ಪೋಸ್ಟ್‌ ಆಫೀಸ್‌ನಿಂದ ಹೊಸ ಸೇವೆ, ಪಾರ್ಸೆಲ್ ಕಳುಹಿಸಲು ಕಚೇರಿಗೆ ಹೋಗುವ ಬದಲು ಮನೆ ಬಾಗಿಲಿಗೆ ವಾಹನ!

By Suvarna NewsFirst Published Jun 7, 2023, 8:10 PM IST
Highlights

ಪಾರ್ಸೆಲ್ ಹಿಡಿದು ಅಂಚೆ ಕಚೇರಿಗೆ ತೆರಳುವ ಕಿರಿಕಿರಿ, ಸಮಸ್ಯೆ ತಪ್ಪಿಸಲು ಪೋಸ್ಟ್ ಆಫೀಸ್ ಇದೀಗ ಹೊಸ ಸೇವೆ ಆರಂಭಿಸಿದೆ. ಇನ್ನು ಮುಂದೆ ಪಾರ್ಸೆಲ್ ಹಿಡಿದು ಕಚೇರಿಗೆ ತೆರಳುವ ಅವಶ್ಯಕತೆ ಇಲ್ಲ. ಮನೆ ಬಾಗಿಲಿಗೆ ಅಂಚೆ ಕಚೇರಿ ವಾಹನ ಬರಲಿದೆ.

ಬೆಂಗಳೂರು(ಜೂ.07): ಅಂಚೆ ಕಚೇರಿ ಹತ್ತು ಹಲವು ಸೌಲಭ್ಯಗಳ ಮೂಲಕ ಗ್ರಾಹಕರ ನೆಚ್ಚಿನ ಹಾಗೂ ನಂಬಿಕಸ್ಥ ಸಂಸ್ಥೆಯಾಗಿದೆ. ಇದೀಗ ಒಂದಿಲ್ಲೊಂದು ವಿನೂತನ ಪ್ರಯೋಗಗಳಿಂದ ಜನಮಾನಸ ಗೆದ್ದಿರುವ ಭಾರತೀಯ ಅಂಚೆ ಇಲಾಖೆ ಇದೀಗ ಹೊಸ ಸೇವೆ ಪರಿಚಯಿಸಿದೆ. ಇನ್ನು ಮುಂದೆ ಪಾರ್ಸೆಲ್ ಕಳುಹಿಸಲು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಅಂಚೆ ಕಚೇರಿ ವಾಹನ ಮನೆಗೇ ಬಂದು ಪಾರ್ಸೆಲ್ ಕಲೆಕ್ಟ್ ಮಾಡಿಕೊಳ್ಳುತ್ತದೆ. ನಾಗರಿಕರಿಗೆ ಭಾರತೀಯ ಅಂಚೆ ಇಲಾಖೆಯ ಸೇವೆಗಳನ್ನು ಬಳಸಲು ಸುಲಭವಾಗಿಸುವ ನಿಟ್ಟಿನಲ್ಲಿ ಪಾರ್ಸೆಲ್ ಆನ್ ವೀಲ್ಸ್ ಅನ್ನುವ ಈ ಹೊಸ ಸೇವೆಯನ್ನು ಪರಿಚಯಿಸಿದೆ. 

ಎಲ್ಲಿಲ್ಲಿ ದೊರೆಯುತ್ತೆ ಈ ಸೇವೆ?
ಸದ್ಯ ಬೆಂಗಳೂರಿನ ಕೈಗಾರಿಕಾ ಪ್ರದೇಶವಾದ ಅಬ್ಬಿಗೆರೆ, ಪೀಣ್ಯದಲ್ಲಿ ಪ್ರಾಯೋಗಿಕ ಹಂತದಲ್ಲಿದೆ ಈ ಸೇವೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಬೆಂಗಳೂರು ನಗರದಾದ್ಯಂತ ಈ ಸೇವೆಯನ್ನು ಪ್ರಾರಂಭಿಸಲಾಗುತ್ತದೆ. 

ಅಂಚೆ ಕಚೇರಿ ಈ ಯೋಜನೆಯಲ್ಲಿ 10 ಲಕ್ಷ ರೂ. ಹೂಡಿಕೆ ಮಾಡಿ, ದುಪ್ಪಟ್ಟು ಹಣ ಗಳಿಸಿ!

ಗ್ರಾಹಕರಿಂದ ಸಿಗ್ತಿದೆ ಭರ್ಜರಿ ರೆಸ್ಪಾನ್ಸ್!
ಒಂದು ಕರೆಗೆ ಸ್ಪಂದಿಸುವ ಅಂಚೆ ಸಿಬ್ಬಂದಿಗಳು ಗ್ರಾಹಕರು ಇರುವಲ್ಲಿಗೇ ಹೋಗಿ ಪಾರ್ಸೆಲ್ ಸಂಗ್ರಹಿಸುವುದರಿಂದ ಈ ಹೊಸ ಸೇವೆಗೆ ಭರ್ಜರಿ ಜನಸ್ಪಂದನೆ ದೊರೆತಿದೆ. ಜೂನ್ ಆರರಂದು ಈ ಸೇವೆ ಆರಂಭವಾಗಿದ್ದು ಒಂದೇ ದಿನ ಇಪ್ಪತ್ತೈದಕ್ಕೂ ಅಧಿಕ ಸರಕುಗಳನ್ನು ಈ ವಾಹನದ ಮೂಲಕ ಸ್ವೀಕರಿಸಲಾಗಿದೆ. ಮನೆಯಿಂದ ಅಂಚೆ ಕಚೇರಿಗೆ ತಲುಪುವ ಸಮಯವೂ ಉಳಿಯುವುದರಿಂದ ಬಹುತೇಕರು ಈ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಇದಕ್ಕಾಗಿಯೇ ತಯಾರಾಯ್ತು ವಿಶೇಷ ವಾಹನ
ಈ ಪಾರ್ಸೆಲ್ ಗಳನ್ನು ಸ್ವೀಕರಿಸಲು ಅಂಚೆ ಇಲಾಖೆ ತನ್ನ ಬಳಿ ಈಗಾಗಲೇ ಇರುವ ವಾಹನವನ್ನೇ ಒಂದಿಷ್ಟು ಆಲ್ಟ್ರೇಶನ್ ಮಾಡಿ ಬಳಸಿದ್ದು, ಇದಕ್ಕಾಗಿ ಯಾವುದೇ ವಿಶೇಷ ಖರ್ಚು ಮಾಡಿಲ್ಲ ಅನ್ನೋದು ವಿಶೇಷ. ಈ ವಾಹನದಲ್ಲಿ ಒಂದು ತೂಕದ ಯಂತ್ರವಿದ್ದು ಸೀಟ್ ಗಳನ್ನು ಮಾಡಿಫೈ ಮಾಡಿ ಪಾರ್ಸೆಲ್ ಸಾಗಿಸಲು ಯೋಗ್ಯವಾಗುವಂತೆ ಮಾಡಲಾಗಿದೆ.

ಅಂಚೆ ಕಚೇರಿ ಉಳಿತಾಯ ಯೋಜನೆ ಹೂಡಿಕೆ ನಿಯಮಗಳಲ್ಲಿ ಬದಲಾವಣೆ;ಕೆವೈಸಿ ಜೊತೆಗೆ ಆದಾಯದ ದಾಖಲೆಯೂ ಅಗತ್ಯ

ಈ ಸೇವೆಗೆ ಹೆಚ್ಚುವರಿ ಚಾರ್ಜ್ ಇದೆಯಾ?
ಸದ್ಯ ಇಲಾಖೆಯ ಈ ಹೊಸ ಸೇವೆಗೆ ಯಾವುದೇ ರೀತಿಯ ಎಕ್ಸ್ಟ್ರಾ ಚಾರ್ಜ್ ಹಾಕಲಾಗುತ್ತಿಲ್ಲ. ಯಾವುದೇ ರೀತಿಯ ಹೊಸ ಖರ್ಚು ಇಲ್ಲದೇ ಇರುವುದರಿಂದ ಮತ್ತು ಅಂಚೆ ಇಲಾಖೆಯಲ್ಲಿ ಆ ಬಗ್ಗೆ ಯಾವುದೇ ರೀತಿಯ ಅವಕಾಶವೇ ಇಲ್ಲದಿರುವುದರಿಂದ ಈ ಸೇವೆ ಸಂಪೂರ್ಣ ಫ್ರೀ. ಒಂದು ಅಂಚೆ ಕಚೇರಿಯಿಂದ ಇನ್ನೊಂದು ಕಚೇರಿಗೆ ಕನಿಷ್ಟ ಐದಾರು ಕಿಲೋಮೀಟರ್ ದೂರವಿದ್ದು ಗ್ರಾಹಕರ ಅಮೂಲ್ಯವಾದ ಸಮಯ ಉಳಿಸುವ ನಿಟ್ಟಿನಲ್ಲಿ ತರಲಾಗಿರುವ ಈ ಸೇವೆಗೆ ಗ್ರಾಹಕನೂ ಫುಲ್ ಖುಷ್ ಆಗಿದ್ದಾನೆ. ಹಾಗಾದ್ರೆ ನೀವೂ ಈ ಏರಿಯಾದವರಾಗಿದ್ರೆ 9480884078 ನಂಬರ್ ಗೆ ಕರೆ ಮಾಡಿ, ಅಂಚೆ ಇಲಾಖೆಯ ಈ ಹೊಸ ಸೇವೆಯ ಸದುಪಯೋಗ ಪಡೆದುಕೊಳ್ಳಿ.

ಯಾವ ಸಮಯಕ್ಕೆ ಈ ಸೇವೆ ಲಭ್ಯವಿದೆ?
ಅಬ್ಬಿಗೆರೆ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪೂರ್ವಾಹ್ನ 11:30ರಿಂದ ಮಧ್ಯಾಹ್ನ 2:30ರವರೆಗೆ ಸೇವೆ ಲಭ್ಯವಿದೆ. 
ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಪರಾಹ್ನ 3ರಿಂದ 4:30ರವರೆಗೆ ಲಭ್ಯವಿದೆ. ಸ್ಥಳದಲ್ಲೇ ವೇಟ್ ಚೆಕ್ ಮಾಡಿ, ರಿಸಿಪ್ಟ್ ಪಡೆದುಕೊಂಡರೆ ಪಾರ್ಸೆಲ್ ಟ್ರ್ಯಾಕಿಂಗ್ ಲಿಂಕ್ ಪಡೆದುಕೊಂಡು ಪೋಸ್ಟಲ್ ಇನ್ಫೋ ಆ್ಯಪ್ ಮೂಲಕ ಸಾಗಣೆ ಮಾರ್ಗ ಮತ್ತು ಸರಕಿನ ಸದ್ಯದ ಸ್ಥಿತಿಯನ್ನು ಕಂಡುಕೊಳ್ಳಬಹುದಾಗಿದೆ.

ಕರ್ನಾಟಕದಲ್ಲಿ ಇದೇ ಮೊದಲು
ಅಂಚೆ ಇಲಾಖೆ ಮಾಡುತ್ತಿರುವ ಈ ಹೊಸ ಪ್ರಯೋಗ ಕರ್ನಾಟಕದಲ್ಲಿ ಇದೇ ಮೊದಲನೆಯದ್ದಾಗಿದೆ. ದೇಶದಲ್ಲಿ ಈ ಮಾದರಿಯನ್ನು ಪರಿಚಯಿಸಿದ ಕೀರ್ತಿ ಗುಜರಾತ್ ಗೆ ಸಲ್ಲುತ್ತದೆ.
 

click me!