ಇಂದು ಡಿಜಿಟಲ್ ಪಾವತಿ ಬಳಕೆ ಹೆಚ್ಚಿದೆ. ಆದರೆ, ಇದರೊಂದಿಗೆ ಆನ್ ಲೈನ್ ವಂಚನೆ ಪ್ರಕರಣಗಳು ಕೂಡ ಏರಿಕೆಯಾಗಿವೆ. ಹಾಗಾದ್ರೆ ಆನ್ ಲೈನ್ ವಂಚಕರು ನಮ್ಮ ಖಾತೆಗಳಿಗೆ ಕನ್ನ ಹಾಕಲು ಯಾವೆಲ್ಲ ಮಾರ್ಗಗಳನ್ನು ಅನುಸರಿಸುತ್ತಾರೆ. ಇಲ್ಲಿದೆ ಮಾಹಿತಿ.
Business Desk:ಟಿವಿ ನಿರೂಪಕಿಯೂ ಸೇರಿದಂತೆ ಸುಮಾರು 40 ಜನರು ಆನ್ ಲೈನ್ ವಂಚನೆಗೊಳಗಾದ ಘಟನೆ ವರದಿಯಾಗಿದೆ. ಕೆವೈಸಿ ಹಾಗೂ ಪ್ಯಾನ್ ಕಾರ್ಡ್ ಮಾಹಿತಿಗಳನ್ನು ಅಪ್ಡೇಟ್ ಮಾಡುವಂತೆ ವಂಚಕರು ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ ಇವರು ಹಣ ಕಳೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಅಥವಾ ಡಿಜಿಟಲ್ ಪಾವತಿ ಪ್ರಮಾಣ ಹೆಚ್ಚಿದಂತೆ ಆನ್ ಲೈನ್ ವಂಚನೆ ಪ್ರಕರಣಗಳು ಕೂಡ ಏರಿಕೆಯಾಗಿವೆ. ಆನ್ ಲೈನ್ ವಂಚಕರು ವಂಚನೆಗೆ ಹೊಸ ಹೊಸ ವಿಧಾನಗಳನ್ನು ಬಳಸುವ ಮೂಲಕ ಅಮಾಯಕರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಅದೆಷ್ಟೇ ವಿದ್ಯಾವಂತರಾಗಿದ್ದರೂ ಒಂದು ಕ್ಷಣ ಮೈ ಮರೆತರೂ ಇಂಥ ವಂಚಕರ ಬಲೆಯಲ್ಲಿ ಸಿಲುಕುವುದು ಗ್ಯಾರಂಟಿ. ಇಂಥ ಫಿಶಿಂಗ್ ಕ್ರೈಮ್ ಗಳಿಗೆ ವಂಚಕರು ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡುವುದು, ಬ್ಯಾಂಕ್ ವೆಬ್ ಸೈಟ್ ಗಳನ್ನೇ ಹೋಲುವ ನಕಲಿ ಲಿಂಕ್ ಗಳನ್ನು ಕಳುಹಿಸಿ ಆನ್ ಲೈನ್ ಬ್ಯಾಂಕಿಂಗ್ ಐಡಿ, ಪಾಸ್ ವರ್ಡ್ ಮಾಹಿತಿಗಳನ್ನು ಕಲೆ ಹಾಕುವ ಮೂಲಕ ವಂಚಿಸಲಾಗುತ್ತದೆ. ಹಾಗಾದ್ರೆ ಆನ್ ಲೈನ್ ವಂಚನೆಗಳು ಯಾವೆಲ್ಲ ಮಾದರಿಯಲ್ಲಿ ಆಗುತ್ತವೆ? ಆನ್ ಲೈನ್ ಪಾವತಿ ಸಂದರ್ಭದಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ.
ಡೆಬಿಟ್/ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡುವಾಗ ಎಚ್ಚರ
ಯಾರೋ ನಿಮ್ಮ ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಆಗಿ ಉಡುಗೊರೆ ಕಳುಹಿಸಿರಬಹುದು. ಆನ್ ಲೈನ್ ಬುಕ್ಕಿಂಗ್ ಮೂಲಕ ಈ ಉಡುಗೊರೆ ನಿಮ್ಮ ಮನೆ ಬಾಗಿಲಿಗೆ ಬಂದಿರುತ್ತದೆ. ಇಂಥ ಸಮಯದಲ್ಲಿ ಡೆಲಿವರಿ ಬಾಯ /ಗರ್ಲ್ ನಿಮ್ಮ ಬಳಿ ಸರ್ವೀಸ್ ಚಾರ್ಜ್ ನೀಡುವಂತೆ ಕೇಳಬಹುದು. 50ರೂ. ಅಥವಾ ಅದಕ್ಕಿಂತಲೂ ಕಡಿಮೆ ಮೊತ್ತದ ಸರ್ವೀಸ್ ಚಾರ್ಜ್ ಪಾವತಿಸಲು ನೀವು ಖಂಡಿತಾ ಹಿಂದೆಮುಂದೆ ನೋಡೋದಿಲ್ಲ. ಆದರೆ, ಅವರು ನಗದು ತೆಗೆದುಕೊಳ್ಳದೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಲು ಹೇಳಿದ್ರೆ ನೀವು ಸ್ವಲ್ಪ ಯೋಚಿಸೋದು ಅಗತ್ಯ. ಏಕೆಂದ್ರೆ ಕೆಲವರು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಕ್ಲೋನಿಂಗ್ ನಡೆಸಿ ನಿಮಗೆ ವಂಚನೆ ಮಾಡುವ ಸಾಧ್ಯತೆಯಿರುತ್ತದೆ. ಹೀಗಾಗಿ ಅನುಮಾನ ಹುಟ್ಟಿಸುವ ಅಥವಾ ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸ್ವೈಪ್ ಮಾಡುವ ಮುನ್ನ ಯೋಚಿಸಿ.
ನಿಮ್ಮ ಬ್ಯಾಂಕ್ ಖಾತೆಯಿಂದ 436ರೂ. ಕಡಿತವಾಗಿದೆಯಾ? ಏಕೆ ಗೊತ್ತ?
ವಂಚನೆ ಕರೆಗಳ ಬಗ್ಗೆ ಎಚ್ಚರ
ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಹೆಸರಿನಲ್ಲಿ ನಿಮಗೆ ಕರೆ ಮಾಡಿ ಕೆವೈಸಿ ಮಾಹಿತಿಗಳನ್ನು ನೀಡುವಂತೆ ಕೇಳಬಹುದು. ಈ ಮಾಹಿತಿ ನೀಡದಿದ್ರೆ ನಿಮ್ಮ ಬ್ಯಾಂಕ್ ಖಾತೆ ಕ್ಲೋಸ್ ಮಾಡೋದಾಗಿಯೂ ತಿಳಿಸಬಹುದು. ಆದರೆ, ಇಂಥ ಕರೆಗಳಿಗೆ ಯಾವುದೇ ಕಾರಣಕ್ಕೂ ಉತ್ತರಿಸಲು ಹೋಗಬೇಡಿ. ವಂಚಕರು ಹೆಚ್ಚಾಗಿ ಪಿಂಚಣಿ ಪಡೆಯುತ್ತಿರುವ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಕರೆ ಮಾಡಿ ಅವರ ಖಾತೆಗಳಿಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಿವೆ. ಆದಕಾರಣ ಈ ಬಗ್ಗೆ ಎಚ್ಚರ ವಹಿಸಿ. ನೆನಪಿಡಿ, ಯಾವುದೇ ಬ್ಯಾಂಕ್ ಸಿಬ್ಬಂದಿ ನಿಮಗೆ ಕರೆ ಮಾಡಿ ಬ್ಯಾಂಕ್ ಖಾತೆಗಳ ಮಾಹಿತಿ ಅಥವಾ ಒಟಿಪಿ ನೀಡುವಂತೆ ಕೇಳುವುದಿಲ್ಲ. ಆದಕಾರಣಕ್ಕೆ ಯಾವುದೇ ಕಾರಣಕ್ಕೂ ಪ್ರಮುಖ ಮಾಹಿತಿಗಳು ಹಾಗೂ ಒಟಿಪಿ ಹಂಚಿಕೊಳ್ಳಬೇಡಿ.
ಲಿಂಕ್ ಗಳ ಮೇಲೆ ಕ್ಲಿಕ್ ಮಾಡ್ಬೇಡಿ
ಇ-ಮೇಲ್ ಅಥವಾ ಎಸ್ ಎಂಎಸ್ ನಲ್ಲಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡ್ಬೇಡಿ. ಈ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಬ್ಯಾಂಕ್ ವೆಬ್ ಸೈಟ್ ಹೋಲುವ ನಕಲಿ ವೆಬ್ ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಗಳನ್ನು ಭರ್ತಿ ಮಾಡುವಂತೆ ಕೇಳಲಾಗುತ್ತದೆ. ನೀವು ಅದನ್ನು ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಎಂದು ಭಾವಿಸಿ ಖಾತೆಗೆ ಸಂಬಂಧಿಸಿದ ಮಾಹಿತಿ ಹಂಚಿಕೊಂಡರೆ, ವಂಚಕರು ಅದನ್ನೇ ಬಳಸಿಕೊಂಡು ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ.
ಸಾವರಿನ್ ಗೋಲ್ಡ್ ಬಾಂಡ್ ನಾಲ್ಕನೇ ಸರಣಿ ಇಂದಿನಿಂದ ಪ್ರಾರಂಭ; ಖರೀದಿ ಹೇಗೆ? ಇಲ್ಲಿದೆ ಮಾಹಿತಿ
ವ್ಯಾಪಾರಿಗಳಿಗೂ ವಂಚಿಸುತ್ತಾರೆ
ಇಂದು ಬೀದಿಬದಿ ತರಕಾರಿ, ಹಣ್ಣುಗಳ ವ್ಯಾಪಾರಿಗಳಿಂದ ಹಿಡಿದು ಸೂಪರ್ ಮಾರ್ಕೆಟ್ ತನಕ ಎಲ್ಲ ಕಡೆಯೂ ಯುಪಿಐ ಪಾವತಿ ನಡೆಯುತ್ತದೆ. ಗ್ರಾಹಕರು ಯುಪಿಐ ಮೂಲಕ ಪಾವತಿ ಮಾಡಿದ ತಕ್ಷಣ ವ್ಯಾಪಾರಿಯ ಮೊಬೈಲ್ ಗೆ ಆ ಕುರಿತ ಸಂದೇಶ ಬರುತ್ತದೆ. ಆದರೆ, ಕೆಲವು ವ್ಯಾಪಾರಿಗಳು ಗ್ರಾಹಕರು ಪಾವತಿ ಮಾಡಿದ ತಕ್ಷಣ ಹಣ ತಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡೋದಿಲ್ಲ. ಇಂಥ ವ್ಯಾಪಾರಿಗಳನ್ನು ಕೂಡ ವಂಚಕರು ಟಾರ್ಗೆಟ್ ಮಾಡಿದ ಪ್ರಕರಣಗಳು ಕೂಡ ವರದಿಯಾಗಿವೆ. ಯುಪಿಐ ಪಾವತಿಗೆ ಕ್ಯುಆರ್ ಕೋಡ್ ಬಳಸಲಾಗುತ್ತದೆ. ಈ ಕ್ಯುಆರ್ ಕೋಡ್ ಬೋರ್ಡ್ ಗಳನ್ನೇ ಬದಲಾಯಿಸಲಾಗುತ್ತದೆ. ಆಗ ಹಣ ವ್ಯಾಪಾರಿ ಖಾತೆಗೆ ಹೋಗದೆ ವಂಚಕರ ಖಾತೆ ಸೇರುತ್ತದೆ.