ಪಿಂಚಣಿ ಉದ್ಯೋಗಿಯ ಹಕ್ಕು, ವೇತನ ಕಡಿತ ತಪ್ಪಾಯಿತೆಂದು ಅದನ್ನು ನಿರಾಕರಿಸುವಂತಿಲ್ಲ: ಸುಪ್ರೀಂ ತೀರ್ಪು

By Suvarna NewsFirst Published May 16, 2023, 7:29 PM IST
Highlights

ಪಿಂಚಣಿ ಯೋಜನೆಗೆ ಸೇರ್ಪಡೆಗೊಂಡಿರುವ ನೌಕರ ನಿವೃತ್ತಿ ಬಳಿಕ ಪಿಂಚಣಿ ಪಡೆಯೋದು ಆತನ ಹಕ್ಕು.ಆದರೆ,ವೇತನ ಕಡಿತ ತಪ್ಪಾಗಿ ಮಾಡಲಾಗಿದೆ ಎಂಬ ನೆಪವೊಡ್ಡಿ ಪಿಂಚಣಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪ್ರಕರಣವೊಂದಕ್ಕೆ ಸಂಬಂಧಿಸಿ ತೀರ್ಪು ನೀಡಿದೆ. 

ನವದೆಹಲಿ (ಮೇ 16): ಉದ್ಯೋಗದಾತ ಸಂಸ್ಥೆ ತಪ್ಪು ವೇತನ ಕಡಿತ ಮಾಡಿರುವ ಕಾರಣಕ್ಕೆ ಉದ್ಯೋಗಿಗಳಿಗೆ ಅವರ ಪಿಂಚಣಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಉದ್ಯೋಗದಾತ ಸಂಸ್ಥೆ ಪಿಂಚಣಿ ನಿಧಿಗೆ (ಪಿಎಫ್) ಕೊಡುಗೆ ನೀಡಲು ಉದ್ಯೋಗಿಯ ವೇತನದಿಂದ ತಪ್ಪು ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಉದ್ಯೋಗಿಗೆ ಪಿಂಚಣಿ ನಿರಾಕರಿಸೋದು ಸರಿಯಲ್ಲ ಎಂದು ನ್ಯಾ.ಅಭಯ್ ಎಸ್ ಒಕ ಹಾಗೂ ರಾಜೇಶ್ ಬಿಂದಲ್ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ. ಈ ತೀರ್ಪು ನೀಡುವ ಮೂಲಕ ಕೋರ್ಟ್ ಕಲ್ಕತ್ತ ರಾಜ್ಯ ಸಾರಿಗೆ ನಿಗಮ 2021ರ ಮಾರ್ಚ್ 5ರಂದು ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಸಲ್ಲಿಕೆ ಮಾಡಿದ ಮೇಲ್ಮನವಿಯನ್ನು ತಿರಸ್ಕರಿಸಿದೆ. ಆಶಿತ್ ಚಕ್ರಬೋರ್ತಿ ಹಾಗೂ ಇತರರಿಗೆ ಸಂಸ್ಥೆ ಪಿಂಚಣಿ ಬಿಡುಗಡೆ ಮಾಡುವಂತೆ ಏಕಸದಸ್ಯ ಪೀಠ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ. ಉದ್ಯೋಗಿಯ ವೇತನದಿಂದ ಭವಿಷ್ಯ ನಿಧಿಗೆ ನಿಯಮಿತವಾಗಿ ಪ್ರತಿ ತಿಂಗಳು ಕಡಿತಗಳನ್ನು ಮಾಡಲಾಗುತ್ತಿತ್ತು. ಈ ಬಗ್ಗೆ ಉದ್ಯೋಗಿಗೆ ಕೂಡ ಮಾಹಿತಿ ನೀಡಲಾಗಿತ್ತು. ಆದರೆ, ಆತ ಇದಕ್ಕೆ ಆಕ್ಷೇಪಣೆ ಸಲ್ಲಿಸಿರಲಿಲ್ಲ. ನಿವೃತ್ತಿ ಬಳಿಕವಷ್ಟೇ ಉದ್ಯೋಗಿ ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾನೆ. ಇಂಥ ಸಂದರ್ಭದಲ್ಲಿ ಆತನಿಗೆ ಪಿಂಚಣಿ ಯೋಜನೆಯ ಯಾವುದೇ ಪ್ರಯೋಜನ ಸಿಗಬಾರದು ಎಂದು ನಿಗಮ ವಾದ ಮಂಡಿಸಿತ್ತು.

ಪಿಂಚಣಿ ಯೋಜನೆ ಪ್ರಯೋಜನ ಪಡೆಯುವ ಆಯ್ಕೆಯನ್ನು ತಾನು ಮಾಡಿದ್ದೆ ಎಂಬುದಕ್ಕೆ ಉದ್ಯೋಗಿ ಸೂಕ್ತ ದಾಖಲೆಗಳನ್ನು ಕೋರ್ಟ್ ಮುಂದೆ ಸಾಬೀತುಪಡಿಸಿದ್ದರು. ಅಲ್ಲದೆ, ವೇತನವನ್ನು ಸಮರ್ಪಕವಾಗಿ ಲೆಕ್ಕ ಹಾಕಿ ವಿವಿಧ ಶೀರ್ಷಿಕೆಗಳಡಿ ಕಡಿತಗಳನ್ನು ಮಾಡೋದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಉದ್ಯೋಗಿ ವಾದ ಮಂಡಿಸಿದ್ದರು. ಒಂದು ವೇಳೆ ನಿಗಮದಿಂದ ಯಾವುದೇ ತಪ್ಪುಗಳಾಗಿದ್ರೂ ಉದ್ಯೋಗಿ ಅದರಿಂದ ತೊಂದರೆ ಅನುಭವಿಸುವಂತಾಗಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. 

EPF Higher Pension:ಇಪಿಎಸ್ ಬಾಕಿ ಮೊತ್ತ ಲೆಕ್ಕ ಹಾಕೋದು ಹೇಗೆ? ಪಾವತಿಗೆ ಎಷ್ಟು ಸಮಯಾವಕಾಶ ನೀಡಲಾಗುತ್ತೆ?

'ಉದ್ಯೋಗಿ ವೇತನದಿಂದ ತಪ್ಪು ಕಡಿತಗಳನ್ನು ಮಾಡಲಾಗಿದೆ ಎಂಬ ಕಾರಣವೊಂದನ್ನೇ ನೆಪವಾಗಿಸಿಕೊಂಡು ಆತ ಸಿಪಿಎಫ್ ಯೋಜನೆ ಸದಸ್ಯನಾಗಿದ್ದರೂ ಆತನ ಆರ್ಹ ಕ್ಲೇಮ್ ಅನ್ನು ನಿರಾಕರಿಸೋದು ಸರಿಯಲ್ಲ'ಎಂದು ಪೀಠ ತಿಳಿಸಿದೆ.
ಉದ್ಯೋಗಿಗಳ ಭವಿಷ್ಯ ನಿಧಿ, ಇದನ್ನು ಸಾಮಾನ್ಯವಾಗಿ ಪಿಎಫ್ (ಪ್ರಾವಿಡೆಂಟ್ ಫಂಡ್) ಎಂದು ಕರೆಯಲಾಗುತ್ತದೆ. ಇದು ನಿವೃತ್ತಿ ಅಥವಾ ನಿವೃತ್ತಿಯ ನಂತರದ ಪ್ರಯೋಜನ ಯೋಜನೆಯಾಗಿದೆ. ಈ ಸೌಲಭ್ಯವು ಎಲ್ಲ ವೇತನದಾರರಿಗೆ ಲಭ್ಯವಿದೆ.  ಭಾರತದಲ್ಲಿ ವೇತನ ಪಡೆಯುವ ಎಲ್ಲ ವ್ಯಕ್ತಿಗಳು ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಖಾತೆ ಹೊಂದಿರುತ್ತಾರೆ. ಬಹುತೇಕ ಉದ್ಯೋಗಿಗಳು ಪಿಎಫ್ ಖಾತೆಯನ್ನು ಹೊಂದಿರುತ್ತಾರೆ. ಉದ್ಯೋಗಿಯ ತಿಂಗಳ ವೇತನದಲ್ಲಿ ನಿರ್ದಿಷ್ಟ ಮೊತ್ತವನ್ನು ಉದ್ಯೋಗದಾತ ಸಂಸ್ಥೆ ಪಿಎಫ್ ಗೆ ಕೊಡುಗೆ ನೀಡಲು ಕಡಿತ ಮಾಡುತ್ತದೆ.ಹಾಗೆಯೇ ಉದ್ಯೋಗಿಯು ಪಿಎಫ್ ಗೆ ಎಷ್ಟು ಕೊಡುಗೆ ನೀಡುತ್ತಾನೋ ಅಷ್ಟೇ ಮೊತ್ತದ ಹಣವನ್ನು ಸಂಸ್ಥೆ ಕೂಡ ನೀಡುತ್ತದೆ.

ಇಪಿಎಫ್ ಅಧಿಕ ಪಿಂಚಣಿ ಅರ್ಜಿಯಲ್ಲಿ ತಪ್ಪಿದ್ರೆ ಚಿಂತೆ ಬೇಡ ; EPFO ಪೋರ್ಟಲ್ ನಲ್ಲಿ ಈಗ ಡಿಲೀಟ್ ಬಟನ್ ಲಭ್ಯ

ಇಪಿಎಫ್ ಖಾತೆಗೆ ಉದ್ಯೋಗಿ ಕೊಡುಗೆ ಎಷ್ಟು? 
ಒಬ್ಬ ಉದ್ಯೋಗಿ ತನ್ನ ಮಾಸಿಕ ವೇತನದ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಉದ್ಯೋಗದಾತ ಸಂಸ್ಥೆ ಕೂಡ ಇಷ್ಟೇ ಪ್ರಮಾಣದ ಅಂದ್ರೆ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡುತ್ತದೆ. ಈ ಶೇ.12ರಲ್ಲಿ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹಾಗೂ ಶೇ.3.67ಉದ್ಯೋಗಿಗಳ ಭವಿಷ್ಯ ನಿಧಿಗೆ ಹೋಗುತ್ತದೆ. ಇಪಿಎಫ್ ಖಾತೆಯಲ್ಲಿರುವ ಹಣಕ್ಕೆ ಪ್ರಸ್ತುತ ಶೇ.8.15ರಷ್ಟು ಬಡ್ಡಿ ನೀಡಲಾಗುತ್ತಿದೆ.ಉದ್ಯೋಗಿ ಮಾಸಿಕ ವೇತನದಿಂದ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು ಕಡಿತ ಮಾಡೋದು ಕಂಪನಿಯ ಕರ್ತವ್ಯವಾಗಿದೆ.


 

click me!