ಐಷಾರಾಮಿ ಒಬೆರಾಯ್ ಹೋಟೆಲ್ ಹಿಂದಿದೆ ಹೋರಾಟದ ಕಥೆ; ಸೋಲನ್ನೇ ಮೆಟ್ಟಿಲಾಗಿಸಿಕೊಂಡ ಮೋಹನ್ ಸಿಂಗ್ ರಾಯ್

By Suvarna News  |  First Published Mar 7, 2023, 5:50 PM IST

ಒಬೆರಾಯ್ ಹೋಟೆಲ್ ಹೆಸರು ಕೇಳಿದ ತಕ್ಷಣ ಐಷಾರಾಮಿ ಫೈವ್ ಸ್ಟಾರ್ ಹೋಟೆಲ್ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಆದರೆ, ಈ ಹೋಟೆಲ್ ಸಾಮ್ರಾಜ್ಯ ಕಟ್ಟಲು ಅದರ ಸ್ಥಾಪಕ ಮೋಹನ್ ಸಿಂಗ್ ರಾಯ್ ಪಟ್ಟ ಶ್ರಮ ಬಹುತೇಕರಿಗೆ ತಿಳಿದಿಲ್ಲ. ಬಡ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ಭಾರತದ ಹೋಟೆಲ್ ಉದ್ಯಮದ ಪಿತಾಮಹನಾಗಿದ್ದು ನಿಜಕ್ಕೂ ರೋಚಕ ಕಥೆಯೇ ಸರಿ. 


Business Desk:ಯಶಸ್ಸು ಪಡೆಯಲು ನಮ್ಮಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸ ಇರಲೇಬೇಕು. ಆಗ ಮಾತ್ರ ಯಶಸ್ಸು ಗಳಿಕೆಯ ಹಾದಿಯಲ್ಲಿ ಎದುರಾಗುವ ಸೋಲುಗಳನ್ನು ಮೆಟ್ಟಿ ನಿಂತು ಮುನ್ನಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ಒಬೆರಾಯ್ ಹೋಟೆಲ್ಸ್ ಹಾಗೂ ರೆಸಾರ್ಟ್ಸ್ ಸಂಸ್ಥಾಪಕ ಹಾಗೂ ಮುಖ್ಯಸ್ಥ ರಾಯ್ ಬಹದೂರ್ ಮೋಹನ್ ಸಿಂಗ್ ಒಬೆರಾಯ್ ಅವರಿಗಿಂತ ಉತ್ತಮ ನಿದರ್ಶನ ಬೇರೆ ಬೇಕಿಲ್ಲ. ಮುಂದಿನ ತಿರುವಿನಲ್ಲಿ ಒಳ್ಳೆಯ ಸಂಗತಿಗಳು ಕಾಯುತ್ತಿವೆ ಎಂಬ ನಂಬಿಕೆಯಿಂದ ನೀವು ಮುನ್ನಡೆದರೆ ಮಾತ್ರ ಪ್ರತಿ ಸೋಲು ಹಾಗೂ ಕೆಟ್ಟ ಸಮಯ ದೂರವಾಗಬಲ್ಲದು ಎಂಬುದಕ್ಕೆ ಮೋಹನ್ ಸಿಂಗ್ ರಾಯ್ ಅವರೇ ಸಾಕ್ಷಿ. ಭಾರತದ ಎರಡನೇ ಅತೀದೊಡ್ಡ ಹೋಟೆಲ್ ಸಾಮ್ರಾಜ್ಯವನ್ನು ಕಟ್ಟೋದು ಒಬೆರಾಯ್ ಅವರಿಗೆ ಸುಲಭದ ಕೆಲಸವೇನೂ ಆಗಿರಲಿಲ್ಲ. ಈ ಹಾದಿಯಲ್ಲಿ ಅವರು ಸರಣಿ ಸೋಲುಗಳ್ನು ಎದುರಿಸಬೇಕಾಯಿತು. ಆದರೂ ಅಂಜದೆ ಒಬೆರಾಯ್ ಗ್ರೂಪ್ ಕಟ್ಟುವಲ್ಲಿ ಅವರು ಸಫಲರಾದರು. ಒಬೆರಾಯ್ ಗ್ರೂಪ್ ಹಾಗೂ ಅದರ ಸಂಸ್ಥಾಪಕರಾದ ಮೋಹನ್ ಸಿಂಗ್ ಒಬೆರಾಯ್ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆದರೆ, ಈ ಬ್ರ್ಯಾಂಡ್ ಹೇಗೆ ಪ್ರಾರಂಭವಾಯಿತು? ಭಾರತದ ಮೊದಲ ಅತ್ಯಾಧುನಿಕ ಫೈವ್ ಸ್ಟಾರ್, ವಿಶ್ವ ದರ್ಜೆ ಹೋಟೆಲ್ ಆಗಿ ಹೇಗೆ ಬೆಳೆಯಿತು ಎಂಬ ಕಥೆ ಬಹುತೇಕರಿಗೆ ತಿಳಿದಿಲ್ಲ.

ಯಾರು ಈ ಮೋಹನ್ ಸಿಂಗ್ ಒಬೆರಾಯ್?
ಎಂಎಸ್ ಒಬೆರಾಯ್ ಪಾಕಿಸ್ತಾನದ ಝೇಲಂ ಜಿಲ್ಲೆಯ ಭನೌ ಗ್ರಾಮದ ಸಿಖ್ ಕುಟುಂಬದಲ್ಲಿ ಜನಿಸಿದ್ದರು. ಒಬೆರಾಯ್ ಆರರ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಇದರಿಂದ ಕುಟುಂಬದ ಸಂಪೂರ್ಣ ಜವಾಬ್ದಾರಿ ಅವರ ತಾಯಿಯ ಹೆಗಲಿಗೆ ಬಿತ್ತು. ಅಂದಿನ ಕಾಲದಲ್ಲಿ ಇಡೀ ಕುಟುಂಬದ ಜವಾಬ್ದಾರಿಯನ್ನು ತಾಯಿಯೊಬ್ಬಳೇ ನಿಭಾಯಿಸೋದು ಸುಲಭದ ಕೆಲಸವಾಗಿರಲಿಲ್ಲ. ಹೀಗಾಗಿ ಕೆಲವೇ ವರ್ಷಗಳಲ್ಲಿ ಮೋಹನ್ ಸಿಂಗ್ ಕೂಡ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಲಹೋರ್ ನಲ್ಲಿದ್ದ ಚಿಕ್ಕಪ್ಪನ ಶೂ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರುತ್ತಾರೆ. ಆದರೆ, ಇವರು ಕೆಲಸಕ್ಕೆ ಸೇರಿದ ಒಂದು ವರ್ಷದೊಳಗೆ ಈ ಕಾರ್ಖಾನೆ ಮುಚ್ಚಲ್ಪಡುತ್ತದೆ. ಇದೇ ಸಮಯದಲ್ಲಿ ಮೋಹನ್ ಸಿಂಗ್ ಇಶ್ರಾನ್ ದೇವಿ ಅವರನ್ನು ಮದುವೆಯಾಗುತ್ತಾರೆ. 

Tap to resize

Latest Videos

ಅದಾನಿ ಸಮೂಹ ಷೇರುಗಳ ಜಿಗಿತ: 2 ದಿನದಲ್ಲಿ 3,102 ಕೋಟಿ ರೂ. ಲಾಭ ಮಾಡಿಕೊಂಡ ಎನ್‌ಆರ್‌ಐ

ಸೋಲಿನ ಮೇಲೆ ಸೋಲು
ವಿವಾಹದ ಬಳಿಕ ಪತ್ನಿಯ ಅಣ್ಣನ ಜೊತೆಗೆ ಸರ್ಗೊಂಧದಲ್ಲಿ ನೆಲೆಸುತ್ತಾರೆ. ಆದರೆ, ಒಬೆರಾಯ್ ಅವರಿಗೆ ಯಾವುದೇ ಸಮರ್ಪಕವಾದ ಕೆಲಸ ಸಿಗೋದಿಲ್ಲ. ಹೀಗಾಗಿ ಖಾಲಿ ಕೈಯಲ್ಲಿ ತಮ್ಮ ಹಳ್ಳಿಗೆ ಮರಳುತ್ತಾರೆ. ಅಲ್ಲದೆ, ತಾಯಿ ಜೊತೆಗೆ ಅಲ್ಲೇ ನೆಲೆಸುವ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ಅವರ ತಾಯಿ ಮರಳಿ ಪತ್ನಿಯ ಊರಿಗೆ ತೆರಳಿ ಉದ್ಯೋಗ ಹುಡುಕುವಂತೆ ಹೇಳುತ್ತಾರೆ. ಮನೆಯಿಂದ ಮರಳುವಾಗ ತಾಯಿ ಅವರ ಕೈಗೆ 25ರೂ. ನೀಡಿರುತ್ತಾರೆ ಕೂಡ.

ಕನಸಿಗೆ ಬಣ್ಣ 
ಅನೇಕ ಸೋಲುಗಳು ಹಾಗೂ ಕಷ್ಟಗಳ ಬಳಿಕ ಒಬೆರಾಯ್ 1922ರಲ್ಲಿ ಪ್ಲೇಗ್ ನಿಂದ ತಪ್ಪಿಸಿಕೊಳ್ಳಲು ಶಿಮ್ಲಾಕ್ಕೆ ಬರುತ್ತಾರೆ. ಅವರ ಬಳಿ ಆಗ ಇದ್ದಿದ್ದು ತಾಯಿ ನೀಡಿದ 25ರೂ. ಮಾತ್ರ. ಅಲ್ಲಿ ಸೆಸಿಲ್ ಹೋಟೆಲ್ ನಲ್ಲಿ ತಿಂಗಳಿಗೆ 50ರೂ ಸಂಬಳಕ್ಕೆ ಡೆಸ್ಕ್ ಕ್ಲಾರ್ಕ್ ಆಗಿ ಕೆಲಸಕ್ಕೆ ಸೇರುತ್ತಾರೆ. ಕಷ್ಟಪಟ್ಟು ಕೆಲಸ ಮಾಡುತ್ತಾರೆ. 1934ರಲ್ಲಿ ಒಬೆರಾಯ್ ಕ್ಲಾರ್ಕೆಸ್ ಹೋಟೆಲ್ ಅನ್ನು ಖರೀದಿಸುತ್ತಾರೆ. ಇದಕ್ಕಾಗಿ ತನ್ನ ಪತ್ನಿಯ ಆಭರಣಗಳು ಹಾಗೂ ತನ್ನ ಬಳಿ ಇರುವ ಆಸ್ತಿಗಳನ್ನು ಅಡವಿಡುತ್ತಾರೆ. ಮುಂದೆ ಕೇವಲ 5 ವರ್ಷಗಳಲ್ಲಿ ಈ ಎಲ್ಲ ಸಾಲಗಳಿಂದ ಮುಕ್ತರಾಗುತ್ತಾರೆ ಕೂಡ. ಇದಾದ ಬಳಿಕ ಕೋಲ್ಕತ್ತದಲ್ಲಿ ಮಾರಾಟಕ್ಕಿದ್ದ 50 ರೂಮ್ ಗಳ ಹೋಟೆಲ್ ಅನ್ನು ಲೀಸ್ ಗೆ ತೆಗೆದುಕೊಳ್ಳುತ್ತಾರೆ. ಇಲ್ಲಿಂದ ಮುಂದೆ ಅವರು ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತ ಸಾಗುತ್ತಾರೆ. ಭಾರತದ ಎರಡನೇ ಅತೀದೊಡ್ಡ ಹೋಟೆಲ್ ಸಮೂಹವನ್ನು ಸ್ಥಾಪಿಸುತ್ತಾರೆ. ಪ್ರಸ್ತುತ ಜಗತ್ತಿನಾದ್ಯಂತ ಈ ಈ ಸಂಸ್ಥೆಯಲ್ಲಿ 12,000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಒಬೆರಾಯ್ ಹೋಟೆಲ್ಸ್ ಹಾಗೂ ರೆಸಾರ್ಟ್ಸ್ ಮತ್ತು ಟ್ರಿಡೆಂಟ್ ಬ್ರ್ಯಾಂಡ್ ಗಳಡಿಯಲ್ಲಿ 5 ರಾಷ್ಟ್ರಗಳಲ್ಲಿ ಈ ಸಂಸ್ಥೆ 31 ಐಷಾರಾಮಿ ಹೋಟೆಲ್ ಗಳನ್ನು ಹೊಂದಿದೆ.  

ಯೂಟ್ಯೂಬ್‌ ಚಾನೆಲ್‌ ಆಗಿ ಸ್ಟಾರ್ಟ್‌ ಆಗಿದ್ದ ಈ ಕಂಪನಿಯ ಈಗಿನ ಮೌಲ್ಯ 25 ಸಾವಿರ ಕೋಟಿ!

ಹೋಟೆಲ್ ಉದ್ಯಮದ ಪಿತಾಮಹ
ಮೋಹನ್ ಸಿಂಗ್ ಒಬೆರಾಯ್ ಅವರ್ನು ಭಾರತದ ಹೋಟೆಲ್ ಉದ್ಯಮದ ಪಿತಾಮಹ ಎಂದು ಕರೆಯಲಾಗುತ್ತದೆ.  ಗುಣಮಟ್ಟದ ಸೇವೆ ಹಾಗೂ ಪರಿಪಕ್ವತೆಗೆ ಒಬೆರಾಯ್ ಹೋಟೆಲ್ ಸಮೂಹ ಇಂದು ಹೆಸರಾಗಿದೆ. ಇದಕ್ಕೆ ಕಾರಣ ಒಬೆರಾಯ್ ಅವರು ಸಂಸ್ಥೆಯನ್ನು ಕಟ್ಟಿ, ಬೆಳೆಸಿದ ರೀತಿ. 

click me!