* ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ಭಾರತದ ಅಭಿವೃದ್ಧಿಗೆ ಆರು ಕಾರಣಗಳನ್ನು ನೀಡಿದ ಪ್ರಧಾನಿ
* ಉದ್ಯಮ, ಹೂಡಿಕೆಗೆ ಸಹಕಾರ
* ಬೆಂಗಳೂರಲ್ಲಿ ಸೆಮಿಕಾನ್ ಸಮ್ಮೇಳನ ಉದ್ಘಾಟಿಸಿ ಪ್ರಧಾನಿ ಮಾತು
ಬೆಂಗಳೂರು(ಏ.30): ಅರೆವಾಹಕ (ಸೆಮಿಕಂಡಕ್ಟರ್) ಉದ್ಯಮ ಕ್ಷೇತ್ರವು ಇಂದು ಜಾಗತಿಕವಾಗಿ ಮಹತ್ವದ ಪಾತ್ರ ವಹಿಸುತ್ತಿದ್ದು, ಭವಿಷ್ಯದಲ್ಲಿ ಭಾರತವನ್ನು ‘ಸೆಮಿ ಕಂಡಕ್ಟರ್ ಹಬ್’(Semi Conductor Hub) ಆಗಿ ಬೆಳೆಸುವ ಗುರಿ ನಮ್ಮ ಸರ್ಕಾರದ್ದಾಗಿದೆ. ಇದಕ್ಕಾಗಿ ಈ ಕ್ಷೇತ್ರದ ಉದ್ಯಮಗಳಿಗೆ ಹಾಗೂ ಹೂಡಿಕೆಗೆ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಸಹಕಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಘೋಷಿಸಿದ್ದಾರೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಸಂವಹನ ಇಲಾಖೆಯು ದೇಶದ ಅರೆವಾಹಕ ಉದ್ಯಮ ವಲಯ ಉತ್ತೇಜಿಸಲು ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ಸೆಮಿಕಾನ್ ಇಂಡಿಯಾ 2022’ (Semicon India 2022) ಸಮ್ಮೇಳನವನ್ನು ವರ್ಚುವಲ್ ಆಗಿ ಉದ್ಘಾಟಿಸಿ ಅವರು ಮಾತನಾಡಿದರು.
ನವ ಭಾರತದಲ್ಲಿ ಶ್ರಮಿಕರಿಗೆ ಹೆಚ್ಚು ಅವಕಾಶ: ಆರ್‌ಸಿ
ಸೆಮಿಕಂಡಕ್ಟರ್ ತಂತ್ರಜ್ಞಾನದಲ್ಲಿ ಭಾರತವು(India) ಆಕರ್ಷಕ ಹೂಡಿಕೆಯ ತಾಣವಾಗಲು ಪ್ರಮುಖ ಆರು ಕಾರಣಗಳಿವೆ. ನಾವು 130 ಕೋಟಿ ಭಾರತೀಯರಿಗೆ ಡಿಜಿಟಲ್ ಮೂಲ ಸೌಕರ್ಯ ಕಲ್ಪಿಸುವತ್ತ ಸಾಗುತ್ತಿದ್ದೇವೆ. ದೇಶದಲ್ಲಿ ಡಿಜಿಟಲ್ ಪಾವತಿ(Digital Payment) ಕ್ರಾಂತಿಯಾಗುತ್ತಿದೆ. ಯುಪಿಐ ವಿಶ್ವದ ಅತಿ ಹೆಚ್ಚು ಪಾವತಿ ವೇದಿಕೆಯಾಗಿದೆ. ಆರೋಗ್ಯ ಕಲ್ಯಾಣ ಸೇರಿದಂತೆ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಜೀವನ ಮಟ್ಟಸುಧಾರಿಸಲು ನಾವು ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. 6 ಲಕ್ಷ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಹಾದಿಯಲ್ಲಿದ್ದೇವೆ. 5ಜಿ, ಇಂಟರ್ನೆಟ್ ಆಫ್ ಥಿಂಗ್ಸ್(ಐಒಟಿ) ಮತ್ತು ಕ್ಲೀನ್ ಎನರ್ಜಿ ತಂತ್ರಜ್ಞಾನಗಳಲ್ಲಿ ಸಾಮರ್ಥ್ಯ ಹೆಚ್ಚಿಸಲು ಹೂಡಿಕೆ ಮಾಡುತ್ತಿದ್ದೇವೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಚ್‌ಅಪ್ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಪ್ರತಿ ವಾರ ಹೊಸ ಯೂನಿಕಾರ್ನ್‌ಗಳು ಬರುತ್ತಿವೆ. ಈ ಎಲ್ಲಾ ಕಾರಣಗಳಿಂದ ಸೆಮಿಕಂಡಕ್ಟರ್ ವಹಿವಾಟಿನಲ್ಲಿ ಭಾರತವು 2026ರ ವೇಳೆಗೆ 80 ಬಿಲಿಯನ್ ಡಾಲರ್ ಮತ್ತು 2030ರ ವೇಳೆಗೆ 110 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆ ಇದೆ ಎಂದು ಹೇಳಿದರು.
ಸೆಮಿಕಂಡಕ್ಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಹೂಡಿಕೆಗೆ ಭಾರತದಲ್ಲಿ ವಿಫುಲ ಅವಕಾಶಗಳಿವೆ. ಮುಂದಿನ ದಶಕದಲ್ಲಿ ಭಾರತವನ್ನು ಅರೆವಾಹಕ ಉದ್ಯಮ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಹೂಡಿಕೆಗೆ ಹಾಗೂ ಹಾಲಿ ಉದ್ಯಮಗಳಿಂದ ಹೆಚ್ಚಿನ ಗುಣಮಟ್ಟ, ಹೈಟೆಕ್ ಉತ್ಪಾದನೆಗೆ ಅಗತ್ಯ ಪ್ರೋತ್ಸಾಹ ಮತ್ತು ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
21ನೇ ಶತಮಾನದ ಜಾಗತಿಕ ಅಗತ್ಯಗಳ ಬೇಡಿಕೆಗೆ ಪೂರಕವಾಗಿ ದೇಶದ ಯುವ ಪ್ರತಿಭೆಗಳಿಗೆ ಕೌಶಲ್ಯ ಮತ್ತು ತರಬೇತಿ ನೀಡುವತ್ತ ನಮ್ಮ ಸರ್ಕಾರ ಹೆಜ್ಜೆ ಹಾಕಿದೆ. ನಮ್ಮಲ್ಲಿ ಅಸಾಧಾರಣವಾದ ಸೆಮಿ ಕಂಡಕ್ಟರ್ ವಿನ್ಯಾಸದ ಪ್ರತಿಭೆಗಳಿವೆ. ವಿಶ್ವದ ಶೇ.20ರಷ್ಟು ಸೆಮಿಕಂಡಕ್ಟರ್ ವಿನ್ಯಾಸ ಮಾಡುವ ಎಂಜಿನಿಯರ್‌ಗಳು ನಮ್ಮಲ್ಲಿ ಇದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಯುಪಿಎಗೆ ಮೋದಿ ‘ನಾಟ್ ಗೇಟ್’ ಟಾಂಗ್!
ಕೈಗಾರಿಕೆಗಳ ಸ್ಥಾಪನೆ, ಮುಕ್ತ ವ್ಯಾಪಾರ, ವಹಿವಾಟಿಗೆ ಹಿಂದಿನ ಸರ್ಕಾರದಲ್ಲಿ ಮುಕ್ತ ಅವಕಾಶಗಳಿರಲಿಲ್ಲ. ‘ನಾಟ್ ಗೇಟ್’ ಎನ್ನುವ ಸ್ಥಿತಿ ಇತ್ತು. ಆದರೆ, ನಮ್ಮ ಸರ್ಕಾರದಲ್ಲಿ ‘ಎಎನ್‌ಡಿ ಗೇಟ್’ ಅಂದರೆ ಮುಕ್ತ ಅವಕಾಶವಿದೆ ಎಂದು ಹೇಳುವ ಮೂಲಕ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಟಾಂಗ್ ನೀಡಿದರು.
ಕೋವಿಡ್ ಅಪ್ಪಳಿಸಿದ ಬಳಿಕವೂ ಪ್ರಗತಿಯತ್ತ ಸಾಗಿದ ಮಾಹಿತಿ ತಂತ್ರಜ್ಞಾನ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
‘ನಾಟ್ ಗೇಟ್’ ಎನ್ನುವುದು ಗಣಿತ ತರ್ಕವಾಗಿದೆ. ಯಾವುದೇ ಒಂದು ಸಂಕೇತ ಬಂದಾಗ ಅದಕ್ಕೆ ತದ್ವಿರುದ್ಧ ವರ್ತನೆ ತೋರುವುದನ್ನು ನಾಟ್ ಗೇಟ್ ಎಂದು ಕರೆಯಲಾಗುತ್ತದೆ. ಹಾಗೆಯೇ ಎರಡು ಸಂಕೇತಗಳನ್ನು ಬಳಸಿಕೊಂಡು ಅತ್ಯುತ್ಕೃಷ್ಟಉತ್ಪಾದನೆ ಮಾಡುವುದನ್ನು ‘ಎಎನ್‌ಡಿ ಗೇಟ್’ ಎಂದು ಬಣ್ಣಿಸಲಾಗುತ್ತದೆ.
ಹಿಂದೆ ಕೈಗಾರಿಕೆಗಳು ತಮ್ಮ ಕೆಲಸವನ್ನು ಮಾಡಲು ಸಿದ್ಧವಾಗಿದ್ದವಾದರೂ ಅಂದಿನ ಸರ್ಕಾರವು ‘ನಾಟ್ ಗೇಟ್’ ಎನ್ನುತ್ತಿತ್ತು. ಸುಲಭವಾಗಿ ವ್ಯಾಪಾರ ವಹಿವಾಟಿಗೆ ಅವಕಾಶಗಳಿರಲಿಲ್ಲ. ಆದರೆ ಈ ವಿಚಾರದಲ್ಲಿ ನಮ್ಮ ಸರ್ಕಾರದ್ದು ಮುಕ್ತ (ಎಎನ್‌ಡಿ ಗೇಟ್) ಅವಕಾಶ ನೀಡಿದೆ. ಇಂಡಿಯಾ ಅಂದರೆ ಬ್ಯುಸಿನೆಸ್ ಎನ್ನುವುದನ್ನು ತೋರಿಸಿಕೊಟ್ಟಿದೆ. ನಮ್ಮ ಸರ್ಕಾರ ಭಾರತೀಯ ಉತ್ಪಾದನಾ ವಲಯದ ಪರಿವರ್ತನೆಗೆ ಹಲವಾರು ಕ್ರಮ ಕೈಗೊಂಡಿದೆ. ದೇಶದಲ್ಲಿ ಸುಲಭವಾಗಿ ವ್ಯಾಪಾರ ವಹಿವಾಟು ನಡೆಸಲು ಕಳೆದ ವರ್ಷ 25 ಸಾವಿರಕ್ಕೂ ಹೆಚ್ಚು ನಿಯಮಗಳನ್ನು ರದ್ದುಪಡಿಸಿ ಪರವಾನಗಿಗಳ ಸ್ವಯಂ ನವೀಕರಣದ ವ್ಯವಸ್ಥೆ ಮಾಡಿದ್ದೇವೆ. ಕೋವಿಡ್ ಸಾಂಕ್ರಾಮಿಕದ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿರುವ ವೇಳೆ ಭಾರತ ನಮ್ಮ ಜನರ ಆರೋಗ್ಯದ ಜೊತೆಗೆ ಆರ್ಥಿಕತೆಯ ಆರೋಗ್ಯವನ್ನೂ ಸುಧಾರಿಸಿಕೊಳ್ಳುತ್ತಿದೆ ಎಂದರು.
6 ಕಾರಣ
1. ಡಿಜಿಟಲ್ ಮೂಲಸೌಕರ‍್ಯಕ್ಕೆ ಒತ್ತು
2. ಡಿಜಿಟಲ್ ಪಾವತಿಯಲ್ಲಿ ಕ್ರಾಂತಿ
3. ಎಲ್ಲಾ ಕಡೆ ಡಿಜಿಟಲ್ ತಂತ್ರಜ್ಞಾನ
4. 6 ಲಕ್ಷ ಹಳ್ಳಿಗೆ ಬ್ರಾಡ್‌ಬ್ಯಾಂಡ್
5. ವೇಗದಲ್ಲಿ ಸ್ಟಾರ್ಟಪ್ ಬೆಳವಣಿಗೆ
6. ಪ್ರತಿವಾರ ಹೊಸ ಯೂನಿಕಾರ್ನ್
2 ದಶಕದ ದೂರದೃಷ್ಟಿ
ಸೆಮಿ ಕಂಡಕ್ಟರ್ ಉತ್ಪಾದನಾ ವಲಯದಲ್ಲಿ ಭಾರತವು ಭವಿಷ್ಯದಲ್ಲಿ ಮುಂಚೂಣಿ ರಾಷ್ಟ್ರವಾಗಿ ಬೆಳೆಯಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ದಶಕಗಳ ದೂರದೃಷ್ಟಿಇಟ್ಟುಕೊಂಡು ಸೆಮಿಕಂಡಕ್ಟರ್ ಉದ್ಯಮ ಕ್ಷೇತ್ರದ ಬೆಳವಣಿಗೆ ಆದ್ಯತೆ ನೀಡಲಾಗುತ್ತಿದೆ ಅಂತ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ತಿಳಿಸಿದ್ದಾರೆ.