತ್ತದೆ. ಪ್ರಸ್ತುತ ಶೇ.8.1ರಷ್ಟು ಬಡ್ಡಿ ನೀಡಲಾಗುತ್ತಿದೆ.
ಟಿಡಿಎಸ್ ಅಂದ್ರೇನು?
ಟಿಡಿಎಸ್ ಅಂದ್ರೆ 'ಮೂಲದಲ್ಲಿ ತೆರಿಗೆ ಕಡಿತ'. ಒಬ್ಬ ವ್ಯಕ್ತಿಗೆ ಆದಾಯ ಉತ್ಪಾದನೆಯಾಗುವ ಮೂಲದಲ್ಲೇ ತೆರಿಗೆ ಸಂಗ್ರಹಿಸಲು ಟಿಡಿಎಸ್ ಪರಿಚಯಿಸಲಾಯಿತು. ತೆರಿಗೆ ವಂಚನೆಯನ್ನು ಕಡಿಮೆಗೊಳಿಸಲು ಆದಾಯದ ಮೂಲದಲ್ಲೇ ತೆರಿಗೆ ಸಂಗ್ರಹಿಸಲು ಸರ್ಕಾರ ಟಿಡಿಎಸ್ ಅನ್ನು ಬಳಸಿಕೊಳ್ಳುತ್ತಿದೆ. ವೇತನ, ಬಡ್ಡಿ, ಕಮೀಷನ್ ಗಳು, ಡಿವಿಡೆಂಡ್ಸ್ ಸೇರಿದತೆ ವಿವಿಧ ಆದಾಯಗಳ ಮೇಲೆ ಸರ್ಕಾರ ಟಿಡಿಎಸ್ ವಿಧಿಸುತ್ತದೆ.
ಹೊಸ ಹಾಗೂ ಹಳೆ ತೆರಿಗೆ ಪದ್ಧತಿ ನಡುವಿನ ವ್ಯತ್ಯಾಸವೇನು..?
ಯಾವಾಗ ಟಿಡಿಎಸ್ ಕಡಿತ ಮಾಡಲಾಗುತ್ತದೆ?
ಇಪಿಎಫ್ಒ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಅನ್ವಯ ಒಂದು ವೇಳೆ ಒಬ್ಬ ವ್ಯಕ್ತಿ ಇಪಿಎಫ್ ಖಾತೆ ತೆರೆದು 5 ವರ್ಷದೊಳಗೆ 50,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ವಿತ್ ಡ್ರಾ ಮಾಡಿದರೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಈ ಟಿಡಿಎಸ್ ಕಡಿತದ ಪ್ರಮಾಣ ಕೂಡ ಬೇರೆ ಬೇರೆಯಾಗಿರುತ್ತದೆ. ಒಂದು ವೇಳೆ ಫಾರ್ಮ್ -15G/15H ಸಲ್ಲಿಕೆ ಮಾಡದೆ ಪ್ಯಾನ್ ಸಲ್ಲಿಕೆ ಮಾಡಿದ್ರೆ ಶೇ.10ರಷ್ಟು ಟಿಡಿಎಸ್ ಕಡಿತ ಮಾಡಲಾಗುತ್ತದೆ. ಉದ್ಯೋಗಿ ಪ್ಯಾನ್ ಕಾರ್ಡ್ ಸಲ್ಲಿಕೆ ಮಾಡಲು ವಿಫಲನಾದ್ರೆ ಗರಿಷ್ಠ ಮಾರ್ಜಿನಲ್ ದರ ಅಂದ್ರೆ ಶೇ.30ರಷ್ಟು ತೆರಿಗೆ ಕಡಿತಗೊಳಿಸಲಾಗುತ್ತದೆ.