ನೋಟಿನಿಂದ ಮಹಾತ್ಮ ಗಾಂಧಿ ಫೋಟೊ ತೆಗೆದುಹಾಕುವ ವದಂತಿ: ಶುದ್ಧ ಸುಳ್ಳು ಎಂದ RBI

Published : Jun 06, 2022, 06:01 PM IST
ನೋಟಿನಿಂದ ಮಹಾತ್ಮ ಗಾಂಧಿ ಫೋಟೊ ತೆಗೆದುಹಾಕುವ ವದಂತಿ: ಶುದ್ಧ ಸುಳ್ಳು ಎಂದ RBI

ಸಾರಾಂಶ

Replacing Mahatma Gandhi Ji photo from currency: ಮಹಾತ್ಮ ಗಾಂಧೀಜಿ ಅವರ ಭಾವಚಿತ್ರದ ಬದಲು ರವೀಂದ್ರನಾಥ ಠಾಗೋರ್‌ ಮತ್ತು ಅಬ್ದುಲ್‌ ಕಲಾಂ ಭಾವಚಿತ್ರ ನೋಟುಗಳ ಮೇಲೆ ಮುದ್ರಿತವಾಗುತ್ತಿಲ್ಲ ಎಂದು ಆರ್‌ಬಿಐ ಮತ್ತು ಸೆಂಟ್ರಲ್‌ ಬ್ಯಾಂಕ್‌ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ನಿನ್ನೆಯಿಂದ ಆರಂಭವಾಗಿದ್ದ ಹೊಸ ವಿವಾದಕ್ಕೆ ತೆರೆ ಎಳೆದಿದೆ. 

ನವದೆಹಲಿ: ಕಳೆದೆರಡು ದಿನಗಳಿಂದ ಭಾರತದ ನೋಟಿನ (Indian Rupee Curency) ಮೇಲಿರುವ ಮಹಾತ್ಮ ಗಾಂಧೀಜಿ ಭಾವಚಿತ್ರವನ್ನು (Mahatma Gandhi watermark on currency) ತೆಗೆದುಹಾಕಿ ರವೀಂದ್ರನಾಥ ಠಾಗೋರ್‌ (Ravindranath Tagore) ಮತ್ತು ಎಪಿಜೆ ಅಬ್ದುಲ್‌ ಕಲಾಂ (Abdul Kalam) ಭಾವಚಿತ್ರ ಹಾಕಲು ಸರ್ಕಾರ ಮುಂದಾಗಿದೆ ಎಂಬ ವದಂತಿ ಎಲ್ಲೆಡೆ ಹರಡಿತ್ತು. ಆದರೆ ಇದೀಗ ವದಂತಿಗಳಿಗೆ ತೆರೆ ಎಳೆದಿರುವ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಈ ಮಾಹಿತಿ ಶುದ್ಧ ಸುಳ್ಳು, ಮಹಾತ್ಮಾ ಗಾಂಧಿಯವರ ಭಾವಚಿತ್ರ ಬದಲಿಸುವ ಬಗ್ಗೆ ಚರ್ಚೆಯೇ ನಡೆದಿಲ್ಲ ಮತ್ತು ನಡೆಯುವುದೂ ಇಲ್ಲ ಎಂದಿದೆ. ಮಹಾತ್ಮ ಗಾಂಧಿ ಫೋಟೊ ಬದಲು ಎಪಿಜೆ ಅಬ್ದುಲ್‌ ಕಲಾಂ ಮತ್ತು ರವೀಂದ್ರನಾಥ ಠಾಗೋರ್‌ ಅವರ ಫೋಟೊ ನೋಟಿನಲ್ಲಿ ಮುದ್ರಿಸುವ ಬಗ್ಗೆ ಎಂದೂ ಪ್ರಸ್ತಾಪವೇ ಆಗಿಲ್ಲ. ವರದಿಗಳೆಲ್ಲವೂ ಸುಳ್ಳಾಗಿದ್ದು ಯಾರೂ ನಂಬಬಾರದು ಎಂದು ಆರ್‌ಬಿಐ ಇಂದು ತಿಳಿಸಿದೆ. 

"ವದಂತಿಗಳೆಲ್ಲವೂ ಸುಳ್ಳು. ಕೆಲ ಮಾಧ್ಯಮಗಳು ಗಾಂಧೀಜಿ ಭಾವಚಿತ್ರಗಳನ್ನು ಬದಲಿಸಿ ಮತ್ತೊಬ್ಬರ ಫೋಟೊ ಮುದ್ರಣ ಮಾಡಲಾಗುತ್ತಿದೆ ಎಂದು ವರದಿ ಮಾಡಿವೆ. ಇದು ಸತ್ಯಕ್ಕೆ ದೂರವಾಗಿದ್ದು, ಈ ರೀತಿಯ ಚರ್ಚೆ ಆಗಿಲ್ಲ. ರಿಸರ್ವ್‌ ಬ್ಯಾಂಕ್‌ನ ಮುಂದೆ ಈ ರೀತಿಯ ವಿಚಾರಗಳು ಬಂದೇ ಇಲ್ಲ. ವರದಿಗಳನ್ನು ನಂಬಬಾರದು," ಎಂದು ಸೆಂಟ್ರಲ್‌ ಬ್ಯಾಂಕ್‌ ಪ್ರಕಟಣೆ ಹೊರಡಿಸಿದೆ. ಜತೆಗೆ ಟ್ವಿಟ್ಟರ್‌ನಲ್ಲೂ ಆರ್‌ಬಿಐ ಪ್ರತಿಕ್ರಿಯೆ ನೀಡಿದ್ದು, ನೋಟಿನ ಮೇಲೆ ಮುದ್ರಿತವಾದ ಭಾವಚಿತ್ರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದೆ. 

ವರದಿಗಳ ಪ್ರಕಾರ, ಆರ್‌ಬಿಐನ ಮುಖ್ಯ ಪ್ರಧಾನ ಕಾರ್ಯನಿರ್ವಾಹಕಾಧಿಕಾರಿ ಯೋಗೆಶ್‌ ದೋಯಲ್‌ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. "ಕೆಲವೊಂದು ಮಾಧ್ಯಮಗಳಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರ ಬದಲಿಸಿ ಆರ್‌ಬಿಐ ನೋಟು ಮುದ್ರಣ ಮಾಡಲಿದೆ ಎಂದು ವರದಿಗಳು ಬಂದಿವೆ. ಆರ್‌ಬಿಐ ಯಾವುದೇ ಬದಲಾವಣೆಯನ್ನು ತರುತ್ತಿಲ್ಲ," ಎಂದು ಯೋಗೇಶ್‌ ದಯಾಳ್ ಹೇಳಿದ್ದಾರೆ. 

ಇದನ್ನೂ ಓದಿ: Operation Blue Star ಸ್ವರ್ಣ ಮಂದಿರದ ಬಳಿ ಖಲಿಸ್ತಾನ ಪರ ಘೋಷಣೆ, ಪಂಜಾಬ್‌‌ನಲ್ಲಿ ಹೆಚ್ಚಿದ ಆತಂಕ!

ಹಲವಾರು ದಿನಪತ್ರಿಕೆಗಳು ಭಾನುವಾರದಿಂದಲೇ ಈ ಬಗ್ಗೆ ವರದಿಗಳನ್ನು ಮಾಡಲು ಆರಂಭಿಸಿತ್ತು. ಪಶ್ಚಿಮ ಬಂಗಾಳದ ಖ್ಯಾತ ಕವಿ, ನೋಬೆಲ್‌ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್‌ ಮತ್ತು ಖ್ಯಾತ ವಿಜ್ಞಾನಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂರ ಭಾವಚಿತ್ರವನ್ನು ಮುಂಬರುವ ದಿನಗಳಲ್ಲಿ ನೋಟುಗಳ ಮೇಲೆ ಮುದ್ರಿಸಲು ಆರ್‌ಬಿಐ ನಿರ್ಧರಿಸಿದೆ ಎಂದು ಮೂಲಗಳನ್ನು ಹೆಸರಿಸಿ ವರದಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಾಕಷ್ಟು ಮಂದಿ ಇದರ ವಿರುದ್ಧ ದನಿಯೆತ್ತಿದ್ದರು. ರಾಷ್ಟ್ರಪಿತ ಗಾಂಧೀಜಿ ಅವರಿಗೆ ಮಾಡುತ್ತಿರುವ ಅಪಮಾನ ಇದು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿತ್ತು. ಈ ಎಲ್ಲಾ ವಿವಾದಗಳನ್ನು ಪರಿಹರಿಸಲು ಆರ್‌ಬಿಐ ಮತ್ತು ಸೆಂಟ್ರಲ್‌ ಬ್ಯಾಂಕ್‌ ಇಂದು ಅಧಿಕೃತ ಮಾಹಿತಿ ನೀಡಿ ಊಹಾಪೋಹಕ್ಕೆ ಅಂತ್ಯ ಹಾಡಿದೆ. 

ಈ ವರದಿ ಮೊದಲು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ವರದಿಯಾಗಿತ್ತು. ನೋಟುಗಳಲ್ಲಿ ಫೋಟೊ ಬದಲಾಯಿಸಿ ಮುದ್ರಣ ಆಗಲೇ ಆರಂಭವಾಗಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. "ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಭಾವಚಿತ್ರ ದೇಶದ ಪ್ರತಿಯೊಂದು ನೋಟಿನ ಮೇಲೆ ಮುದ್ರಿತವಾಗಿದೆ. ಮತ್ತು ಅದು ದೇಶದ ಗೌರವದ ಸಂಕೇತವಾಗಿದೆ. ಆದರೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಗಾಂಧೀಜಿ ವಾಟರ್‌ ಮಾರ್ಕ್‌ ಅನ್ನು ಬದಲಿಸಲು ಮುಂದಾಗಿದ್ದಾರೆ. ಅದರ ಬದಲಿಗೆ ಠಾಗೋರ್‌ ಮತ್ತು ಕಲಾಂ ವಾಟರ್‌ಮಾರ್ಕ್‌ ಮುದ್ರಣ ಮಾಡಲು ಮುಂದಾಗಿದೆ," ಎಂದು ವರದಿಯಲ್ಲಿ ಹೇಳಲಾಗಿತ್ತು. 

ಇದನ್ನೂ ಓದಿ: ವಾರಣಾಸಿ ಸರಣಿ ಸ್ಫೋಟ, ಭಯೋತ್ಪಾದಕ ವಲೀಯುಲ್ಲಾಗೆ ಗಲ್ಲು ಶಿಕ್ಷೆ!

ಜೂನ್‌ ಐದರಂದು ಪಬ್ಲಿಶ್‌ ಆಗಿದ್ದ ವರದಿಯ ಪ್ರಕಾರ, ಐಐಟಿ ದೆಹಲಿಯ ಪ್ರೊಫೆಸರ್‌ ದಿಲೀಪ್‌ ಟಿ ಶಹಾನಿ ಅವರಿಗೆ ಗಾಂಧೀಜಿ, ಕಲಾಂ, ಠಾಗೋರ್‌ ಮೂರು ಜನರ ಎರಡು ವಾಟರ್‌ ಮಾರ್ಕ್‌ಗಳನ್ನು ಕಳಿಸಿ ಅದರಲ್ಲಿ ಒಂದನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸುವಂತೆ ಹೇಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದೇ ಮೊದಲ ಬಾರಿ ಗಾಂಧೀಜಿ ಹೊರತುಪಡಿಸಿ ಉಳಿದ ಖ್ಯಾತನಾಮರನ್ನು ನೋಟಿನ ಮೇಲೆ ಮುದ್ರಣ ಮಾಡಲಾಗುತ್ತದೆ ಎಂಬ ವರದಿಯಾಗಿದ್ದು ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಗಾಂಧೀಜಿ ಅವರ ಫೋಟೊ ನೋಟುಗಳ ಮೇಲೆ ಎಂದಿನಂತೆ ಇರಲಿದೆ ಎಂಬುದನ್ನು ಆರ್‌ಬಿಐ ಸ್ಪಷ್ಟಪಡಿಸಿ ವಿವಾದಕ್ಕೆ ತೆರೆ ಎಳೆದಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌