ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದೆಂದ್ರೆ ಹಾವು-ಏಣಿ ಆಟ ಆಡಿದಂತೆ. ಇಲ್ಲಿ ಏರಿಳಿತ ಸಹಜ. ಷೇರು ಮಾರುಕಟ್ಟೆ ಇಳಿಕೆ ಹಾದಿಯಲ್ಲಿದ್ದಾಗಲೂ ಕೆಲವರು ಮಾತ್ರ ಹಣ ಮಾಡಬಲ್ಲರು ಎಂಬುದಕ್ಕೆ ರೇಖಾ ಜುಂಜುನ್ ವಾಲಾ ಅವರೇ ನಿದರ್ಶನ. ಕಳೆದ ಒಂದು ತಿಂಗಳಲ್ಲಿ ಸ್ಟಾರ್ ಹೆಲ್ತ್ ಇನ್ಯುರೆನ್ಸ್ ಹಾಗೂ ಮೆಟ್ರೋ ಬ್ರ್ಯಾಂಡ್ಸ್ ಷೇರುಗಳಿಂದ ರೇಖಾ ಜುಂಜುನ್ ವಾಲಾ ಅವರು 650 ಕೋಟಿ ರೂ. ಗಳಿಸಿದ್ದಾರೆ.
ನವದೆಹಲಿ (ಮಾ.7): ಕಳೆದ ಕೆಲವು ಅವಧಿಯಲ್ಲಿ ದಲಾಲ್ ಸ್ಟ್ರೀಟ್ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕೆಲವೊಂದು ಬದಲಾವಣೆಗಳು ನಡೆದಿರುವ ಹಿನ್ನೆಲೆಯಲ್ಲಿ ಲಾರ್ಜ್ ಕ್ಯಾಪ್ ಹಾಗೂ ಮಿಡ್ ಕ್ಯಾಪ್ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ. ಅಮೆರಿಕದ ಡಾಲರ್ ಮೌಲ್ಯದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಈ ಬೆಳವಣಿಗೆ ನಡೆದಿದೆ. ಇನ್ನು ಷೇರು ಮಾರುಕಟ್ಟೆ ಇಳಿಕೆ ಹಾದಿಯಲ್ಲಿದ್ದಾಗಲೂ ಕೆಲವರು ಮಾತ್ರ ಹಣ ಮಾಡುವುದರಲ್ಲಿ ನಿರತರಾಗಿದ್ದರು. ಷೇರು ಮಾರುಕಟ್ಟೆಯ ಆಳ-ಅಗಲ ಬಲ್ಲವರಿಗೆ ಇದು ಕಷ್ಟದ ಕೆಲಸವೇನೂ ಅಲ್ಲ. ಇದಕ್ಕೆ ಕೆಲವು ಕಂಪನಿಗಳ ಷೇರುಗಳನ್ನು ಹೊಂದಿರೋರು ಉತ್ತಮ ಗಳಿಕೆ ಮಾಡಿರೋದೇ ಸಾಕ್ಷಿ. ಕಳೆದ ಒಂದು ತಿಂಗಳಲ್ಲಿ ನೀವು ಮೆಟ್ರೋ ಬ್ರ್ಯಾಂಡ್ಸ್ ಹಾಗೂ ಸ್ಟಾರ್ ಹೆಲ್ತ್ ಇನ್ಯುರೆನ್ಸ್ ಷೇರುಗಳನ್ನು ಗಮನಿಸಿದ್ರೆ ನಿಮಗೆ ತಿಳಿಯುತ್ತದೆ. ಕಳೆದ ಒಂದು ತಿಂಗಳಲ್ಲಿ ಈ ಎರಡು ಕಂಪನಿಗಳ ಷೇರುಗಳಲ್ಲಿ ಏರಿಕೆಯಾಗಿರೋದು ರೇಖಾ ಜುಂಜುನ್ ವಾಲಾ ಅವರ ನಿವ್ವಳ ಸಂಪತ್ತಿನಲ್ಲಿ 650 ಕೋಟಿ ರೂ. ಹೆಚ್ಚಳಕ್ಕೆ ಕಾರಣವಾಗಿದೆ.
ಸ್ಟಾರ್ ಹೆಲ್ತ್ ಇನ್ಯುರೆನ್ಸ್ ನಲ್ಲಿ ರೇಖಾ ಷೇರು ಎಷ್ಟಿದೆ?
ಸ್ಟಾರ್ ಹೆಲ್ತ್ ಇನ್ಯುರೆನ್ಸ್ ಷೇರು ಮಾರುಕಟ್ಟೆ ನಿಯಂತ್ರಕರಿಗೆ ನೀಡಿರುವ ಮಾಹಿತಿಯಲ್ಲಿ 2021ರ ಡಿಸೆಂಬರ್ ನಲ್ಲಿ ಲಿಸ್ಟಿಂಗ್ ಆದ ಬಳಿಕ ಕಂಪನಿಯಲ್ಲಿ ರೇಖಾ ಜುಂಜುನ್ ವಾಲಾ ಅವರ ಪತಿ ರಾಕೇಶ್ ಜುಂಜುನ್ ವಾಲಾ 10,07,53,935 ಷೇರುಗಳನ್ನು ಅಥವಾ ಶೇ.17.50 ಪಾಲು ಹೊಂದಿದ್ದರು. ರಾಕೇಶ್ ಜುಂಜುನ್ ವಾಲಾ ಅವರ ಮರಣದ ಬಳಿಕ ಈ ಷೇರುಗಳು ರೇಖಾ ಜುಂಜುನ್ ವಾಲಾ ಅವರಿಗೆ ವರ್ಗಾವಣೆಯಾಗಿವೆ. ಹೀಗಾಗಿ ಸ್ಟಾರ್ ಹೆಲ್ತ್ ಇನ್ಯುರೆನ್ಸ್ ನಲ್ಲಿ ರೇಖಾ ಅವರು 10,07,53,935 ಷೇರುಗಳನ್ನು ಹೊಂದಿದ್ದಾರೆ.
ಹಿಂಡೆನ್‌ಬರ್ಗ್ ರಿಪೋರ್ಟ್‌ನಿಂದ ಆದ ನಷ್ಟ ಸರಿದೂಗಿಸಲು ಅದಾನಿ ಗ್ರೂಪ್ ಸಖತ್ ಪ್ಲ್ಯಾನ್!
ಮೆಟ್ರೋ ಬ್ರ್ಯಾಂಡ್ಸ್ ನಲ್ಲಿ ಎಷ್ಟಿದೆ?
2022ರ ಅಕ್ಟೋಬರ್ ನಿಂದ ಡಿಸೆಂಬರ್ ತನಕದ ತ್ರೈಮಾಸಿಕದಲ್ಲಿ ಮೆಟ್ರೋ ಬ್ರ್ಯಾಂಡ್ ಗಳ (Metro Brands) ಷೇರುದಾರರ ಮಾಹಿತಿ ಅನ್ವಯ ರೇಖಾ ಜುಂಜುನ್ ವಾಲಾ ಮೆಟ್ರೋ ಬ್ರ್ಯಾಂಡ್ಸ್ ನಲ್ಲಿ 3,91,53,600 ಷೇರುಗಳನ್ನು ಹೊಂದಿದ್ದಾರೆ. ಇನ್ನು ಆಕೆಯ ಪತಿ ರಾಕೇಶ್ ಜುಂಜುನ್ ವಾಲಾ ಐಪಿಒ (IPO) ಪ್ರಾರಂಭಕ್ಕೂ ಮುನ್ನ ಈ ಕಂಪನಿಯ ಹೂಡಿಕೆದಾರರಲ್ಲಿ ಒಬ್ಬರಾಗಿದ್ದರು. ರಾಕೇಶ್ ಜುಂಜುನ್ ವಾಲಾ ಮರಣದ ಬಳಿಕ ಈ ಷೇರುಗಳು ರೇಖಾ ಅವರ ಹೆಸರಿಗೆ ವರ್ಗಾವಣೆಯಾಗಿವೆ.
ಚಡ್ಡಿಯೇ ಹಾಕ್ಬೇಡಿ, ಬಡ್ಡಿ ದುಡ್ಡಿನಿಂದಲೇ ನೀವೂ ಕೋಟಿ ಎಣಿಸಬಹುದು!
ರೇಖಾ ಜುಂಜುನ್ ವಾಲಾ ನಿವ್ವಳ ಸಂಪತ್ತು ಏರಿಕೆ
ಕಳೆದ ತಿಂಗಳು ಸ್ಟಾರ್ ಹೆಲ್ತ್ ಇನ್ಯುರೆನ್ಸ್ (Star Health Insurance) ಪ್ರತಿ ಷೇರಿನ ಬೆಲೆ 530.95 ರೂ.ನಿಂದ 578.05 ರೂ.ಗೆ ಏರಿಕೆಯಾಗಿದೆ. ಅಂದ್ರೆ ಈ ಅವಧಿಯಲ್ಲಿ ಪ್ರತಿ ಷೇರಿನ ಬೆಲೆ 47.10ರೂ.ಗೆ ಹೆಚ್ಚಳವಾಗಿದೆ. ಸ್ಟಾರ್ ಹೆಲ್ತ್ ಇನ್ಯುರೆನ್ಸ್ ನಲ್ಲಿ ರೇಖಾ ಜುಂಜುನ್ ವಾಲಾ 10,07,53,935 ಷೇರುಗಳನ್ನು ಹೊಂದಿದ್ದಾರೆ. ಹೀಗಾಗಿ ರೇಖಾ ಜುಂಜುನ್ ವಾಲಾ ನಿವ್ವಳ ಸಂಪತ್ತಿನಲ್ಲಿ ಸುಮಾರು 475 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಮೆಟ್ರೋ ಬ್ರ್ಯಾಂಡ್ಸ್ ಪ್ರತಿ ಷೇರಿನ ಬೆಲೆ 45.70 ರೂ.ಗೆ ಏರಿಕೆಯಾಗಿದೆ. ರೇಖಾ ಜುಂಜುನ್ ವಾಲಾ ಮೆಟ್ರೋ ಬ್ರ್ಯಾಂಡ್ಸ್ ನಲ್ಲಿ 3,91,53,600 ಷೇರುಗಳನ್ನು ಹೊಂದಿರುತ್ತಾರೆ. ರೇಖಾ ಜುಂಜುನ್ ವಾಲಾ ನಿವ್ವಳ ಸಂಪತ್ತು ಅಂದಾಜು 179 ಕೋಟಿ ರೂ. ಏರಿಕೆಯಾಗಿದೆ.
ಕಳೆದ ಒಂದು ತಿಂಗಳಲ್ಲಿ ಸ್ಟಾರ್ ಹೆಲ್ತ್ ಇನ್ಯುರೆನ್ಸ್ ಹಾಗೂ ಮೆಟ್ರೋ ಬ್ರ್ಯಾಂಡ್ ಗಳ ಷೇರುಗಳಿಂದ ರೇಖಾ ಜುಂಜುನ್ ವಾಲಾ ನಿವ್ವಳ ಸಂಪತ್ತು 650 ಕೋಟಿ ರೂ. ಹೆಚ್ಚಳವಾಗಲಿದೆ.