
Business Desk:ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ ಎಸ್) 60 ವರ್ಷ ಮೇಲ್ಪಟ್ಟವರಿಗೆ ವರದಾನವಾಗಿದೆ. ಇನ್ನು ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದವರಿಗೆ ವಯೋಮಾನ ಸಡಿಲಿಕೆ ನೀಡಲಿದ್ದು, 55 ವರ್ಷದಿಂದ 60 ವರ್ಷಗಳ ನಡುವಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಕನಿಷ್ಠ 1000 ರೂ.ನಿಂದ ಹೂಡಿಕೆ ಪ್ರಾರಂಭಿಸಬಹುದು. ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೆಚ್ಯುರಿಟಿ ಅವಧಿ 5 ವರ್ಷಗಳು. ಹೂಡಿಕೆದಾರರು ಬಯಸಿದ್ರೆ ಮತ್ತೆ ಮೂರು ವರ್ಷ ವಿಸ್ತರಿಸಲು ಅವಕಾಶವಿದೆ. 2023ನೇ ಸಾಲಿನ ಬಜೆಟ್ ನಲ್ಲಿ ಈ ಯೋಜನೆಯ ಠೇವಣಿ ಮಿತಿಯನ್ನು ಹೆಚ್ಚಿಸಲಾಗಿದೆ ಕೂಡ. ಇದರಿಂದಾಗಿ ಹಿರಿಯ ನಾಗರಿಕ ದಂಪತಿ ಜಂಟಿಯಾಗಿ ದೊಡ್ಡ ಮೊತ್ತದ ಮಾಸಿಕ ಆದಾಯವನ್ನು ನಿರೀಕ್ಷಿಸಲು ಸಾಧ್ಯವಾಗಿದೆ. ಪ್ರಸ್ತುತ ಎಸ್ ಸಿಎಸ್ಎಸ್ ಠೇವಣಿಗಳಿಗೆ ಶೇ.8ರಷ್ಟು ಬಡ್ಡಿ ನೀಡಲಾಗುತ್ತಿದೆ. ಹೀಗಾಗಿ ಹಿರಿಯ ನಾಗರಿಕ ದಂಪತಿ ತಮ್ಮ ಪ್ರತ್ಯೇಕ ಎಸ್ ಸಿಎಸ್ ಎಸ್ ಖಾತೆಯಲ್ಲಿ ಪೂರ್ಣ ಮೊತ್ತದ ಹಣ ಹೂಡಿಕೆ ಮಾಡುವ ಮೂಲಕ ಮಾಸಿಕ ಒಟ್ಟು 40,000 ರೂ. ತನಕ ಆದಾಯ ಪಡೆಯಲು ಸಾಧ್ಯವಿದೆ. ಹಾಗಾದ್ರೆ ಪ್ರತಿ ತಿಂಗಳು 40,000 ರೂ. ಆದಾಯ ಗಳಿಸಲು ಎಸ್ ಸಿಎಸ್ ಎಸ್ ಖಾತೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು? ಈ ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ.
ಎಸ್ ಸಿಎಸ್ ಎಸ್ ಠೇವಣಿ ಮಿತಿ ಹೆಚ್ಚಳ
ಎಸ್ ಸಿಎಸ್ಎಸ್ ಯೋಜನೆಯ ಠೇವಣಿ ಮಿತಿ 15ಲಕ್ಷ ರೂ. ಇದೆ. ಇತ್ತೀಚೆಗೆ ನಡೆದ 2023ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಮಿತಿಯನ್ನು ಎರಡು ಪಟ್ಟು ಹೆಚ್ಚಿಸಿ 30 ಲಕ್ಷ ರೂ.ಗೆ ಏರಿಕೆ ಮಾಡಿದ್ದಾರೆ. ಅಂದರೆ ಹಿರಿಯ ನಾಗರಿಕರು ಪ್ರತ್ಯೇಕ ಎಸ್ ಸಿಎಸ್ ಎಸ್ ಖಾತೆಗಳನ್ನು ತೆರೆದು ಪ್ರತಿ ಖಾತೆಯಲ್ಲಿ 30ಲಕ್ಷ ರೂ. ಹೂಡಿಕೆ ಮಾಡಬಹುದು. ಈ ಹೆಚ್ಚಳ 2023ರ ಎಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇನ್ನು ಈ ಕುರಿತ ಅಧಿಕೃತ ಅಧಿಸೂಚನೆ ಇನ್ನಷ್ಟೇ ಬರಬೇಕಿದೆ.
ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಇಪಿಎಫ್ ಸದಸ್ಯರಿಗೆ ಅವಕಾಶ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ
ಒಂದಕ್ಕಿಂತ ಹೆಚ್ಚು ಖಾತೆ ತೆರೆಯಲು ಅವಕಾಶ
ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಠೇವಣಿದಾರ ಒಂದೇ ಖಾತೆ ಅಥವಾ ಸಂಗಾತಿಯ ಜೊತೆಗೆ ಜಂಟಿ ಖಾತೆ ತೆರೆಯಲು ಅವಕಾಶವಿದೆ. ಜಂಟಿ ಖಾತೆ ತೆರೆಯುವ ಸಂದರ್ಭದಲ್ಲಿ ಮೊದಲ ಖಾತೆದಾರ ಹಿರಿಯ ನಾಗರಿಕನಾಗಿದ್ರೆ ಸಾಕು, ಸಂಗಾತಿ ಹಿರಿಯ ನಾಗರಿಕರು ಆಗಿರಲೇಬೇಕಾದ ಅಗತ್ಯವಿಲ್ಲ. ಇನ್ನು ಜಂಟಿ ಖಾತೆಯಲ್ಲಿ ಕೂಡ ಪ್ರಸ್ತುತ ಗರಿಷ್ಠ 15ಲಕ್ಷ ರೂ. ಹೂಡಿಕೆ ಮಾಡಬಹುದು ಎಂದಿದೆ. ಆದರೆ, ಬಜೆಟ್ ನಲ್ಲಿ ಘೋಷಿಸಿರುವಂತೆ ಏಪ್ರಿಲ್ ನಿಂದ ಜಂಟಿ ಖಾತೆ ಹೊಂದಿರುವ ದಂಪತಿ ಪ್ರತಿ ಖಾತೆಯಲ್ಲಿ ಗರಿಷ್ಠ 30ಲಕ್ಷ ರೂ. ಹೂಡಿಕೆ ಮಾಡಬಹುದಾಗಿದೆ.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ 8 ಸೇವಾ ಶುಲ್ಕಗಳ ಬಗ್ಗೆ ತಿಳಿದಿರಲಿ
ತಿಂಗಳಿಗೆ 40,000 ರೂ. ಆದಾಯ ಗಳಿಸೋದು ಹೇಗೆ?
ಎಸ್ ಸಿಎಸ್ ಎಸ್ ಖಾತೆ ಠೇವಣಿ 5 ವರ್ಷಗಳ ಮೆಚ್ಯೂರಿಟಿ ಅವಧಿ ಹೊಂದಿದೆ. ಈ ಖಾತೆಯನ್ನು ಮತ್ತೆ ಮೂರು ವರ್ಷಗಳ ಕಾಲ ವಿಸ್ತರಣೆ ಮಾಡುವ ಅವಕಾಶ ಕೂಡ ಇದೆ. ಇನ್ನು ಎಸ್ ಸಿಎಸ್ಎಸ್ ಠೇವಣಿ ಮೇಲೆ ಗಳಿಸಿದ ಬಡ್ಡಿಯನ್ನು ಮೂರು ತಿಂಗಳಿಗೊಮ್ಮೆ ವಿತ್ ಡ್ರಾ ಮಾಡುವ ಅವಕಾಶ ಕೂಡ ಇದೆ. ಪ್ರಸ್ತುತ ಎಸ್ ಸಿಎಸ್ಎಸ್ ಖಾತೆಯಲ್ಲಿನ ಠೇವಣಿಗೆ ಶೇ.8ರಷ್ಟು ಬಡ್ಡಿ ನೀಡಲಾಗುತ್ತಿದೆ. ಎಸ್ ಸಿಎಸ್ಎಸ್ ಖಾತೆಯಲ್ಲಿರುವ 30ಲಕ್ಷ ರೂ. ಠೇವಣಿಗೆ ತ್ರೈಮಾಸಿಕ (ಮೂರು ತಿಂಗಳಿಗೊಮ್ಮೆ) 60,000ರೂ. ಬಡ್ಡಿ ಸಿಗುತ್ತದೆ. ಅಂದರೆ ತಿಂಗಳಿಗೆ 20,000ರೂ. ಸಿಗುತ್ತದೆ. ಹೀಗಿರುವಾಗ ಹಿರಿಯ ನಾಗರಿಕ ದಂಪತಿ ತಮ್ಮ ಪ್ರತ್ಯೇಕ ಖಾತೆಗಳಲ್ಲಿ ತಲಾ 30ಲಕ್ಷ ರೂ. ಹೂಡಿಕೆ ಮಾಡಿದರೆ ಅವರು ಮೂರು ತಿಂಗಳಲ್ಲಿ (ತ್ರೈಮಾಸಿಕ) 1,20,000 ರೂ. ಬಡ್ಡಿ ಗಳಿಸುತ್ತಾರೆ. ಅಂದರೆ ತಿಂಗಳಿಗೆ 40,000ರೂ. ಸಿಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.