ನಷ್ಟದ ಸುಳಿಯಲ್ಲಿ PVR Inox;50 ಸಿನಿಮಾ ಹಾಲ್ ಗಳು ಬಂದ್!

Published : May 16, 2023, 04:30 PM ISTUpdated : May 16, 2023, 04:33 PM IST
ನಷ್ಟದ ಸುಳಿಯಲ್ಲಿ PVR Inox;50 ಸಿನಿಮಾ ಹಾಲ್ ಗಳು ಬಂದ್!

ಸಾರಾಂಶ

ದೇಶದ ಜನಪ್ರಿಯ ಮಲ್ಟಿಪ್ಲೆಕ್ಸ್ ಪಿವಿಆರ್ ಐನಾಕ್ಸ್ ನಷ್ಟದ ಸುಳಿಯಲ್ಲಿ ಸಿಲುಕಿದೆ.2023ರ ಜನವರಿಯಿಂದ ಮಾರ್ಚ್ ತನಕದ ತ್ರೈಮಾಸಿಕದಲ್ಲಿ ಪಿವಿಆರ್ ಐನಾಕ್ಸ್ 333 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ 50 ಸಿನಿಮಾ ಹಾಲ್ ಗಳನ್ನು ಮುಚ್ಚಲಿದೆ.

ನವದೆಹಲಿ (ಮೇ16): ದೇಶದ ಜನಪ್ರಿಯ ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್ ಐನಾಕ್ಸ್ ನಷ್ಟದ ಸುಳಿಯಲ್ಲಿ ಸಿಲುಕಿದ್ದು, ಮುಂದಿನ ಆರು ತಿಂಗಳಲ್ಲಿ 50 ಥಿಯೇಟರ್ ಗಳನ್ನು ಮುಚ್ಚಲು ನಿರ್ಧರಿಸಿದೆ. 2023ರ ಜನವರಿಯಿಂದ ಮಾರ್ಚ್ ತನಕದ ತ್ರೈಮಾಸಿಕದಲ್ಲಿ ಪಿವಿಆರ್ ಐನಾಕ್ಸ್ 333 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿದೆ.ಆದರೆ, ಕಳೆದ ಡಿಸೆಂಬರ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಸಂಸ್ಥೆ 16.1 ಕೋಟಿ ರೂ. ಲಾಭ ಗಳಿಸಿತ್ತು. ಇನ್ನು 2022ರ ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲೂ ಪಿವಿಆರ್ ಐನಾಕ್ಸ್ 105 ಕೋಟಿ ರೂ. ನಿವ್ವಳ ನಷ್ಟ ಅನುಭವಿಸಿತ್ತು. ಅಂದರೆ ಈ ವರ್ಷದ ಅದೇ ತ್ರೈಮಾಸಿಕದ ಅವಧಿಯಲ್ಲಿ ಮೂರು ಪಟ್ಟು ಹೆಚ್ಚಿನ ನಷ್ಟವಾಗಿದೆ. ಆದರೆ,2022ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಈ ಸಂಸ್ಥೆ ಆದಾಯ 536 ಕೋಟಿ ರೂ. ಆಗಿದ್ದು, 2023ನೇ ಸಾಲಿನ ಇದೇ ಅವಧಿಯಲ್ಲಿ 1,143 ಕೋಟಿ ರೂ.ಗೆ ಏರಿಕೆಯಾಗಿದೆ.ಇಷ್ಟು ಆದಾಯ ಗಳಿಸಿದರೂ ಪಿವಿಆರ್ ನಷ್ಟದಲ್ಲಿದೆ. ಕಳೆದ ತ್ರೈಮಾಸಿಕದಲ್ಲಿ ಒಟ್ಟು ವೆಚ್ಚ 1,364.11 ಕೋಟಿ ರೂ. ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ನಷ್ಟ ತರುತ್ತಿರುವ ಸಿನಿಮಾ ಹಾಲ್ ಗಳನ್ನು ಮುಚ್ಚಲು ಪಿವಿಆರ್ ಐನಾಕ್ಸ್ ನಿರ್ಧರಿಸಿದೆ.

ಈ ಹಿಂದೆ ಪಿವಿಆರ್ ಹಾಗೂ ಐನಾಕ್ಸ್ ಎರಡು ಪ್ರತ್ಯೇಕ ಕಂಪನಿಗಳಾಗಿದ್ದವು. 2023ರ ಫೆಬ್ರವರಿ ತಿಂಗಳ ಪ್ರಾರಂಭದಲ್ಲಿ ಈ ಎರಡೂ ಕಂಪನಿಗಳು ವಿಲೀನಗೊಂಡಿದ್ದು, ಪಿವಿಆರ್ ಐನಾಕ್ಸ್ ಎಂದು ಹೆಸರು ಬದಲಾಯಿಸಿಕೊಂಡಿದ್ದವು. ಈ ಕಾರಣದಿಂದಲೇ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಈ ಆದಾಯ, ಲಾಭ-ನಷ್ಟದ ವರದಿಯಲ್ಲಿ ಭಿನ್ನತೆಯಿದೆ. ಈ ಎರಡೂ ಸಂಸ್ಥೆಗಳು ವಿಲೀನಗೊಂಡ ಬಳಿಕ ಜಂಟಿಯಾಗೊ 30 ಸಿನಿಮಾಗಳಿಗೆ 168 ಹೊಸ ಸ್ಕ್ರೀನ್ ಗಳನ್ನು ಪರಿಚಯಿಸಿದ್ದವು. 2024ನೇ ಆರ್ಥಿಕ ಸಾಲಿಗೆ 150-175 ಹೆಚ್ಚುವರಿ ಸ್ಕ್ರೀನ್ ಗಳನ್ನು ತೆರೆಯುವ ಗುರಿಯನ್ನು ಕೂಡ ಹೊಂದಿದ್ದವು. ಆದರೆ, ಈಗ ನಷ್ಟದ ಸುಳಿಯಲ್ಲಿ ಸಿಲುಕಿವೆ. ಎರಡೂ ಸಂಸ್ಥೆಗಳು ವಿಲೀನಗೊಳ್ಳುವ ಮುನ್ನ ಪಿವಿಆರ್ 2022ರ ಡಿಸೆಂಬರ್ ಗೆ ಅಂತ್ಯವಾಗುವ ತ್ರೈಮಾಸಿಕದಲ್ಲಿ 16.1 ಕೋಟಿ ರೂ. ಲಾಭ ಗಳಿಸಿತ್ತು. ಆದರೆ, ಐನಾಕ್ಸ್ ಜೊತೆಗೆ ವಿಲೀನಗೊಂಡ ಬಳಿಕ ನಷ್ಟ ಅನುಭವಿಸಿದೆ.

ಉದ್ಯೋಗ ಕಡಿತದ ಭೀತಿ ನಡುವೆಯೇ ಸರ್ಪ್ರೈಸ್; ಉದ್ಯೋಗಿಗಳಿಗೆ 5.11ಲಕ್ಷಕ್ಕೂ ಅಧಿಕ ಷೇರು ಹಂಚಿದ ಇನ್ಫೋಸಿಸ್

ಎಲ್ಲಿ ಮುಚ್ಚಲಾಗುತ್ತಿದೆ?
ಪಿವಿಆರ್ ಹಾಗೂ ಐನಾಕ್ಸ್ ಜಂಟಿಯಾಗಿ ಭಾರತ ಹಾಗೂ ಶ್ರೀಲಂಕಾದ 115 ನಗರಗಳಲ್ಲಿ 361 ಸಿನಿಮಾ ಮಂದಿರಗಳಲ್ಲಿ 1,689 ಸ್ಕ್ರೀನ್ ಗಳನ್ನು ಹೊಂದಿವೆ. ಇದರಲ್ಲಿ ನಷ್ಟ ತುತ್ತಿರುವ 50 ಸ್ಕ್ರೀನ್ ಗಳನ್ನು ಮುಚ್ಚಲಾಗುತ್ತಿದೆ. ಜನರು ಕಡಿಮೆ ಹೋಗುತ್ತಿರುವ ಪ್ರದೇಶಗಳಲ್ಲಿನ ಹಾಗೂ ಮಾಲ್ ಗಳಲ್ಲಿನ ಸ್ಕ್ರೀನ್ ಗಳನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು 2023ನೇ ಸಾಲಿನಲ್ಲಿ ಪಿವಿಆರ್ ಹಾಗೂ ಐನಾಕ್ಸ್ 140 ಸ್ಕ್ರೀನ್ ಗಳನ್ನು ಸೇರ್ಪಡೆಗೊಳಿಸಿವೆ. ಇನ್ನು 2024ನೇ ಆರ್ಥಿಕ ಸಾಲಿನಲ್ಲಿ 150-175 ಸ್ಕ್ರೀನ್ ಗಳನ್ನು ತೆರೆಯುವ ಗುರಿ ಹೊಂದಿದ್ದು, ಈಗಾಗಲೇ 9 ಸ್ಕ್ರೀನ್ ಗಳನ್ನು ತೆರೆಯಲಾಗಿದೆ.

LIC ಬೆಂಬಲಿತ ಈ ಷೇರಿನಲ್ಲಿ ಹೂಡಿಕೆ ಮಾಡಿದವರಿಗೆ ಬಂಪರ್; ಕೇವಲ ಒಂದೇ ವರ್ಷದಲ್ಲಿ ಶೇ.300 ರಿಟರ್ನ್!

ಕೋವಿಡ್ ಬಳಿಕ ಥಿಯೇಟರ್ ಗಳಿಗೆ ತೆರಳಿ ಸಿನಿಮಾ ನೋಡುವವರ ಸಂಖ್ಯೆ ತಗ್ಗಿದೆ. ಅಲ್ಲದೆ, ಒಒಟಿ ಪ್ಲಾಟ್ ಫಾರ್ಮ್ ಗಳಲ್ಲಿ ಬಹುತೇಕ ಸಿನಿಮಾಗಳು ಬಹುಬೇಗ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಥಿಯೇಟರ್ ಗೆ ತೆರಳಿ ಸಿನಿಮಾ ನೋಡುವುದನ್ನು ಕಡಿಮೆ ಮಾಡಿದ್ದಾರೆ. ಇದು ಒಂದು ಕಾರಣವಾದರೆ, ಐನಾಕ್ಸ್ ನೀಡಿರುವ ಮಾಹಿತಿ ಅನ್ವಯ ಕಳೆದ ನಾಲ್ಕು ತ್ರೈಮಾಸಿಕದಲ್ಲಿ ಹಿಂದಿ ಸಿನಿಮಾಗಳಿಗೆ ಜನರು ಮಿಶ್ರ ಸ್ಪಂದನೆ ತೋರಿದ್ದಾರೆ. ಹಿಂದಿ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿರೋದು ಹಾಗೂ ಹಾಲಿವುಡ್ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗದಿರೋದು ಮಲ್ಟಿಪ್ಲೆಕ್ಸ್ ಆದಾಯ ತಗ್ಗಲು ಕಾರಣವಾಗಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!