
ನವದೆಹಲಿ(ಮೇ.07) ಪೆಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ಇಂದು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನದ 9 ಉಗ್ರರ ಕ್ಯಾಂಪ್ ಮೇಲೆ ಭಾರತೀಯ ಶಸಸ್ತ್ರ ಪಡೆ ದಾಳಿ ಮಾಡಿದೆ. ವಾಯುಸೇನೆ, ಭೂ ಸೇನೆ ಹಾಗೂ ನೌಕಾ ಸೇನೆಯ ಜಂಟಿ ಕಾರ್ಯಾಚರಣೆಗೆ ಪಾಕಿಸ್ತಾನ ಅಕ್ಷರಶಃ ನಲುಗಿದೆ. ಭಾರತ ಉಗ್ರರ ಕ್ಯಾಂಪ್ ಟಾರ್ಗೆಟ್ ಮಾಡಿ ದಾಳಿ ಮಾಡಿದೆ. ಭಾರತೀಯ ಸೇನೆಯ ದಾಳಿಯಲ್ಲಿ ಪಾಕಿಸ್ತಾನ ಸೇನೆ, ನಾಗರೀಕರನ್ನು ಗುರಿಯಾಗಿಸಿಲ್ಲ. ಆದರೆ ಭಾರತದ ಮಿಸೈಲ್‌ಗಳು ಕೇವಲ ಉಗ್ರರ ಕ್ಯಾಂಪ್ ಮಾತ್ರ ಧ್ವಂಸ ಮಾಡಿಲ್ಲ. ಪಾಕಿಸ್ತಾನದ ಷೇರುಮಾರುಕಟ್ಟೆಯನ್ನೂ ಪಾತಾಳಕ್ಕೆ ಕುಸಿಯುವಂತೆ ಮಾಡಿದೆ.
ಮಧ್ಯರಾತ್ರಿ ಭಾರತದಿಂದ ಉಗ್ರರ ಮೇಲೆ ದಾಳಿ, ಬೆಳಗ್ಗೆ ಪಾಕಿಸ್ತಾನ ಮಾರುಕಟ್ಟೆ ಕುಸಿತ
ಮೇ.07ರ ಮಧ್ಯರಾತ್ರಿ ಭಾರತ ಪಾಕಿಸ್ತಾನದ ಉಗ್ರರ ಅಡಗುತಾಣ, ತರಬೇತಿ ಕ್ಯಾಂಪ್ ಮೇಲೆ ದಾಳಿ ಮಾಡಿದೆ. ಇದರ ಪರಿಣಾಮ, ನಷ್ಟ ಲೆಕ್ಕ ಹಾಕುವಷ್ಟರಲ್ಲೇ ಪಾಕಿಸ್ತಾನದ ಷೇರುಮಾರುಕಟ್ಟೆ ಕುಸಿತ ಕಂಡಿದೆ. ಭಾರತದ ಉಗ್ರರ ತಾಣಗಳ ಮೇಲೆ ದಾಳಿ ಮಾಡಿದೆ ಅನ್ನೋ ಮಾಹಿತಿ ಹರಿದಾಡುತ್ತಿದ್ದಂತೆ ಪಾಕಿಸ್ತಾನದ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕಾರಣ ಇದು ನೇರವಾಗಿ ಪಾಕಿಸ್ತಾನ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಇದರಂತೆ ಇಂದು ಬೆಳಗ್ಗೆ ಪಾಕಿಸ್ತಾನ ಷೇರುಮಾರುಕಟ್ಟೆ ಶೇಕಡಾ 6ರಷ್ಟು ಕುಸಿತ ಕಂಡಿದೆ.
ಆಪರೇಷನ್ ಸಿಂಧೂರ್: ಪೆಹಲ್ಗಾಮ್ ದಾಳಿಯಿಂದ ರಕ್ತ ಕುದಿಯುತ್ತಿತ್ತು, ಈಗ ಖುಷಿಯಾಗಿದೆ; ಶಿವ ರಾಜ್‌ಕುಮಾರ್
ಕರಾಚಿ ಸ್ಟಾಕ್ ಎಕ್ಸ್‌ಚೇಂಜ್ (KSE-100) ಇಂದು ಬೆಳಗ್ಗೆ ಟ್ರೇಡಿಂಗ್ ಆರಂಭಿಸಿದಾಗ ಬರೋಬ್ಬರಿ 6,272 ಪಾಯಿಂಟ್ಸ್ ಕುಸಿತ ಕಂಡಿದೆ. ಮಂಗಳವಾರದ ಟ್ರೇಡಿಂಗ್ ಅಂತ್ಯದಲ್ಲಿ ಪಾಕಿಸ್ತಾನ ಷೇರುಮಾರುಕಟ್ಟೆ 113,568.51 ಪಾಯಿಂಟ್ಸ್‌ನಲ್ಲಿ ಅಂತ್ಯಗೊಂಡಿತ್ತು. ಆದರೆ ಬುಧವಾರ ಭಾರತದ ಏರ್‌ಸ್ಟ್ರೈಕ್ ಪಾಕಿಸ್ತಾನ ಷೇರುಮಾರುಕಟ್ಟೆಯನ್ನು ತಲ್ಲಣಗೊಳಿಸಿತ್ತು. ಸರಿಸುಮಾರು 6 ಸಾವಿರ ಅಂಕ ಕುಸಿತ ಕಂಡು, 107,296.64 ಪಾಯಿಂಟ್ಸ್‌ಗಳೊಂದಿಗೆ ಟ್ರೇಡಿಂಗ್ ಆರಂಭಿಸಿತ್ತು.
ಪಾಕ್ ಆರ್ಥಿಕ ಪರಿಸ್ಥಿತಿ ನಡುವೆ ಹೂಡಿಕದಾರರ ನಿದ್ದೆ ಕಸಿದ ದಾಳಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ, ಪಾಕಿಸ್ತಾನದಲ್ಲಿನ ಅಸ್ಥಿರತೆ ಸೇರಿದಂತೆ ಹಲವು ಕಾರಣಗಳಿಂದ ಪಾಕಿಸ್ತಾನ ಷೇರು ಮಾರುಕಟ್ಟೆ ನಿರಂತರ ಏರಿಳಿತಕ್ಕೆ ಕಾರಣಾಗಿತ್ತು. ಹೀಗಾಗಿ ಹೂಡಿಕೆದಾರರು ಕಳೆದ ಕೆಲ ವರ್ಷಗಳಿಂದ ಷೇರುಮಾರುಕಟ್ಟೆಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಇದೀಗ ಭಾರತದ ಸೇನಾ ದಾಳಿ ಪಾಕಿಸ್ತಾನದ ಷೇರು ಮಾರುಕಟ್ಟೆಗೆ ಬೆಂಕಿ ಬೀಳುವಂತೆ ಮಾಡಿದೆ. ಪಾಕಿಸ್ತಾನದ ಉಗ್ರ ಕ್ಯಾಂಪ್ ಮೇಲಿನ ದಾಳಿ, ಅಲ್ಲಿ ಅಗಿರುವ ನಷ್ಟದ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಭಾರತದ ಉಗ್ರರ ನೆಲೆ ಟಾರ್ಗೆಟ್ ಇಲ್ಲಿಗೆ ಅಂತ್ಯಗೊಂಡಂತೆ ಕಾಣುತ್ತಿಲ್ಲ. ಉಗ್ರರ ನೆಲೆ ಗುರಿಯಾಸಿ ಮತ್ತಷ್ಟು ದಾಳಿಗಳು ನಡೆಯುವ ಸಾಧ್ಯತೆ ಇದೆ. ಆಪರೇಶನ್ ಸಿಂಧೂರ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಗಡಿಯಲ್ಲಿ ನಿಯಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದೆ. ಇದಕ್ಕೆ ಭಾರತ ಕೂಡ ಪ್ರತಿಯಾಗಿ ತಕ್ಕ ಉತ್ತರ ನೀಡಿದೆ. ಈ ಬೆಳವಣಿಗೆಯಿಂದ ಗಡಿಯಲ್ಲಿ ಉದ್ವಿಘ್ನ ವಾತಾವರಣ ಹೆಚ್ಚಾಗುತ್ತಿದೆ. ಈ ಕಾರಣಗಳು ಪಾಕಿಸ್ತಾನ ಮಾರುಕಟ್ಟೆಯನ್ನು ಮತ್ತಷ್ಟು ಕುಸಿತ ಕಾಣುವಂತೆ ಮಾಡಲಿದೆ.
ಭಾರತದ ಷೇರುಮಾರುಕಟ್ಟೆ ಚೇತರಿಕೆ
ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಬಳಿಕ ಇಂದು ಬೆಳಗ್ಗೆ ಮಾರುಕಟ್ಟೆ ಟ್ರೇಡಿಂಗ್ ಆರಂಭಗೊಂಡಾಗ ಭಾರತದ ಮಾರುಕಟ್ಟೆಯಲ್ಲೂ ಕೊಂಚ ಹಿನ್ನಡೆ ಕಂಡಿತ್ತು. ಆದರೆ ಅಷ್ಟೇ ವೇಗದಲ್ಲಿ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿದೆ. ಹೀಗಾಗಿ ಭಾರದ ಷೇರುಮಾರುಕಟ್ಟೆ ಯಥಾಸ್ಥಿತಿ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನದ ಮೇಲಿನ ದಾಳಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ಹೆಚ್ಚಿನ ವ್ಯತ್ಯಾಸಗಳಾಗಿಲ್ಲ . ಆದರೆ ಪಾಕಿಸ್ತಾನ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ.
ಆಪರೇಷನ್ ಸಿಂಧೂರ್ ಎಫೆಕ್ಟ್: ಯುದ್ದ ಭೀತಿಯ ಹಿನ್ನೆಲೆಯಲ್ಲಿ ಐಪಿಎಲ್‌ಗೆ ಬ್ರೇಕ್ ಬೀಳುತ್ತಾ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.