ಕೇಜಿ ಈರುಳ್ಳಿಗೆ 180 ರು.: ಸಾರ್ವಕಾಲಿಕ ದಾಖಲೆ!

By Web Desk  |  First Published Dec 5, 2019, 7:48 AM IST

ಕೇಜಿ ಈರುಳ್ಳಿಗೆ 180 ರು.: ಸಾರ್ವಕಾಲಿಕ ದಾಖಲೆ!| ಬೆಂಗಳೂರು ಸೇರಿ ರಾಜ್ಯಾದ್ಯಂತ ದರ ಏರಿಕೆ| ಸಗಟು ಮಾರುಕಟ್ಟೆಯಲ್ಲೇ .150 ದಾಟಿದ ಈರುಳ್ಳಿ ದರ| ದರ ಏರಿದರೂ ರೈತರಿಗೆ ಲಾಭವಿಲ್ಲ


ಬೆಂಗಳೂರು[ಡಿ.05]: ರಾಜ್ಯದ ವಿವಿಧೆಡೆ ಈರುಳ್ಳಿ ಬೆಲೆಯು ದಿನಕ್ಕೊಂದು ದಾಖಲೆ ಬರೆಯುತ್ತ ಸಾಗುತ್ತಿದ್ದು, ಬುಧವಾರ ಬೆಳಗಾವಿಯ ಎಪಿಎಂಸಿಯಲ್ಲಿ ಉತ್ಕೃಷ್ಟಗುಣಮಟ್ಟದ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 13 ಸಾವಿರದಿಂದ 15 ಸಾವಿರದವರೆಗೆ ಧಾರಣೆ ಪಡೆದಿದೆ. ಇದರ ಪರಿಣಾಮ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಈರುಳ್ಳಿಯನ್ನು 170ರಿಂದ 180 ರು.ವರೆಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಉತ್ಕೃಷ್ಟಗುಣಮಟ್ಟದ ಈರುಳ್ಳಿ ದರ ಕೆ.ಜಿ.ಗೆ 140 ರು. ತಲುಪಿದೆ.

ಈರುಳ್ಳಿ ದರ ಏರಿಕೆಯಿಂದಾಗಿ ಜನಸಾಮಾನ್ಯರ ಜೊತೆಗೆ ಹೋಟೆಲ್‌ ಉದ್ಯಮವೂ ನಲುಗಿದ್ದು, ಬೆಲೆಯೇರಿಕೆ ಹೀಗೆಯೇ ಮುಂದುವರೆದರೆ ಡಿಸೆಂಬರ್‌ ಅಂತ್ಯದ ವೇಳೆಗೆ ತಿಂಡಿ-ತಿನಿಸುಗಳ ದರ ಹೆಚ್ಚಳ ಮಾಡುವ ಮುನ್ಸೂಚನೆಯನ್ನು ರಾಜ್ಯ ಪ್ರಾದೇಶಿಕ ಹೋಟೆಲ್‌ ಮಾಲಿಕರ ಸಂಘ ನೀಡಿದೆ.

Latest Videos

ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ರಾಜ್ಯದ ಉತ್ಕೃಷ್ಟಗುಣಮಟ್ಟದ ಹೊಸ ಈರುಳ್ಳಿ ಕ್ವಿಂಟಲ್‌ಗೆ 10000-12000 ರು., ಪುಣೆ ಈರುಳ್ಳಿ ಕ್ವಿಂಟಲ್‌ಗೆ 12000-14000 ರು.ಗೆ ಮಾರಾಟವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಾಧಾರಣ ಈರುಳ್ಳಿ ಕೆ.ಜಿ. 60-70 ರು., ಮಧ್ಯಮ ಗುಣಮಟ್ಟದ ಈರುಳ್ಳಿ ಕೆ.ಜಿ. 80-100 ರು., ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿ. 120-150 ರು.ವರೆಗೂ ಮಾರಾಟವಾಗುತ್ತಿದೆ. ದರ ಇಳಿಕೆಯಾಗದಿದ್ದಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಚಾಟ್ಸ್‌ ಸೆಂಟ​ರ್‍ಸ್ ಮಾಲಿಕರು ಖಾದ್ಯಗಳ ಬೆಲೆ ಏರಿಕೆಗೆ ಚಿಂತನೆ ನಡೆಸಿದ್ದಾರೆ. ಇದರಿಂದ ಗ್ರಾಹಕರಿಗೆ ಇನ್ನಷ್ಟುಹೊರೆ ಬೀಳಲಿದೆ.

ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಇತರ ಎಪಿಎಂಸಿಗಳಲ್ಲೂ ಈರುಳ್ಳಿ ದರ ಏರಿಕೆ ಗತಿಯಲ್ಲಿದೆ. ಈರುಳ್ಳಿ ಬೆಳೆಯುವ ಜಿಲ್ಲೆಯಾದ ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರುಗತಿಯಲ್ಲಿ ಸಾಗಿದೆ. ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ 11,050 ರು.ಗೆ ಮಾರಾಟವಾಗಿದೆ. ಕಳೆದ 15 ದಿನಗಳ ಹಿಂದಷ್ಟೇ ಇಲ್ಲಿ ಪ್ರತಿ ಕ್ವಿಂಟಲ್‌ ಈರುಳ್ಳಿ 10,500 ರು.ಗೆ ಹಾಗೂ ಮಂಗಳವಾರ 12,500 ರು.ಗೆ ಮಾರಾಟವಾಗಿತ್ತು.

ಹುಬ್ಬಳ್ಳಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿ ಈರುಳ್ಳಿ ಕ್ವಿಂಟಲ್‌ಗೆ ಗರಿಷ್ಠ 10000 ರು. ದಾಖಲಾದರೆ, ತೆಲಗಿ ಈರುಳ್ಳಿ 10,500 ರು.ಗೆ ಬಿಕರಿಯಾಗಿದೆ. ಕಾರವಾರದಲ್ಲಿ ಕೆ.ಜಿ.ಗೆ 120 ರು. ತಲುಪಿದೆ. ಮೈಸೂರು ಮಾರುಕಟ್ಟೆಯಲ್ಲಿ ಉತ್ತಮ ದರ್ಜೆ ಈರುಳ್ಳಿ ಕೆ.ಜಿ. 140-140 ರು., ಮಧ್ಯಮ ಕೆ.ಜಿ. 120 ರು. ಸಾಧಾರಣ 80 ರು.ಗೆ ಮಾರಾಟವಾಗಿದೆ. ಮಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಸಾಧಾರಣ ಗುಣಮಟ್ಟದ ಈರುಳ್ಳಿ ಕೆ.ಜಿ. 125 ರು., ಸಗಟು ದರ ಕೆ.ಜಿ. 115 ರು.ಗೆ ಏರಿಕೆಯಾಗಿದೆ.

‘ರಾಜ್ಯದ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿ. ದರ 100ರಿಂದ 140 ರು.ಗೆ ಏರಿಕೆಯಾಗಿದೆ. ಬುಧವಾರ ಬೆಂಗಳೂರು ಎಪಿಎಂಸಿಗೆ 34,940 ಚೀಲ ಈರುಳ್ಳಿ ಬಂದಿದೆ. ಈರುಳ್ಳಿ ಪೂರೈಕೆ ಪ್ರಮಾಣದಲ್ಲಿ ಅರ್ಧಕ್ಕರ್ಧ ಕಡಿತವಾಗಿದೆ. ದಾವಣಗೆರೆ, ಹುಬ್ಬಳ್ಳಿ, ಗದಗ ಸೇರಿದಂತೆ ಸ್ಥಳೀಯವಾಗಿ ಕಡಿಮೆ ಈರುಳ್ಳಿ ಪೂರೈಕೆಯಾಗುತ್ತಿದೆ. ದೇಶದಲ್ಲೆಲ್ಲ ಬೇಡಿಕೆ ಇರುವುದರಿಂದ ದರ ಹೆಚ್ಚಳವಾಗುತ್ತಿದೆ’ ಎಂದು ಎಪಿಎಂಸಿ ಈರುಳ್ಳಿ ವರ್ತಕರಾದ ರವಿಶಂಕರ್‌ ಹೇಳಿದ್ದಾರೆ.

ಹೋಟೆಲ್‌ ತಿನಿಸು ದರ ಏರಿಕೆ ಸಾಧ್ಯತೆ

ಕೇಂದ್ರ ಸರ್ಕಾರದ ಭರವಸೆಯಂತೆ ವಿದೇಶದಿಂದ ಆಮದಾದರೆ, ಈರುಳ್ಳಿ ದರ ತಹಬದಿಗೆ ಬರಬಹುದು. ಇಲ್ಲವಾದರೆ ಈರುಳ್ಳಿ ದರ ಏರುತ್ತಲೇ ಹೋಗುವ ಸಾಧ್ಯತೆ ಇದೆ. ಹೀಗೇ ಮುಂದುವರಿದಲ್ಲಿ ಡಿಸೆಂಬರ್‌ ಅಂತ್ಯದ ವೇಳೆಗೆ ತಿಂಡಿ-ತಿನಿಸಿನ ದರ ಹೆಚ್ಚಳ ಅನಿವಾರ್ಯವಾಗಲಿದೆ ಎಂದು ರಾಜ್ಯ ಪ್ರಾದೇಶಿಕ ಹೋಟೆಲ್‌ಗಳ ಹಾಗೂ ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ್‌ ಹೆಬ್ಬಾರ್‌ ತಿಳಿಸಿದ್ದಾರೆ.

click me!