EPF Higher Pension:ಇಪಿಎಸ್ ಬಾಕಿ ಮೊತ್ತ ಲೆಕ್ಕ ಹಾಕೋದು ಹೇಗೆ? ಪಾವತಿಗೆ ಎಷ್ಟು ಸಮಯಾವಕಾಶ ನೀಡಲಾಗುತ್ತೆ?

ಇಪಿಎಸ್ ಅಧಿಕ ಪಿಂಚಣಿ ಪಡೆಯಲು ಖಾತೆಗೆ ಬಾಕಿಯಿರುವ ಮೊತ್ತವನ್ನು ಉದ್ಯೋಗಿಗಳು ಜಮೆ ಮಾಡೋದು ಅಗತ್ಯ.ಈ ಬಾಕಿ ಮೊತ್ತವನ್ನು ಲೆಕ್ಕ ಹಾಕೋದು ಹೇಗೆ? ಹಾಗೆಯೇ ಇಪಿಎಫ್ ಖಾತೆಯಿಂದ ಬಾಕಿ ಮೊತ್ತವನ್ನು ಇಪಿಎಸ್ ಖಾತೆಗೆ ವರ್ಗಾವಣೆ ಮಾಡಲು ಉದ್ಯೋಗಿಗಳು ಏನ್ ಮಾಡ್ಬೇಕು? ಬಾಕಿ ಪಾವತಿಗೆ ಎಷ್ಟು ಸಮಯಾವಕಾಶ ನೀಡಲಾಗುತ್ತದೆ? ಇಲ್ಲಿದೆ ಮಾಹಿತಿ.

Higher EPS pension How missing dues will be calculated time limit method to pay clarifies EPFO anu

Business Desk: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) 2023ರ ಮೇ 11ರಂದು ಬಿಡುಗಡೆಗೊಳಿಸಿರುವ ಸುತ್ತೋಲೆಯು ಈ ಹಿಂದೆ ಮಿಸ್ ಆಗಿರುವ ಇಪಿಎಸ್ ಕೊಡುಗೆ ಬಾಕಿ ಹಾಗೂ ಈ ತನಕದ ಸಂಚಿತ ಬಡ್ಡಿಯನ್ನು ಹೇಗೆ ಲೆಕ್ಕ ಹಾಕಬಹುದು ಎಂಬ ಬಗ್ಗೆ ಸ್ಪಷ್ಟನೆ ನೀಡಿದೆ. ಒಂದು ವೇಳೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬ್ಯಾಲೆನ್ಸ್ ಇದ್ದರೆ, ಈ ಹಿಂದಿನ ಬಾಕಿಯನ್ನು ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಖಾತೆಗೆ ವರ್ಗಾಯಿಸಲಾಗುತ್ತದೆ. ಒಂದು ವೇಳೆ ಬ್ಯಾಲೆನ್ಸ್ ಕೊರತೆಯಿದ್ದರೆ, ಪಿಂಚಣಿದಾರ/ ಉದ್ಯೋಗಿ ತಮ್ಮ ಬ್ಯಾಂಕ್ ಖಾತೆಯಿಂದ ಪಾವತಿಸಬೇಕು. ಇಪಿಎಫ್ ಒ ಅಧಿಕ ಪಿಂಚಣಿಗೆ ಜಂಟಿ ಅರ್ಜಿ ಸ್ವೀಕರಿಸಿದ ತಕ್ಷಣ ಇಪಿಎಫ್ ನಿಂದ ಇಪಿಎಸ್ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ.  2023ರ ಮೇ 4ರ ಸರ್ಕಾರದ ಸುತ್ತೋಲೆ ಅನ್ವಯ 15,000 ರೂ.ಗಿಂತ ಅಧಿಕ ಮೊತ್ತವನ್ನು ಇಪಿಎಸ್ ಖಾತೆಗೆ ಕೊಡುಗೆಯಾಗಿ ನೀಡುವ ಉದ್ಯೋಗಿಗಳು ಅಧಿಕ ಪಿಂಚಣಿ ಆಯ್ಕೆ ಮಾಡಿಕೊಳ್ಳಲು ಆರ್ಹತೆ ಗಳಿಸಿದ್ದು, ಅಂಥವರ ಇಪಿಎಸ್ ಖಾತೆಗೆ ಉದ್ಯೋಗದಾತ ಸಂಸ್ಥೆ ಕೊಡುಗೆಯನ್ನು ಶೇ.8.33ರಿಂದ ಶೇ.9.49ಕ್ಕೆ ಏರಿಕೆ ಮಾಡಲಾಗಿದೆ. 

ಇಪಿಎಫ್ಒ ಬಾಕಿ ಲೆಕ್ಕ ಹಾಕೋದು ಹೇಗೆ?
ಸರ್ಕಾರದ ಸುತ್ತೋಲೆ ಅನ್ವಯ ಇಪಿಎಸ್ ಖಾತೆಗೆ ವರ್ಗಾವಣೆ ಮಾಡುವ ಬಾಕಿಯನ್ನು ತಿಂಗಳ ಪ್ರಕಾರ ಲೆಕ್ಕ ಹಾಕಬೇಕು. 
*ಅಧಿಕ ವೇತನದ ಮೇಲೆ ಉದ್ಯೋಗದಾತ ಸಂಸ್ಥೆಯ ಪಾಲಿನ ಶೇ.8.33 (1995ರ ನವೆಂಬರ್ 16ರಿಂದ ಅನ್ವಯಿಸುವಂತೆ ಅಥವಾ ವೇತನ ಮಿತಿಯನ್ನು ಮೀರಿದ ದಿನಾಂಕ ಇವೆರಡರಲ್ಲಿ ಯಾಬುದೋ ತಡವೋ ಅದರಿಂದ ಅನ್ವಯಿಸುವಂತೆ).
*2014ರ ಸೆಪ್ಟೆಂಬರ್ 1ರಿಂದ ಅನ್ವಯಿಸುವಂತೆ ಅಧಿಕ ವೇತನದ ಮೇಲೆ ಉದ್ಯೋಗದಾತ ಸಂಸ್ಥೆಯ ಪಾಲು ತಿಂಗಳಿಗೆ 15 ಸಾವಿರ ರೂ.ಗಿಂತ ಅಧಿಕವಿದ್ದ ಸಂದರ್ಭದಲ್ಲಿ ಉದ್ಯೋಗದಾತ ಸಂಸ್ಥೆ ಪಾಲಿನ ಶೇ.1.16.
*ಇಪಿಎಸ್ ಖಾತೆಗೆ ಈಗಾಗಲೇ ಠೇವಣಿ ಮಾಡಿರುವ ಎಲ್ಲ ಠೇವಣಿಯಿಂದ ಮೇಲೆ ತಿಳಿಸಿರುವ ಮೊದಲ ಎರಡು ಮೊತ್ತವನ್ನು ಕಡಿತ ಮಾಡಲಾಗುತ್ತದೆ.
*ಬಡ್ಡಿ ಮೊತ್ತವನ್ನು ಲೆಕ್ಕ ಹಾಕಲು ಇಪಿಎಫ್ಒ ಈ ಹಿಂದೆ ಘೋಷಿಸಿರುವ ದಾಖಲೆಯ ಬಡ್ಡಿದರಗಳನ್ನು ಪರಿಗಣಿಸಲಾಗುತ್ತದೆ. 

LIC ಬೆಂಬಲಿತ ಈ ಷೇರಿನಲ್ಲಿ ಹೂಡಿಕೆ ಮಾಡಿದವರಿಗೆ ಬಂಪರ್; ಕೇವಲ ಒಂದೇ ವರ್ಷದಲ್ಲಿ ಶೇ.300 ರಿಟರ್ನ್!

ಇಪಿಎಫ್ ಒ ಅಧಿಕ ಪಿಂಚಣಿಗೆ ಬಾಕಿ ಲೆಕ್ಕ ಹಾಕಿದ ಬಳಿಕ ಏನಾಗುತ್ತದೆ?
ಇಪಿಎಫ್ ಒ ಇತ್ತೀಚಿನ ಸುತ್ತೋಲೆ ಪ್ರಕಾರ ಇಪಿಎಸ್ ಖಾತೆಗೆ ಬಾಕಿಯಿರುವ ಒಟ್ಟು ಕೊಡುಗೆಯನ್ನು ಲೆಕ್ಕ ಹಾಕಿದ ಬಳಿಕ ಫೀಲ್ಡ್ ಅಧಿಕಾರಿಗಳು ಪಿಂಚಣಿದಾರರು/ ಉದ್ಯೋಗಿಗಳಿಗೆ ಇಪಿಎಸ್ ಖಾತೆಗೆ ಜಮೆ ಮಾಡಬೇಕಾದ ಅಥವಾ ಇಪಿಎಫ್ ಖಾತೆಯಿಂದ ವರ್ಗಾವಣೆ ಮಾಡಬೇಕಾಗಿರುವ ಬಾಕಿ ಮೊತ್ತದ ಬಗ್ಗೆ ಮಾಹಿತಿ ನೀಡುತ್ತಾರೆ. ಕೊನೆಯ ಅಥವಾ ಈಗಿನ ಉದ್ಯೋಗದಾತ ಸಂಸ್ಥೆ ಮೂಲಕ ಪಿಂಚಣಿದಾರರು ಅಥವಾ ಉದ್ಯೋಗದಾತ ಸಂಸ್ಥೆಗೆ ಮಾಹಿತಿ ನೀಡಲಾಗುತ್ತದೆ.ಇನ್ನು ಇಪಿಎಫ್ ಖಾತೆಯಿಂದ ಇಪಿಎಸ್ ಖಾತೆಗೆ ವರ್ಗಾವಣೆ ಮಾಡಬೇಕಿರುವ ಮೊತ್ತದ ಬಗ್ಗೆ ಕೂಡ ಮಾಹಿತಿ ನೀಡಲಾಗುತ್ತದೆ. 

ಒಂದು ವೇಳೆ ಇಪಿಎಫ್ ಖಾತೆಯಲ್ಲಿ ಬ್ಯಾಲೆನ್ಸ್ ನಿಗದಿತ ಪ್ರಮಾಣದಲ್ಲಿ ಇರದಿದ್ರೆ ಇಪಿಎಫ್ ಖಾತೆಯಿಂದ ಎಷ್ಟು ಹಣವನ್ನು ವರ್ಗಾವಣೆ ಮಾಡಬೇಕು ಎಂಬ ಬಗ್ಗೆ ಇಪಿಎಫ್ ಒ ಮಾಹಿತಿ ನೀಡುತ್ತದೆ. ಹಾಗೆಯೇ ಇಪಿಎಸ್ ಖಾತೆಗೆ ಕಡಿಮೆಯಿರುವ ಎಷ್ಟು ಮೊತ್ತ ಭರ್ತಿ ಮಾಡಬೇಕು ಎಂಬ ಬಗ್ಗೆಯೂ ಮಾಹಿತಿ ನೀಡುತ್ತದೆ. ಉದ್ಯೋಗಿಯಿಂದ ಬರವಣಿಗೆಯಲ್ಲಿ ಒಪ್ಪಿಗೆ ಪತ್ರ ಪಡೆದ ಬಳಿಕವಷ್ಟೇ ಇಪಿಎಫ್ ನಿಂದ ಇಪಿಎಸ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. 

ಇಪಿಎಫ್ ಅಧಿಕ ಪಿಂಚಣಿ ಅರ್ಜಿಯಲ್ಲಿ ತಪ್ಪಿದ್ರೆ ಚಿಂತೆ ಬೇಡ ; EPFO ಪೋರ್ಟಲ್ ನಲ್ಲಿ ಈಗ ಡಿಲೀಟ್ ಬಟನ್ ಲಭ್ಯ

ಹಣ ಜಮೆ ಅಥವಾ ವರ್ಗಾವಣೆಗೆ ಒಪ್ಪಿಗೆ ನೀಡಲು ಎಷ್ಟು ಸಮಯ ನೀಡಲಾಗುತ್ತೆ?
ಪಿಂಚಣಿದಾರ ಅಥವಾ ಉದ್ಯೋಗಿಗೆ ಇಪಿಎಸ್ ಖಾತೆಗೆ ಹಣ ಜಮೆ ಮಾಡಲು ಅಥವಾ ವರ್ಗಾಯಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. 

ಇಪಿಎಫ್ ಖಾತೆಗೆ ಹೆಚ್ಚುವರಿ ಹಣ ಜಮೆ ಮಾಡೋದು ಹೇಗೆ?
ಇಪಿಎಫ್ ಖಾತೆಗೆ ಹೆಚ್ಚುವರಿ ಹಣ ಜಮೆ ಮಾಡಲು ಇಪಿಎಫ್ ಒ ಆನ್ ಲೈನ್ ಸೌಲಭ್ಯವನ್ನು ಒದಗಿಸುತ್ತದೆ. ಇನ್ನು ಪಿಂಚಣಿದಾರರು/ಉದ್ಯೋಗಿ ಪ್ರಾದೇಶಿಕ ಭವಿಷ್ಯ ನಿಧಿ ಅಧಿಕಾರಿ ಹೆಸರಿನಲ್ಲಿ ಚೆಕ್ ಕೂಡ ನೀಡಬಹುದು.ಚೆಕ್ ಹಿಂಬದಿಯಲ್ಲಿ ಅರ್ಜಿ ಐಡಿ, ಯುಎಎನ್/ಪಿಪಿಒ ಸಂಖ್ಯೆ, ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಚೆಕ್ ಹಿಂಬದಿ ನಮೂದಿಸಬೇಕು.

Latest Videos
Follow Us:
Download App:
  • android
  • ios